ಶಶಿಕಲಾ
ವೀರಯ್ಯಸ್ವಾಮಿ ವಸ್ತ್ರದ ಅವರ ಆತ್ಮಕಥನಾತ್ಮಕ ಕಾದಂಬರಿ :
`ಇದ್ದೇನಯ್ಯಾ
ಇಲ್ಲದಂತೆ’
- ರಾಘವೇಂದ್ರ ಪಾಟೀಲ
ಎಪ್ಪತ್ತರ
ದಶಕದಲ್ಲಿ ಕವಿತೆಗಳನ್ನು ಬರೆಯಲು ಆರಂಭಿಸಿದ ಶಶಿಕಲಾ ವಸ್ತ್ರದ ಅವರು ಇದುವರೆಗೆ, `ಗುಬ್ಬಿಮನೆ’, `ಪ್ರಶ್ನೆ’, `ಜೀವಸಾವುಗಳ ನಡುವೆ’, `ಹೆಂಗ ಹೇಳಲೇ ಗೆಳತಿ’, `ಮಧ್ಯಂತರದ ಒಂದು ಗದ್ಯಗೀತೆ’ ಮತ್ತು `ಬಟ್ಟಬಯಲಲಿ ನಿಂತು’ ಎಂಬ ಆರು
ಕವನಸಂಕಲನಗಳನ್ನು ಪ್ರಕಟಿಸಿ ಕವಿಯಾಗಿ ತಮ್ಮ ಅಸ್ತಿತ್ವವನ್ನು ಸಾಬೀತುಪಡಿಸಿಕೊಂಡಿದ್ದಾರೆ. ಶಿಶು
ಸಾಹಿತ್ಯ ಮತ್ತು ಜೀವನ ದರ್ಶನಗಳ ಎರಡು ಕೃತಿಗಳು ಮತ್ತು ಲೇಖನಗಳ ಒಂದು ಸಂಗ್ರಹವನ್ನಲ್ಲದೇ,
ಶಶಿಕಲಾ ಅವರು, `ಅಪ್ಪ ಮತ್ತು ಮಣ್ಣು’ ಮತ್ತು `ಇದ್ದೇನಯ್ಯಾ ಇಲ್ಲದಂತೆ’ ಎನ್ನುವ, ಸ್ಫಟಿಕದ ಶಲಾಕದಂತಹ, ಎರಡು ಆತ್ಮಕಥನಾತ್ಮಕ ಕೃತಿಗಳನ್ನು ಪ್ರಕಟಿಸಿ ತಮ್ಮ
ಕಥನಪ್ರತಿಭೆಯನ್ನು ಮತ್ತು ತಮ್ಮ ಬದುಕಿನ ದುರಂತವನ್ನು ಒಟ್ಟಿಗೇ ತೋರಿಸಿದ್ದಾರೆ. ಪ್ರಸ್ತುತ `ಇದ್ದೇನಯ್ಯಾ ಇಲ್ಲದಂತೆ’ ಕೃತಿಯನ್ನು ಶಶಿಕಲಾ ಅವರು ಕಾದಂಬರಿ ಎಂದು
ಕರೆದಿದ್ದಾರಾದರೂ ಅದು ಅವರ ಜೀವನ ಚರಿತ್ರೆಗೆ ನಿಷ್ಠವಾದದ್ದಾಗಿದ್ದು ಅದನ್ನು `ಆತ್ಮಕಥನಾತ್ಮಕ ಕಾದಂಬರಿ’ ಎಂದೇ ಹೇಳಬಹುದು. ಇದಲ್ಲದೇ, ಧಾರವಾಡ ಸಾಹಿತ್ಯ ಸಂಭ್ರಮದ `ಆತ್ಮಕಥೆಗಳ ಓದು’ ಎನ್ನುವ ಒಂದು ಗೋಷ್ಠಿಯಲ್ಲಿ ಶಶಿಕಲಾ ಅವರು ತಮ್ಮ ಈ
ಕೃತಿಯಲ್ಲಿನ ಕೆಲವು ಭಾಗಗಳನ್ನು ಓದಿದ್ದರು ಎನ್ನುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.
ಕನ್ನಡದಲ್ಲಿ
ಆತ್ಮಕಥೆಗಳೇನೂ ಅಪರೂಪದ ಬರೆಹಗಳಲ್ಲ. ಅನೇಕ ಮಹನಿಯರ ಅನೇಕ ಆತ್ಮಕಥೆ-ಆತ್ಮಚರಿತ್ರೆಯ ಬರೆಹಗಳು
ಪ್ರಕಟಗೊಂಡು ಅವುಗಳ ಸ್ಪಷ್ಟವಾದ ಧಾರೆಯೊಂದು ಕನ್ನಡದಲ್ಲಿ ಈಗಾಗಲೇ ಸ್ಥಾಪನೆಗೊಂಡಿದೆ.
ಹೀಗಿರುವಾಗ ಶಶಿಕಲಾ ವಸ್ತ್ರದ ಅವರು ತಮ್ಮ ಆತ್ಮಚರಿತ್ರೆಯನ್ನು ಆತ್ಮಕಥೆಯ ಜಾಡಿನಲ್ಲಿ ನಡೆಸದೇ,
ಅದಕ್ಕೆ ಕಾದಂಬರಿಯ
ಛದ್ಮವನ್ನೇಕೆ ಬಯಸಿದರು ಎನ್ನುವ ಪ್ರಶ್ನೆ ಪ್ರಸ್ತುತವಾಗುತ್ತದೆ. ಈ ಪ್ರಶ್ನೆಗೆ ನನಗೆ ತಕ್ಷಣ
ಹೊಳೆಯುವ ಉತ್ತರವೆಂದರೆ - ಶಶಿಕಲಾ ಅವರ ಜೀವನ ವಿವರಗಳು ಒಳಗೊಂಡಿರುವ ಕಥನದ ಸತ್ವಶೀಲತೆ. ಈ
ಮಾತಿಗೆ ಸ್ವಲ್ಪ ವಿವರಣೆ ಬೇಕಾಗುತ್ತದೆ. ಕೆಲವು ವ್ಯಕ್ತಿಗಳ ಜೀವನಚರಿತ್ರೆಯು ಸಾಕಷ್ಟು
ಮಾಹಿತಿಗಳನ್ನು ತಿಳಿಸುವ ಘಟನೆಗಳನ್ನು ಒಳಗೊಂಡಿರುತ್ತವೆ. ಆ ಘಟನೆಗಳ ವಿವರಗಳನ್ನು ಓದುವಾಗ ಓದುಗನು
ತನ್ನ ನಿರ್ಲಿಪ್ತತೆಯನ್ನು ಕಳೆದುಕೊಳ್ಳುವ ಯಾವ ಪ್ರೇರಣೆಗಳೂ ಒತ್ತಾಯಗಳೂ ಇರುವುದಿಲ್ಲ. ಅಂದರೆ
ಅಲ್ಲಿ ಓದುಗನ ಭಾವಕೋಶವು ನಿರಪೇಕ್ಷವಾಗಿ ಉಳಿದು ಅವನ ಬುದ್ಧಿಲೋಕವು ಕೃತಜ್ಞಗೊಳ್ಳುವಂತಹ
ಮಾಹಿತಿ-ತಿಳುವಳಿಕೆಗಳ ವಿವರಗಳು ಮಾತ್ರ ಆ ಬರೆಹದ ಓದಿನಿಂದ ದೊರೆಯುತ್ತವೆ. ಆದರೆ ಇನ್ನು ಕೆಲವು
ಆತ್ಮಚರಿತ್ರೆಗಳ ಬರೆಹಗಳು ನೇರವಾಗಿ ನಮ್ಮ ಭಾವಕೋಶವನ್ನು ಉದ್ದೀಪ್ತಗೊಳಿಸುವ ಎಮೋಟಿವ್ -
ಭಾವದೀಪ್ತ ಭಾಷಿಕ ರಚನೆಗಳಾಗಿರುತ್ತವೆ. ಅವುಗಳ ಓದು ಬುದ್ಧಿಗಮ್ಯತೆಯ ಹೊರತಾಗಿ ನಮ್ಮ ಹೃದಯವನ್ನು
ಕಲಕುವಂತಹ ಭಾವಗಮ್ಯವಾಗಿರುತ್ತದೆ. ಅಂಥವುಗಳು ಕಥನದತ್ತ ವಾಲುವ ಬರೆಹಗಳು. ಇಂಥ ಬರೆಹಗಳು ಕಥನದ
ಸತ್ವಶೀಲತೆಯನ್ನು ಒಳಗೊಂಡಿರುತ್ತವೆ ಎನ್ನುವುದು ನನ್ನ ಮಾತು. ಶಶಿಕಲಾ ವಸ್ತ್ರದ ಅವರ ಇಡೀ ಜೀವನ
ವಿವರ ಇಂಥ ಎಮೋಟಿವ್ ಆದ, ಕೇಳುಗರ-ಓದುಗರ
ಭಾವಕೋಶವನ್ನು ತಲ್ಲಣಗೊಳಿಸುವಂತಹ ಸ್ವರೂಪದ್ದು. ಅವರ ಈ ಜೀವನ ವಿವರಗಳನ್ನು ನೀವು ಎಷ್ಟೇ
ನಿರ್ಲಿಪ್ತಿಯಲ್ಲಿ ನಿರೂಪಿಸಿದರೂ ಅದು ಎಮೋಟಿವ್ ಆಗಿಯೇ ಇರುತ್ತದೆ; ಅದು ಕಥನದ ಸ್ವರೂಪವನ್ನು ಪಡೆದುಕೊಳ್ಳುತ್ತದೆ! ಅಂದರೆ,
ಶಶಿಕಲಾ ಅವರ ಜೀವನ ವಿವರಗಳು
ತಮ್ಮಷ್ಟಕ್ಕೆ ತಾವು ಕಥನದ ಕಲಾತ್ಮಕತೆಗೆ ಹೊಂದಿಕೊಳ್ಳುವಂತಹವುಗಳಾಗಿವೆ. ಅವರು ಈ ಕೃತಿಯನ್ನು
ಕಾದಂಬರಿ ಎಂದು ಹೇಳದಿದ್ದರೂ ಅದು ಕಾದಂಬರಿಯ ಹಾಸು ಬೀಸುಗಳನ್ನು
ಒಳಗೊಳ್ಳುವಂತಹದಾಗಿರುತ್ತಿತ್ತು.
