Thursday, February 21, 2019

I have written an article on Shashikala Vastrad's autobiographical novel - Iddene illadante - for Kasturi monthly magazine. It is published in Kasturi _ March 2019. But for technical reasons or for some other reason, a large portion of the article is missed. Hence I am giving the full article here for the interested ones.


ಶಶಿಕಲಾ ವೀರಯ್ಯಸ್ವಾಮಿ ವಸ್ತ್ರದ ಅವರ ಆತ್ಮಕಥನಾತ್ಮಕ ಕಾದಂಬರಿ :
`ಇದ್ದೇನಯ್ಯಾ ಇಲ್ಲದಂತೆ
-              ರಾಘವೇಂದ್ರ ಪಾಟೀಲ
ಎಪ್ಪತ್ತರ ದಶಕದಲ್ಲಿ ಕವಿತೆಗಳನ್ನು ಬರೆಯಲು ಆರಂಭಿಸಿದ ಶಶಿಕಲಾ ವಸ್ತ್ರದ ಅವರು ಇದುವರೆಗೆ, `ಗುಬ್ಬಿಮನೆ’, `ಪ್ರಶ್ನೆ’, `ಜೀವಸಾವುಗಳ ನಡುವೆ’, `ಹೆಂಗ ಹೇಳಲೇ ಗೆಳತಿ’, `ಮಧ್ಯಂತರದ ಒಂದು ಗದ್ಯಗೀತೆಮತ್ತು `ಬಟ್ಟಬಯಲಲಿ ನಿಂತುಎಂಬ ಆರು ಕವನಸಂಕಲನಗಳನ್ನು ಪ್ರಕಟಿಸಿ ಕವಿಯಾಗಿ ತಮ್ಮ ಅಸ್ತಿತ್ವವನ್ನು ಸಾಬೀತುಪಡಿಸಿಕೊಂಡಿದ್ದಾರೆ. ಶಿಶು ಸಾಹಿತ್ಯ ಮತ್ತು ಜೀವನ ದರ್ಶನಗಳ ಎರಡು ಕೃತಿಗಳು ಮತ್ತು ಲೇಖನಗಳ ಒಂದು ಸಂಗ್ರಹವನ್ನಲ್ಲದೇ, ಶಶಿಕಲಾ ಅವರು, `ಅಪ್ಪ ಮತ್ತು ಮಣ್ಣುಮತ್ತು `ಇದ್ದೇನಯ್ಯಾ ಇಲ್ಲದಂತೆಎನ್ನುವ, ಸ್ಫಟಿಕದ ಶಲಾಕದಂತಹ, ಎರಡು ಆತ್ಮಕಥನಾತ್ಮಕ ಕೃತಿಗಳನ್ನು ಪ್ರಕಟಿಸಿ ತಮ್ಮ ಕಥನಪ್ರತಿಭೆಯನ್ನು ಮತ್ತು ತಮ್ಮ ಬದುಕಿನ ದುರಂತವನ್ನು ಒಟ್ಟಿಗೇ ತೋರಿಸಿದ್ದಾರೆ. ಪ್ರಸ್ತುತ `ಇದ್ದೇನಯ್ಯಾ ಇಲ್ಲದಂತೆಕೃತಿಯನ್ನು ಶಶಿಕಲಾ ಅವರು ಕಾದಂಬರಿ ಎಂದು ಕರೆದಿದ್ದಾರಾದರೂ ಅದು ಅವರ ಜೀವನ ಚರಿತ್ರೆಗೆ ನಿಷ್ಠವಾದದ್ದಾಗಿದ್ದು ಅದನ್ನು `ಆತ್ಮಕಥನಾತ್ಮಕ ಕಾದಂಬರಿಎಂದೇ ಹೇಳಬಹುದು. ಇದಲ್ಲದೇ, ಧಾರವಾಡ ಸಾಹಿತ್ಯ ಸಂಭ್ರಮದ `ಆತ್ಮಕಥೆಗಳ ಓದುಎನ್ನುವ ಒಂದು ಗೋಷ್ಠಿಯಲ್ಲಿ ಶಶಿಕಲಾ ಅವರು ತಮ್ಮ ಈ ಕೃತಿಯಲ್ಲಿನ ಕೆಲವು ಭಾಗಗಳನ್ನು ಓದಿದ್ದರು ಎನ್ನುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.
ಕನ್ನಡದಲ್ಲಿ ಆತ್ಮಕಥೆಗಳೇನೂ ಅಪರೂಪದ ಬರೆಹಗಳಲ್ಲ. ಅನೇಕ ಮಹನಿಯರ ಅನೇಕ ಆತ್ಮಕಥೆ-ಆತ್ಮಚರಿತ್ರೆಯ ಬರೆಹಗಳು ಪ್ರಕಟಗೊಂಡು ಅವುಗಳ ಸ್ಪಷ್ಟವಾದ ಧಾರೆಯೊಂದು ಕನ್ನಡದಲ್ಲಿ ಈಗಾಗಲೇ ಸ್ಥಾಪನೆಗೊಂಡಿದೆ. ಹೀಗಿರುವಾಗ ಶಶಿಕಲಾ ವಸ್ತ್ರದ ಅವರು ತಮ್ಮ ಆತ್ಮಚರಿತ್ರೆಯನ್ನು ಆತ್ಮಕಥೆಯ ಜಾಡಿನಲ್ಲಿ ನಡೆಸದೇ, ಅದಕ್ಕೆ ಕಾದಂಬರಿಯ ಛದ್ಮವನ್ನೇಕೆ ಬಯಸಿದರು ಎನ್ನುವ ಪ್ರಶ್ನೆ ಪ್ರಸ್ತುತವಾಗುತ್ತದೆ. ಈ ಪ್ರಶ್ನೆಗೆ ನನಗೆ ತಕ್ಷಣ ಹೊಳೆಯುವ ಉತ್ತರವೆಂದರೆ - ಶಶಿಕಲಾ ಅವರ ಜೀವನ ವಿವರಗಳು ಒಳಗೊಂಡಿರುವ ಕಥನದ ಸತ್ವಶೀಲತೆ. ಈ ಮಾತಿಗೆ ಸ್ವಲ್ಪ ವಿವರಣೆ ಬೇಕಾಗುತ್ತದೆ. ಕೆಲವು ವ್ಯಕ್ತಿಗಳ ಜೀವನಚರಿತ್ರೆಯು ಸಾಕಷ್ಟು ಮಾಹಿತಿಗಳನ್ನು ತಿಳಿಸುವ ಘಟನೆಗಳನ್ನು ಒಳಗೊಂಡಿರುತ್ತವೆ. ಆ ಘಟನೆಗಳ ವಿವರಗಳನ್ನು ಓದುವಾಗ ಓದುಗನು ತನ್ನ ನಿರ್ಲಿಪ್ತತೆಯನ್ನು ಕಳೆದುಕೊಳ್ಳುವ ಯಾವ ಪ್ರೇರಣೆಗಳೂ ಒತ್ತಾಯಗಳೂ ಇರುವುದಿಲ್ಲ. ಅಂದರೆ ಅಲ್ಲಿ ಓದುಗನ ಭಾವಕೋಶವು ನಿರಪೇಕ್ಷವಾಗಿ ಉಳಿದು ಅವನ ಬುದ್ಧಿಲೋಕವು ಕೃತಜ್ಞಗೊಳ್ಳುವಂತಹ ಮಾಹಿತಿ-ತಿಳುವಳಿಕೆಗಳ ವಿವರಗಳು ಮಾತ್ರ ಆ ಬರೆಹದ ಓದಿನಿಂದ ದೊರೆಯುತ್ತವೆ. ಆದರೆ ಇನ್ನು ಕೆಲವು ಆತ್ಮಚರಿತ್ರೆಗಳ ಬರೆಹಗಳು ನೇರವಾಗಿ ನಮ್ಮ ಭಾವಕೋಶವನ್ನು ಉದ್ದೀಪ್ತಗೊಳಿಸುವ ಎಮೋಟಿವ್ - ಭಾವದೀಪ್ತ ಭಾಷಿಕ ರಚನೆಗಳಾಗಿರುತ್ತವೆ. ಅವುಗಳ ಓದು ಬುದ್ಧಿಗಮ್ಯತೆಯ ಹೊರತಾಗಿ ನಮ್ಮ ಹೃದಯವನ್ನು ಕಲಕುವಂತಹ ಭಾವಗಮ್ಯವಾಗಿರುತ್ತದೆ. ಅಂಥವುಗಳು ಕಥನದತ್ತ ವಾಲುವ ಬರೆಹಗಳು. ಇಂಥ ಬರೆಹಗಳು ಕಥನದ ಸತ್ವಶೀಲತೆಯನ್ನು ಒಳಗೊಂಡಿರುತ್ತವೆ ಎನ್ನುವುದು ನನ್ನ ಮಾತು. ಶಶಿಕಲಾ ವಸ್ತ್ರದ ಅವರ ಇಡೀ ಜೀವನ ವಿವರ ಇಂಥ ಎಮೋಟಿವ್ ಆದ, ಕೇಳುಗರ-ಓದುಗರ ಭಾವಕೋಶವನ್ನು ತಲ್ಲಣಗೊಳಿಸುವಂತಹ ಸ್ವರೂಪದ್ದು. ಅವರ ಈ ಜೀವನ ವಿವರಗಳನ್ನು ನೀವು ಎಷ್ಟೇ ನಿರ್ಲಿಪ್ತಿಯಲ್ಲಿ ನಿರೂಪಿಸಿದರೂ ಅದು ಎಮೋಟಿವ್ ಆಗಿಯೇ ಇರುತ್ತದೆ; ಅದು ಕಥನದ ಸ್ವರೂಪವನ್ನು ಪಡೆದುಕೊಳ್ಳುತ್ತದೆ! ಅಂದರೆ, ಶಶಿಕಲಾ ಅವರ ಜೀವನ ವಿವರಗಳು ತಮ್ಮಷ್ಟಕ್ಕೆ ತಾವು ಕಥನದ ಕಲಾತ್ಮಕತೆಗೆ ಹೊಂದಿಕೊಳ್ಳುವಂತಹವುಗಳಾಗಿವೆ. ಅವರು ಈ ಕೃತಿಯನ್ನು ಕಾದಂಬರಿ ಎಂದು ಹೇಳದಿದ್ದರೂ ಅದು ಕಾದಂಬರಿಯ ಹಾಸು ಬೀಸುಗಳನ್ನು ಒಳಗೊಳ್ಳುವಂತಹದಾಗಿರುತ್ತಿತ್ತು.
ಇದು ವಸ್ತುವಿನ ದೃಷ್ಟಿಯಿಂದ ನೋಡಿದರೆ ಹೊಳೆಯುವ ಸಂಗತಿಯಾಯಿತು. ಇನ್ನು ಲೇಖಕನ ದೃಷ್ಟಿಯಿಂದ ನೋಡಿದಾಗಲೂ ಕಾದಂಬರಿಯ ಈ ಕಲಾತ್ಮಕತೆ ಬರೆಹಕ್ಕೆ ಅನುಕೂಲಕರವಾದದ್ದು ಆಗಿದೆ. ಈ ಕೃತಿಯಲ್ಲಿನ ನೀಲಕ್ಕ ಕಥನಗಾರ್ತಿಯಾದ ಶಶಿಕಲಾ ಅವರೇ ಆಗಿದ್ದಾರೆ. ಆದರೆ ಶಶಿಕಲಾ ಅವರು ಇಲ್ಲಿ ನಿರೂಪಕಿಯ ಸ್ಥಾನವನ್ನು ವಹಿಸುವುದರಿಂದ ನಿರೂಪಣೆಗೆ ಅವಶ್ಯವಾಗಿದ್ದ ಒಂದು ಕಲಾತ್ಮಕ ದೂರ ಸಾಧಿಸುತ್ತದೆ. ಒಂದು ಪಾತ್ರವು ತನ್ನನ್ನು ತಾನು ಉತ್ತಮಪುರುಷ ನೆಲೆಯಿಂದ - ನಾನು ಎಂದು - ನಿರೂಪಿಸತೊಡಗಿದಾಗ ಆ ಪಾತ್ರಕ್ಕೆ ಒಂದು ಹೊಣೆಗಾರಿಕೆ ಅಂಟಿಕೊಳ್ಳುತ್ತದೆ. ಅದೇನೆಂದರೆ, ಅದು ತನ್ನ ಪ್ರತಿ ನಡೆಯ ಬಗೆಗೆ ಕಾರಣವನ್ನು ನೀಡಬೇಕಾಗುತ್ತದೆ. ಅಂದರೆ ಬರೆಹದಲ್ಲಿ ಆ ಪಾತ್ರವು ತನ್ನ ನಡೆಯಬಗೆಗಿನ ಕಾರಣಗಳನ್ನು ವಾಚ್ಯವಾಗಿಯೋ ಸೂಚ್ಯವಾಗಿಯೋ ಹೇಳಬೇಕಾಗುತ್ತದೆ. ಆದರೆ ನಿರೂಪಣೆಯು, ಈ ಕಾದಂಬರಿಯಲ್ಲಿ ಬರುವಂತೆ, ಅವಳು-ಅವನು ಎನ್ನುವಂತೆ - ಕನಿಷ್ಟಪುರುಷ ನೆಲೆಯದಾಗಿದ್ದರೆ, ನಿರೂಪಕನಿಗೆ ಪಾತ್ರಗಳ ನಡೆಯ ಬಗೆಗಿನ ಸ್ಪಷ್ಟೀಕರಣ ನೀಡುವ ಹೊಣೆಗಾರಿಕೆ, ಕಟ್ಟುನಿಟ್ಟಿನದಾಗಿರುವುದಿಲ್ಲ. ಕನಿಷ್ಟಪುರುಷ ನಿರೂಪಣೆಯ ಕಥನಗಾರಿಕೆಯಲ್ಲಿ ಪಾತ್ರಗಳ ಸ್ವಾತಂತ್ರ್ಯವು ನಿರೂಪಕನ ಹೊಣೆಗಾರಿಕೆಯನ್ನು ಕಡಿಮೆಮಾಡುತ್ತದೆ. ಇದು ಶಶಿಕಲಾ ಅವರಿಗೆ ಅನುಕೂಲಕರ. ತಮ್ಮ ತಮ್ಮ ಜೀವನದಲ್ಲಿ ಘಟಿಸಿಹೋದ ಹಲವೆಂಟು ಘಟನೆಗಳ ಅತಾರ್ಕಿಕ ಪ್ರವೃತ್ತಿಯನ್ನು ಯಾರಿಗೂ ಸಮರ್ಥಿಸಿಕೊಳ್ಳುವುದು ಸಾಧ್ಯವಾಗುವುದಿಲ್ಲ; ಅದು ನಾನೇ ಇರಲಿ ಅಥವಾ ಶಶಿಕಲಾ ಅವರೇ ಇರಲಿ. ನಮ್ಮ ಜೀವನದ ಹಲವು ಘಟನೆಗಳು ನಮ್ಮ ಮಾನಸಿಕತೆಯ ಕಾರಣವಾಗಿಯೋ ಅಥವಾ ಪರಿಸರ-ಪರಿಸ್ಥಿತಿಗಳ ಕಾರಣವಾಗಿಯೋ ಅತಾರ್ಕಿಕವಾಗಿರುತ್ತವೆ. ಅವುಗಳಿಗೆಲ್ಲ ಸ್ಪಷ್ಟೀಕರಣ ನೀಡಲು ಹೊರಟರೆ ಅದು ಅನೇಕ ವಿಪರ್ಯಾಸಗಳಿಗೆ ಕಾರಣವಾಗಬಹುದು. ಇದನ್ನು ತಪ್ಪಿಸಿಕೊಳ್ಳುವುದು ಅನಿವಾರ್ಯವಾದಲ್ಲಿ ಆಗ ನಾವು ಉತ್ತಮಪುರುಷದ ನಿರೂಪಣೆಯನ್ನು ಬಿಟ್ಟುಕೊಟ್ಟು ಕನಿಷ್ಟಪುರುಷದ ನಿರೂಪಣೆಯನ್ನು ಆಯ್ದುಕೊಳ್ಳಬೇಕಾಗುತ್ತದೆ. ಇಂಥ ಅನುಕೂಲತೆಯನ್ನು ಸಾಧಿಸಲು ಶಶಿಕಲಾ ಅವರು ತಮ್ಮ ಆತ್ಮಚರಿತ್ರೆಯಿಂದ ಹೊರಗೆ ನಿಂತು ನೋಡುವ ಕಲಾತ್ಮಕ ಮಾರ್ಗವನ್ನು ಹುಡುಕಿಕೊಂಡಿದ್ದಾರೆ.