ಇದು ವಸ್ತುವಿನ
ದೃಷ್ಟಿಯಿಂದ ನೋಡಿದರೆ ಹೊಳೆಯುವ ಸಂಗತಿಯಾಯಿತು. ಇನ್ನು ಲೇಖಕನ ದೃಷ್ಟಿಯಿಂದ ನೋಡಿದಾಗಲೂ ಕಾದಂಬರಿಯ
ಈ ಕಲಾತ್ಮಕತೆ ಬರೆಹಕ್ಕೆ ಅನುಕೂಲಕರವಾದದ್ದು ಆಗಿದೆ. ಈ ಕೃತಿಯಲ್ಲಿನ ನೀಲಕ್ಕ ಕಥನಗಾರ್ತಿಯಾದ
ಶಶಿಕಲಾ ಅವರೇ ಆಗಿದ್ದಾರೆ. ಆದರೆ ಶಶಿಕಲಾ ಅವರು ಇಲ್ಲಿ ನಿರೂಪಕಿಯ ಸ್ಥಾನವನ್ನು ವಹಿಸುವುದರಿಂದ
ನಿರೂಪಣೆಗೆ ಅವಶ್ಯವಾಗಿದ್ದ ಒಂದು ಕಲಾತ್ಮಕ ದೂರ ಸಾಧಿಸುತ್ತದೆ. ಒಂದು ಪಾತ್ರವು ತನ್ನನ್ನು ತಾನು
– ಉತ್ತಮಪುರುಷ ನೆಲೆಯಿಂದ -
ನಾನು ಎಂದು - ನಿರೂಪಿಸತೊಡಗಿದಾಗ ಆ ಪಾತ್ರಕ್ಕೆ ಒಂದು ಹೊಣೆಗಾರಿಕೆ ಅಂಟಿಕೊಳ್ಳುತ್ತದೆ.
ಅದೇನೆಂದರೆ, ಅದು ತನ್ನ ಪ್ರತಿ
ನಡೆಯ ಬಗೆಗೆ ಕಾರಣವನ್ನು ನೀಡಬೇಕಾಗುತ್ತದೆ. ಅಂದರೆ ಬರೆಹದಲ್ಲಿ ಆ ಪಾತ್ರವು ತನ್ನ ನಡೆಯಬಗೆಗಿನ
ಕಾರಣಗಳನ್ನು ವಾಚ್ಯವಾಗಿಯೋ ಸೂಚ್ಯವಾಗಿಯೋ ಹೇಳಬೇಕಾಗುತ್ತದೆ. ಆದರೆ ನಿರೂಪಣೆಯು, ಈ ಕಾದಂಬರಿಯಲ್ಲಿ ಬರುವಂತೆ, ಅವಳು-ಅವನು ಎನ್ನುವಂತೆ - ಕನಿಷ್ಟಪುರುಷ
ನೆಲೆಯದಾಗಿದ್ದರೆ, ನಿರೂಪಕನಿಗೆ
ಪಾತ್ರಗಳ ನಡೆಯ ಬಗೆಗಿನ ಸ್ಪಷ್ಟೀಕರಣ ನೀಡುವ ಹೊಣೆಗಾರಿಕೆ, ಕಟ್ಟುನಿಟ್ಟಿನದಾಗಿರುವುದಿಲ್ಲ. ಕನಿಷ್ಟಪುರುಷ
ನಿರೂಪಣೆಯ ಕಥನಗಾರಿಕೆಯಲ್ಲಿ ಪಾತ್ರಗಳ ಸ್ವಾತಂತ್ರ್ಯವು ನಿರೂಪಕನ ಹೊಣೆಗಾರಿಕೆಯನ್ನು
ಕಡಿಮೆಮಾಡುತ್ತದೆ. ಇದು ಶಶಿಕಲಾ ಅವರಿಗೆ ಅನುಕೂಲಕರ. ತಮ್ಮ ತಮ್ಮ ಜೀವನದಲ್ಲಿ ಘಟಿಸಿಹೋದ
ಹಲವೆಂಟು ಘಟನೆಗಳ ಅತಾರ್ಕಿಕ ಪ್ರವೃತ್ತಿಯನ್ನು ಯಾರಿಗೂ ಸಮರ್ಥಿಸಿಕೊಳ್ಳುವುದು
ಸಾಧ್ಯವಾಗುವುದಿಲ್ಲ; ಅದು ನಾನೇ ಇರಲಿ
ಅಥವಾ ಶಶಿಕಲಾ ಅವರೇ ಇರಲಿ. ನಮ್ಮ ಜೀವನದ ಹಲವು ಘಟನೆಗಳು ನಮ್ಮ ಮಾನಸಿಕತೆಯ ಕಾರಣವಾಗಿಯೋ ಅಥವಾ
ಪರಿಸರ-ಪರಿಸ್ಥಿತಿಗಳ ಕಾರಣವಾಗಿಯೋ ಅತಾರ್ಕಿಕವಾಗಿರುತ್ತವೆ. ಅವುಗಳಿಗೆಲ್ಲ ಸ್ಪಷ್ಟೀಕರಣ ನೀಡಲು
ಹೊರಟರೆ ಅದು ಅನೇಕ ವಿಪರ್ಯಾಸಗಳಿಗೆ ಕಾರಣವಾಗಬಹುದು. ಇದನ್ನು ತಪ್ಪಿಸಿಕೊಳ್ಳುವುದು
ಅನಿವಾರ್ಯವಾದಲ್ಲಿ ಆಗ ನಾವು ಉತ್ತಮಪುರುಷದ ನಿರೂಪಣೆಯನ್ನು ಬಿಟ್ಟುಕೊಟ್ಟು ಕನಿಷ್ಟಪುರುಷದ
ನಿರೂಪಣೆಯನ್ನು ಆಯ್ದುಕೊಳ್ಳಬೇಕಾಗುತ್ತದೆ. ಇಂಥ ಅನುಕೂಲತೆಯನ್ನು ಸಾಧಿಸಲು ಶಶಿಕಲಾ ಅವರು ತಮ್ಮ
ಆತ್ಮಚರಿತ್ರೆಯಿಂದ ಹೊರಗೆ ನಿಂತು ನೋಡುವ ಕಲಾತ್ಮಕ ಮಾರ್ಗವನ್ನು ಹುಡುಕಿಕೊಂಡಿದ್ದಾರೆ.
ಈಗ ಶಶಿಕಲಾ ಅವರು
ಎರಡು ನೆಲೆಗಳಲ್ಲಿ ತೊಡಗಿಕೊಳ್ಳಬೇಕಾಗುತ್ತದೆ. ಒಂದು: ಸಿದ್ಧ ವಸ್ತುವಾಗಿ ದೊರೆಯುತ್ತಿರುವ ಅವರ
ಜೀವನಾನುಭವಗಳ ಮೊತ್ತ, ಮತ್ತು ಅದನ್ನು
ಕಥನಕ್ಕೆ ಅಳವಡಿಸುವ ಕಲಾತ್ಮಕತೆಯ ಶೋಧ. ಸಾಮಾನ್ಯವಾಗಿ `ಫಿಕ್ಶನ್’ಗಳಲ್ಲಿ ಶೋಧವು ಮೊದಲ ನೆಲೆಯಲ್ಲಿನದು – ಅಂದರೆ – ವಸ್ತುವಿನ ನೆಲೆಯದು ಆಗಿರುತ್ತದೆ ಮತ್ತು ಅದು
ತನ್ನೊಂದಿಗೆ ತನಗೆ ಒಗ್ಗುವ ಕಲಾತ್ಮಕತೆಯನ್ನು ಹೊಂದಿಸಿಕೊಳ್ಳುತ್ತಿರುತ್ತದೆ. ಶಶಿಕಲಾ ಅವರ ಈ `ಇದ್ದೇನೆ ಇಲ್ಲದಂತೆ’ ಕೃತಿಯಲ್ಲಿ ವಸ್ತು ಈಗಾಗಲೇ ಸಿದ್ಧಗೊಂಡ ಅವರ
ಜೀವನಚರಿತ್ರೆಯಾಗಿದೆ. ಹಾಗಾಗಿ, ಶೋಧವು ವಸ್ತುವಿನ
ನೆಲೆಯದು ಆಗಲು ಸಾಧ್ಯವಿಲ್ಲ. ಆಗ ಶೋಧವು ಕಲಾತ್ಮಕ ನಿರೂಪಣೆಯ ನೆಲೆಯಲ್ಲಿ
ಚಿಗುರೊಡೆಯಬೇಕಾಗುತ್ತದೆ. ಶಶಿಕಲಾ ಅವರು ಈ ಕೃತಿಯಲ್ಲಿ ಅಂಥ ಕಲಾತ್ಮಕತೆಯ ಶೋಧವನ್ನು ಬಹುದೊಡ್ಡ
ಪ್ರಮಾಣದಲ್ಲಿ ಸಾಧಿಸಿದ್ದಾರೆ. ಕಾದಂಬರಿಯ ಉತ್ತರಾರ್ಧದಲ್ಲಿ ನಡೆದ ಅನೇಕ ತಲ್ಲಣಕಾರಿಯಾದ
ಘಟನೆಗಳಿಗೆ ಕಾದಂಬರಿಯ ಮೊದಲ ಭಾಗದಲ್ಲಿ ವಸ್ತು(ವ್ಯಕ್ತಿ!) ಪ್ರತಿರೂಪಗಳೆನ್ನಿಸುವ
ರೂಪಕಾತ್ಮಕವಾದ ವಿವರಣೆಗಳನ್ನು ಶಶಿಕಲಾ ಅವರು ವಿಪುಲವಾಗಿ ಸೃಷ್ಟಿಸಿದ್ದಾರೆ. (ಈ ರೂಪಕಾತ್ಮಕ
ವಿವರಣೆಗಳೂ ಅವರ ಜೀವನಚರಿತ್ರೆಯಲ್ಲಿನ ಚರಿತ್ರಾತ್ಮಕ, ನಿಜವಾದ ಘಟನೆಗಳಾಗಿರಲೂಬಹದು). ಅಂಥ ಕೆಲವು ರೂಪಕಾತ್ಮಕ
ಕಥನಗಳನ್ನು ಇಲ್ಲಿ ನೋಡೋಣ:
``ಬಾದ್‍ಶಾ, ಹಂಗ ನೋಡಿದರ ಹುಚ್ಚ ಏನಲ್ಲ. ಆದರ ಅವ್ನಿಗಿ
ಅರವತ್ತಾದರೂ ಮದವಿ ಆಗಿರಲಿಲ್ಲಾ. ಅದಕೇ ಯಾರರೆ ಮಾತಾಡಿಸಿ `ನಿನ್ನ ಹೇಣ್ತಿ ಹೆಸರ ಹೇಳಪಾ’ ಅಂದ್ರ ಸಾಕು. ಒಗಟಿನ ಮ್ಯಾಲೆ ಒಂದ ಒಗಟಾ ಹಾಕವಾ. -
ಸೀರೀ ಮ್ಯಾಲೆ ಸೀರಿ ಉಟಗೊಂಡು, ಕುಬಸದ ಮ್ಯಾಲೆ ಒಂದ
ಕುಬಸಾ ತೊಟಗೊಂಡು ಕೊಡದ ಮ್ಯಾಲೆ ಕೊಡಾ ಇಟಗೊಂಡು ನೀರಿಗೆ ಹೋಗತಾಳು ಚಾಂದಬೀ’’ ಅಂದು ಹೆಂಗಸರಿಗಿಂತ ಹೆಚ್ಚಿಗಿ ನಾಚಿ ಮುಖ
ಕೆಂಪೇರಿಸಿಕೊಳ್ಳುವನು. ಪಾಪ ಅವನು ಚಾಂದಬೀ ಇಲ್ಲದೇ ತನ್ನ ಕೊನಿ ಉಸಿರೆಳದಾ, ಎಂಭತ್ತನೇ ವಯಸ್ಸಿನ್ಯಾಗ’’. (ಪುಟ : 34).
ಕಾದಂಬರಿಯ
ಉತ್ತರಾರ್ಧದಲ್ಲಿ ವಿವರಣೆಗೊಳ್ಳುವ ನೀಲಕ್ಕನ ಜೀವನದಲ್ಲಿ, ಅವಳು ಅಸ್ತಿತ್ವದಲ್ಲಿ ಇದೆ ಎಂದು ಭಾವಿಸಿ ನಂಬಿಕೊಂಡು
ನಡೆಯುತ್ತಿದ್ದ ಕುಟುಂಬ ಜೀವನವು ಬಾದ್‍ಶಾನ ಹೆಂಡತಿಯ ಅಸ್ತಿತ್ವಕ್ಕಿಂತ ಭಿನ್ನವಾದದ್ದೇನೂ ಅಲ್ಲ!
``ಈ ಪಾಂಡುರಂಗಂದು
ಇನ್ನೊಂದು ಕತಿ. ನೀಲಕ್ಕನ ಮನಿಗೆ ಬಲಕ್ಕ ಒಂದ ದೊಡ್ಡ ಮಠಾ. ಅಲ್ಲೊಂದು ಬಾವಿ ಇತ್ತು. ಈ
ಪಾಂಡಿರಂಗಾ ಒಂದ ದೊಡ್ಡ ಕೊಡಾ ಹಿಡಕೊಂಡು ಇಲ್ಲಿ ನೀರಿಗೆ ಬರಾಂವಾ. ಬರೂಮುಂದ ಹೋಗೂಮುಂದ ಸದಾ ವಟಾ
ವಟಾ ಯಾರಿಗೋ ಬೈಕೊಂತನ ಇರಾಂವಾ. ಯಾವಾಗಲೂ `ಬಾರಾ ಬಾರಸಾಕ ಬಂತರೀ. ಇಲ್ಲೀ ತನಾ ಶಂಬೋರ ಕೊಡಾ ನೀರ ಹೊತ್ತೀನಿ. ಅವನೌನ ಇನಾ ಒಂದ ಕಪ್ಪ ಚಾ
ಕೊಟ್ಟಿಲ್ಲ ನನಗ. ಬರೇ ಕೆಲಸಾ ಮಾಡಂತಾರ್ರೀ. ಸುಮ್ಮನ ಬಿಡ್ತೀನೇನ್ರೀ ಇವರ್ನ. ಈ ಕೊಡದಾಗ ಹಾಕೊಂಡ
ಬಂದ ಬಾವ್ಯಾಗ ಮುಳಗಸ್ತೀನಿ’ ಅಂತ ಒದರಾಡತಿದ್ದಾ.
ಸಿಟ್ಟೋ ಹಸಿವೋ ಒಮ್ಮೊಮ್ಮಿ ತನ್ನ ಕೈ ಕಿರಿಬರರಳು ಕಲ್ಲಿನಿಂದ ಜಜ್ಜಿಕೋತಿದ್ದಾ’’. (ಪುಟ:34). ನೀಲಕ್ಕನ ಕುಟುಂಬ ಜೀವನ ಈ ಪಾಂಡುರಂಗನ ಜೀತಕ್ಕಿಂತ
ಭಿನ್ನವಾದದ್ದೇನೂ ಆಗಿರಲಿಲ್ಲ. ಮೊದಲ ಕೌಟುಂಬಿಕ ಜೀವನ ಎಷ್ಟೋ ಸಹನೀಯ ಎನ್ನಬಹುದು. ಆದರೆ ಆಕೆಯ
ಎರಡನೆಯ ಮತ್ತು ಮೂರನೆಯ ಕೌಟುಂಬಿಕ ಜೀವನಗಳ ನಡೆಯು `ಹಾಸ್ಯುಂಡು ಬೀಸಿ ಒಗೆಧಂಗ’ ಎನ್ನುವಂತಹ ನಿಷ್ಫಲವಾದವುಗಳು ಆಗಿದ್ದವು. ಮೊದಲ ಕೌಟುಂಬಿಕ
ಅನುಭವದ ನಂತರ ಅವಳು ಕಟ್ಟಿಕೊಂಡ ಎರಡನೆಯ ಮತ್ತು ಮೂರನೆಯ ಕೌಟುಂಬಿಕ ಜೀವನಗಳು ಪಾಂಡುರಂಗನು ತನ್ನ
ಕಿರಿಬೆರಳನ್ನು ಜಜ್ಜಿಕೊಳ್ಳುವ ಸ್ವ-ಹಿಂಸೆಗಿಂತ ಬೇರೆಯಾದದ್ದೇನೂ ಅಲ್ಲ.
``ವಿಜಾಪುರದಾಗ ಒಮ್ಮಿ
ಒಂದ ಅಂಗಡ್ಯಾಗ ಒಬ್ಬ ಹುಡುಗನ್ನ ಸರಪಳ್ಯಾಗ ಕಟ್ಟಿ ಹೊಡ್ಯಾಕ ಹತ್ತಿದ್ರು. `ನಮ್ಮವ್ವನಾಣಿರಿ ಸಾವಕಾರ್ರ. ಖರೇವಂದ್ರೂ ನಾ ಕಳೂ
ಮಾಡಿಲ್ರೀ’ ಅಂತ ಆ ಹುಡುಗಾ
ಕಾಲಿಗೆ ಬೀಳ್ತಿದ್ದಾ. ನೀಲಕ್ಕ ಅಮ್ಮನ (ಅಜ್ಜಿಯ) ಜೋಡಿ ಸಂತಿಗಿ ಬಂದಿದ್ಲು. ಆ ಹುಡಗನ್ನ ಅಳೂ
ನೋಡಿ ಅಕಿಗೂ ಅಳೂ ಬರಾಕ ಹತ್ತಿತ್ತು. `ಅಮ್ಮಾ, ಆ ಹುಡುಗನ್ನ ಬಿಡಸಬೇ. ಪಾಪ ಹ್ಯಾಂಗ ಹೊಡೀತಾರ್ನೋಡು’
ಅಂತ ಅಳೂದನ್ಯಾಗ ಹೇಳಿದ್ಲು. `ಅಯ್ಯ, ಹೊಡಿಲಿ ಬಿಡು. ಏನರೇ ಕದ್ದಿರಬೇಕು. ಸುಮ್ನ ಯಾಕ ಹೊಡೀತಾರಾ?’ ಅಂದ್ಲು ಅಮ್ಮ. ನೀಲಕ್ಕಗ ತಡಕೋಳಾಕ ಆಗಲಿಲ್ಲಾ. ಅಮ್ಮನ
ಕೈಬಿಡಿಸಿಕೊಂಡು ಗುಂಪನ್ಯಾಗಿಂದು ಹಾದು, ಹೊಡೆವರಹತ್ತರ
ಬಂದ್ಲು. ಗಂಟಲು ಉಬ್ಬಿತ್ತು. `ಯಾಕರೀ ಅಣ್ಣಾವರ
ಅಂವಗ ಹೊಡ್ಯಾಕ ಹತ್ತೀರಿ. ಪಾಪ ಮೂಗಿನ್ಯಾಗ ರಕ್ತಾ ಸೋರಾಕತ್ತದ ಬಿಟ್ಟ ಬಿಡ್ರೀ’ ಅಂತ ಹೊಡೆವ್ನ ಮೊಳಕಾಲು ತಬ್ಬಿಕೊಂಡಳು. `ಏ ಯಾರದರೀ ಈ ಹುಡಿಗೀ, ಕರಕೊಂಡ ಹೋಗರೀ’ ಅಂತ ಒದರಿದಾ. ಅಮ್ಮ ಓಡಿಕೊಂತ ಬಂದಕಿನೆ `ಏನ ಹುಚ್ಚ ಐತೇಯವ್ವಾ ಇದು. ತನಗೆಲ್ಲಾ ಯಾಕ ಬೇಕು?
ನಡಿ. ದೊಡಮನಶ್ಯಾಳ ಆಗ್ಯಾಳಾ’
ಅಂತ ದರಾ, ದರಾ ರಟ್ಯಾಗ ಕೈಹಾಕಿ ಕರಕೊಂಡು ಸಂತೀಗಿ ಹೋದ್ಲು’’.
(ಪುಟ:35) ಆ ಬಡ ಹುಡುಗನ ಅಸಹಾಯಕತೆ ನಂತರದಲ್ಲಿ ನೀಲಕ್ಕ
ಅನುಭವಿಸಿದ ಅಸಹಾಯಕತೆ ಬೇರೇನೂ ಅಲ್ಲ. ಅಮ್ಮ, ಆ ಹುಡುಗನ ಸುತ್ತಲೂ ಸೇರಿದ ಜನರ ಗುಂಪು, ಯಾರೂ ಆ ಹುಡುಗನ ಬಿಡುಗಡೆಗೆ ಬರಲಿಲ್ಲ. ಅಂತೆಯೇ ನೀಲಕ್ಕನನ್ನು ನಿಷ್ಫಲತೆಯ ಅಸಹಾಯತನಕ್ಕೆ
ದೂಡಿದ ಕೌಟುಂಬಿಕತೆಗಳ ಸಂದರ್ಭದಲ್ಲಿಯೂ ಯಾರೂ ಆಕೆಗೆ ಬಿಡುಗಡೆಯ ದಾರಿಯನ್ನು ತೋರಲು
ಸಾಧ್ಯವಾಗಲಿಲ್ಲ.