ಈಗ ಶಶಿಕಲಾ ಅವರು ಎರಡು ನೆಲೆಗಳಲ್ಲಿ ತೊಡಗಿಕೊಳ್ಳಬೇಕಾಗುತ್ತದೆ. ಒಂದು: ಸಿದ್ಧ ವಸ್ತುವಾಗಿ ದೊರೆಯುತ್ತಿರುವ ಅವರ ಜೀವನಾನುಭವಗಳ ಮೊತ್ತ, ಮತ್ತು ಅದನ್ನು ಕಥನಕ್ಕೆ ಅಳವಡಿಸುವ ಕಲಾತ್ಮಕತೆಯ ಶೋಧ. ಸಾಮಾನ್ಯವಾಗಿ `ಫಿಕ್ಶನ್ಗಳಲ್ಲಿ ಶೋಧವು ಮೊದಲ ನೆಲೆಯಲ್ಲಿನದು ಅಂದರೆ ವಸ್ತುವಿನ ನೆಲೆಯದು ಆಗಿರುತ್ತದೆ ಮತ್ತು ಅದು ತನ್ನೊಂದಿಗೆ ತನಗೆ ಒಗ್ಗುವ ಕಲಾತ್ಮಕತೆಯನ್ನು ಹೊಂದಿಸಿಕೊಳ್ಳುತ್ತಿರುತ್ತದೆ. ಶಶಿಕಲಾ ಅವರ ಈ `ಇದ್ದೇನೆ ಇಲ್ಲದಂತೆಕೃತಿಯಲ್ಲಿ ವಸ್ತು ಈಗಾಗಲೇ ಸಿದ್ಧಗೊಂಡ ಅವರ ಜೀವನಚರಿತ್ರೆಯಾಗಿದೆ. ಹಾಗಾಗಿ, ಶೋಧವು ವಸ್ತುವಿನ ನೆಲೆಯದು ಆಗಲು ಸಾಧ್ಯವಿಲ್ಲ. ಆಗ ಶೋಧವು ಕಲಾತ್ಮಕ ನಿರೂಪಣೆಯ ನೆಲೆಯಲ್ಲಿ ಚಿಗುರೊಡೆಯಬೇಕಾಗುತ್ತದೆ. ಶಶಿಕಲಾ ಅವರು ಈ ಕೃತಿಯಲ್ಲಿ ಅಂಥ ಕಲಾತ್ಮಕತೆಯ ಶೋಧವನ್ನು ಬಹುದೊಡ್ಡ ಪ್ರಮಾಣದಲ್ಲಿ ಸಾಧಿಸಿದ್ದಾರೆ. ಕಾದಂಬರಿಯ ಉತ್ತರಾರ್ಧದಲ್ಲಿ ನಡೆದ ಅನೇಕ ತಲ್ಲಣಕಾರಿಯಾದ ಘಟನೆಗಳಿಗೆ ಕಾದಂಬರಿಯ ಮೊದಲ ಭಾಗದಲ್ಲಿ ವಸ್ತು(ವ್ಯಕ್ತಿ!) ಪ್ರತಿರೂಪಗಳೆನ್ನಿಸುವ ರೂಪಕಾತ್ಮಕವಾದ ವಿವರಣೆಗಳನ್ನು ಶಶಿಕಲಾ ಅವರು ವಿಪುಲವಾಗಿ ಸೃಷ್ಟಿಸಿದ್ದಾರೆ. (ಈ ರೂಪಕಾತ್ಮಕ ವಿವರಣೆಗಳೂ ಅವರ ಜೀವನಚರಿತ್ರೆಯಲ್ಲಿನ ಚರಿತ್ರಾತ್ಮಕ, ನಿಜವಾದ ಘಟನೆಗಳಾಗಿರಲೂಬಹದು). ಅಂಥ ಕೆಲವು ರೂಪಕಾತ್ಮಕ ಕಥನಗಳನ್ನು ಇಲ್ಲಿ ನೋಡೋಣ:
``ಬಾದ್‍ಶಾ, ಹಂಗ ನೋಡಿದರ ಹುಚ್ಚ ಏನಲ್ಲ. ಆದರ ಅವ್ನಿಗಿ ಅರವತ್ತಾದರೂ ಮದವಿ ಆಗಿರಲಿಲ್ಲಾ. ಅದಕೇ ಯಾರರೆ ಮಾತಾಡಿಸಿ `ನಿನ್ನ ಹೇಣ್ತಿ ಹೆಸರ ಹೇಳಪಾಅಂದ್ರ ಸಾಕು. ಒಗಟಿನ ಮ್ಯಾಲೆ ಒಂದ ಒಗಟಾ ಹಾಕವಾ. - ಸೀರೀ ಮ್ಯಾಲೆ ಸೀರಿ ಉಟಗೊಂಡು, ಕುಬಸದ ಮ್ಯಾಲೆ ಒಂದ ಕುಬಸಾ ತೊಟಗೊಂಡು ಕೊಡದ ಮ್ಯಾಲೆ ಕೊಡಾ ಇಟಗೊಂಡು ನೀರಿಗೆ ಹೋಗತಾಳು ಚಾಂದಬೀ’’ ಅಂದು ಹೆಂಗಸರಿಗಿಂತ ಹೆಚ್ಚಿಗಿ ನಾಚಿ ಮುಖ ಕೆಂಪೇರಿಸಿಕೊಳ್ಳುವನು. ಪಾಪ ಅವನು ಚಾಂದಬೀ ಇಲ್ಲದೇ ತನ್ನ ಕೊನಿ ಉಸಿರೆಳದಾ, ಎಂಭತ್ತನೇ ವಯಸ್ಸಿನ್ಯಾಗ’’. (ಪುಟ : 34).
ಕಾದಂಬರಿಯ ಉತ್ತರಾರ್ಧದಲ್ಲಿ ವಿವರಣೆಗೊಳ್ಳುವ ನೀಲಕ್ಕನ ಜೀವನದಲ್ಲಿ, ಅವಳು ಅಸ್ತಿತ್ವದಲ್ಲಿ ಇದೆ ಎಂದು ಭಾವಿಸಿ ನಂಬಿಕೊಂಡು ನಡೆಯುತ್ತಿದ್ದ ಕುಟುಂಬ ಜೀವನವು ಬಾದ್‍ಶಾನ ಹೆಂಡತಿಯ ಅಸ್ತಿತ್ವಕ್ಕಿಂತ ಭಿನ್ನವಾದದ್ದೇನೂ ಅಲ್ಲ!
``ಈ ಪಾಂಡುರಂಗಂದು ಇನ್ನೊಂದು ಕತಿ. ನೀಲಕ್ಕನ ಮನಿಗೆ ಬಲಕ್ಕ ಒಂದ ದೊಡ್ಡ ಮಠಾ. ಅಲ್ಲೊಂದು ಬಾವಿ ಇತ್ತು. ಈ ಪಾಂಡಿರಂಗಾ ಒಂದ ದೊಡ್ಡ ಕೊಡಾ ಹಿಡಕೊಂಡು ಇಲ್ಲಿ ನೀರಿಗೆ ಬರಾಂವಾ. ಬರೂಮುಂದ ಹೋಗೂಮುಂದ ಸದಾ ವಟಾ ವಟಾ ಯಾರಿಗೋ ಬೈಕೊಂತನ ಇರಾಂವಾ. ಯಾವಾಗಲೂ `ಬಾರಾ ಬಾರಸಾಕ ಬಂತರೀ. ಇಲ್ಲೀ ತನಾ ಶಂಬೋರ ಕೊಡಾ ನೀರ ಹೊತ್ತೀನಿ. ಅವನೌನ ಇನಾ ಒಂದ ಕಪ್ಪ ಚಾ ಕೊಟ್ಟಿಲ್ಲ ನನಗ. ಬರೇ ಕೆಲಸಾ ಮಾಡಂತಾರ್ರೀ. ಸುಮ್ಮನ ಬಿಡ್ತೀನೇನ್ರೀ ಇವರ್ನ. ಈ ಕೊಡದಾಗ ಹಾಕೊಂಡ ಬಂದ ಬಾವ್ಯಾಗ ಮುಳಗಸ್ತೀನಿಅಂತ ಒದರಾಡತಿದ್ದಾ. ಸಿಟ್ಟೋ ಹಸಿವೋ ಒಮ್ಮೊಮ್ಮಿ ತನ್ನ ಕೈ ಕಿರಿಬರರಳು ಕಲ್ಲಿನಿಂದ ಜಜ್ಜಿಕೋತಿದ್ದಾ’’. (ಪುಟ:34). ನೀಲಕ್ಕನ ಕುಟುಂಬ ಜೀವನ ಈ ಪಾಂಡುರಂಗನ ಜೀತಕ್ಕಿಂತ ಭಿನ್ನವಾದದ್ದೇನೂ ಆಗಿರಲಿಲ್ಲ. ಮೊದಲ ಕೌಟುಂಬಿಕ ಜೀವನ ಎಷ್ಟೋ ಸಹನೀಯ ಎನ್ನಬಹುದು. ಆದರೆ ಆಕೆಯ ಎರಡನೆಯ ಮತ್ತು ಮೂರನೆಯ ಕೌಟುಂಬಿಕ ಜೀವನಗಳ ನಡೆಯು `ಹಾಸ್ಯುಂಡು ಬೀಸಿ ಒಗೆಧಂಗಎನ್ನುವಂತಹ ನಿಷ್ಫಲವಾದವುಗಳು ಆಗಿದ್ದವು. ಮೊದಲ ಕೌಟುಂಬಿಕ ಅನುಭವದ ನಂತರ ಅವಳು ಕಟ್ಟಿಕೊಂಡ ಎರಡನೆಯ ಮತ್ತು ಮೂರನೆಯ ಕೌಟುಂಬಿಕ ಜೀವನಗಳು ಪಾಂಡುರಂಗನು ತನ್ನ ಕಿರಿಬೆರಳನ್ನು ಜಜ್ಜಿಕೊಳ್ಳುವ ಸ್ವ-ಹಿಂಸೆಗಿಂತ ಬೇರೆಯಾದದ್ದೇನೂ ಅಲ್ಲ.
``ವಿಜಾಪುರದಾಗ ಒಮ್ಮಿ ಒಂದ ಅಂಗಡ್ಯಾಗ ಒಬ್ಬ ಹುಡುಗನ್ನ ಸರಪಳ್ಯಾಗ ಕಟ್ಟಿ ಹೊಡ್ಯಾಕ ಹತ್ತಿದ್ರು. `ನಮ್ಮವ್ವನಾಣಿರಿ ಸಾವಕಾರ್ರ. ಖರೇವಂದ್ರೂ ನಾ ಕಳೂ ಮಾಡಿಲ್ರೀಅಂತ ಆ ಹುಡುಗಾ ಕಾಲಿಗೆ ಬೀಳ್ತಿದ್ದಾ. ನೀಲಕ್ಕ ಅಮ್ಮನ (ಅಜ್ಜಿಯ) ಜೋಡಿ ಸಂತಿಗಿ ಬಂದಿದ್ಲು. ಆ ಹುಡಗನ್ನ ಅಳೂ ನೋಡಿ ಅಕಿಗೂ ಅಳೂ ಬರಾಕ ಹತ್ತಿತ್ತು. `ಅಮ್ಮಾ, ಆ ಹುಡುಗನ್ನ ಬಿಡಸಬೇ. ಪಾಪ ಹ್ಯಾಂಗ ಹೊಡೀತಾರ್ನೋಡುಅಂತ ಅಳೂದನ್ಯಾಗ ಹೇಳಿದ್ಲು. `ಅಯ್ಯ, ಹೊಡಿಲಿ ಬಿಡು. ಏನರೇ ಕದ್ದಿರಬೇಕು. ಸುಮ್ನ ಯಾಕ ಹೊಡೀತಾರಾ?’ ಅಂದ್ಲು ಅಮ್ಮ. ನೀಲಕ್ಕಗ ತಡಕೋಳಾಕ ಆಗಲಿಲ್ಲಾ. ಅಮ್ಮನ ಕೈಬಿಡಿಸಿಕೊಂಡು ಗುಂಪನ್ಯಾಗಿಂದು ಹಾದು, ಹೊಡೆವರಹತ್ತರ ಬಂದ್ಲು. ಗಂಟಲು ಉಬ್ಬಿತ್ತು. `ಯಾಕರೀ ಅಣ್ಣಾವರ ಅಂವಗ ಹೊಡ್ಯಾಕ ಹತ್ತೀರಿ. ಪಾಪ ಮೂಗಿನ್ಯಾಗ ರಕ್ತಾ ಸೋರಾಕತ್ತದ ಬಿಟ್ಟ ಬಿಡ್ರೀಅಂತ ಹೊಡೆವ್ನ ಮೊಳಕಾಲು ತಬ್ಬಿಕೊಂಡಳು. `ಏ ಯಾರದರೀ ಈ ಹುಡಿಗೀ, ಕರಕೊಂಡ ಹೋಗರೀಅಂತ ಒದರಿದಾ. ಅಮ್ಮ ಓಡಿಕೊಂತ ಬಂದಕಿನೆ `ಏನ ಹುಚ್ಚ ಐತೇಯವ್ವಾ ಇದು. ತನಗೆಲ್ಲಾ ಯಾಕ ಬೇಕು? ನಡಿ. ದೊಡಮನಶ್ಯಾಳ ಆಗ್ಯಾಳಾಅಂತ ದರಾ, ದರಾ ರಟ್ಯಾಗ ಕೈಹಾಕಿ ಕರಕೊಂಡು ಸಂತೀಗಿ ಹೋದ್ಲು’’. (ಪುಟ:35) ಆ ಬಡ ಹುಡುಗನ ಅಸಹಾಯಕತೆ ನಂತರದಲ್ಲಿ ನೀಲಕ್ಕ ಅನುಭವಿಸಿದ ಅಸಹಾಯಕತೆ ಬೇರೇನೂ ಅಲ್ಲ. ಅಮ್ಮ, ಆ ಹುಡುಗನ ಸುತ್ತಲೂ ಸೇರಿದ ಜನರ ಗುಂಪು, ಯಾರೂ ಆ ಹುಡುಗನ ಬಿಡುಗಡೆಗೆ ಬರಲಿಲ್ಲ. ಅಂತೆಯೇ ನೀಲಕ್ಕನನ್ನು ನಿಷ್ಫಲತೆಯ ಅಸಹಾಯತನಕ್ಕೆ ದೂಡಿದ ಕೌಟುಂಬಿಕತೆಗಳ ಸಂದರ್ಭದಲ್ಲಿಯೂ ಯಾರೂ ಆಕೆಗೆ ಬಿಡುಗಡೆಯ ದಾರಿಯನ್ನು ತೋರಲು ಸಾಧ್ಯವಾಗಲಿಲ್ಲ.
***
ನೀಲಕ್ಕನ ಕೌಟುಂಬಿಕ ಜೀವನದ ಮೂರು ಪ್ರಯತ್ನಗಳೂ ನಿಷ್ಫಲತೆಯ ದುರಂತವನ್ನು ತಂದುದಷ್ಟೇ ಅಲ್ಲ, ಅವು ಅವಳಿಗೆ ಜೀತದ ನೋವಿನ ಅನುಭವ ನೀಡಿದವು. ಮೊದಲ ಮದುವೆ, ತಾಯಿಯ ತಮ್ಮ, ಸ್ವಂತ ಸೋದರಮಾವನೊಂದಿಗೆ. ಈ ಮದುವೆಯ ಸಂದರ್ಭದಲ್ಲಿ ಗಂಡನ ದರ್ಪವನ್ನು ಮನಗಾಣಬಹುದು. ಆದರೆ ಈ ಮದುವೆಯ ವಿಘಟನೆಯ ಹಿಂದೆ ನೀಲಕ್ಕನ ಕೊಡುಗೆಯೂ ಇದ್ದಂತಿದೆ. ಮದುವೆಯ ಮೊದಲು, ಈ ಸೋದರ ಮಾವನು ತನ್ನನ್ನು ಮದುವೆಯಾಗಲು ಆಸಕ್ತನಾಗಿರಲಿಲ್ಲವೆನ್ನುವ ವಿವರಣೆ ಬರುತ್ತದೆ. ಆದರೆ ಆ ನಿರಾಸಕ್ತಿಯ ನಂತರ ಅವನು ನೀಲಕ್ಕನನ್ನು ಮದುವೆಯಾಗಿದ್ದಾನೆ. ತನ್ನ ಕುಟುಂಬದ ಆರ್ಥಿಕ ಸ್ಥಿತಿಯನ್ನು ಅವಳಲ್ಲಿ ತೋಡಿಕೊಂಡು ಅವಳ ಸಹಕಾರವನ್ನು ಕೇಳಿ ವಿಶ್ವಾಸ ತೋರಿದ್ದಾನೆ. ಹೆಂಡತಿಯಾದ ಅವಳಿಗೆ ಲೈಂಗಿಕವಾಗಿ ಸಹಕರಿಸಲು ಒತ್ತಾಯಿಸಿದ್ದಾನೆ. ಆದರೆ ನೀಲಕ್ಕನು ಅವನೊಡನೆ ಸಂಸಾರನಡೆಸಲು ನಿರಾಕರಿಸಿದ್ದಾಳೆ. ಇದು ಅವನನ್ನು ಬೇರೊಬ್ಬಳೆಡೆಗೆ ದೂಡಿತೇನೋ ಅನ್ನಿಸುತ್ತದೆ. ಐದಾರು ತಿಂಗಳು ಅವನೊಡನೆ ಮಲಗಿಯೂ ಅವನೊಂದಿಗೆ ಬೆರೆಯಲು ನೀಲಕ್ಕ ತೋರುವ ಬಿಗುಮಾನ ಆಕೆ ಮುಂದಿನ ತನ್ನ ಕೌಟುಂಬಿಕ ಜೀವನಗಳಲ್ಲಿ ತೋರುವ ದೈನ್ಯತೆಗೆ ಕಾರಣವಾಯಿತೇನೋ ಎನ್ನಿಸುತ್ತದೆ. ಆದರೆ, ಆ ಗಂಡನು ಇವಳನ್ನು ತ್ಯಜಿಸಲು ಆಯ್ದುಕೊಂಡ ಕಾರಣ ವಿಚಿತ್ರವಾಗಿದೆ. ನೀಲಕ್ಕ ಹೆಂಗುಸೇ ಅಲ್ಲ, ಅವಳು ಸಹಜ ಹೆಣ್ಣಿನಂತೆ ಲೈಂಗಿಕಕ್ರಿಯೆಯಲ್ಲಿ ಪಾಲುಗೊಳ್ಳಲಾರಳು ಎನ್ನುವ ಆರೋಪ ಹೊರಿಸುತ್ತಾನೆ. ಜೊತೆಗೆ ಈ ಮಾತುಗಳನ್ನು ಆಕೆಯ ಅಪ್ಪ, ಅಮ್ಮನಲ್ಲಿ ಚರ್ಚಿಸದೇ ಬೇರೆ ಸಂಬಂಧವಿಲ್ಲದವರ ಬಳಿ ಹೇಳಿದ್ದು ನೀಲಕ್ಕ ಮತ್ತು ಆಕೆಯ ಅಪ್ಪ ಅಮ್ಮ ಎಲ್ಲರಿಗೂ ನೋವನ್ನು ತರುತ್ತದೆ. ನೀಲಕ್ಕನ ವೈದ್ಯಕೀಯ ಪರೀಕ್ಷೆಯೂ ನಡೆಯುತ್ತದೆ. ಆದರೆ ಅಷ್ಟರಲ್ಲಿ ಆ ಗಂಡನಿಗೆ ನೀಲಕ್ಕನ ಬಗೆಗಿನ ಆಸೆ ಕಡಿದುಹೋಗಿ ಇನ್ನೊಬ್ಬಳಲ್ಲಿ ಸಂಬಂಧ ಬೆಳೆದಿರುತ್ತದೆ. ಆ ಇನ್ನೊಬ್ಬಳನ್ನು ಮದುವೆಯಾಗಿ ಆಕೆಯೊಂದಿಗೆ ದಾಂಪತ್ಯ ಜೀವನ ನಡೆಸುತ್ತ, ನೀಲಕಕ್ಕನನ್ನು ಹೊಲಮನೆ ಕೆಲಸಕ್ಕೆ ತಮ್ಮ ನೆಯಲ್ಲಿ ಉಳಿಸಿಕೊಳ್ಳುವ ಯೋಚನೆ ಗಂಡ-ಅತ್ತೆಯರಿಗೆ ಬರುತ್ತದೆ. ನೀಲಕ್ಕ ತನ್ನ ವಿದ್ಯಾಭ್ಯಾಸ ಮುಂದುವರೆಸುತ್ತಾಳೆ. ಆಕೆಯ ಗಂಡನೂ ಅದಕ್ಕೆ ಬೆಂಬಲ ನೀಡುತ್ತಾನೆ. ಬಹುಶಃ, ವಿದ್ಯಾಭ್ಯಾಸ ಪಡೆದ ನೀಲಕ್ಕ ನೌಕರಿಗೆ ಸೇರಿ ತನಗೆ ಬಿಡುಗಡೆ ನೀಡಬಹುದೆನ್ನುವ ಯೋಚನೆ ಅವನಲ್ಲಿದ್ದಿರಬಹುದು. ಅಂತೂ ದಿನಗಳೆದಂತೆ ನೀಲಕ್ಕನ ಗಂಡನಿಗೆ ತಾನು ಇವಳಿಂದ ಬಿಡುಗಡೆ ಹೊಂದಬೇಕು ಎನ್ನುವ ಭಾವನೆ ಹೆಚ್ಚಾಗುತ್ತದೆ. ನೀಲಕ್ಕ ಕೊನೆಗೆ ಬಿಡುಗಡೆ ನೀಡಿ, ಅವನು ಮತ್ತೊಂದು ಮದುವೆಯಾಗುತ್ತಾನೆ. ಕಾದಂಬರಿ, ನೀಲಕಕ್ಕನ ಮೊದಲ ಗಂಡನು ಮರುಮದುವೆ ಮಾಡಿಕೊಂಡಲ್ಲಿಗೆ ಅವನ ಬಗೆಗೆ ಹೇಳುವುದನ್ನು ನಿಲ್ಲಿಸುತ್ತದೆ. ಅವನಿಗೆ ಮಕ್ಕಳು ಆದರೋ ಇಲ್ಲವೋ ಎನ್ನುವ ಬಗ್ಗೆ ಮೌನವಾಗುಳಿಯುತ್ತದೆ. ಇಂಥಲ್ಲಿ ಆತ್ಮಚರಿತ್ರಯು ಕಾದಂಬರಿಯ ಕಲಾತ್ಮಕತೆಯ ಆಕೃತಿಯನ್ನು ಧರಿಸಲು ಹೊಂದಿರುವ ಕಾರಣವು ಹೊಳೆಯುತ್ತದೆ.