***
ನೀಲಕ್ಕನ ಕೌಟುಂಬಿಕ
ಜೀವನದ ಮೂರು ಪ್ರಯತ್ನಗಳೂ ನಿಷ್ಫಲತೆಯ ದುರಂತವನ್ನು ತಂದುದಷ್ಟೇ ಅಲ್ಲ, ಅವು ಅವಳಿಗೆ ಜೀತದ ನೋವಿನ ಅನುಭವ ನೀಡಿದವು. ಮೊದಲ
ಮದುವೆ, ತಾಯಿಯ ತಮ್ಮ, ಸ್ವಂತ ಸೋದರಮಾವನೊಂದಿಗೆ. ಈ ಮದುವೆಯ ಸಂದರ್ಭದಲ್ಲಿ
ಗಂಡನ ದರ್ಪವನ್ನು ಮನಗಾಣಬಹುದು. ಆದರೆ ಈ ಮದುವೆಯ ವಿಘಟನೆಯ ಹಿಂದೆ ನೀಲಕ್ಕನ ಕೊಡುಗೆಯೂ
ಇದ್ದಂತಿದೆ. ಮದುವೆಯ ಮೊದಲು, ಈ ಸೋದರ ಮಾವನು
ತನ್ನನ್ನು ಮದುವೆಯಾಗಲು ಆಸಕ್ತನಾಗಿರಲಿಲ್ಲವೆನ್ನುವ ವಿವರಣೆ ಬರುತ್ತದೆ. ಆದರೆ ಆ ನಿರಾಸಕ್ತಿಯ
ನಂತರ ಅವನು ನೀಲಕ್ಕನನ್ನು ಮದುವೆಯಾಗಿದ್ದಾನೆ. ತನ್ನ ಕುಟುಂಬದ ಆರ್ಥಿಕ ಸ್ಥಿತಿಯನ್ನು ಅವಳಲ್ಲಿ
ತೋಡಿಕೊಂಡು ಅವಳ ಸಹಕಾರವನ್ನು ಕೇಳಿ ವಿಶ್ವಾಸ ತೋರಿದ್ದಾನೆ. ಹೆಂಡತಿಯಾದ ಅವಳಿಗೆ ಲೈಂಗಿಕವಾಗಿ
ಸಹಕರಿಸಲು ಒತ್ತಾಯಿಸಿದ್ದಾನೆ. ಆದರೆ ನೀಲಕ್ಕನು ಅವನೊಡನೆ ಸಂಸಾರನಡೆಸಲು ನಿರಾಕರಿಸಿದ್ದಾಳೆ.
ಇದು ಅವನನ್ನು ಬೇರೊಬ್ಬಳೆಡೆಗೆ ದೂಡಿತೇನೋ ಅನ್ನಿಸುತ್ತದೆ. ಐದಾರು ತಿಂಗಳು ಅವನೊಡನೆ ಮಲಗಿಯೂ
ಅವನೊಂದಿಗೆ ಬೆರೆಯಲು ನೀಲಕ್ಕ ತೋರುವ ಬಿಗುಮಾನ ಆಕೆ ಮುಂದಿನ ತನ್ನ ಕೌಟುಂಬಿಕ ಜೀವನಗಳಲ್ಲಿ
ತೋರುವ ದೈನ್ಯತೆಗೆ ಕಾರಣವಾಯಿತೇನೋ ಎನ್ನಿಸುತ್ತದೆ. ಆದರೆ, ಆ ಗಂಡನು ಇವಳನ್ನು ತ್ಯಜಿಸಲು ಆಯ್ದುಕೊಂಡ ಕಾರಣ
ವಿಚಿತ್ರವಾಗಿದೆ. ನೀಲಕ್ಕ ಹೆಂಗುಸೇ ಅಲ್ಲ, ಅವಳು ಸಹಜ ಹೆಣ್ಣಿನಂತೆ ಲೈಂಗಿಕಕ್ರಿಯೆಯಲ್ಲಿ ಪಾಲುಗೊಳ್ಳಲಾರಳು ಎನ್ನುವ ಆರೋಪ
ಹೊರಿಸುತ್ತಾನೆ. ಜೊತೆಗೆ ಈ ಮಾತುಗಳನ್ನು ಆಕೆಯ ಅಪ್ಪ, ಅಮ್ಮನಲ್ಲಿ ಚರ್ಚಿಸದೇ ಬೇರೆ ಸಂಬಂಧವಿಲ್ಲದವರ ಬಳಿ
ಹೇಳಿದ್ದು ನೀಲಕ್ಕ ಮತ್ತು ಆಕೆಯ ಅಪ್ಪ ಅಮ್ಮ ಎಲ್ಲರಿಗೂ ನೋವನ್ನು ತರುತ್ತದೆ. ನೀಲಕ್ಕನ
ವೈದ್ಯಕೀಯ ಪರೀಕ್ಷೆಯೂ ನಡೆಯುತ್ತದೆ. ಆದರೆ ಅಷ್ಟರಲ್ಲಿ ಆ ಗಂಡನಿಗೆ ನೀಲಕ್ಕನ ಬಗೆಗಿನ ಆಸೆ
ಕಡಿದುಹೋಗಿ ಇನ್ನೊಬ್ಬಳಲ್ಲಿ ಸಂಬಂಧ ಬೆಳೆದಿರುತ್ತದೆ. ಆ ಇನ್ನೊಬ್ಬಳನ್ನು ಮದುವೆಯಾಗಿ
ಆಕೆಯೊಂದಿಗೆ ದಾಂಪತ್ಯ ಜೀವನ ನಡೆಸುತ್ತ, ನೀಲಕಕ್ಕನನ್ನು
ಹೊಲಮನೆ ಕೆಲಸಕ್ಕೆ ತಮ್ಮ ನೆಯಲ್ಲಿ ಉಳಿಸಿಕೊಳ್ಳುವ ಯೋಚನೆ ಗಂಡ-ಅತ್ತೆಯರಿಗೆ ಬರುತ್ತದೆ. ನೀಲಕ್ಕ
ತನ್ನ ವಿದ್ಯಾಭ್ಯಾಸ ಮುಂದುವರೆಸುತ್ತಾಳೆ. ಆಕೆಯ ಗಂಡನೂ ಅದಕ್ಕೆ ಬೆಂಬಲ ನೀಡುತ್ತಾನೆ. ಬಹುಶಃ,
ವಿದ್ಯಾಭ್ಯಾಸ ಪಡೆದ ನೀಲಕ್ಕ
ನೌಕರಿಗೆ ಸೇರಿ ತನಗೆ ಬಿಡುಗಡೆ ನೀಡಬಹುದೆನ್ನುವ ಯೋಚನೆ ಅವನಲ್ಲಿದ್ದಿರಬಹುದು. ಅಂತೂ
ದಿನಗಳೆದಂತೆ ನೀಲಕ್ಕನ ಗಂಡನಿಗೆ ತಾನು ಇವಳಿಂದ ಬಿಡುಗಡೆ ಹೊಂದಬೇಕು ಎನ್ನುವ ಭಾವನೆ
ಹೆಚ್ಚಾಗುತ್ತದೆ. ನೀಲಕ್ಕ ಕೊನೆಗೆ ಬಿಡುಗಡೆ ನೀಡಿ, ಅವನು ಮತ್ತೊಂದು ಮದುವೆಯಾಗುತ್ತಾನೆ. ಕಾದಂಬರಿ,
ನೀಲಕಕ್ಕನ ಮೊದಲ ಗಂಡನು
ಮರುಮದುವೆ ಮಾಡಿಕೊಂಡಲ್ಲಿಗೆ ಅವನ ಬಗೆಗೆ ಹೇಳುವುದನ್ನು ನಿಲ್ಲಿಸುತ್ತದೆ. ಅವನಿಗೆ ಮಕ್ಕಳು ಆದರೋ
ಇಲ್ಲವೋ ಎನ್ನುವ ಬಗ್ಗೆ ಮೌನವಾಗುಳಿಯುತ್ತದೆ. ಇಂಥಲ್ಲಿ ಆತ್ಮಚರಿತ್ರಯು ಕಾದಂಬರಿಯ ಕಲಾತ್ಮಕತೆಯ
ಆಕೃತಿಯನ್ನು ಧರಿಸಲು ಹೊಂದಿರುವ ಕಾರಣವು ಹೊಳೆಯುತ್ತದೆ.
ನೀಲಕ್ಕನ ಎರಡನೆಯ
ಮದುವೆ ಆಕೆ ತಮ್ಮ ಮತ್ತು ಅಪ್ಪನ ಮಧ್ಯಸ್ತಿಕೆಯಿಂದ ನಡೆಯಿತು. ಈ ಗಂಡ, ಒಬ್ಬ ಸರ್ಕಾರೀ ನೌಕರನಾಗಿದ್ದ. ಈಗಾಗಲೇ
ಮದುವೆಯಾಗಿದ್ದಿತು. ಆದರೆ ಮಕ್ಕಳಾಗಿರಲಿಲ್ಲ. ಅದಕ್ಕಾಗಿ ಇನ್ನೊಂದು ಮದುವೆಗೆ ಹೆಣ್ಣು
ನೋಡುತ್ತಿದ್ದ. ನೀಲಕ್ಕನನ್ನು ಮದುವೆಯಾದ ಅವನು ಅಸಾಧ್ಯ ಕುಡುಕ. ಭ್ರಷ್ಟ. ತಡ ರಾತ್ರಿಯವರೆಗೆ
ಹೊಟ್ಟೆತುಂಬ ಕುಡಿದು, ಜೇಬಿನ ತುಂಬ ಲಂಚದ
ಹಣ ತುಂಬಿಕೊಂಡು ಮನೆಗೆ ಬಂದು ಇನ್ನಷ್ಟು ಕುಡಿಯುವವ. ತನ್ನ ಹಳೆಯ ಗೆಳತಿಯರ ಭಾವಚಿತ್ರಗಳನ್ನು
ಹರಡಿಕೊಂಡು ಕುಳಿತು ಅವರ ನೆನಪು ತೆಗೆದು ರಾತ್ರಿಯೆಲ್ಲ ಅಳುವವ. ಆದರೆ ನೀಲಕ್ಕ ಇವನಿಗೆ
ಸಾಗರದಷ್ಟು ಪ್ರೀತಿ ಎರೆದಳು. ಕುಂದಾಪುರದಲ್ಲಿ ಇದ್ದಾಗಿನ, ಇವಳು ಅವನ ಬಗೆಗೆ ಹೊಂದಿದ ಪ್ರೀತಿ-ಕಾಳಜಿಗಳನ್ನು
ಹೇಳುವ ಒಂದು ವಿವರವನ್ನು ನೋಡಿರಿ:
``... ಒಮ್ಮೆ ರಾತ್ರಿ,
ಒಂದು ಆದರೂ ಬರಲಿಲ್ಲಾ.
ಇಕಿಗೆ ಅಂಜಿಕಿ ಸುರುವಾತು. ಇನ್ನಾ ನೆರಿ, ಹೊರಿ ಯಾರೂ ಪರಿಚಯಾ ಆಗಿರಲಿಲ್ಲಾ. ಅವತ್ತ ಧೋ ಅಂತ ಮಳಿ ಬ್ಯಾರೆ. ಎಲ್ಲಾದ್ರೂ ನಶಾದಾಗ
ಬಿದ್ದ ಬಿಟ್ಟಿದ್ದರ? ಆ ತಾಲೂಕಿಗೇ ಇವಾ
ದೊಡ್ಡ ಅಧಿಕಾರಿ ಬ್ಯಾರೇ. ಇದ್ದದ್ದೊಂದ ಛತ್ರೀ ತಗೊಂಡ ಹೋಗಿದ್ದಾ. ಮನೀ ಕೀಲಿ ಹಾಕಿದ್ಲು.