ನೀಲಕ್ಕನ ಎರಡನೆಯ ಮದುವೆ ಆಕೆ ತಮ್ಮ ಮತ್ತು ಅಪ್ಪನ ಮಧ್ಯಸ್ತಿಕೆಯಿಂದ ನಡೆಯಿತು. ಈ ಗಂಡ, ಒಬ್ಬ ಸರ್ಕಾರೀ ನೌಕರನಾಗಿದ್ದ. ಈಗಾಗಲೇ ಮದುವೆಯಾಗಿದ್ದಿತು. ಆದರೆ ಮಕ್ಕಳಾಗಿರಲಿಲ್ಲ. ಅದಕ್ಕಾಗಿ ಇನ್ನೊಂದು ಮದುವೆಗೆ ಹೆಣ್ಣು ನೋಡುತ್ತಿದ್ದ. ನೀಲಕ್ಕನನ್ನು ಮದುವೆಯಾದ ಅವನು ಅಸಾಧ್ಯ ಕುಡುಕ. ಭ್ರಷ್ಟ. ತಡ ರಾತ್ರಿಯವರೆಗೆ ಹೊಟ್ಟೆತುಂಬ ಕುಡಿದು, ಜೇಬಿನ ತುಂಬ ಲಂಚದ ಹಣ ತುಂಬಿಕೊಂಡು ಮನೆಗೆ ಬಂದು ಇನ್ನಷ್ಟು ಕುಡಿಯುವವ. ತನ್ನ ಹಳೆಯ ಗೆಳತಿಯರ ಭಾವಚಿತ್ರಗಳನ್ನು ಹರಡಿಕೊಂಡು ಕುಳಿತು ಅವರ ನೆನಪು ತೆಗೆದು ರಾತ್ರಿಯೆಲ್ಲ ಅಳುವವ. ಆದರೆ ನೀಲಕ್ಕ ಇವನಿಗೆ ಸಾಗರದಷ್ಟು ಪ್ರೀತಿ ಎರೆದಳು. ಕುಂದಾಪುರದಲ್ಲಿ ಇದ್ದಾಗಿನ, ಇವಳು ಅವನ ಬಗೆಗೆ ಹೊಂದಿದ ಪ್ರೀತಿ-ಕಾಳಜಿಗಳನ್ನು ಹೇಳುವ ಒಂದು ವಿವರವನ್ನು ನೋಡಿರಿ:
``... ಒಮ್ಮೆ ರಾತ್ರಿ, ಒಂದು ಆದರೂ ಬರಲಿಲ್ಲಾ. ಇಕಿಗೆ ಅಂಜಿಕಿ ಸುರುವಾತು. ಇನ್ನಾ ನೆರಿ, ಹೊರಿ ಯಾರೂ ಪರಿಚಯಾ ಆಗಿರಲಿಲ್ಲಾ. ಅವತ್ತ ಧೋ ಅಂತ ಮಳಿ ಬ್ಯಾರೆ. ಎಲ್ಲಾದ್ರೂ ನಶಾದಾಗ ಬಿದ್ದ ಬಿಟ್ಟಿದ್ದರ? ಆ ತಾಲೂಕಿಗೇ ಇವಾ ದೊಡ್ಡ ಅಧಿಕಾರಿ ಬ್ಯಾರೇ. ಇದ್ದದ್ದೊಂದ ಛತ್ರೀ ತಗೊಂಡ ಹೋಗಿದ್ದಾ. ಮನೀ ಕೀಲಿ ಹಾಕಿದ್ಲು. ತಲಿತುಂಬ ಸೆರಗು ಹೊತಗೊಂಡು, ಎಡಗೈಯಾಗ ನಿರಿಗಿ, ಬಲಗೈಯಾಗ ಟಾರ್ಚ್ ಹಿಡಕೊಂಡು, ಪ್ಯಾಟಿ ದಾರಿ ಅಂತ ತಾ ತಿಳಕೊಂಡ ದಾರ್ಯಾಗ ಹೊಂಟ್ಲು. ಯಾರರೇ ನೋಡ್ಲಿ, ಏನಾದರೂ ಅಂದುಕೊಳ್ಳಿ ಅಂತ ಸೀದಾ ಹೊಂಟ್ಲು. ಕರಂಟ್ ಬರ್ತಿತ್ತು. ಹೋಗತಿತ್ತು. ಆ ಪ್ಯಾಟಿ ಸರ್ಕಲ್‍ನ್ಯಾಗ ಒಂದ ಗಳಿಗಿ ನಿಂತ್ಲು. ನಾಯಿಗೋಳು ನಿಲ್ಲಾಕ ಬಿಡಲಿಲ್ಲಾ. ಗಲ್ಲದ ಮ್ಯಾಲೆ ನೀರು ಹರ್ಯಾಕತ್ತಿದ್ದು. ಮಳೀನೀರೋ, ಕಣ್ಣೀರೋ ಗೊತ್ತಾಗತಿರಲಿಲ್ಲಾ. ಕಣ್ಣ ಮಂಜಾಗಿದ್ದವು. ಹಾಂ! ಅಲ್ಲಿ! ಅಂವಾ ಬರಾಕತ್ತಿದ್ದಾ. ನಡಗೀ ಮ್ಯಾಲೇ ಗುರತ ಹಿಡದ್ಲು. ಓಡೂ ನಡಿಗೀಯೊಳಗೇ ಹೋಗಿ ಅವನ ಛತ್ರ್ಯಾಗ ಸೇರಕೊಂಡ್ಲು. ಅಂವಾ ಏನೂ ಪ್ರತಿಕ್ರಿಯಾ ತೋರಸಲಿಲ್ಲಾ. ಆಕಿ ಏನೂ ಮಾತಾಡಲಿಲ್ಲಾ. ಮನೀಗಿ ಬಂದು ಬಟ್ಟಿ ಬದ್ಲಾಯಿಸಿದ್ಲು. ಬಿಸಿನೀರ ಕಾಸಿ ಅವನ್ನ ಎಬ್ಬಿಸಿ ಜಳಕಾ ಮಾಡಿಸಿದ್ಲು. ಬೆಚ್ಚನ್ನ ಬಟಿ ಹಾಕಿ ಬೆಚ್ಚಗ ಮಲಗಿಸಿದ್ಲು. ಅರನಿದ್ಯಾಗಿದ್ದಾಂಗ ಇದ್ದಾಂವಾ, ಪೂರಾ ನಿದ್ದಿಗಿ ಜಾರಿದಾ. ಮರದಿನಾ ಇಬ್ಬರೂ ಆ ಬಗ್ಗಿ ಮಾತಾಡಲಿಲ್ಲಾ’’. (ಪುಟ:125).
ತನ್ನ ಪ್ರೀತಿ ಅಂತಃಕರಣಗಳನ್ನೆಲ್ಲ ಇವನ ಮೇಲೆ ಸುರಿದ ನೀಲಕ್ಕನಿಗೆ ಮಾತ್ರ ಇವನಿಂದ ದೊರೆತವುಗಳೆಂದರೆ, ವಂಚನೆ ಮತ್ತು ದ್ರೋಹಗಳು. ಉಡುಪಿಯ ಒಂದು ಕಾಲೇಜಿನಲ್ಲಿಯ ಅಧ್ಯಾಪಕ ಹುದ್ದೆಗೆ ಅರ್ಜಿ ಕರೆದಿದ್ದರು. ನೀಲಕ್ಕ ಅರ್ಜಿ ಹಾಕಿದಳು. ಈಕೆಯ ಆಯ್ಕೆಯಾಗಿ ಕಾಲೇಜಿನ ಪ್ರಾಚಾರ್ಯರು ನೀಲಕ್ಕನಿಗೆ ಫೋನ್ಮಾಡಿ ತಿಳಿಸಿ ಕಾಲೇಜಿಗೆ ಬಂದು ನೇಮಕಾತಿ ಆದೇಶವನ್ನು ಪಡೆಯಲು ತಿಳಿಸಿದರು. ಈಕೆ ಖುಶಿಯಿಂದ ಗಂಡನಿಗೆ ತಿಳಿಸಿದಳು. ಈ ಗಂಡ ಕಾಲೇಜಿಗೆ ಫೋನ್ ಮಾಡಿ ಆಕೆ ತನ್ನ ಹೆಂಡತಿಯಲ್ಲ, ಅವಳಿಗೆ ಅಪಾಯಿಂಟ್‍ಮೆಂಟ್ ಆದೇಶ ಕೊಡಬೇಡಿರಿ ಎಂದು ತಿಳಿಸಿದನು. ಆ ಕೆಲಸ ತಪ್ಪಿಹೋಯಿತು. ಅಷ್ಟೇ ಅಲ್ಲ, ಇವಳ ಪುಸ್ತಕಗಳು, ವಸ್ತುಗಳನ್ನು ದೋಚಿಕೊಂಡು ಇವಳನ್ನು ಮನೆಬಿಟ್ಟು ಹೊರಗೆ ಹಾಕಿಬಿಟ್ಟನು. ನೀಲಕ್ಕ ಬೀದರ್ ಕಾಲೇಜಿನಲ್ಲ ಕೆಲಸ ಮಾಡುತ್ತಿದ್ದವಳು ಪಿ.ಎಚ್‍ಡಿ., ಮಾಡಲು ರಜೆ ತೆಗೆದುಕೊಂಡು ಇವನಿಗೆ ವರ್ಗವಾಗಿದ್ದ ಕುಂದಾಪುರಕ್ಕೆ ಬಂದಿದ್ದಳು. ಆ ಬಗೆಗೆ ಒಂದು ಬಾಂಡ್ ಬರೆದುಕೊಡಬೇಕೆನ್ನುವ ಕಾರಣಕ್ಕೆ ನೀಲಕ್ಕ ಬೀದರಿಗೆ ಹೋಗಿ ಒಂದು ವಾರ ಇದ್ದು ಮರಳಿ ಕುಂದಾಪುರಕ್ಕೆ ಬಂದಾಗ, ಈ ಗಂಡ ನಡೆದುಕೊಂಡ ಬಗೆ ಹೇಗಿದೆ ನೋಡಿ :
``... `ಇವತ್ತ ಕೆಲಸಾ ಮುಗೀತ ನೋಡಪಾ. ಇನ್ನ ಬಸ್ಸೊಂದ ವಿಚಾರ್ಬೇಕು ಅಷ್ಟೇಅಂದ್ಲು ಚಪ್ಪಲಿ ಕಳಕೊಂತ. `ಅದೆಲ್ಲಾ ಮುಗೀತ ಖರೇ, ನಿನ್ನ ಯಜಮಾನರ ಪತ್ರಾ ಬಂದೈತಿ. ನೀನೇ ನೋಡವಾಅಂತ ಅಣ್ಣ ಅಕಿ ಕೈಗಿ ಪತ್ರಾ ಕೊಟ್ಟಾ. ಒಂದೇ ಸಾಲು ಅಕಿ ಕಣ್ಣಿಗಿ ಬಿದ್ದಿದ್ದು., `ನಾನು ಬಂದು ಕರೆದೊಯ್ಯುವವರೆಗೆ ನಿಮ್ಮ ತಂಗಿ ನಿಮ್ಮ ಮನೆಯಲ್ಲೇ ಇರಲಿ. ನಾನಿನ್ನೂ ಬೆಂಗಳೂರಿನಲ್ಲೇ ಇರುವೆ. ಮತ್ತೆ ತಿಳಿಸುವೆ’. ಯಾಕೋ ಪತ್ರಾ ಕೆಳಗೆ ಬಿತ್ತು. ಎತಗೊಂಡು ತನ್ನ ರೂಮಿಗೆ ಹೋದ್ಲು. ಮತ್ತ ಅಳೂ ಉಮ್ಮಳಿಸಿ ಬಂತು. ಎರಡ ದಿನಾ ಅದರ ಬಗ್ಗಿ ಯಾರೂ ಏನೂ ಮಾತಾಡಲಿಲ್ಲಾ. ಮೂರನೇ ದಿನಾ ಅದರ ನೀಲಕ್ಕನೇ ಅಣ್ಣನ ಮುಂದ ಮಾತ ತಗದ್ಲು, `ಅಣ್ಣಾ, ಅವರು ಯಾವಾಗಾದರೂ ಬರ್ಲಿ. ನಾ ಹೋಗಿ ಅಲ್ಲೇ ಇರ್ತೀನಿ. ಬಟ್ಟಿ-ಬರೀನೂ ಹೆಚ್ಚೀಗಿ ತಂದಿಲ್ಲಾ. ಹೋಗಿಬಿಡೂದು ಛಲೋ ಅನಸತೈತಿ’. `ನಾನೂ ಅದನ್ನೇ ಹೇಳಬೇಕಂದಿದ್ನೆವಾ. ನೀ ಏನ ತಿಳಕೋತಿಯೋ ಅಂತ ಸುಮ್ಮನಿದ್ಯಾ. ನಾನೂ ಬರ್ತೀನಿ ನಡಿಅಂತ ಅಂದಾಗ ಅಕಿಗಿ ಮನಸ್ಸ ತುಂಬಿ ಬಂತು.