ತಲಿತುಂಬ ಸೆರಗು ಹೊತಗೊಂಡು, ಎಡಗೈಯಾಗ ನಿರಿಗಿ,
ಬಲಗೈಯಾಗ ಟಾರ್ಚ್ ಹಿಡಕೊಂಡು,
ಪ್ಯಾಟಿ ದಾರಿ ಅಂತ ತಾ
ತಿಳಕೊಂಡ ದಾರ್ಯಾಗ ಹೊಂಟ್ಲು. ಯಾರರೇ ನೋಡ್ಲಿ, ಏನಾದರೂ ಅಂದುಕೊಳ್ಳಿ ಅಂತ ಸೀದಾ ಹೊಂಟ್ಲು. ಕರಂಟ್ ಬರ್ತಿತ್ತು. ಹೋಗತಿತ್ತು. ಆ ಪ್ಯಾಟಿ
ಸರ್ಕಲ್‍ನ್ಯಾಗ ಒಂದ ಗಳಿಗಿ ನಿಂತ್ಲು. ನಾಯಿಗೋಳು ನಿಲ್ಲಾಕ ಬಿಡಲಿಲ್ಲಾ. ಗಲ್ಲದ ಮ್ಯಾಲೆ ನೀರು
ಹರ್ಯಾಕತ್ತಿದ್ದು. ಮಳೀನೀರೋ, ಕಣ್ಣೀರೋ
ಗೊತ್ತಾಗತಿರಲಿಲ್ಲಾ. ಕಣ್ಣ ಮಂಜಾಗಿದ್ದವು. ಹಾಂ! ಅಲ್ಲಿ! ಅಂವಾ ಬರಾಕತ್ತಿದ್ದಾ. ನಡಗೀ ಮ್ಯಾಲೇ
ಗುರತ ಹಿಡದ್ಲು. ಓಡೂ ನಡಿಗೀಯೊಳಗೇ ಹೋಗಿ ಅವನ ಛತ್ರ್ಯಾಗ ಸೇರಕೊಂಡ್ಲು. ಅಂವಾ ಏನೂ ಪ್ರತಿಕ್ರಿಯಾ
ತೋರಸಲಿಲ್ಲಾ. ಆಕಿ ಏನೂ ಮಾತಾಡಲಿಲ್ಲಾ. ಮನೀಗಿ ಬಂದು ಬಟ್ಟಿ ಬದ್ಲಾಯಿಸಿದ್ಲು. ಬಿಸಿನೀರ ಕಾಸಿ
ಅವನ್ನ ಎಬ್ಬಿಸಿ ಜಳಕಾ ಮಾಡಿಸಿದ್ಲು. ಬೆಚ್ಚನ್ನ ಬಟಿ ಹಾಕಿ ಬೆಚ್ಚಗ ಮಲಗಿಸಿದ್ಲು.
ಅರನಿದ್ಯಾಗಿದ್ದಾಂಗ ಇದ್ದಾಂವಾ, ಪೂರಾ ನಿದ್ದಿಗಿ
ಜಾರಿದಾ. ಮರದಿನಾ ಇಬ್ಬರೂ ಆ ಬಗ್ಗಿ ಮಾತಾಡಲಿಲ್ಲಾ’’. (ಪುಟ:125).
ತನ್ನ ಪ್ರೀತಿ
ಅಂತಃಕರಣಗಳನ್ನೆಲ್ಲ ಇವನ ಮೇಲೆ ಸುರಿದ ನೀಲಕ್ಕನಿಗೆ ಮಾತ್ರ ಇವನಿಂದ ದೊರೆತವುಗಳೆಂದರೆ, ವಂಚನೆ ಮತ್ತು ದ್ರೋಹಗಳು. ಉಡುಪಿಯ ಒಂದು
ಕಾಲೇಜಿನಲ್ಲಿಯ ಅಧ್ಯಾಪಕ ಹುದ್ದೆಗೆ ಅರ್ಜಿ ಕರೆದಿದ್ದರು. ನೀಲಕ್ಕ ಅರ್ಜಿ ಹಾಕಿದಳು. ಈಕೆಯ
ಆಯ್ಕೆಯಾಗಿ ಕಾಲೇಜಿನ ಪ್ರಾಚಾರ್ಯರು ನೀಲಕ್ಕನಿಗೆ ಫೋನ್ಮಾಡಿ ತಿಳಿಸಿ ಕಾಲೇಜಿಗೆ ಬಂದು ನೇಮಕಾತಿ
ಆದೇಶವನ್ನು ಪಡೆಯಲು ತಿಳಿಸಿದರು. ಈಕೆ ಖುಶಿಯಿಂದ ಗಂಡನಿಗೆ ತಿಳಿಸಿದಳು. ಈ ಗಂಡ ಕಾಲೇಜಿಗೆ ಫೋನ್
ಮಾಡಿ ಆಕೆ ತನ್ನ ಹೆಂಡತಿಯಲ್ಲ, ಅವಳಿಗೆ ಅಪಾಯಿಂಟ್‍ಮೆಂಟ್
ಆದೇಶ ಕೊಡಬೇಡಿರಿ ಎಂದು ತಿಳಿಸಿದನು. ಆ ಕೆಲಸ ತಪ್ಪಿಹೋಯಿತು. ಅಷ್ಟೇ ಅಲ್ಲ, ಇವಳ ಪುಸ್ತಕಗಳು, ವಸ್ತುಗಳನ್ನು ದೋಚಿಕೊಂಡು ಇವಳನ್ನು ಮನೆಬಿಟ್ಟು ಹೊರಗೆ
ಹಾಕಿಬಿಟ್ಟನು. ನೀಲಕ್ಕ ಬೀದರ್ ಕಾಲೇಜಿನಲ್ಲ ಕೆಲಸ ಮಾಡುತ್ತಿದ್ದವಳು ಪಿ.ಎಚ್‍ಡಿ., ಮಾಡಲು ರಜೆ ತೆಗೆದುಕೊಂಡು ಇವನಿಗೆ ವರ್ಗವಾಗಿದ್ದ
ಕುಂದಾಪುರಕ್ಕೆ ಬಂದಿದ್ದಳು. ಆ ಬಗೆಗೆ ಒಂದು ಬಾಂಡ್ ಬರೆದುಕೊಡಬೇಕೆನ್ನುವ ಕಾರಣಕ್ಕೆ ನೀಲಕ್ಕ
ಬೀದರಿಗೆ ಹೋಗಿ ಒಂದು ವಾರ ಇದ್ದು ಮರಳಿ ಕುಂದಾಪುರಕ್ಕೆ ಬಂದಾಗ, ಈ ಗಂಡ ನಡೆದುಕೊಂಡ ಬಗೆ ಹೇಗಿದೆ ನೋಡಿ :
``... `ಇವತ್ತ ಕೆಲಸಾ
ಮುಗೀತ ನೋಡಪಾ. ಇನ್ನ ಬಸ್ಸೊಂದ ವಿಚಾರ್ಬೇಕು ಅಷ್ಟೇ’ ಅಂದ್ಲು ಚಪ್ಪಲಿ ಕಳಕೊಂತ. `ಅದೆಲ್ಲಾ ಮುಗೀತ ಖರೇ, ನಿನ್ನ ಯಜಮಾನರ ಪತ್ರಾ ಬಂದೈತಿ. ನೀನೇ ನೋಡವಾ’
ಅಂತ ಅಣ್ಣ ಅಕಿ ಕೈಗಿ ಪತ್ರಾ
ಕೊಟ್ಟಾ. ಒಂದೇ ಸಾಲು ಅಕಿ ಕಣ್ಣಿಗಿ ಬಿದ್ದಿದ್ದು., `ನಾನು ಬಂದು ಕರೆದೊಯ್ಯುವವರೆಗೆ ನಿಮ್ಮ ತಂಗಿ ನಿಮ್ಮ
ಮನೆಯಲ್ಲೇ ಇರಲಿ. ನಾನಿನ್ನೂ ಬೆಂಗಳೂರಿನಲ್ಲೇ ಇರುವೆ. ಮತ್ತೆ ತಿಳಿಸುವೆ’. ಯಾಕೋ ಪತ್ರಾ ಕೆಳಗೆ ಬಿತ್ತು. ಎತಗೊಂಡು ತನ್ನ ರೂಮಿಗೆ
ಹೋದ್ಲು. ಮತ್ತ ಅಳೂ ಉಮ್ಮಳಿಸಿ ಬಂತು. ಎರಡ ದಿನಾ ಅದರ ಬಗ್ಗಿ ಯಾರೂ ಏನೂ ಮಾತಾಡಲಿಲ್ಲಾ. ಮೂರನೇ
ದಿನಾ ಅದರ ನೀಲಕ್ಕನೇ ಅಣ್ಣನ ಮುಂದ ಮಾತ ತಗದ್ಲು, `ಅಣ್ಣಾ, ಅವರು ಯಾವಾಗಾದರೂ ಬರ್ಲಿ. ನಾ ಹೋಗಿ ಅಲ್ಲೇ ಇರ್ತೀನಿ. ಬಟ್ಟಿ-ಬರೀನೂ ಹೆಚ್ಚೀಗಿ ತಂದಿಲ್ಲಾ.
ಹೋಗಿಬಿಡೂದು ಛಲೋ ಅನಸತೈತಿ’. `ನಾನೂ ಅದನ್ನೇ
ಹೇಳಬೇಕಂದಿದ್ನೆವಾ. ನೀ ಏನ ತಿಳಕೋತಿಯೋ ಅಂತ ಸುಮ್ಮನಿದ್ಯಾ. ನಾನೂ ಬರ್ತೀನಿ ನಡಿ’ ಅಂತ ಅಂದಾಗ ಅಕಿಗಿ ಮನಸ್ಸ ತುಂಬಿ ಬಂತು.
ರಾತ್ರಿ ಎಲ್ಲಾ
ಪ್ರಯಾಣ ಮಾಡಿ ಮುಂಜಾನಿ ಮನಿ ಮುಟ್ಟಿದಾಗ ಬಾಗಿಲಿಗಿ ಕೀಲಿ! ಕಛೇರಿ ಸಿಪಾಯಿ, ಪಕ್ಕದ ರೂಮಿನಾಗ ಮಲಗಿದಾವ, ಎದ್ದಬಂದಾ. ನೀಲಕ್ಕ ಅವ್ನಿಗಿ ಬಾಳ ಸರ್ತಿ ಚಾ-ತಿನಿಸು
ಕೊಟ್ಟಿದ್ಲು. `ಬೀಗಾ ಕೊಡಪಾ’
ಅಂದ್ಲು. `ಬೀಗಾ ಕೊಟ್ಟಿಲ್ಲಾ, ಸಾಹೇಬರು ಊರಲ್ಲಿಲ್ಲಾ. ಅವರು ಬಂದ ಮೇಲೆ ಬನ್ನಿ.
ನೀವ್ಯಾರೋ ನನಗೆ ಗೊತ್ತಿಲ್ಲಾ’ ಅಂತ ಕದ
ಮುಚ್ಚುವದರಲ್ಲಿದ್ದ. ಅಣ್ಣ-ತಂಗಿಗೆ ಸಿಟ್ಟು ಬಂತು. `ನೀನ್ಯಾವನೋ ನಮ್ಮ ಮನೀಗಿ ಬಂದು ನಮಗೇ ಜೋರು ಮಾಡ್ತೀಯಾ?