ರಾತ್ರಿ ಎಲ್ಲಾ ಪ್ರಯಾಣ ಮಾಡಿ ಮುಂಜಾನಿ ಮನಿ ಮುಟ್ಟಿದಾಗ ಬಾಗಿಲಿಗಿ ಕೀಲಿ! ಕಛೇರಿ ಸಿಪಾಯಿ, ಪಕ್ಕದ ರೂಮಿನಾಗ ಮಲಗಿದಾವ, ಎದ್ದಬಂದಾ. ನೀಲಕ್ಕ ಅವ್ನಿಗಿ ಬಾಳ ಸರ್ತಿ ಚಾ-ತಿನಿಸು ಕೊಟ್ಟಿದ್ಲು. `ಬೀಗಾ ಕೊಡಪಾಅಂದ್ಲು. `ಬೀಗಾ ಕೊಟ್ಟಿಲ್ಲಾ, ಸಾಹೇಬರು ಊರಲ್ಲಿಲ್ಲಾ. ಅವರು ಬಂದ ಮೇಲೆ ಬನ್ನಿ. ನೀವ್ಯಾರೋ ನನಗೆ ಗೊತ್ತಿಲ್ಲಾಅಂತ ಕದ ಮುಚ್ಚುವದರಲ್ಲಿದ್ದ. ಅಣ್ಣ-ತಂಗಿಗೆ ಸಿಟ್ಟು ಬಂತು. `ನೀನ್ಯಾವನೋ ನಮ್ಮ ಮನೀಗಿ ಬಂದು ನಮಗೇ ಜೋರು ಮಾಡ್ತೀಯಾ? ಯಾಕ? ಪೋಲೀಸಿಗೆ ಹೇಳಬೇಕಾ?’ ಎನ್ನುವುದರಲ್ಲಿ ಅವನು `ನನ್ನೇನೂ ಕೇಳಬೇಡಿ. ಅಲ್ಲಿ ಪೋಲೀಸರು ಬಂದರು ನೋಡಿ. ಅವ್ರಿಗಿ ಕೇಳ್ರಿಅಂದ. ಇವರು ಬಂದದ್ದನ್ನು ನೋಡಿದ ಮನೆ ಮಾಲೀಕನೇ ಪೋಲೀಸ ಅಧಿಕಾರಿಗೆ ಫೋನು ಮಾಡಿದ್ದಾ. ಇಬ್ಬರು ಕಾನ್‍ಸ್ಟೇಬಲ್‍ಗಳು ನಮಸ್ಕಾರ ಹೇಳುತ್ತ ಗೇಟು ದಾಟಿ ಒಳ ಬಂದರು. ಅಣ್ಣ ಏನೋ ಹೇಳಲು ಬಾಯಿ ತೆಗೆಯುವದರಲ್ಲಿ ಅವರಲ್ಲೊಬ್ಬ `ಸಾಹೇಬರೇ ಇಲ್ಲೇನೂ ಮಾತು ಬೇಡ. ಸಾಹೇಬರು ಗಾಡೀ ಕಳಿಸಿದ್ದಾರೆ. ಅವರ ಮನೆಗೇ ಕರೆದಿದ್ದಾರೆ. ಬಂದುಬಿಡಿಎಂದ. ಕೈಯ ಸೂಟುಕೇಸು ಅಲ್ಲೇ ಇಟ್ಟು ಇಬ್ಬರೂ ಜೀಪು ಹತ್ತಿದರು. ಜನರೆಲ್ಲ ಕುತೂಹಲದಿಂದ ನೋಡುತ್ತಿದ್ದರು. ಅಸ್ಪಷ್ಟ ಮಾತುಗಳು ಕಿವಿಗೆ ಬೀಳುತ್ತಿದ್ದವು. ಅದೇ ಪೋಲೀಸ ಅಧಿಕಾರಿ, ಮನೆಗೆ ಬಂದು ಆತಿಥ್ಯ ಸವಿದವನು. ... ಒಳಗೆ ಕರೆದು ಕೂಡಿಸಿದಾ. ಚಾ ತರಿಸಿದಾ. ತಡವರಿಸಿ ಕೆಲವು ಮಾತು ಹೇಳಿದಾ `ಸರ್, ತಾವು ಎಜುಕೇಟೆಡ್, ತಮ್ಮ ತಂಗೀನೂ ಅಷ್ಟೇ. ತಮ್ಮನ್ನು ವಿಚಾರಣೆಗೆಂದು ನಾನಿಲ್ಲಿ ಕರೆಸಿಲ್ಲ. ಅವರು ನಿಮ್ಮ ತಂಗಿಗೆ ಮೋಸ ಮಾಡಿದ್ದಾರೆ. ಮದುವೆಯನ್ನೇ ಆಗಿಲ್ಲ ಎಂದಿದ್ದಾರೆ. ಇದು ಅವರಿಗೆ ಹೊಸದಲ್ಲ. ಹಿಂದೆ ಇಂತಾದೇ ಒಂದು ಕೇಸಾಗಿದೆ. ಈಗ ಅವರ ಮನೆಯವರನ್ನ, ಮಗುವನ್ನ ಕರೆತರಲು ಹೋಗಿದ್ದಾರೆ. ನಿಮ್ಮ ತಂಗಿಯವರನ್ನು ದಯವಿಟ್ಟು ಇಲ್ಲಿ ಬಿಟ್ಟು ಹೋಗಬೇಡಿ. ಅವರ ಪ್ರಾಣಕ್ಕೆ ಅಪಾಯವಿದೆ. ಕರೆದುಕೊಂಡು ಹೋಗಿ. ದಯವಿಟ್ಟು ನನ್ನನ್ನು ಕ್ಷಮಿಸಿ. ನಾನು ಹೆಲ್ಪ್‍ಲೆಸ್ಎಂದು ಕೈಮುಗದು ಒಳಗ ಹೋದಾ. ... ಇಬ್ಬರಿಗೂ ಕಣ್ಣು ತುಂಬಿ ಬಂದಿದ್ದುವು. ಹೊರಗ ಬಂದ್ರು. ಡ್ರೈವರ್ ಮುಂದ ಬಂದಾ. `ಬ್ಯಾಡಪಾಅಂದು, ರಸ್ತೇಕ ಬಂದು ಆಟೋ ಕರದ್ರು. `ಅಣ್ಣಾ ನನ್ನಿಲ್ಲೇ ಬಿಟ್ಟು ಹೋಗು. ನನಗವರನ್ನ ಬಿಟ್ಟ ಇರಾಕ ಆಗೂದಿಲ್ಲಾ. ಅವರು ಹ್ಯಾಂಗರೆ ನೋಡ್ಕೋಳಿ ಇರ್ತೀನಿಅಂದ್ಲು ನೀಲಕ್ಕ. `ಹುಚ್ಚಿ, ಹುಚ್ಚ ಹಿಡದೈತೇನ ನಿನಗ? ಆ ಇನ್‍ಸ್ಪೆಕ್ಟರ ಏನ ಹೇಳದಾ? ನಿನ್ನ ಜೀವಕ್ಕ ಅಪಾಯ ಐತಿ ಅಂದನಿಲ್ಲ? ಮದಲ ಊರಿಗಿ ನಡಿ. ಮುಂದಿನ ವಿಚಾರ ಮಾಡೂನು. ನಿನ್ನ ಹಿಂಗ ಒಬ್ಬಾಕಿನ್ನೆ ಬಿಟ್ಟ ಹೋಗ್ತೀನಿ ಅಂತ ತಿಳದಿಯೇನು? ನಡಿ. ಅಳಬ್ಯಾಡಾಅಂದಾ. ಅವನೂ ಅಳತಿದ್ನಾ?’’ (ಪುಟ: 131-132).
ನೀಲಕ್ಕನ ಈ ಗಂಡ ಅವಳನ್ನು ಮನೆಬಿಟ್ಟು ಹೊರಹಾಕಲು ಸಾಕಷ್ಟು ತಯಾರಿ ಮಾಡಿಯೇ ಊರುಬಿಟ್ಟಿದ್ದ ಅನಿಸುತ್ತದೆ. ಕಛೇರೀ ಸಿಪಾಯಿ - ನೀವ್ಯಾರೋ ಗೊತ್ತಿಲ್ಲ ಎನ್ನುವಷ್ಟರ ಮಟ್ಟಿಗೆ ಆ ತಯಾರಿ ಫಲಕೊಡುವಂತಹದಾಗಿದೆ. ಪೋಲೀಸ ಅಧಿಕಾರಿ ಸ್ವಲ್ಪ ಸಿವಿಲೈಜ್ಡ್ ಆಗಿ ನಡೆದುಕೊಂಡರೂ, ಆಕೆಯ ಗಂಡನಿಗೆ ಅನುಕೂಲವಾಗುವಂತೆ, ಆಕೆಯನ್ನು ಅಲ್ಲಿಂದ ತೊಲಗಿಸುವ ಯೋಜನೆಯನ್ನು ಕಾರ್ಯಗತಗೊಳಿಸುವುದರಲ್ಲಿಯೇ ತೊಡಗಿದವನು. ನೀಲಕ್ಕನ ಬಗ್ಗೆ ಈ ಗಂಡ ತೋರುವ ಕ್ರೌರ್ಯ ಅಪರಿಮಿತವಾದದ್ದು. ತಾನು ಅವಳೊಂದಿಗೆ ಮದುವೆಯನ್ನೇ ಮಾಡಿಕೊಂಡಿಲ್ಲ ಎಂದು ಹೇಳಿದ ಆತ, ಮುಂದೆ ಅನೇಕ ವರ್ಷಗಳ ಕಾಲ ನೀಲಕ್ಕ ನೌಕರಿಮಾಡುತ್ತಿದ್ದ ಸ್ಥಳಗಳಿಗೆಲ್ಲ ಗಂಡನ ಸಂಬಂಧ ಹೇಳಿಕೊಂಡು, ಧುತ್ತೆಂದು ಬಂದು ಪ್ರೇಮದ ನಾಟಕವಾಡಿ ಇವಳನ್ನು ದುರ್ಬಳಕೆ ಮಾಡಿ ಹೋಗುತ್ತಿದ್ದನು. ಕೊನೆಗೆ ನೀಲಕ್ಕನೇ ಅವನನ್ನು ನಿರಾಕರಿಸುವವರೆಗೆ ಅವಳಲ್ಲಿಗೆ ಬಂದು ಕಾಡಿದ್ದಾನೆ.
ನೀಲಕ್ಕನ ಜೀವನದಲ್ಲಿ ಮೂರನೆಯ ಗಂಡನ ಪ್ರವೇಶ ಅವಳು ಹೊಂದಿದ ಮಗುವೊಂದರ ಹಂಬಲದ ಭಾವುಕತೆಯನ್ನು ಬಂಡವಾಳವಾಗಿಸಿಕೊಂಡು ನಡೆಯುತ್ತದೆ. ನಿನಗೆ ಮಗುವೊಂದನ್ನು ಪಡೆಯುವ ಅವಕಾಶ ಒದಗಿಸುತ್ತೇನೆ, ಆ ಮಗುವಿಗೆ ತಂದೆಯೆನ್ನುವ ಹೆಸರು ನೀಡುತ್ತೇನೆ ಎಂದು ಹೇಳುತ್ತ ದಾಂಪತ್ಯದ ಆಸೆ ಕಮರಿಹೋಗಿದ್ದ ಅವಳಲ್ಲಿ ಕಂದನ ಹಂಬಲದ ಬೆಂಕಿಯನ್ನು ಹೊತ್ತಿಸುತ್ತಾನೆ. ಪದೇ ಪದೇ ಬಂದು ಒತ್ತಾಯಿಸಿ ಅವಳಲ್ಲಿ ಕಲಮಲವನ್ನುಂಟುಮಾಡುತ್ತಾನೆ. ಬೆನ್ನುಹತ್ತಿದ ಆ ರಾಜಕಾರಣಿಯೊಂದಿಗೆ ನಡೆದ ನೀಲಕ್ಕನ ಮಾತುಕತೆ ಕೇಳಿರಿ: ``... `ಆದರ ಎರಡನೇ ಸಂಬಂಧನೂ ದುರ್ದೈವಕ್ಕ ಆಗಿಬರಲಿಲ್ಲಾ. ನೀವಿನ್ನಾ ಸಣ್ಣಾವರು. ಈಗೇನೋ ಅವ್ವಾ-ಅಪ್ಪಾ ನೋಡಕೋತಾರಾ ಅಡ್ಡಿ ಇಲ್ಲಾ. ನಾಳಿ ವಯಸ್ಸಾದ ಮ್ಯಾಲೆ ಎಲ್ಲಿರ್ತೀರಿ? ಯಾರ ನೋಡಕೋತಾರಾ? ಅಣ್ಣಾ-ತಮ್ಮಾ ನೋಡಕೋತಾರಾ ಅನ್ನೂ ಗ್ಯಾರಂಟಿ ಏನು...?’ ಮಧ್ಯದೊಳಗೇ ಅವರ್ನ ತಡದ್ಲು. `ಸಾರೀರಿ, ಸ್ವಲ್ಪ ಮಾತ ನಿಲ್ಲಸ್ರಿ. ನಾಳಿನ ಕತಿ ಯಾರ ಕಂಡಾರಾ? ಇವತ್ತಿಂದ ಏನದ ಅದನ್ನ ಹೇಳ್ರಿ ಸಾಕು. ನಿಮಗೇನರ ನನ್ನ ಮದವೀ ಆಗೂ ವಿಚಾರ ಇದ್ರ, ತಲಿಯೊಳಗಿಂದ ಅದನ್ನ ತಗದ ಬಿಡ್ರಿ. ಈಗಾಗ್ಲೇ ಎರಡೆರಡು ಸರ್ತಿ ಎದಿ ಸುಟಗೊಂಡೀನಿ. ಮತ್ತ ಮತ್ತ ಅದೇ ಅಗ್ನಿಕುಂಡಕ್ಕ ಬೀಳಾಕ ನಾ ತಯಾರಿಲ್ಲಾ. ... ಸಾಸಿವಿಯಷ್ಟು ಸುಖಕ್ಕ ಸಾಗರದಷ್ಟು ದುಃಖಾ ಅನುಭವಸೂದು ಅಂತ ಹಂಗಾದೀತು. ದಯವಿಟ್ಟು ಈ ವಿಷಯ ಇಲ್ಲಿಗೇ ನಿಲ್ಲಿಸಿಬಿಡೂನು. ಅದು ಇಬ್ರಿಗೂ ಛಲೋ’. ... `ಛೇ ಛೇ ನನ್ನ ಮಾತು ಪೂರಾ ಕೇಳಿಸಿಕೊಳ್ರಿ. ನನ್ನೂ ಬ್ಯಾರೇಯವರಿಗಿ ಹೋಲಸಬ್ಯಾಡ್ರಿ. ಎಲ್ಲಾ ಗಂಡಸರನ್ನೂ ಒಂದೇ ತಕ್ಕಡ್ಯಾಗ ತೂಗಬ್ಯಾಡ್ರಿ. ... ನಿಮಗ ತಾಯಾಗೂ ಹಂಬಲಾ ಬಾಳ ಅದ ಅಂತ ನನಗ್ಗೊತ್ತು. ಈಗೇನೋ ಅದನ್ನ ಅದುಮಿಟ್ಟೀರಿ. ಆದರ ಕಾಲಾ ಕಳದಂಗ, ಅದುಮಿಟ್ಟ ಸ್ಪ್ರಿಂಗ್ ಜೋರಾಗಿ ಸಿಡದೇಳಂಗ ಆದೀತು. ಆವಾಗ ನಿಮಗ ಅಗದೀ ಮಕ್ಕಳು ಬೇಕೇ ಬೇಕು ಅನಿಸಿದರ ಕಾಲಾ ಮೀರಿರತೈತಿ. ನೀವು ಪಶ್ಚಾತ್ತಾಪ ಪಡಂಗ ಆಗತದ. ನಾನು ಈ ನದೀ ದಂಡೀ ಮ್ಯಾಲ ಕುಂತು, ನದೀ ಮ್ಯಾಲೆ ಪ್ರಮಾಣ ಮಾಡಿ ಹೇಳ್ತೀನಿ. ನನ್ನ ಮದವಿ ಆಗರಿ. ನಿಮಗ ಅಂದ್ರ ನಮಗ, ಮಕ್ಕಳಾಗಲಿ. ಆ ಮಕ್ಕಳಿಗಿ ನನ್ನ ಹೆಸರು ಕೊಡ್ತೀನಿ. ನಿಮಗೂ ಒಂದ ಆಧಾರ ಇರ್ಲಿ. ನಿಮ್ಮ ಹೆಸರಿಗೂ ಬಾಳಾ ಇಲ್ಲಾ ಅಂದ್ರೂ ಸ್ವಲ್ಪಾದರೂ ಮಾಡ್ತೀನಿ. ಎಂಥಾ ಸಂದರ್ಭದಾಗೂ ನಾ ನಿಮ್ಮ ಕೈ ಬಿಡಂಗಿಲ್ಲಾ...’ ...’’. (ಪುಟ:173). ... `ತನಗ ಒಬ್ಬಾಂವಾ ಗಂಡಬೇಕು ಅನ್ನೂದಕಿಂತಾ ತನ್ನ ಮಕ್ಕಳಿಗೆ ಒಬ್ಬಾಂವ ಅಪ್ಪ ಬೇಕು ಅನ್ನೂದರ ಕಡೆ ಹೆಚ್ಚು ವಾಲತಿದ್ಲು. ಅವರೇನೋ ಅಪ್ಪ ಆಗಾಕ ತಯಾರ ಆಗ್ಯಾರಾ. ಆದರ ವಿವಾಹಿತಾ. ಮಕ್ಕಳೊಂದಿಗಾ. ಮನಿಯವರು ಒಪ್ಪತಾರೇನು? ಈಗಾಗಲೇ ಶಿಲ್ಪಗೊಂಡಿರುವ ಆ ಸಂಸಾರದೊಳಗ ತಾನು ಅನಧಿಕೃತ ಪ್ರವೇಶ ಮಾಡೂದು ಎಷ್ಟು ಸರಿ?’ ಎಂದು ಯೋಚಿಸಿದ ನೀಲಕ್ಕ ಕೆಲವು ಕರಾರುಗಳನ್ನು ಹಾಕಿ ಮದುವೆಗೆ ಒಪ್ಪುತ್ತಾಳೆ. ಆ ಕರಾರುಗಳಲ್ಲಿ ಆಕೆ ಮುಗ್ಧವಾಗಿ, `ಮದುವೆಯಾಗುತ್ತೀರಿ ಅಂದಮೇಲೆ ನೀವು ನನ್ನ ಬದುಕಿಗೆ ಭದ್ರತೆ ದೊರೆಯುವಂತಹ ವ್ಯವಸ್ಥೆಯನ್ನು ಮಾಡಿಯೇ ಮಾಡುತ್ತೀರಿಎಂದು ಹೇಳುತ್ತಾಳೆ. ಮತ್ತು ತನ್ನಿಂದ ಅವನ ಎರಡನೆಯ ಹೆಂಡತಿ ಮಕ್ಕಳಿಗೆ ಯಾವ ಅನ್ಯಾಯವೂ ಸಂಭವಿಸಕೂಡದು ಎನ್ನುತ್ತಾಳೆ! ಬೆನ್ನುಹತ್ತಿದ ಆ ರಾಜಕಾರಣಿ ಹೂಂ ಎಂದು ಇವಳನ್ನು ಮದುವೆಯಾಗಿ ಇವಳ ಆಸೆ ಮತ್ತು ವ್ಯಕ್ತಿತ್ವಗಳೆರಡನ್ನೂ ನಾಶಮಾಡುವ ಎಲ್ಲ ನಡೆಗಳನ್ನು ತೋರಿಸುತ್ತಾನೆ! ಮಕ್ಕಳನ್ನು ಪಡೆಯುವ ಅವಳ ಪ್ರಯತ್ನದ ಅಂಗವಾಗಿ ನಡೆಯುವ ವೈದ್ಯಕೀಯ ಚಿಕಿತ್ಸೆಗಳಿಗೆ ಸಹಕಾರ ನೀಡುವುದಿಲ್ಲ; ಜೀವನ ಭದ್ರತೆಗೆ ವ್ಯವಸ್ಥೆ ಮಾಡುತ್ತೇನೆಂದವ ಇವಳ ಹಣವನ್ನೇ ಕಸಿದುಕೊಳ್ಳುವ ಪ್ಯಾರಾಸೈಟ್ ಆಗುತ್ತಾನೆ; ಅವನು ಅವಳ ಜೀವನ ಭದ್ರತೆಗೆ ಕೊಟ್ಟ ಕಾಣಿಕೆಯೆಂದರೆ ಅವಳ ಹೆಸರಿನ ಮುಂದೆ ತನ್ನದೊಂದು ಹೆಸರನ್ನು ಮಾತ್ರ!
***
ಕಾದಂಬರಿಯಲ್ಲಿ ನೀಲಕ್ಕನ ದುರಂತದ್ದು ಒಂದು ಪ್ರಧಾನ ಎಳೆಯಾದರೆ ಅದರ ಸುತ್ತಮುತ್ತಲೂ ಸಂಭವಿಸುವ ಇನ್ನಷ್ಟು ದುರಂತಗಳ ಸಂತೆಯೇ ಇದೆ! ಸಣ್ಣ ವಯಸ್ಸಿನ ತಂಗಿಯ ಗಂಡನ ಸಾವು, ಇನ್ನೊಬ್ಬ ತಂಗಿಯ ಗಂಡನ ನಿಷ್ಕ್ರಿಯತೆ ಮತ್ತು ಅವರ ಸಂಸಾರದ ವಿಘಟನೆ, ತಮ್ಮನ ಆತ್ಮಹತ್ಯೆ, ಸಂಸಾರಗೇಡಿಯಾದರೂ ಛಲದಿಂದ ಬದುಕುತ್ತಿದ್ದ ತಂಗಿಯ ಮಗಳ ಆತ್ಮಹತ್ಯೆ ಮತ್ತು ಆ ತಂಗಿ ಬದುಕಿನ ಬಗೆಗಿನ ಆಸಕ್ತಿಯನ್ನು ಕಳೆದುಕೊಂಡು ಕುಸಿದು ಹೋಗುವುದು... ಇಡೀ ಕಾದಂಬರಿ ದುರಂತಗಳ ಒಂದು ಮಾಲೆಯಾಗಿದೆ! ಅದರ ಪದಕವೊಂದನ್ನು ಇಲ್ಲಿ ತೋರಿಸುತ್ತೇನೆ ನೋಡಿ: ``... ನಲವತ್ತನಾಲ್ಕು ವರ್ಷದ ಎರಡು ಮಕ್ಕಳ ತಾಯಿ, ಹದಿನೆಂಟು ವರ್ಷದ ಮಗಳನ್ನ ಇತ್ತೀಚೆಗೆ ಕಳಕೊಂಡು ಅರೆ ಹುಚ್ಚಿ ಆಗಿದ್ಲು. ಅಕಿ ನಕ್ಕರ ಅತ್ತಂಗ ಇರ್ತಿತ್ತು. ಕೆಲಸಾ-ಕೆಲಸಾ ಅಂತ ಯಾಕ ಹಚಿಗೊಂಡಿದ್ಲು ಅಂದ್ರ, ಸ್ವಂತ ಅಕ್ಕಾ ಆದರೂ ಅದು ತನ್ನ ಮನಿಯಲ್ಲ. ಅಕಿಗಿ ಭಾರ ಆಗಿ ಇರಬಾರದು. ಕೆಲಸಾ ಮಾಡಿ ಆದರೂ ಋಣಾ ತೀರಿಸಬೇಕು. ಇದು ಅಕಿ ಧೋರಣಾ! ಒಮ್ಮಿ ಕೌನ್ಸಲಿಂಗ್ ಮಾಡಿಸೂಣೂ ಅಂತ ನೀಲಕ್ಕ ಆ ಊರಿನ ಪ್ರಸಿದ್ಧ ವೈದ್ಯರ ಹಂತೇಲಿ ಕರಕೊಂಡ ಹೋದ್ಲು. `ಅಕ್ಕವರ, ನೀವು ಸ್ವಲ್ಪ ಆ ರೂಮಿನ್ಯಾಗಿರ್ರಿ ಬಾಗಲಾ ಹಾಕೋತೀನಿಅಂದ. ಬಾಗಲಾ ಹಾಕೊಂಡರೂ ಕಿವಿಯೆಲ್ಲಾ ಅಲ್ಲೇ ಇದ್ದುವು. ಗುಣು ಗುಣು ಮಾತು. ಶಮೀ ಅಳೂ ಶಬ್ದಾ. ಹೊಡತದ ಶಬ್ದಾನೂ ಕ್ಷೀಣಾಗಿ ಕೇಳ್ತು. ಚಡಪಡಿಸಿದ್ಲು. ಸಂಕಟಾ ಪಟ್ಲು. ಸಮಾಧಾನ ಇಲ್ಲದೇ ಅಲ್ಲೇ ಸುತ್ತಾಡಿದ್ಲು. ಬಾಗಲು ತಗೀತು. `ನಾ ತಂಗೀಗೆಲ್ಲಾ ಹೇಳೀನ್ರಿ. ಮುಂದಿನವಾರಾ ಬರ್ರಿಅಂದ್ರು ಡಾಕ್ಟರು. ಹೊರಗ ಬಂದು ಕಾರಿನ್ಯಾಗ ಕುಂತರು. ಕಾರು ಚಾಲೂ ಆದಕೂಡಲೇ, ಶಮೀ ನೀಲಕ್ಕನ ತೊಡೀ ಮ್ಯಾಲೆ ತಲಿ ಇಟ್ಟು ಬಿಕ್ಕಿ ಬಿಕ್ಕಿ ಅಳಾಕ ಸುರುಮಾಡಿದ್ಲು. `ಅರೇ, ಯಾಕ? ಏನಾತು? ಏನಾತು ಹೇಳಲೇ?’ ಇಲ್ಲ. ಶಮಿ ಮಾತಾಡೂ ಸ್ಥಿತಿಯೊಳಗೇ ಇರಲಿಲ್ಲಾ. `ನಾ ಸಾಯಬೇಕು, ನಾ ಇರಬಾರದು...’. `ಏನಾತು ಸಾಯೂವಂಥಾದ್ದು. ಸುಮ್ಮನಿರು. ಮನಿಗಿ ಹೋದಮ್ಯಾಲೆ ಹೇಳೂವಂತಿ’. ಮನಿ ಮುಟ್ಟೂತನ ಬಿಕ್ಕಳಿಕಿ ಹಂಗೇ ಇತ್ತು. `ಅಕ್ಕಾ, ನಾ ಯಾಕಿರಬೇಕು ಹೇಳು. ದೈವ ಯಾಕ ನನಗಿಷ್ಟ ಕಾಡಾಕ ಹತೈತಿ. ಅಂವಾ ಭಾಡ್ಯಾ, ಮುದಕ ಆಗ್ಯಾನಾ. ಹೊಟ್ಟಿಗೇನ ತಿಂತಾನಾ?...’. `ಏನರೇ ಆಯ್ತಲ್ಲಿ ಅದನ್ನ ಹೇಳುಇಕಿ ಒತ್ತಾಯ. `ಅಕ್ಕಾ ಅಕ್ಕಾ... ನನ್ನ ಅಂವಾ ರೇಪ್ ಮಾಡಾಕ ಬಂದಾ. ನನ್ನ ಮೈಯಾಗ ಏನದ? ನಾನೇ ಹೆಣಾ ಆದಂಗ ಆಗೀನಿ. ಅವನ ಮುದಿಚಟಾ ಎಷ್ಟದ. ನನಗ ನಿತ್ರಾಣ ಆಗಿ, ಕಾಲ ಬಿದ್ಯಾ ಬಿಟ್ಟು ಬಿಡು ಅಂತ. ಕಪಾಳ ಕಪಾಳ ಹೊಡೀತಾನಾ. ನಾ ಯಾರಿಗೇನ ಮಾಡೀನಂತ ಇಷ್ಟ ಕಾಡಾಕ ಹತೈತಿ? ನೀ ಯಾಕ ಅವನ ಹಂತೇಲಿ ನನ್ನ ಕರಕೊಂಡ ಹೋದಿ? ಬ್ಯಾರೇ ಯಾರೂ ಸಿಗಲಿಲ್ಲಾ?...’. ನೀಲಕ್ಕಗ ಧಕ್ ಅಂತ ಎದಿಗಿ ಒದ್ದಂಗಾತು...’. (ಪುಟ:281).
ಇಷ್ಟೆಲ್ಲ ದುರಂತದ ಗುಡ್ಡೆಯನ್ನು ನಮ್ಮ ಮುಂದೆ ಹರಡುವ ಕಾದಂಬರಿ ಈ ದುರಂತಗಳಿಗೆಲ್ಲ ಕಾರಣವೆಂದು ಯಾವುದನ್ನೂ ಗುರುತಿಸುವುದಿಲ್ಲ. ಶಶಿಕಲಾ ಅವರು `ನನ್ನೂವು ಒಂದೆರಡು ಮಾತು...ಎಂದು ಕಾದಂಬರಿಯ ಆರಂಭದಲ್ಲಿ ಬರೆಯುತ್ತ `ಮಹಿಳಾವಾದ ಎಂಬುದು ಮಹಿಳಾ ವ್ಯಾಧಿ ಎನ್ನುವಷ್ಟು ಕ್ಲೀಷೆಯಾಗಿರುವ ಈ ಕಾಲ ಸಂದರ್ಭದಲ್ಲಿ ಮಹಿಳಾವಾದ ಅಂದರೆ ಮಾನವತಾವಾದ ಎಂದು ಸ್ವೀಕರಿಸುವುದೇ ಸೂಕ್ತಎನ್ನುತ್ತಾರೆ. ಅಂದರೆ, ಶಶಿಕಲಾ ಅವರು ಕಾದಂಬರಿಯ ವಿನ್ಯಾಸದ ಹಿನ್ನೆಲೆಯಲ್ಲಿ ಸ್ತ್ರೀವಾದದ ತರ್ಕವನ್ನು ಮುಂದೆ ಮಾಡಲು ಬಯಸುವುದಿಲ್ಲ. ಗಂಡು-ಹೆಣ್ಣೆರಡನ್ನೂ ಒಳಗೊಂಡ ಮಾನವೀಯತೆಯ ಆಶಯವು ಬದುಕಿನ ಪ್ರೇರಣೆಯಾಗಬೇಕೆಂದು ಹೇಳುತ್ತಾರೆ. ಹಾಗಿದ್ದರೆ ಈ ದುರಂತಗಳ ಹಿನ್ನೆಲೆಯ ಪ್ರೇರಣೆಯೇನು ಎನ್ನುವುದಕ್ಕೆ ಕಾದಂಬರಿ ತರ್ಕಾತೀತವಾದ ಅನೂಹ್ಯದ ಅದೃಷ್ಟವನ್ನು ನಮ್ಮೆದುರು ಇಡುತ್ತದೆ. ಕಾದಂಬರಿಯ ಆರಂಭದಲ್ಲಿಯೇ ಶೆಟಿಗೆವ್ವನ ಉಲ್ಲೇಖ ಬರುತ್ತದೆ; ಆಕೆ ಮಗು ಹುಟ್ಟಿದ ಐದನೆಯ ದಿವಸದಂದು ಬಾಣಂತಿ ಕೋಣೆಗೆ ಬಂದು ಮಗುವಿನ ಹಣೆಬರೆಹವನ್ನು ಬರೆಯುವ ಉಲ್ಲೇಖ ಬರುತ್ತದೆ. ಹೌದು! ವಿನಾಕಾರಣವಾದ, ಗಂಡು-ಹೆಣ್ಣು ಎರಡೂ ಜೀವಿಗಳ ಬದುಕು, ತರ್ಕಾತೀತವಾಗಿ ಬಂದೆರಗುವ, ಕೋಟಲೆಗಳಿಗೆ ಸಿಕ್ಕು ಬಳಲುತ್ತಿದ್ದರೆ ಅದಕ್ಕೆ ಕಾರಣವಾಗಿ ಅನೂಹ್ಯ, ಅದೃಶ್ಯ, ಅದೃಷ್ಟವನ್ನೇ ದೂರಬೇಕಲ್ಲವೆ? ಹೀಗೆ, ಶಶಿಕಲಾ ವಸ್ತ್ರದ ಅವರ `ಇದ್ದೇನೆ ಇಲ್ಲದಂತೆಎನ್ನುವ ಈ ಕಾದಂಬರಿ ನಮ್ಮ ಅಂತರಂಗವನ್ನೆಲ್ಲ ವ್ಯಾಪಿಸುತ್ತ, ಮನುಷ್ಯನ ಅನಾಥ ಪ್ರಜ್ಞೆ, ಅವನ ಅಸಹಾಯಕ ಸ್ಥಿತಿಗಳು ನಮ್ಮ ಅಂತಃಕರಣದಲ್ಲಿ ಹೊತ್ತಿ ಉರಿಯುವಂತೆ ಮಾಡುತ್ತದೆ. ಇದನ್ನು ಓದುತ್ತಿದ್ದಂತೆ ನಾವು ಕರಗುತ್ತೇವೆ... ಬಾಗುತ್ತೇವೆ!

Sunday, February 17, 2019

`ಕನ್ನಡ ಸಾಹಿತ್ಯದಲ್ಲಿನ ಇತ್ತೀಚಿನ ಪ್ರವೃತ್ತಿಗಳು’ ವಿಚಾರ ಸಂಕಿರಣದ ಸಮಾರೋಪ ಭಾಷಣ ರೋಚಕತೆ ಮತ್ತು ಸಂಘರ್ಷಗಳು ಪ್ರಧಾನ ತುಡಿತಗಳಾಗಿರುವ ಕಾಲದಲ್ಲಿ ಸೌಹಾರ್ದದ ಮೊಳಕೆಗಳನ್ನು ಆಶಿಸುತ್ತಾ...

`ಕನ್ನಡ ಸಾಹಿತ್ಯದಲ್ಲಿನ ಇತ್ತೀಚಿನ ಪ್ರವೃತ್ತಿಗಳು’ ವಿಚಾರ ಸಂಕಿರಣದ
ಸಮಾರೋಪ ಭಾಷಣ

ರೋಚಕತೆ ಮತ್ತು ಸಂಘರ್ಷಗಳು ಪ್ರಧಾನ ತುಡಿತಗಳಾಗಿರುವ ಕಾಲದಲ್ಲಿ
ಸೌಹಾರ್ದದ ಮೊಳಕೆಗಳನ್ನು ಆಶಿಸುತ್ತಾ...
-    ರಾಘವೇಂದ್ರ ಪಾಟೀಲ
ಬೆಳಗಿನ ಹನ್ನೊಂದು ಗಂಟೆಯಿಂದ ಇಲ್ಲಿಯವರೆಗೆ `ಕನ್ನಡ ಸಾಹಿತ್ಯದ ಇತ್ತೀಚಿನ ಪ್ರವೃತ್ತಿಗಳು’  ಕುರಿತು ಚರ್ಚಿಸುತ್ತಿದ್ದೇವೆ. ಅಕಾಡೆಮಿಯ ಅಧ್ಯಕ್ಷರೂ, ಕನ್ನಡದ ಪ್ರಮುಖ ಲೇಖಕರೂ ಆದ ಡಾ. ಅರವಿಂದ ಮಾಲಗತ್ತಿಯವರು ತಮ್ಮ ಉದ್ಘಾಟನಾ ಭಾಷಣದಲ್ಲಿ, ಮತ್ತು ಕನ್ನಡದ ಬಹುಮುಖ್ಯ ವಿಮರ್ಶಕರಾದ ಡಾ. ರೆಹಮತ್ ತರೀಕೆರೆ ಅವರು ತಮ್ಮ ಆಶಯ ಭಾಷಣದಲ್ಲಿ ನಮ್ಮನ್ನೆಲ್ಲ ಕಾಡುವಂತಹ ಮಾತುಗಳನ್ನು ಆಡುತ್ತ ಅನೇಕ ಸಾಂಸ್ಕøತಿಕ ಮಹತ್ವದ ಪ್ರಶ್ನೆಗಳನ್ನು ಎತ್ತಿದ್ದಾರೆ. ಅವರ ಮಾತುಗಳನ್ನು ಮತ್ತು ಅವರು ಎತ್ತಿದ ಪ್ರಶ್ನೆಗಳನ್ನು ಮನದಲ್ಲಿ ಇಟ್ಟುಕೊಳ್ಳುತ್ತ ನನ್ನ ಕೆಲವು ಯೋಚನೆಗಳನ್ನು ಈ ಸಮಾರೋಪದ ನುಡಿಗಳನ್ನು ಆಡುತ್ತಿದ್ದೇನೆ.