ಯಾಕ? ಪೋಲೀಸಿಗೆ ಹೇಳಬೇಕಾ?’ ಎನ್ನುವುದರಲ್ಲಿ ಅವನು `ನನ್ನೇನೂ ಕೇಳಬೇಡಿ. ಅಲ್ಲಿ ಪೋಲೀಸರು ಬಂದರು ನೋಡಿ.
ಅವ್ರಿಗಿ ಕೇಳ್ರಿ’ ಅಂದ. ಇವರು
ಬಂದದ್ದನ್ನು ನೋಡಿದ ಮನೆ ಮಾಲೀಕನೇ ಪೋಲೀಸ ಅಧಿಕಾರಿಗೆ ಫೋನು ಮಾಡಿದ್ದಾ. ಇಬ್ಬರು ಕಾನ್‍ಸ್ಟೇಬಲ್‍ಗಳು
ನಮಸ್ಕಾರ ಹೇಳುತ್ತ ಗೇಟು ದಾಟಿ ಒಳ ಬಂದರು. ಅಣ್ಣ ಏನೋ ಹೇಳಲು ಬಾಯಿ ತೆಗೆಯುವದರಲ್ಲಿ
ಅವರಲ್ಲೊಬ್ಬ `ಸಾಹೇಬರೇ ಇಲ್ಲೇನೂ
ಮಾತು ಬೇಡ. ಸಾಹೇಬರು ಗಾಡೀ ಕಳಿಸಿದ್ದಾರೆ. ಅವರ ಮನೆಗೇ ಕರೆದಿದ್ದಾರೆ. ಬಂದುಬಿಡಿ’ ಎಂದ. ಕೈಯ ಸೂಟುಕೇಸು ಅಲ್ಲೇ ಇಟ್ಟು ಇಬ್ಬರೂ ಜೀಪು
ಹತ್ತಿದರು. ಜನರೆಲ್ಲ ಕುತೂಹಲದಿಂದ ನೋಡುತ್ತಿದ್ದರು. ಅಸ್ಪಷ್ಟ ಮಾತುಗಳು ಕಿವಿಗೆ
ಬೀಳುತ್ತಿದ್ದವು. ಅದೇ ಪೋಲೀಸ ಅಧಿಕಾರಿ, ಮನೆಗೆ ಬಂದು
ಆತಿಥ್ಯ ಸವಿದವನು. ... ಒಳಗೆ ಕರೆದು ಕೂಡಿಸಿದಾ. ಚಾ ತರಿಸಿದಾ. ತಡವರಿಸಿ ಕೆಲವು ಮಾತು ಹೇಳಿದಾ `ಸರ್, ತಾವು ಎಜುಕೇಟೆಡ್, ತಮ್ಮ ತಂಗೀನೂ
ಅಷ್ಟೇ. ತಮ್ಮನ್ನು ವಿಚಾರಣೆಗೆಂದು ನಾನಿಲ್ಲಿ ಕರೆಸಿಲ್ಲ. ಅವರು ನಿಮ್ಮ ತಂಗಿಗೆ ಮೋಸ
ಮಾಡಿದ್ದಾರೆ. ಮದುವೆಯನ್ನೇ ಆಗಿಲ್ಲ ಎಂದಿದ್ದಾರೆ. ಇದು ಅವರಿಗೆ ಹೊಸದಲ್ಲ. ಹಿಂದೆ ಇಂತಾದೇ ಒಂದು
ಕೇಸಾಗಿದೆ. ಈಗ ಅವರ ಮನೆಯವರನ್ನ, ಮಗುವನ್ನ ಕರೆತರಲು
ಹೋಗಿದ್ದಾರೆ. ನಿಮ್ಮ ತಂಗಿಯವರನ್ನು ದಯವಿಟ್ಟು ಇಲ್ಲಿ ಬಿಟ್ಟು ಹೋಗಬೇಡಿ. ಅವರ ಪ್ರಾಣಕ್ಕೆ
ಅಪಾಯವಿದೆ. ಕರೆದುಕೊಂಡು ಹೋಗಿ. ದಯವಿಟ್ಟು ನನ್ನನ್ನು ಕ್ಷಮಿಸಿ. ನಾನು ಹೆಲ್ಪ್ಲೆಸ್’ ಎಂದು ಕೈಮುಗದು ಒಳಗ ಹೋದಾ. ... ಇಬ್ಬರಿಗೂ ಕಣ್ಣು
ತುಂಬಿ ಬಂದಿದ್ದುವು. ಹೊರಗ ಬಂದ್ರು. ಡ್ರೈವರ್ ಮುಂದ ಬಂದಾ. `ಬ್ಯಾಡಪಾ’ ಅಂದು, ರಸ್ತೇಕ ಬಂದು ಆಟೋ ಕರದ್ರು. `ಅಣ್ಣಾ ನನ್ನಿಲ್ಲೇ
ಬಿಟ್ಟು ಹೋಗು. ನನಗವರನ್ನ ಬಿಟ್ಟ ಇರಾಕ ಆಗೂದಿಲ್ಲಾ. ಅವರು ಹ್ಯಾಂಗರೆ ನೋಡ್ಕೋಳಿ ಇರ್ತೀನಿ’
ಅಂದ್ಲು ನೀಲಕ್ಕ. `ಹುಚ್ಚಿ, ಹುಚ್ಚ ಹಿಡದೈತೇನ ನಿನಗ? ಆ ಇನ್‍ಸ್ಪೆಕ್ಟರ ಏನ ಹೇಳದಾ? ನಿನ್ನ ಜೀವಕ್ಕ ಅಪಾಯ ಐತಿ ಅಂದನಿಲ್ಲ? ಮದಲ ಊರಿಗಿ ನಡಿ. ಮುಂದಿನ ವಿಚಾರ ಮಾಡೂನು. ನಿನ್ನ
ಹಿಂಗ ಒಬ್ಬಾಕಿನ್ನೆ ಬಿಟ್ಟ ಹೋಗ್ತೀನಿ ಅಂತ ತಿಳದಿಯೇನು? ನಡಿ. ಅಳಬ್ಯಾಡಾ’ ಅಂದಾ. ಅವನೂ ಅಳತಿದ್ನಾ?’’ (ಪುಟ: 131-132).
ನೀಲಕ್ಕನ ಈ ಗಂಡ
ಅವಳನ್ನು ಮನೆಬಿಟ್ಟು ಹೊರಹಾಕಲು ಸಾಕಷ್ಟು ತಯಾರಿ ಮಾಡಿಯೇ ಊರುಬಿಟ್ಟಿದ್ದ ಅನಿಸುತ್ತದೆ. ಕಛೇರೀ
ಸಿಪಾಯಿ - ನೀವ್ಯಾರೋ ಗೊತ್ತಿಲ್ಲ ಎನ್ನುವಷ್ಟರ ಮಟ್ಟಿಗೆ ಆ ತಯಾರಿ ಫಲಕೊಡುವಂತಹದಾಗಿದೆ. ಪೋಲೀಸ
ಅಧಿಕಾರಿ ಸ್ವಲ್ಪ ಸಿವಿಲೈಜ್ಡ್ ಆಗಿ ನಡೆದುಕೊಂಡರೂ, ಆಕೆಯ ಗಂಡನಿಗೆ ಅನುಕೂಲವಾಗುವಂತೆ, ಆಕೆಯನ್ನು ಅಲ್ಲಿಂದ ತೊಲಗಿಸುವ ಯೋಜನೆಯನ್ನು
ಕಾರ್ಯಗತಗೊಳಿಸುವುದರಲ್ಲಿಯೇ ತೊಡಗಿದವನು. ನೀಲಕ್ಕನ ಬಗ್ಗೆ ಈ ಗಂಡ ತೋರುವ ಕ್ರೌರ್ಯ
ಅಪರಿಮಿತವಾದದ್ದು. ತಾನು ಅವಳೊಂದಿಗೆ ಮದುವೆಯನ್ನೇ ಮಾಡಿಕೊಂಡಿಲ್ಲ ಎಂದು ಹೇಳಿದ ಆತ, ಮುಂದೆ ಅನೇಕ ವರ್ಷಗಳ ಕಾಲ ನೀಲಕ್ಕ ನೌಕರಿಮಾಡುತ್ತಿದ್ದ
ಸ್ಥಳಗಳಿಗೆಲ್ಲ ಗಂಡನ ಸಂಬಂಧ ಹೇಳಿಕೊಂಡು, ಧುತ್ತೆಂದು ಬಂದು ಪ್ರೇಮದ ನಾಟಕವಾಡಿ ಇವಳನ್ನು ದುರ್ಬಳಕೆ ಮಾಡಿ ಹೋಗುತ್ತಿದ್ದನು. ಕೊನೆಗೆ
ನೀಲಕ್ಕನೇ ಅವನನ್ನು ನಿರಾಕರಿಸುವವರೆಗೆ ಅವಳಲ್ಲಿಗೆ ಬಂದು ಕಾಡಿದ್ದಾನೆ.
ನೀಲಕ್ಕನ
ಜೀವನದಲ್ಲಿ ಮೂರನೆಯ ಗಂಡನ ಪ್ರವೇಶ ಅವಳು ಹೊಂದಿದ ಮಗುವೊಂದರ ಹಂಬಲದ ಭಾವುಕತೆಯನ್ನು
ಬಂಡವಾಳವಾಗಿಸಿಕೊಂಡು ನಡೆಯುತ್ತದೆ. ನಿನಗೆ ಮಗುವೊಂದನ್ನು ಪಡೆಯುವ ಅವಕಾಶ ಒದಗಿಸುತ್ತೇನೆ,
ಆ ಮಗುವಿಗೆ ತಂದೆಯೆನ್ನುವ
ಹೆಸರು ನೀಡುತ್ತೇನೆ ಎಂದು ಹೇಳುತ್ತ ದಾಂಪತ್ಯದ ಆಸೆ ಕಮರಿಹೋಗಿದ್ದ ಅವಳಲ್ಲಿ ಕಂದನ ಹಂಬಲದ
ಬೆಂಕಿಯನ್ನು ಹೊತ್ತಿಸುತ್ತಾನೆ. ಪದೇ ಪದೇ ಬಂದು ಒತ್ತಾಯಿಸಿ ಅವಳಲ್ಲಿ
ಕಲಮಲವನ್ನುಂಟುಮಾಡುತ್ತಾನೆ. ಬೆನ್ನುಹತ್ತಿದ ಆ ರಾಜಕಾರಣಿಯೊಂದಿಗೆ ನಡೆದ ನೀಲಕ್ಕನ ಮಾತುಕತೆ
ಕೇಳಿರಿ: ``... `ಆದರ ಎರಡನೇ
ಸಂಬಂಧನೂ ದುರ್ದೈವಕ್ಕ ಆಗಿಬರಲಿಲ್ಲಾ. ನೀವಿನ್ನಾ ಸಣ್ಣಾವರು. ಈಗೇನೋ ಅವ್ವಾ-ಅಪ್ಪಾ ನೋಡಕೋತಾರಾ
ಅಡ್ಡಿ ಇಲ್ಲಾ. ನಾಳಿ ವಯಸ್ಸಾದ ಮ್ಯಾಲೆ ಎಲ್ಲಿರ್ತೀರಿ? ಯಾರ ನೋಡಕೋತಾರಾ? ಅಣ್ಣಾ-ತಮ್ಮಾ ನೋಡಕೋತಾರಾ ಅನ್ನೂ ಗ್ಯಾರಂಟಿ ಏನು...?’