ಸಮಾಜ ಮತ್ತು ಅದರಲ್ಲಿ ಏರ್ಪಡುತ್ತಿರುವ ಸಮುದಾಯಗಳ ಜೀವನ ಎನ್ನುವುದು ಯಾವತ್ತಿಗೂ ಜೀವಂತ ಸಾಹಿತ್ಯದ `ಮಾತೃಕೆ’ (ಸದ್ಯದಲ್ಲಿ ಈ ಪದಕ್ಕೆ ಬಳಸುತ್ತಿರುವ ಇಂಗ್ಲೀಷಿನ meಜium ಶಬ್ದವು ಮಾತೃಕೆ ಪದದ ಸಮಗ್ರತೆಯನ್ನು ಕಾಣಿಸಲಾರದು!) ಆಗಿರುತ್ತದೆ. ಸಾಹಿತ್ಯದ ಬೇರುಗಳು ಈ ಮಾತೃಕೆಯಲ್ಲಿ ಇಳಿದು ಚಾಚಿಕೊಂಡು, ಅದರ ಸಾರ ಸತ್ವಗಳನ್ನು ಹೀರಿಕೊಂಡು, ತಮ್ಮ ವಸ್ತು, ತಾತ್ವಿಕತೆ ಮತ್ತು ಸ್ವರೂಪಗಳನ್ನು ಪಡೆಯುತ್ತಿರುತ್ತವೆ. ಅಂತಲೇ, ಇಂದು ಮುಗುಳೊಡೆಯುತ್ತಿರುವ ಸಾಹಿತ್ಯದ ಸ್ವರೂಪ, ಪ್ರವೃತ್ತಿಗಳನ್ನು ಅರಿಯಲು ನಾವು ಸಮಕಾಲೀನ ಸಮಾಜದ ಹಿನ್ನೆಲೆಯಲ್ಲಿ ಕೆಲಸ ಮಾಡುತ್ತಿರುವ ಪ್ರೇರಣೆ-ತುಡಿತಗಳನ್ನು ಹುಡುಕಿ ನೋಡಬೇಕಾಗುತ್ತದೆ. ನನ್ನ ಈ ಮಾತುಗಳ ಹಿನ್ನೆಲೆಯಲ್ಲಿ ಅಂಥ ಹುಡುಕಾಟವಿದೆ.
***
ಸಮಕಾಲೀನ ಆಧುನಿಕ ಸಮಾಜದ ವಿಕಾಸ, ಮತ್ತು ಅದರ ಬದಲಾವಣೆಗಳ ಅಸಂತುಲಿತ ವೇಗದ ಪ್ರಕ್ರಿಯೆಯನ್ನು ಕುರಿತು ಅಮೆರಿಕನ್ ಚಿಂತಕ ಅಲ್ವಿನ್ ಟಾಫ್ಲರ್ ತನ್ನ ``ಫ್ಯೂಚರ್ ಶಾಕ್’’ ಎಂತೆನ್ನುವ ಪುಸ್ತಕದಲ್ಲಿ ಬಹು ಮನೋಜ್ಞವಾಗಿ ವಿವರಿಸುತ್ತಾನೆ. ಮನುಷ್ಯಕುಲದ ಒಟ್ಟು 50,000 ವರ್ಷಗಳ ಚರಿತ್ರೆಯಲ್ಲಿ - ಪ್ರತಿ 62 ವರ್ಷಗಳಿಗೆ ಒಂದು ಪೀಳಿಗೆಯಂತೆ ವಿಭಜಿಸಿದಾಗ – ಒಟ್ಟು ಸುಮಾರು 800ರಷ್ಟು ಮನುಷ್ಯ ಪೀಳಿಗೆಗಳು ಬದುಕಿಹೋದದ್ದು ತಿಳಿಯುತ್ತದೆ. ಇಷ್ಟು ಪೀಳಿಗೆಗಳಲ್ಲಿ ಸುಮಾರು 650 ಪೀಳಿಗೆಗಳು ಕಾಡಿನಲ್ಲಿಯ ಪ್ರಾಣಿಗಳನ್ನು ಬೇಟೆಯಾಡುತ್ತ, ಹಸಿ ಮಾಂಸವನ್ನು ತಿನ್ನುತ್ತ, ತಮ್ಮ ಜೀವನವನ್ನು ಗವಿಗಳಲ್ಲಿಯೇ ಬದುಕಿ ಕಳೆದಿವೆ. ಆ ಕಾಲದಲ್ಲಿ ಮನುಷ್ಯ ಸಮಾಜದಲ್ಲಿನ ಬದಲಾವಣೆಯ ವೇಗವು ಶೂನ್ಯವಾಗಿದ್ದಿತು. ಆ ನಂತರ, ವ್ಯವಸಾಯವನ್ನು ಕಂಡುಹಿಡಿದು ನಿಧಾನವಾಗಿ ಬದಲಾವಣೆಯು ಆರಂಭಗೊಂಡಿತು. ಕಳೆದ ಎರಡು ಮೂರು-ನಾಲ್ಕು ಪೀಳಿಗೆಗಳ ಕಾಲದಲ್ಲಿ ಘಟಿಸಿದ ಬದಲಾವಣೆಗಳ ವೇಗವು ಹಿಂದಿನ ಎಲ್ಲ ಪೀಳಿಗೆಗಳ ಕಾಲದಲ್ಲಿ ಘಟಿಸಿದ ಬದಲಾವಣೆಗಳ ಒಟ್ಟು ಪ್ರಮಾಣಕ್ಕಿಂತಲೂ ಅತಿ ಹೆಚ್ಚು ಆಗಿದೆ. ಹೀಗಾಗಿ ಮನುಷ್ಯನು ಅತಿ ತೀವ್ರವಾದ ವೇಗದ ಸಾಮಾಜಿಕ ಸಂದರ್ಭದ ಬದಲಾವಣೆಗೆ ಈಡಾಗುವಂತಾಗಿದೆ. ಬದಲಾವಣೆಯ ಈ ಅತಿವೇಗವು ಒಳಿತಾದುದೇನೂ ಅಲ್ಲ. ಇಂಥ ಬದಲಾವಣೆಯು ಮನುಷ್ಯನ ಮನೋಸ್ಥಿತಿಯ ಮೇಲೆ ಅಪಾರ ಒತ್ತಡವನ್ನುಂಟು ಮಾಡುತ್ತದೆ. ಬದಲಾವಣೆಯು ಮನುಷ್ಯನ ಅನುಭವವಾಗುವ ಮೊದಲೇ ಹೊಸ ಬದಲಾವಣೆಯೊಂದು ಬಂದು ಮನುಷ್ಯನ ಪ್ರಜ್ಞೆಯನ್ನು ಅಪ್ಪಳಿಸಿ ಬಿಡುತ್ತದೆ. ಇಂಥ ಬದಲಾವಣೆಗಳ ಆಘಾತವು ಮನುಷ್ಯನ ಸಂವೇದನಾಶೀಲತೆಯ ಮೇಲೆ ನೇತ್ಯಾತ್ಮಕ ಪರಿಣಾಮವನ್ನುಂಟು ಮಾಡಿ, ಮನುಷ್ಯನ ಸಂವೇದನಾಶೀಲತೆಯು ಕಡಿಮೆಗೊಳ್ಳುತ್ತಾ, ಕಡಿಮೆಗೊಳ್ಳುತ್ತಾ ಸಾಗಿ, ಅದು ಅತಿ ಕನಿಷ್ಟದ, ಅಣು ಗಾತ್ರದ್ದು ಆಗಿಬಿಡುತ್ತದೆ. ಇದರ ಜೊತೆ ಜೊತೆಗೇ, ತಂತ್ರಜ್ಞಾನದ ಕಾರಣವಾಗಿ ಮನುಷ್ಯನ ಐಹಿಕ ಸುಖ ಸೌಲಭ್ಯಗಳ ಪ್ರಮಾಣವು ವಿಪರೀತವಾಗಿ ಹೆಚ್ಚುತ್ತಹೋಗುತ್ತಿದೆ; ಸುಖ ಸೌಲಭ್ಯಗಳ ಐಂದ್ರಿಯಕ ಮತ್ತು ಭೌತಿಕತೆಯ ಅಪಾರವಾದ ದ್ರವ್ಯರಾಶಿಯು ಮನುಷ್ಯ ಪ್ರಜ್ಞೆಯಲ್ಲಿ ಸೇರುತ್ತ, ಇಂಥ ಜಡ ಭೌತಿಕತೆಯ ಆಳದಲ್ಲಿ ಉಳಿದ ಅಣುಗಾತ್ರದ ಸಂವೇದನಾಶೀಲತೆಯು ಹುಗಿದುಹೋಗಿ, ಇಂದಿನ ಆಧುನಿಕ ಮನುಷ್ಯನು ಹೆಚ್ಚು ಹೆಚ್ಚು ಸಂವೇದನಾ ರಹಿತನಾಗುತ್ತಿದ್ದಾನೆ. ಅಪಘಾತಕ್ಕೆ ಈಡಾಗಿ ರಸ್ತೆಯ ಮಗ್ಗುಲಿಗೆ ಬಿದ್ದು ಸಹಾಯಕ್ಕಾಗಿ ಹಲುಬುತ್ತಿರುವ ಗಾಯಾಳುಗಳನ್ನು ನೋಡುತ್ತ ನೋಡುತ್ತಲೇ ಸಾಗಿ ಮುಂದೆ ಹೋಗುವ, ಇಲ್ಲವೇ, ಸಹಾಯದ ತುರ್ತನ್ನು ಅರಿಯದವರಂತೆ, ಅಲ್ಲಿನ ಆ ರೋಚಕ ದೃಶ್ಯಕ್ಕಾಗಿ ತಮ್ಮ ಮೊಬೈಲ್‍ಗಳಲ್ಲಿ ವಿಡಿಯೋ ಮಾಡಿಕೊಳ್ಳುವ ಜನರನ್ನು ನೋಡಿದರೆ, ಹೆಚ್ಚುತ್ತಿರುವ ವೃದ್ಧಾಶ್ರಮಗಳ ಸಂಖ್ಯೆಯನ್ನು ಗಮನಿಸಿದರೆ, ಹೆಚ್ಚುತ್ತಿರುವ ಚಿಕ್ಕ ಮಕ್ಕಳ ಮೇಲಿನ ರೇಪ್‍ಗಳ ಪ್ರಮಾಣವನ್ನು ನೋಡುತ್ತಿದ್ದರೆ ಟಾಫ್ಲರ್ ಹೇಳುತ್ತಿರುವ ಸಂಗತಿಯ ನಿಜತ್ವವನ್ನು ಮನಗಾಣುತ್ತೇವೆ.
ಮನುಷ್ಯ ಸೌಲಭ್ಯಗಳ ಮಾಸ್-ಪ್ರೊಡಕ್ಶನ್ನಿನ ಈ ಆಧುನಿಕ ಕಾಲದಲ್ಲಿ, ದೊಡ್ಡ ಪ್ರಮಾಣದಲ್ಲಿ ಉತ್ಪಾದನೆಗೊಳ್ಳುವ ಸರಕುಗಳನ್ನು ಮಾರಲು ಅತ್ಯಂತ ಸ್ಪರ್ಧಾತ್ಮಕವಾದ ಮಾರುಕಟ್ಟೆಯೊಂದು, ಅಪಾರವಾಗಿ ಬೆಳೆದು ನಿಂತಿದೆ. ದೊಡ್ಡ ಪ್ರಮಾಣದಲ್ಲಿ ಉತ್ಪಾದನೆಗೊಳ್ಳುವ ಎಲ್ಲ ಸರಕುಗಳನ್ನು ಸಂವೇದನಾ ರಹಿತನಾದ ಗ್ರಾಹಕ ಮನುಷ್ಯನಿಗೆ ಮಾರಾಟಮಾಡುವ ಸವಾಲು ಈ ಮಾರುಕಟ್ಟೆಯ ಮುಂದಿದೆ. ಈ ಸವಾಲನ್ನು ಸ್ವೀಕರಿಸಿದ ಮಾರುಕಟ್ಟೆ ತತ್ವಜ್ಞಾನವು, ಬಗೆ ಬಗೆಯ ಹುನ್ನಾರುಗಳನ್ನು ಹುಡುಕಿ ಗ್ರಾಹಕರನ್ನು ಸೆಳೆಯುವುದಕ್ಕೆ ಹೊಂಚುತ್ತದೆ. ಅಂಥ ಮಾರುಕಟ್ಟೆ ತತ್ವಜ್ಞಾನವು ಕಂಡುಕೊಂಡ ಒಂದು ಹುನ್ನಾರವೆಂದರೆ, ರೋಚಕತೆ! ಸಂವೇದನಾ ರಹಿತನಾದ ಮನುಷ್ಯನನ್ನು ಉದ್ರೇಕಿಸಿ, ಸರಕನ್ನು ಕೊಳ್ಳುವಂತೆ ಮಾಡಲು ರೋಚಕತೆಯು ಮಾರುಕಟ್ಟೆಯ ಒಂದು ತತ್‍ಕ್ಷಣದ ಉಪಕರಣವಾಗಿದೆ! ಯಾವ-ಯಾವುದೋ ಸರಕುಗಳನ್ನು ಮಾರಲು, ಸಂಬಂಧವಿಲ್ಲದಿದ್ದರೂ ಅರೆಬೆತ್ತಲೆಯ ಹೆಣ್ಣಿನ ಚಿತ್ರಗಳ ಜಾಹೀರಾತುಗಳನ್ನು ಬಳಸಿ ಗ್ರಾಹಕನನ್ನು ಉದ್ರೇಕಿಸುವುದು ಇಂಥ ಹುನ್ನಾರದ ಅಂಗವಾಗಿಯೇ! ಮಾರುಕಟ್ಟೆಯ ಈ ಉಪಕರಣವನ್ನು ಎಲೆಕ್ಟ್ರಾನಿಕ್ ಮಾಧ್ಯಮಗಳು ಇನ್ನೂ ಹೆಚ್ಚಿನ ಅತಿರೇಕದಲ್ಲಿ ಬಳಸುತ್ತಿರುವುದನ್ನು ನಾವು ನೋಡುತ್ತಲೇ ಇದ್ದೇವೆ. ಈ ಮಾಧ್ಯಮಗಳಿಗೆ ಸಾಮಾಜಿಕ ಸ್ವಾಸ್ಥ್ಯದ ಕಲ್ಪನೆಗಿಂತ ಟಿಆರ್‍ಪಿ ಪರಿಕಲ್ಪನೆಯೇ ಹೆಚ್ಚು ಮುಖ್ಯವಾದದ್ದು. ಅಂತಲೇ, ಡಾ. ಎಂ.ಎಂ.ಕಲ್ಬುರ್ಗಿಯಂಥವರ ಯಾವುದೋ ಒಂದು ಮಾತನ್ನು ಹಿಡಿದುಕೊಂಡು, ಪ್ರೇಕ್ಷಕರನ್ನು, ಉದ್ರೇಕಿಸುವಂತಹ ರೋಚಕತೆಯಲ್ಲಿ ಅದ್ದುವುದು ಅವುಗಳಿಗೆ ಮುಖ್ಯವೆನಿಸಿಬಿಡುತ್ತದೆ. 