ಮಧ್ಯದೊಳಗೇ ಅವರ್ನ ತಡದ್ಲು. `ಸಾರೀರಿ, ಸ್ವಲ್ಪ ಮಾತ ನಿಲ್ಲಸ್ರಿ. ನಾಳಿನ ಕತಿ ಯಾರ ಕಂಡಾರಾ?
ಇವತ್ತಿಂದ ಏನದ ಅದನ್ನ
ಹೇಳ್ರಿ ಸಾಕು. ನಿಮಗೇನರ ನನ್ನ ಮದವೀ ಆಗೂ ವಿಚಾರ ಇದ್ರ, ತಲಿಯೊಳಗಿಂದ ಅದನ್ನ ತಗದ ಬಿಡ್ರಿ. ಈಗಾಗ್ಲೇ ಎರಡೆರಡು
ಸರ್ತಿ ಎದಿ ಸುಟಗೊಂಡೀನಿ. ಮತ್ತ ಮತ್ತ ಅದೇ ಅಗ್ನಿಕುಂಡಕ್ಕ ಬೀಳಾಕ ನಾ ತಯಾರಿಲ್ಲಾ. ...
ಸಾಸಿವಿಯಷ್ಟು ಸುಖಕ್ಕ ಸಾಗರದಷ್ಟು ದುಃಖಾ ಅನುಭವಸೂದು ಅಂತ ಹಂಗಾದೀತು. ದಯವಿಟ್ಟು ಈ ವಿಷಯ
ಇಲ್ಲಿಗೇ ನಿಲ್ಲಿಸಿಬಿಡೂನು. ಅದು ಇಬ್ರಿಗೂ ಛಲೋ’. ... `ಛೇ ಛೇ ನನ್ನ ಮಾತು ಪೂರಾ ಕೇಳಿಸಿಕೊಳ್ರಿ. ನನ್ನೂ
ಬ್ಯಾರೇಯವರಿಗಿ ಹೋಲಸಬ್ಯಾಡ್ರಿ. ಎಲ್ಲಾ ಗಂಡಸರನ್ನೂ ಒಂದೇ ತಕ್ಕಡ್ಯಾಗ ತೂಗಬ್ಯಾಡ್ರಿ. ... ನಿಮಗ
ತಾಯಾಗೂ ಹಂಬಲಾ ಬಾಳ ಅದ ಅಂತ ನನಗ್ಗೊತ್ತು. ಈಗೇನೋ ಅದನ್ನ ಅದುಮಿಟ್ಟೀರಿ. ಆದರ ಕಾಲಾ ಕಳದಂಗ,
ಅದುಮಿಟ್ಟ ಸ್ಪ್ರಿಂಗ್
ಜೋರಾಗಿ ಸಿಡದೇಳಂಗ ಆದೀತು. ಆವಾಗ ನಿಮಗ ಅಗದೀ ಮಕ್ಕಳು ಬೇಕೇ ಬೇಕು ಅನಿಸಿದರ ಕಾಲಾ ಮೀರಿರತೈತಿ.
ನೀವು ಪಶ್ಚಾತ್ತಾಪ ಪಡಂಗ ಆಗತದ. ನಾನು ಈ ನದೀ ದಂಡೀ ಮ್ಯಾಲ ಕುಂತು, ನದೀ ಮ್ಯಾಲೆ ಪ್ರಮಾಣ ಮಾಡಿ ಹೇಳ್ತೀನಿ. ನನ್ನ ಮದವಿ
ಆಗರಿ. ನಿಮಗ ಅಂದ್ರ ನಮಗ, ಮಕ್ಕಳಾಗಲಿ. ಆ
ಮಕ್ಕಳಿಗಿ ನನ್ನ ಹೆಸರು ಕೊಡ್ತೀನಿ. ನಿಮಗೂ ಒಂದ ಆಧಾರ ಇರ್ಲಿ. ನಿಮ್ಮ ಹೆಸರಿಗೂ ಬಾಳಾ ಇಲ್ಲಾ
ಅಂದ್ರೂ ಸ್ವಲ್ಪಾದರೂ ಮಾಡ್ತೀನಿ. ಎಂಥಾ ಸಂದರ್ಭದಾಗೂ ನಾ ನಿಮ್ಮ ಕೈ ಬಿಡಂಗಿಲ್ಲಾ...’
...’’. (ಪುಟ:173). ... `ತನಗ ಒಬ್ಬಾಂವಾ ಗಂಡಬೇಕು ಅನ್ನೂದಕಿಂತಾ ತನ್ನ
ಮಕ್ಕಳಿಗೆ ಒಬ್ಬಾಂವ ಅಪ್ಪ ಬೇಕು ಅನ್ನೂದರ ಕಡೆ ಹೆಚ್ಚು ವಾಲತಿದ್ಲು. ಅವರೇನೋ ಅಪ್ಪ ಆಗಾಕ ತಯಾರ
ಆಗ್ಯಾರಾ. ಆದರ ವಿವಾಹಿತಾ. ಮಕ್ಕಳೊಂದಿಗಾ. ಮನಿಯವರು ಒಪ್ಪತಾರೇನು? ಈಗಾಗಲೇ ಶಿಲ್ಪಗೊಂಡಿರುವ ಆ ಸಂಸಾರದೊಳಗ ತಾನು ಅನಧಿಕೃತ
ಪ್ರವೇಶ ಮಾಡೂದು ಎಷ್ಟು ಸರಿ?’ ಎಂದು ಯೋಚಿಸಿದ
ನೀಲಕ್ಕ ಕೆಲವು ಕರಾರುಗಳನ್ನು ಹಾಕಿ ಮದುವೆಗೆ ಒಪ್ಪುತ್ತಾಳೆ. ಆ ಕರಾರುಗಳಲ್ಲಿ ಆಕೆ ಮುಗ್ಧವಾಗಿ,
`ಮದುವೆಯಾಗುತ್ತೀರಿ ಅಂದಮೇಲೆ
ನೀವು ನನ್ನ ಬದುಕಿಗೆ ಭದ್ರತೆ ದೊರೆಯುವಂತಹ ವ್ಯವಸ್ಥೆಯನ್ನು ಮಾಡಿಯೇ ಮಾಡುತ್ತೀರಿ’ ಎಂದು ಹೇಳುತ್ತಾಳೆ. ಮತ್ತು ತನ್ನಿಂದ ಅವನ ಎರಡನೆಯ
ಹೆಂಡತಿ ಮಕ್ಕಳಿಗೆ ಯಾವ ಅನ್ಯಾಯವೂ ಸಂಭವಿಸಕೂಡದು ಎನ್ನುತ್ತಾಳೆ! ಬೆನ್ನುಹತ್ತಿದ ಆ ರಾಜಕಾರಣಿ
ಹೂಂ ಎಂದು ಇವಳನ್ನು ಮದುವೆಯಾಗಿ ಇವಳ ಆಸೆ ಮತ್ತು ವ್ಯಕ್ತಿತ್ವಗಳೆರಡನ್ನೂ ನಾಶಮಾಡುವ ಎಲ್ಲ
ನಡೆಗಳನ್ನು ತೋರಿಸುತ್ತಾನೆ! ಮಕ್ಕಳನ್ನು ಪಡೆಯುವ ಅವಳ ಪ್ರಯತ್ನದ ಅಂಗವಾಗಿ ನಡೆಯುವ ವೈದ್ಯಕೀಯ
ಚಿಕಿತ್ಸೆಗಳಿಗೆ ಸಹಕಾರ ನೀಡುವುದಿಲ್ಲ; ಜೀವನ ಭದ್ರತೆಗೆ
ವ್ಯವಸ್ಥೆ ಮಾಡುತ್ತೇನೆಂದವ ಇವಳ ಹಣವನ್ನೇ ಕಸಿದುಕೊಳ್ಳುವ ಪ್ಯಾರಾಸೈಟ್ ಆಗುತ್ತಾನೆ; ಅವನು ಅವಳ ಜೀವನ ಭದ್ರತೆಗೆ ಕೊಟ್ಟ ಕಾಣಿಕೆಯೆಂದರೆ ಅವಳ
ಹೆಸರಿನ ಮುಂದೆ ತನ್ನದೊಂದು ಹೆಸರನ್ನು ಮಾತ್ರ!
***
ಕಾದಂಬರಿಯಲ್ಲಿ
ನೀಲಕ್ಕನ ದುರಂತದ್ದು ಒಂದು ಪ್ರಧಾನ ಎಳೆಯಾದರೆ ಅದರ ಸುತ್ತಮುತ್ತಲೂ ಸಂಭವಿಸುವ ಇನ್ನಷ್ಟು
ದುರಂತಗಳ ಸಂತೆಯೇ ಇದೆ! ಸಣ್ಣ ವಯಸ್ಸಿನ ತಂಗಿಯ ಗಂಡನ ಸಾವು, ಇನ್ನೊಬ್ಬ ತಂಗಿಯ ಗಂಡನ ನಿಷ್ಕ್ರಿಯತೆ ಮತ್ತು ಅವರ
ಸಂಸಾರದ ವಿಘಟನೆ, ತಮ್ಮನ ಆತ್ಮಹತ್ಯೆ,
ಸಂಸಾರಗೇಡಿಯಾದರೂ ಛಲದಿಂದ
ಬದುಕುತ್ತಿದ್ದ ತಂಗಿಯ ಮಗಳ ಆತ್ಮಹತ್ಯೆ ಮತ್ತು ಆ ತಂಗಿ ಬದುಕಿನ ಬಗೆಗಿನ ಆಸಕ್ತಿಯನ್ನು
ಕಳೆದುಕೊಂಡು ಕುಸಿದು ಹೋಗುವುದು... ಇಡೀ ಕಾದಂಬರಿ ದುರಂತಗಳ ಒಂದು ಮಾಲೆಯಾಗಿದೆ! ಅದರ
ಪದಕವೊಂದನ್ನು ಇಲ್ಲಿ ತೋರಿಸುತ್ತೇನೆ ನೋಡಿ: ``... ನಲವತ್ತನಾಲ್ಕು ವರ್ಷದ ಎರಡು ಮಕ್ಕಳ ತಾಯಿ, ಹದಿನೆಂಟು ವರ್ಷದ ಮಗಳನ್ನ ಇತ್ತೀಚೆಗೆ ಕಳಕೊಂಡು ಅರೆ
ಹುಚ್ಚಿ ಆಗಿದ್ಲು. ಅಕಿ ನಕ್ಕರ ಅತ್ತಂಗ ಇರ್ತಿತ್ತು. ಕೆಲಸಾ-ಕೆಲಸಾ ಅಂತ ಯಾಕ ಹಚಿಗೊಂಡಿದ್ಲು
ಅಂದ್ರ, ಸ್ವಂತ ಅಕ್ಕಾ ಆದರೂ ಅದು
ತನ್ನ ಮನಿಯಲ್ಲ. ಅಕಿಗಿ ಭಾರ ಆಗಿ ಇರಬಾರದು. ಕೆಲಸಾ ಮಾಡಿ ಆದರೂ ಋಣಾ ತೀರಿಸಬೇಕು. ಇದು ಅಕಿ
ಧೋರಣಾ! ಒಮ್ಮಿ ಕೌನ್ಸಲಿಂಗ್ ಮಾಡಿಸೂಣೂ ಅಂತ ನೀಲಕ್ಕ ಆ ಊರಿನ ಪ್ರಸಿದ್ಧ ವೈದ್ಯರ ಹಂತೇಲಿ
ಕರಕೊಂಡ ಹೋದ್ಲು. `ಅಕ್ಕವರ, ನೀವು ಸ್ವಲ್ಪ ಆ ರೂಮಿನ್ಯಾಗಿರ್ರಿ ಬಾಗಲಾ ಹಾಕೋತೀನಿ’
ಅಂದ. ಬಾಗಲಾ ಹಾಕೊಂಡರೂ
ಕಿವಿಯೆಲ್ಲಾ ಅಲ್ಲೇ ಇದ್ದುವು. ಗುಣು ಗುಣು ಮಾತು. ಶಮೀ ಅಳೂ ಶಬ್ದಾ. ಹೊಡತದ ಶಬ್ದಾನೂ ಕ್ಷೀಣಾಗಿ
ಕೇಳ್ತು. ಚಡಪಡಿಸಿದ್ಲು. ಸಂಕಟಾ ಪಟ್ಲು. ಸಮಾಧಾನ ಇಲ್ಲದೇ ಅಲ್ಲೇ ಸುತ್ತಾಡಿದ್ಲು. ಬಾಗಲು
ತಗೀತು. `ನಾ ತಂಗೀಗೆಲ್ಲಾ
ಹೇಳೀನ್ರಿ. ಮುಂದಿನವಾರಾ ಬರ್ರಿ’ ಅಂದ್ರು ಡಾಕ್ಟರು.
ಹೊರಗ ಬಂದು ಕಾರಿನ್ಯಾಗ ಕುಂತರು. ಕಾರು ಚಾಲೂ ಆದಕೂಡಲೇ, ಶಮೀ ನೀಲಕ್ಕನ ತೊಡೀ ಮ್ಯಾಲೆ ತಲಿ ಇಟ್ಟು ಬಿಕ್ಕಿ
ಬಿಕ್ಕಿ ಅಳಾಕ ಸುರುಮಾಡಿದ್ಲು. `ಅರೇ, ಯಾಕ? ಏನಾತು? ಏನಾತು ಹೇಳಲೇ?’
ಇಲ್ಲ. ಶಮಿ ಮಾತಾಡೂ
ಸ್ಥಿತಿಯೊಳಗೇ ಇರಲಿಲ್ಲಾ. `ನಾ ಸಾಯಬೇಕು,
ನಾ ಇರಬಾರದು...’. `ಏನಾತು ಸಾಯೂವಂಥಾದ್ದು. ಸುಮ್ಮನಿರು. ಮನಿಗಿ
ಹೋದಮ್ಯಾಲೆ ಹೇಳೂವಂತಿ’. ಮನಿ ಮುಟ್ಟೂತನ
ಬಿಕ್ಕಳಿಕಿ ಹಂಗೇ ಇತ್ತು. `ಅಕ್ಕಾ, ನಾ ಯಾಕಿರಬೇಕು ಹೇಳು. ದೈವ ಯಾಕ ನನಗಿಷ್ಟ ಕಾಡಾಕ ಹತೈತಿ.
ಅಂವಾ ಭಾಡ್ಯಾ, ಮುದಕ ಆಗ್ಯಾನಾ.
ಹೊಟ್ಟಿಗೇನ ತಿಂತಾನಾ?...’. `ಏನರೇ ಆಯ್ತಲ್ಲಿ
ಅದನ್ನ ಹೇಳು’ ಇಕಿ ಒತ್ತಾಯ. `ಅಕ್ಕಾ ಅಕ್ಕಾ... ನನ್ನ ಅಂವಾ ರೇಪ್ ಮಾಡಾಕ ಬಂದಾ.
ನನ್ನ ಮೈಯಾಗ ಏನದ? ನಾನೇ ಹೆಣಾ ಆದಂಗ
ಆಗೀನಿ. ಅವನ ಮುದಿಚಟಾ ಎಷ್ಟದ. ನನಗ ನಿತ್ರಾಣ ಆಗಿ, ಕಾಲ ಬಿದ್ಯಾ ಬಿಟ್ಟು ಬಿಡು ಅಂತ. ಕಪಾಳ ಕಪಾಳ ಹೊಡೀತಾನಾ.
ನಾ ಯಾರಿಗೇನ ಮಾಡೀನಂತ ಇಷ್ಟ ಕಾಡಾಕ ಹತೈತಿ? ನೀ ಯಾಕ ಅವನ ಹಂತೇಲಿ ನನ್ನ ಕರಕೊಂಡ ಹೋದಿ? ಬ್ಯಾರೇ ಯಾರೂ ಸಿಗಲಿಲ್ಲಾ?...’. ನೀಲಕ್ಕಗ ಧಕ್ ಅಂತ
ಎದಿಗಿ ಒದ್ದಂಗಾತು...’. (ಪುಟ:281).
ಇಷ್ಟೆಲ್ಲ ದುರಂತದ
ಗುಡ್ಡೆಯನ್ನು ನಮ್ಮ ಮುಂದೆ ಹರಡುವ ಕಾದಂಬರಿ ಈ ದುರಂತಗಳಿಗೆಲ್ಲ ಕಾರಣವೆಂದು ಯಾವುದನ್ನೂ
ಗುರುತಿಸುವುದಿಲ್ಲ. ಶಶಿಕಲಾ ಅವರು `ನನ್ನೂವು ಒಂದೆರಡು
ಮಾತು...’ ಎಂದು ಕಾದಂಬರಿಯ
ಆರಂಭದಲ್ಲಿ ಬರೆಯುತ್ತ `ಮಹಿಳಾವಾದ ಎಂಬುದು
ಮಹಿಳಾ ವ್ಯಾಧಿ ಎನ್ನುವಷ್ಟು ಕ್ಲೀಷೆಯಾಗಿರುವ ಈ ಕಾಲ ಸಂದರ್ಭದಲ್ಲಿ ಮಹಿಳಾವಾದ ಅಂದರೆ
ಮಾನವತಾವಾದ ಎಂದು ಸ್ವೀಕರಿಸುವುದೇ ಸೂಕ್ತ’ ಎನ್ನುತ್ತಾರೆ. ಅಂದರೆ, ಶಶಿಕಲಾ ಅವರು
ಕಾದಂಬರಿಯ ವಿನ್ಯಾಸದ ಹಿನ್ನೆಲೆಯಲ್ಲಿ ಸ್ತ್ರೀವಾದದ ತರ್ಕವನ್ನು ಮುಂದೆ ಮಾಡಲು ಬಯಸುವುದಿಲ್ಲ.
ಗಂಡು-ಹೆಣ್ಣೆರಡನ್ನೂ ಒಳಗೊಂಡ ಮಾನವೀಯತೆಯ ಆಶಯವು ಬದುಕಿನ ಪ್ರೇರಣೆಯಾಗಬೇಕೆಂದು ಹೇಳುತ್ತಾರೆ.
ಹಾಗಿದ್ದರೆ ಈ ದುರಂತಗಳ ಹಿನ್ನೆಲೆಯ ಪ್ರೇರಣೆಯೇನು ಎನ್ನುವುದಕ್ಕೆ ಕಾದಂಬರಿ ತರ್ಕಾತೀತವಾದ
ಅನೂಹ್ಯದ ಅದೃಷ್ಟವನ್ನು ನಮ್ಮೆದುರು ಇಡುತ್ತದೆ. ಕಾದಂಬರಿಯ ಆರಂಭದಲ್ಲಿಯೇ ಶೆಟಿಗೆವ್ವನ ಉಲ್ಲೇಖ
ಬರುತ್ತದೆ; ಆಕೆ ಮಗು ಹುಟ್ಟಿದ
ಐದನೆಯ ದಿವಸದಂದು ಬಾಣಂತಿ ಕೋಣೆಗೆ ಬಂದು ಮಗುವಿನ ಹಣೆಬರೆಹವನ್ನು ಬರೆಯುವ ಉಲ್ಲೇಖ ಬರುತ್ತದೆ.
ಹೌದು! ವಿನಾಕಾರಣವಾದ, ಗಂಡು-ಹೆಣ್ಣು ಎರಡೂ
ಜೀವಿಗಳ ಬದುಕು, ತರ್ಕಾತೀತವಾಗಿ
ಬಂದೆರಗುವ, ಕೋಟಲೆಗಳಿಗೆ
ಸಿಕ್ಕು ಬಳಲುತ್ತಿದ್ದರೆ ಅದಕ್ಕೆ ಕಾರಣವಾಗಿ ಅನೂಹ್ಯ, ಅದೃಶ್ಯ, ಅದೃಷ್ಟವನ್ನೇ ದೂರಬೇಕಲ್ಲವೆ? ಹೀಗೆ, ಶಶಿಕಲಾ ವಸ್ತ್ರದ ಅವರ `ಇದ್ದೇನೆ ಇಲ್ಲದಂತೆ’
ಎನ್ನುವ ಈ ಕಾದಂಬರಿ ನಮ್ಮ
ಅಂತರಂಗವನ್ನೆಲ್ಲ ವ್ಯಾಪಿಸುತ್ತ, ಮನುಷ್ಯನ ಅನಾಥ
ಪ್ರಜ್ಞೆ, ಅವನ ಅಸಹಾಯಕ
ಸ್ಥಿತಿಗಳು ನಮ್ಮ ಅಂತಃಕರಣದಲ್ಲಿ ಹೊತ್ತಿ ಉರಿಯುವಂತೆ ಮಾಡುತ್ತದೆ. ಇದನ್ನು ಓದುತ್ತಿದ್ದಂತೆ
ನಾವು ಕರಗುತ್ತೇವೆ... ಬಾಗುತ್ತೇವೆ!
No comments:
Post a Comment