ಉದ್ರೇಕದ ರೋಚಕತೆಗೆ ಅವಳಿಯೆನ್ನಿಸುವ ಭಾವುಕತೆಯೆಂದರೆ ಸಂಘರ್ಷದ ಮನೋಭಾವ. ಶಬ್ದಮಾಧ್ಯಮದ ಎಲ್ಲ ಕಲೆಗಳು (ಸಾಹಿತ್ಯ, ಸಿನೆಮಾ, ಟೀವಿ ಸೀರಿಯಲ್ಲುಗಳು, ಇತ್ಯಾದಿ) ರೋಚಕತೆಯ ಜೊತೆಗೆ ಸಂಘರ್ಷವನ್ನು ತಮ್ಮ ಕೇಂದ್ರವಾಗಿಸಿಕೊಳ್ಳಲು ಹೆಣಗುತ್ತವೆ. ತನ್ನ ಗ್ರಹಿಕೆಯ ಪ್ರಧಾನ ಕೇಂದ್ರದ ಬಗೆಗೆ ಹೇಳುತ್ತ ಯೇಟ್ಸ್ – ಕಾನ್‍ಫ್ಲಿಕ್ಟ್, ಕಾನ್‍ಫ್ಲಿಕ್ಟ್, ಕಾನ್‍ಫ್ಲಿಕ್ಟ್ ಎಂದು ಉದ್ಗರಿಸಿದನಂತೆ. ಹೌದು. ಆಧುನಿಕ ಯುಗದ ಮೂಲಧಾತು ಈ ಕಾನಫ್ಲಿಕ್ಟ್-ಸಂಘರ್ಷ ಎನ್ನುವುದೇ ಆಗಿದೆ. ಈ ರೋಚಕತೆ ಮತ್ತು ಸಂಘರ್ಷಗಳು ಅನೇಕ ಸಂದರ್ಭದಲ್ಲಿ ಸಾಮಾಜಿಕ ಸ್ವಾಸ್ಥ್ಯ ಮತ್ತು ಸಾಮಾಜಿಕ ವಾಸ್ತವಗಳನ್ನು ಅನುಸರಿಸದೇ, ಕೇವಲ ತಮ್ಮ ಸ್ವಯಂಭೂ ಅಭಿವ್ಯಕ್ತಿಯ ಉದ್ದೇಶಗಳಿಗಾಗಿಯೇ ಕಲಾ ಮಾಧ್ಯಮಗಳನ್ನು ಪ್ರವೇಶಿಸುವುದನ್ನು ಕಾಣುತ್ತೇವೆ. ಅಂಥ ಒಂದು ಉದಾಹರಣೆಯಾಗಿ ಗಿರೀಶ್ ಕಾಸರವಳ್ಳಿಯವರ ನಿರ್ದೇಶನದ `ಕೂರ್ಮಾವತಾರ’ ಚಲನಚಿತ್ರವನ್ನು ನೋಡಬಹುದು. ಗಾಂಧೀಜಿಯವರನ್ನು ಕುರಿತ ಟಿ.ವಿ. ಸೀರಿಯಲ್ ಒಂದನ್ನು ನಿರ್ಮಿಸುವುದು ಈ ಸಿನೇಮಾದ ಕಥಾ ವಸ್ತುವಾಗಿದೆ. ಗಾಂಧಿ ಬಗ್ಗೆ ಏನೇನೂ ಆಸಕ್ತಿಯಿಲ್ಲದ, ಕಚೇರಿಯೊಂದರಲ್ಲಿ ಕ್ಲರ್ಕ್ ಆಗಿ ಸೇವೆ ಸಲ್ಲಿಸುತ್ತಿರುವವನನ್ನು ಗಾಂಧಿ ಪಾತ್ರ ನಿರ್ವಹಿಸಲು ಆಯ್ಕೆ ಮಾಡುತ್ತಾರೆ. ಆದರೆ ಅವನು ತಾನು ಆ ಪಾತ್ರದಲ್ಲಿ ನಟಿಸಲು ಒಲ್ಲೆ ಎನ್ನುತ್ತಾನೆ. ಹಣದ ಆಸೆಯ ಮಗ-ಸೊಸೆಯರ ಒತ್ತಾಯಕ್ಕಾಗಿ ಕೊನೆಗೆ ಆ ಪಾತ್ರವನ್ನು ಮಾಡಲು ಒಪ್ಪುತ್ತಾನೆ. ಸೀರಿಯಲ್ ಆರಂಭವಾಗುತ್ತದೆ; ಆ ಕ್ಲರ್ಕ್ ಪ್ರಸಿದ್ಧನಾಗುತ್ತಾನೆ. ಗಾಂಧಿ ಪಾತ್ರದ ಸಾತ್ವಿಕತೆಯು ಅವನ ವ್ಯಕ್ತಿತ್ವದಲ್ಲಿ ಸಾತ್ವಿಕತೆಯ ಬದಲಾವಣೆಗಳನ್ನು ತರುತ್ತದೆ. ಕಚೇರಿಯಲ್ಲಿನ ಅವನ ನಡವಳಿಕೆಯು ಉಳಿದವರಿಗೆ ವಿಕ್ಷಿಪ್ತವಾಗಿ ತೋರತೊಡಗುತ್ತದೆ. ಸಿನೇಮಾದ ಇದುವರೆಗಿನ ಈ ವಸ್ತುವು ಅದ್ಭುತವಾಗಿದ್ದು ಅದನ್ನೇ ಇನ್ನಷ್ಟು ಸೂಕ್ಷ್ಮವಾಗಿ ವಿಸ್ತರಿಸಿದ್ದರೆ ಚಂದವಿದ್ದಿತು. ಆದರೆ, ಇದು ನವ್ಯ(ಆಧುನಿಕ) ಕಲಾತ್ಮಕ ಚಲನಚಿತ್ರವಲ್ಲವೆ? ಇದರಲ್ಲಿ ಸಂಘರ್ಷವು ವಿಜೃಂಭಿಸದಿದ್ದರೆ ಉಚಿತವಾದೀತೇ! ಸಾಧ್ಯವಿಲ್ಲ! ಅದಕ್ಕೇ ಸಂಘರ್ಷ ಹುಟ್ಟಿಕೊಳ್ಳುತ್ತದೆ. ಇಂದಿನ ಕಾಲದ ಸಂಘರ್ಷದ ಅತ್ಯಂತ ಯಶಸ್ವೀ ಸ್ವರೂಪವೆಂದರೆ, ಹಿಂದೂ-ಮುಸ್ಲಿಂ ಕೋಮುಗಲಭೆ! ಸರಿ. ಚಲನಚಿತ್ರದಲ್ಲಿ ಅಂಥ ಸಂಘರ್ಷ ಏರ್ಪಟ್ಟು ಬಿಡುತ್ತದೆ... ಆ ಟೀವಿ ಸೀರಿಯಲ್ಲಿನಲ್ಲಿ ಗಾಂಧಿಯನ್ನು ಕೊಲ್ಲುವ ಗೋಡಸೆಯ ಪಾತ್ರ ಬರುತ್ತದಲ್ಲ, ಸೀರಿಯಲ್ಲಿನ ನಿರ್ದೇಶಕನು ಆ ಪಾತ್ರಕ್ಕೆ ಒಬ್ಬ ಮುಸ್ಲಿಂ ನಟನನ್ನು ಆಯ್ಕೆ ಮಾಡುತ್ತಾನೆ. ತಕ್ಕೋ! ಬಂದೇ ಬಿಡುತ್ತದೆ ಸಂಘರ್ಷ! ಆ ಜನಪ್ರಿಯ ಸೀರಿಯಲ್ಲಿನಲ್ಲಿ ಗೋಡಸೆ ಪಾತ್ರ ನಿರ್ವಹಣೆಗೆ ಮುಸ್ಲಿಮನನ್ನು ಆಯ್ಕೆ ಮಾಡಿದ್ದಕ್ಕಾಗಿ ಹಿಂದೂ ಸಂಘಟನೆಗಳು ಪ್ರತಿಭಟನೆಯನ್ನು ಆರಂಭಿಸುತ್ತವೆ, ಕೋಮುಗಲಭೆ ಭುಗಿಲೇಳುತ್ತದೆ... ಸಮಾಜದಲ್ಲಿ ಅಲ್ಲೋಲಕಲ್ಲೋಲಗಳುಂಟಾಗುತ್ತವೆ! ನನ್ನ ಪ್ರಶ್ನೆ ಇದು : `ಕೂರ್ಮಾವತಾರ’ದಲ್ಲಿನ ಇಂತಹ ಉಲ್ಲೇಖದವರೆಗೂ, ಭಾರತೀಯ ಸಮಾಜದಲ್ಲಿನ ಕಲಾಪ್ರಪಂಚಕ್ಕೆ ಇಂತಹ ಕೋಮುಸ್ವಭಾವ ಇರಲಿಲ್ಲ. ಅಷ್ಟೇ ಅಲ್ಲ, ನಮ್ಮ ಹಿಂದಿ ಚಲನಚಿತ್ರಗಳಲ್ಲಿ ಕೃಷ್ಣನನ್ನು ಕುರಿತ ಅತ್ಯುತ್ತಮ ಗೀತೆಗಳನ್ನು ಬರೆದವರು ಅನೇಕ ಮುಸ್ಲಿಮ್ ಗೀತಕಾರರು ಮತ್ತು ಅನೇಕ ಮುಸ್ಲಿಮ್ ಸಂಗೀತಕಾರರು ಅವುಗಳನ್ನು ಅತ್ಯಂತ ಸುಂದರವಾಗಿ ಸಂಗೀತಕ್ಕೆ ಅಳವಡಿಸಿದ್ದಾರೆ. ಅವರ ಅಂತಹ ಹಾಡುಗಳಿಗೆ ಅನೇಕ ಮುಸ್ಲಿಂ ನಟವರರು ನಟಿಸಿದ್ದಾರೆ. ಆನಸಮುದಾಯವೆಲ್ಲ ಆ ಸಿನೇಮಾಗಳನ್ನು ನೋಡಿ ಸಂತೋಷಪಟ್ಟಿದೆ. ಹಾಗೆಯೇ, ಉತ್ತರ ಕರ್ನಾಟಕದ, ಜಮಖಂಡಿಯ ಅಪ್ಪಾಲಾಲ್ ನದಾಫನ `ಶ್ರೀ ಕೃಷ್ಣ ಪಾರಿಜಾತ’ವು ಅತ್ಯಂತ ಪ್ರಸಿದ್ಧವಾದದ್ದು. ಅದರಲ್ಲಿ ಕೃಷ್ಣನ ಪಾತ್ರವನ್ನು ನಿರ್ವಹಿಸುವವನು ಈ ಅಪ್ಪಾಲಾಲನೇ. ಅವನ ಕೃಷ್ಣನ ಪಾತ್ರವು ಅತ್ಯಂತ ಪ್ರಸಿದ್ಧವೂ, ಜನಪ್ರಿಯವಾದದ್ದೂ ಆಗಿದ್ದಿತು. ಇನ್ನು ಹಿಂದೂಸ್ತಾನಿ ಸಂಗೀತ ಕ್ಷೇತ್ರದಲ್ಲಿಯಂತೂ ಅನೇಕ ಮುಸ್ಲಿಂ ಗವಯಿಗಳು ಅನೇಕ ಹಿಂದೂ ಗವಯಿಗಳ ಉಸ್ತಾದರು! ಈ ಹಿಂದೂ ಶಿಷ್ಯರು ತಮ್ಮ ಮುಸ್ಲಿಂ ಉಸ್ತಾದರ ಪಾದಗಳನ್ನು ಮುಟ್ಟಿ ನಮಸ್ಕರಿಸುತ್ತಿದ್ದರು; ನಮಸ್ಕರಿಸುತ್ತಾರೆ. ಈ ಸಂಗೀತಗಾರರಲ್ಲಿ ಜಾತಿ-ಧರ್ಮಗಳ ಯಾವ ತಾರತಮ್ಯವೂ ಇಲ್ಲ. ಅಪರೋಕ್ಷದಲ್ಲಿಯೂ ಈ ಗವಯಿಗಳು ತಮ್ಮ ಮನಸ್ಸಿನಲ್ಲಿ ತಮ್ಮ ಗುರುಗಳನ್ನು ಮನದಲ್ಲಿ ನೆನೆದು ತಮ್ಮ ಕಚೇರಿಗಳನ್ನು ಆರಂಭಿಸುತ್ತಿದ್ದರು. ಇಂದಿನ ಶ್ರೀ ಫಯಾಜ್ ಖಾನರ ದಾಸರ ಕೀರ್ತನೆಗಳ ಹಾಡುಗಾರಿಕೆಯ ಸಂಮೋಹಿನಿಗೆ ಒಳಗಾಗದವರು ಯಾರೂ ಇಲ್ಲ. ಹೀಗೆ ಭಾರತೀಯ ಕಲಾಲೋಕದಲ್ಲಿ ಇಂತಹ ಸಹಿಷ್ಣುತೆಯ ತಂಗಾಳಿ ಬೀಸುತ್ತಿರುತ್ತಿದ್ದರೆ, ಕೂರ್ಮಾವತಾರದಲ್ಲಿ ಬಂದ ಈ ಸಂಘರ್ಷದ ಪ್ರಸ್ತುತತೆ ಏನು? ಇಂಥ ಸಂಘರ್ಷದ ಸೂಚನೆಯು ಭಾರತೀಯ ಸಮಾಜದಲ್ಲಿ ಇದುವರೆಗೆ ಇಲ್ಲದಿರುವ ಹೊಸಸ್ವರೂಪದ ಸಾಮಾಜಿಕ ಸಂಘರ್ಷದ ಬೀಜವನ್ನು ಊರಲಾರದೇ?
ಆಲ್ಫ್ರೆಡ್ ರುಪರ್ಟ್ ಶೆಲ್ಡ್ರೇಕ್‍ನ `ಎ ನ್ಯೂ ಸೈನ್ಸ್ ಆಫ್ ಲೈಫ್ : ಮಾರ್ಫಿಕ್ ರಿಸಾನನ್ಸ್’ ಎಂಬ ವೈಜ್ಞಾನಿಕ ಗ್ರಂಥದಲ್ಲಿ ಪ್ರಸ್ತಾಪವಾದ ಪ್ರಯೋಗವೊಂದು ಮಂಡಿಸುವ ತಾತ್ವಿಕತೆಯೊಂದು ನೆನಪಿಗೆ ಬರುತ್ತದೆ. ಶೆಲ್ಡ್ರೇಕ್ ಹೇಳಿದ ಆ ಪ್ರಯೋಗ ಹೀಗಿದೆ : ಭೂಮಿಯ ಯಾವುದೋ ಒಂದು ಪಟ್ಟಣದದಲ್ಲಿನ ಒಂದು ಪ್ರಯೋಗಶಾಲೆಯಲ್ಲಿ, ಸಂಕೀರ್ಣ ಅಣುರಚನೆ ಹೊಂದಿರುವ ಒಂದು ಹೊಚ್ಚ ಹೊಸದಾದ ರಾಸಾಯನಿಕ ಸಂಯುಕ್ತವೊಂದನ್ನು ಕೃತ್ರಿಮವಾಗಿ ಸಂಶ್ಲೇಷಿಸಿ ಅದನ್ನು ಸ್ಫಟಿಕೀಕರಣಗೊಳ್ಳಲು ಬಿಡಲಾಯಿತು. ಆ ರಾಸಾಯನಿಕ ವಸ್ತುವು ಬಹು ದೀರ್ಘ ಸಮಯ ತೆಗೆದುಕೊಂಡು, ನಿಧಾನವಾಗಿ ಸ್ಫಟಿಕದ ಸ್ವರೂಪ ಪಡೆಯಿತು. ನಂತರದ ವರ್ಷಗಳಲ್ಲಿ ಅದೇ ರಾಸಾಯನಿಕ ವಸ್ತುವನ್ನು, ಅದೇ ರೀತಿಯ ಕೃತ್ರಿಮ ವಿಧಾನದಿಂದ, ಜಗತ್ತಿನ ಬೇರೆ ಬೇರೆ ಪ್ರಯೋಗಶಾಲೆಗಳಲ್ಲಿ ಸಂಶ್ಲೇಷಿಸಿ, ಸ್ಫಟಿಕೀಕರಣಕ್ಕೆ ಬಿಡಲಾಯಿತು. ಆಗ ಆ ಸಂಯುಕ್ತ ವಸ್ತುವು ಕ್ರಮಕ್ರಮೇಣವಾಗಿ ತನ್ನ ಸ್ಫಟಿಕೀಕರಣದ ಅವಧಿಯನ್ನು ಕಡಿಮೆಗೊಳಿಸಿಕೊಳ್ಳುತ್ತ, ಕೊನೆಗೆ ಅದು ಒಂದು ನಿರ್ದಿಷ್ಟ ಕನಿಷ್ಟ ಸಮಯಾವಕಾಶವನ್ನು ತೆಗೆದುಕೊಂಡು ಸ್ಫಟಿಕವಾಗತೊಡಗಿತು. ಶೆಲ್ಡ್ರೇಕ್ ಇದನ್ನು ಹೀಗೆ ವಿವರಿಸುತ್ತಾನೆ – ಪ್ರತಿಯೊಂದು ಭೌತ ಮತ್ತು ಮಾನಸಿಕ ಸ್ವರೂಪಕ್ಕೆ ಸಂಬಂಧಪಟ್ಟಂತೆ ವಾತಾವರಣದಲ್ಲಿ `ಸ್ವರೂಪದ ನೆನಪಿನ ಅಲೆಗಳು’ (ಮಾರ್ಫಿಕ್ ರಿಸಾನನ್ಸ್) ಇರುತ್ತವೆ. ಆ ಅಲೆಗಳು ಆ ವಸ್ತುವು ತನ್ನ ಅಂತಿಮ ಸ್ವರೂಪ ಪಡೆದುಕೊಳ್ಳುವಂತೆ ಮಾಡುತ್ತವೆ. ಶೆಲ್ಡ್ರೇಕ್ ಹೇಳುವ ಹೊಚ್ಚಹೊಸದಾಗಿ ಸಂಶ್ಲೇಷಣೆಗೊಂಡ ಸಂಯುಕ್ತವಸ್ತುವಿನ ಸ್ಫಟಿಕದ ಸ್ವರೂಪಕ್ಕೆ ಸಂಬಂಧಪಟ್ಟಂತೆ ವಾತಾವರಣದಲ್ಲಿ `ಸ್ವರೂಪದ ನೆನಪಿನ ಅಲೆಗಳು’ ಇರಲಿಲ್ಲ. ಹೀಗಾಗಿ ಅದು ಸ್ಫಟಿಕೀಕರಣಗೊಳ್ಳಲು ಬಲುದೀರ್ಘ ಅವಧಿಯನ್ನು ತೆಗೆದುಕೊಂಡಿತು. ಆದರೆ ಅದು ಒಮ್ಮೆ ಸ್ಫಟಿಕೀಕರಣಗೊಳ್ಳುತ್ತಲೇ ಅದಕ್ಕೆ ಸಂಬಂಧಪಟ್ಟ `ಸ್ವರೂಪದ ಅಲೆಗಳು’ ಸೃಷ್ಟಿಗೊಂಡು ವಾತಾವರಣದಲ್ಲಿ ಉಳಿಯುತ್ತವೆ. ಮುಂದೆ ಪ್ರತಿಸಲ ಆ ವಸ್ತುವು ಸ್ಫಟಿಕೀಕರಣಗೊಂಡಾಗಲೂ `ಸ್ವರೂಪದ ನೆನಪಿನ ಅಲೆಗಳು’ ಪ್ರಬಲಗೊಳ್ಳುತ್ತ ಹೋಗುತ್ತವೆ. ಇದರಿಂದ ಆ ವಸ್ತುವಿನ ಸ್ಫಟಿಕೀಕರಣ ಕ್ರಿಯೆಯ ಸಮಯಾವಕಾಶವು ಕಡಿಮೆಗೊಳ್ಳುತ್ತ ಹೋಗಿ ಕೊನೆಗೆ ಅದು ಕನಿಷ್ಟತಮವೊಂದರಂತೆ ನಿರ್ದಿಷ್ಟಗೊಳ್ಳುತ್ತದೆ. ಕಾಸರವಳ್ಳಿಯವರು ತಮ್ಮ `ಕೂರ್ಮಾವತಾರ’ ಚಲನಚಿತ್ರದಮೂಲಕ, ಸಮಾಜದಲ್ಲಿ ಇದುವರೆಗೆ ಇಲ್ಲದಿದ್ದ, ಅಥವಾ ಅತ್ಯಂತ ದುರ್ಬಲವಾಗಿದ್ದ `ಕಲಾ ಪ್ರಪಂಚದಲ್ಲಿನ ಕೋಮುಸಂಘರ್ಷ’ದ `ಸ್ವರೂಪದ ನೆನಪಿನ ಅಲೆ’ಗಳನ್ನು ಉದ್ದೀಪಿಸುವಂತಹ ಕೆಲಸ ಮಾಡಿದಂತಾಗುತ್ತದೆ. ಅವರ ಈ ಕೆಲಸದ ಹಿನ್ನೆಲೆಯಲ್ಲಿ ಇರುವುದು ರೋಚಕತೆ ಮತ್ತು ಸಂಘರ್ಷಗಳ ಬಗೆಗಿನ ಆಕರ್ಷಣೆ; ಆಧುನಿಕ ಕಾಲಕ್ಕೆ ಸಲ್ಲುವ ಸ್ವರೂಪವನ್ನು ಗಳಿಸುವ ತುಡಿತ! ಆ ಚಲನಚಿತ್ರವು ಸೃಷ್ಟಿಸಿದ ಮಾರ್ಫಿಕ್ ರಿಸಾನನ್ಸ್‍ಗಳು, ಇವತ್ತು ದುರ್ಗದ ಮದಕರಿನಾಯಕ ಚಲನಚಿತ್ರದಲ್ಲಿ ನಾಯಕ ಪಾತ್ರವನ್ನು ಸುದೀಪ ಎಂಬ ನಟನು ಮಾತ್ರ ನಟಿಸಬೇಕು, ಬೇರೆ ಜಾತಿಯ ನಟನು ಆ ಪಾತ್ರದಲ್ಲಿ ನಟಿಸಕೂಡದು ಎಂದು ಮಠಾಧೀಶರೊಬ್ಬರು ಹೇಳುತ್ತಿರುವುದಕ್ಕೆ, ಕಾರಣ ಅಲ್ಲ ಎಂದು ಹೇಳಬಹುದೆ? ನನಗೆ ಗೊತ್ತಿಲ್ಲ! ಅದಿರಲಿ. ಅಂತೂ, ಆಧುನಿಕತೆ ಮತ್ತು ಅದರ ಮಾರುಕಟ್ಟೆಯ ತತ್ವಜ್ಞಾನವು ರೋಚಕತೆ ಮತ್ತು ಸಂಘರ್ಷ ಎಂತೆಂಬ ಎರಡು ಮಹಾನ್ ಪ್ರೇರಣೆಗಳನ್ನು ಸೃಷ್ಟಿಸಿ ನಮಗೆ ಕೊಟ್ಟಿವೆ. ಈ ಎರಡು ಪ್ರೇರಣೆಗಳು ನಮ್ಮ ಹೊಸ ಬರಹಗಾರರಿಗೆ ಸವಾಲುಗಳನ್ನು ಒಡ್ಡುತ್ತಿದ್ದು, ಅವರು ಇವುಗಳನ್ನು ನಿವಾರಿಸಿಕೊಂಡು, ವಸ್ತು ವಿಚಾರಗಳ ಆಳಕ್ಕಿಳಿದು ಹೊಸ ತಾತ್ವಿಕತೆಗಳನ್ನು ಶೋಧಿಸಿಕೊಳ್ಳಲು ತೊಡಗಿದ್ದಾರೆ. ಹರ್ಬರ್ಟ್ ರೀಡ್ ಕಲಾವಿದನೊಬ್ಬ ವಸ್ತು-ವಿಚಾರಗಳನ್ನು ಕುರಿತಂತೆ ತಾಳಬೇಕಾದ ನಿಸ್ಪøಹತೆಪೂರಿತವಾದ ಆಳ ಅನುಸಂಧಾನದ ಅವಶ್ಯಕತೆಯನ್ನು ಹೇಳುತ್ತಾನೆ. ಅವನ ಮಾತುಗಳು ಇಂತಿವೆ : `ಅತ್ಯುನ್ನತವಾದ ಕಲ್ಪಕತೆಯ ಸಾಮಥ್ರ್ಯವು ತನ್ನ ವಸ್ತುಗಳನ್ನು ಗ್ರಹಿಸುವ ಕ್ರಮದಲ್ಲಿರುತ್ತದೆ. ಅದು ಹೀಗಿದೆ: ಅದು ಹೊರಪದರಿನಲ್ಲಿ - ಬೂದಿಯಲ್ಲಿ – ಇಲ್ಲವೆ ಬಾಹ್ಯದ ಪ್ರತಿಮೆಗಳಲ್ಲಿ ನಿಲ್ಲುವುದಿಲ್ಲ; ಇವೆಲ್ಲವನ್ನೂ ಸೀಳಿಕೊಂಡು ಅದು ಉರಿಯುತ್ತಿರುವ ಹೃದಯದ ಕೇಂದ್ರಕ್ಕೇ ಧುಮುಕುತ್ತದೆ; ಇನ್ನಾವುದೂ ಅದರ ಆಧ್ಯಾತ್ಮಿಕತೆಯನ್ನು ತಣಿಸದು; ಅದರ `ವಸ್ತು’ ಯಾವದೇ ತೋರಿಕೆ ಅಥವಾ ಬಿನ್ನಾಣದ ನಟನಾವಳಿಗಳ ಮಜಲುಗಳನ್ನು ಹೊಂದಿದ್ದರೂ ಪ್ರಯೋಜನವಾಗದು; ಅದು ತನ್ನ ಸೀಮೆಯೊಳಗೇ ನಿಂತು, ಬೇರುಗಳನ್ನು ತೂರಿ ತೂರಿ ತಾನು ನಿರ್ವಹಿಸುವ ವಸ್ತುವಿನ ಸಾರವನ್ನೇ ಹೀರುತ್ತದೆ; ಅದು ಒಮ್ಮೆ ಭೇದಿಸಿ ಒಳಹೊಕ್ಕರೆ ಸಾಕು, ಹೊಸ ರೆಂಬೆ ಕೊಂಬೆಗಳನ್ನು ಹೊಮ್ಮಿಸುತ್ತದೆ – ತನಗೆ ಬೇಕಾದಂತೆ ಅದು ಅವುಗಳನ್ನು ಸಮರುತ್ತ ಬಾಗಿಸುತ್ತ ಈ ಹಿಂದಿನ ಗಿಡದಲ್ಲಿ ಬೆಳೆದದ್ದಕಿಂತ ಸೊಗಸಾದ ಹಣ್ಣನ್ನು ತರುತ್ತದೆ – ಆದರೆ ಹೀಗೆ ತನಗೆ ಬೇಕಾದಂತೆ ಸಮರುವ, ಬಾಗಿಸುವ ಕೆಲಸವನ್ನು ಅದು ಇಷ್ಟಪಡುವುದಿಲ್ಲ – ಎಷ್ಟೋ ಸಲ ಹೀಗೆ ಮಾಡುವಲ್ಲಿ ಅದು ನಷ್ಟವನ್ನುಂಟುಮಾಡುತ್ತದೆ; ಅದರ ಕಾರ್ಯ ಮತ್ತು ಕೊಡುಗೆ ಮೂಲಕ್ಕೆ ಬೇರನ್ನಿಳಿಸುವುದು; ಅದರ ಸ್ವಭಾವ ಮತ್ತು ಘನತೆ ಹೃದಯದಿಂದ ವಸ್ತುಗಳನ್ನು ವಶಮಾಡಿಕೊಳ್ಳುವುದರ ಮೇಲೆ ಅವಲಂಬಿತ... ಹೃದಯ ಬಡಿತದಿಂದ ಅದರ ಕೈ ದೂರಸರಿದರೆ ಅದು ಪ್ರವಾದಿಯಾಗದು; ಅದು ಕಣ್ಣೊಳಗೆ ನೋಡುವುದಿಲ್ಲ-ಧ್ವನಿಯಿಂದ ನಿರ್ಣಯಿಸುವುದಿಲ್ಲ-ಬಾಹ್ಯ ಲಕ್ಷಣಗಳಿಂದ ವರ್ಣಿಸುವುದಿಲ್ಲ; ಅದು ದೃಢಗೊಳಿಸಲಿ, ನಿರ್ಣಯಿಸಲಿ ಅಥವಾ ವರ್ಣಿಸಲಿ - ಅದೆಲ್ಲ ಒಳಗಿನಿಂದಲೇ ಸ್ಥಿರೀಕರಣಗೊಳ್ಳುತ್ತದೆ...’. ಅನೇಕ ಶಕ್ತ ಹೊಸ ಲೇಖಕರು ಈ ದಿಕ್ಕಿನಲ್ಲಿ ಸಾಗುತ್ತ `ಹೊಸ ಹಣ್ಣು’ಗಳನ್ನು ನೀಡುತ್ತಿದ್ದಾರೆ. ಇದಕ್ಕೆ ಒಂದು ಸರಳ ಕವಿತೆಯ ಉದಾಹರಣೆಯನ್ನು ನೀಡುತ್ತೇನೆ :
ಗಿಡುಗವಾಗಬಹುದು
ಪಿಕಳಾರ ಹಕ್ಕಿಯೊಂದು
ತಲೆಯ ಜುಟ್ಟಿನ ಮೇಲಷ್ಟು ಚಿಂತೆ, ನೋವುಗಳ ಹೊತ್ತುಕೊಂಡು
ಅಳುತ್ತಾ ದೇವರನ್ನು ಕರೆಯುತ್ತಾ..

ಹೌದಲ್ಲವಾ...?
ಇಂಥ ಯಾವ ಪುಟ್ಟ ಹಕ್ಕಿಗಾದರೂ
ಗಾತ್ರಕ್ಕೆ ತಕ್ಕಷ್ಟೇ ಕೊಕ್ಕು, ಕಾಲುಗುರುಗಳು
ಮತ್ತವು ತಮ್ಮ ಸಾಮಥ್ರ್ಯಕ್ಕೆ ತಕ್ಕಷ್ಟೇ ಇರುವ
ಶತ್ರುಗಳನು ಜಯಿಸಬಲ್ಲುದು

ಅಲ್ಲದೆ ಇಂಥ ಪಿಕಳಾರ ಹಕ್ಕಿಯೊಂದು
ಅಪರಾತ್ರಿಯ ಕಾಳ್ಗತ್ತಲಲಿ ಗೂಡ ಹೊಕ್ಕು
ಹಕ್ಕಿ ಕುಕ್ಕಿದರೂ ಕಿರುಚಿ ಪರಚಿದರೂ
ನುಗ್ಗಿ ಮೊಟ್ಟೆ, ಮರಿಗಳ
ನುಂಗುವ ಕಾಳಸರ್ಪವನ್ನಾಗಲೀ
ಹಾಡು ಹಗಲಲ್ಲೇ ರೊಯ್ಯನೆ
ಎರಗಿ ಹೊತ್ತೊಯ್ಯುವ ಗಿಡುಗವನ್ನಾಗಲೀ
ಎದುರುಹಾಕಿಕೊಂಡು ಸೆಣಸಿ ಮಣಿಸಿದ
ಉದಾಹರಣೆಯಾದರೂ ಇಲ್ಲ.

`ಹಾವು ಬಂದರೆ ಹಾರಿಯೇನು
ಗಿಡುಗ ಬಂದರೆ ಪೊದೆಗಳಲಿ ಅಡಗಿಯೇನು
ನನ್ನ ಮೊಟ್ಟೆ ಮರಿಗಳನು ಏನುಮಾಡಲಿ
ದೇವರೇ ಬಾ ಉತ್ತರಿಸು’

ಪಿಕಳಾರದ ಮೊರೆಗೆ
ಅಂತೂ ದೇವರೊಲಿದು ಬಂದ
ದೇವರೆಂದರೆ ಸರ್ವಾಂಗ ಸುಂದರನೆಂದು
ಕೇಳಿ ಬಲ್ಲ ನನಗೆ ಇವನ್ಯಾಕೋ
ಪಕ್ಕಾ ವ್ಯಾಪಾರಕ್ಕೆ ಕುಳಿತ
ಮಾರ್ವಾಡಿಯ ಹಾಗೆಯೇ ಕಂಡ

`ಎಲವೋ ಪಿಕಳಾರ ಹಕ್ಕಿಯೇ
ನಿನಗೆ ಆತಂಕಗಳ ಜೊತೆ
ಬದುಕಲಾಗದು ಅಂದರೆ
ಬೇಕಾದರೆ ನೀನು ಗಿಡುಗವಾಗಬಹುದು’

ನನ್ನ ಹಾಗೆಯೇ ಬುದ್ಧಿಗೇಡಿಯಿರಬೇಕು
`ನೋ ನೋ ನೆವರ್!’
ದೇವರ ಮಾತು ಕೇಳಿದ್ದೇ
ಚಿಟ್ಟನೆ ಚೀರಿತು ಪಿಕಳಾರ ಹಕ್ಕಿ
`ಇನ್ನೆಂದಾದರೂ ನೊಂದು ನನ್ನ ಬಳಿ
ಬರುವಾಗ ನನ್ನ ಈ ಮಾತು ನೆನಪಿಸಿಕೋ’
ಎಂದು ಹಾರಿದ ದೇವರು

ಹೌದು, ಇಲ್ಲಿ
ಆತಂಕಗಳ ಹೊತ್ತು ಬದುಕುವ
ಪುಟ್ಟ ಹಕ್ಕಿಯಾಗಲಾಗದಿರೆ
ದೊಡ್ಡ ಗಿಡುಗವಾಗಬಹುದು
-    ಕಾದಂಬಿನಿ ರಾವಿ, ``ಹಲಗೆ ಮತ್ತು ಮೆದುಬೆರಳು’’ ಸಂಕಲನ; ಪುಟ:152-153.
ಲೋಹಿಯಾರವರ `ಇತಿಹಾಸಚಕ್ರ’ದ ವೈಚಾರಿಕತೆ ಮತ್ತು ಕನ್ನಡ ಬಂಡಾಯ ಕಾವ್ಯ ಪರಂಪರೆಗಳ ವೈಚಾರಿಕತೆಗಳನ್ನು ಬೆನ್ನಿಗೆ ಕಟ್ಟಿಕೊಂಡು ಶೋಷಣೆಯೆಂಬ ವಸ್ತುವಿನ ಎಲ್ಲ ಬಾಹ್ಯಗಳನ್ನೂ `ಸೀಳಿಕೊಂಡು, ಉರಿಯುತ್ತಿರುವ ಹೃದಯದ ಕೇಂದ್ರಕ್ಕೇ ಧುಮುಕುತ್ತದೆ’ ಈ ಕವಿತೆ. ಇದು ಬರೀ ಬಡ ಪಿಕಳಾರ ಹಕ್ಕಿಯ ನೋವಿನ ಕಥೆಯನ್ನು ಹೇಳುವ ಕವಿತೆ ಮಾತ್ರವಲ್ಲ; ಇದು ಇಡೀ ವ್ಯವಸ್ಥೆಯ ಹದದ ಬಗೆಗಿನ ತಾತ್ವಿಕ ಪ್ರಶ್ನೆಯನ್ನು ಎತ್ತುತ್ತದೆ. ಪಿಕಳಾರ-ಗಿಡುಗದ ದ್ವಂದ್ವಮಾನವನ್ನು ಮೀರುವ, ಸೌಹಾರ್ದದ ಅಂತಿಮ ಸ್ವರೂಪವನ್ನು ಕುರಿತು ಚಿಂತಿಸುತ್ತದೆ. ಪಿಕಳಾರ-ಗಿಡುಗಗಳ ಸಂಬಂಧದಲ್ಲಿ ಕವಿ ಬಯಸುವ ಸೌಹಾರ್ದದ ಸ್ವರೂಪ ಸಾಧ್ಯವಾಗಲಿಕ್ಕಿಲ್ಲವೇನೋ! ಆದರೆ ಮನುಷ್ಯ ಸಂಬಂಧಗಳಲ್ಲಿ ಇದು ಸಾಧನೀಯವಾದದ್ದು ಅಲ್ಲವೆ? ಮನುಷ್ಯ ಮನುಷ್ಯರ ನಡುವಿನ ಸಂಬಂಧಕ್ಕೆ ಪಿಕಳಾರ-ಗಿಡುಗಗಳ ದ್ವಂದ್ವಮಾನಕ್ಕೆ ಹೊರತಾದ ಬೇರೊಂದು ಸಾಧ್ಯತೆಯು ಲಭ್ಯವಾಗದಂತಹದೇನೂ ಅಲ್ಲ. ಜೀವಜಗತ್ತಿನಲ್ಲಿ ಜೀವಿಗಳ ನಡುವಿನ ಸಂಬಂಧಗಳ ಮ್ಯುಚುವಾಲಿಸ್ಮ್ ಅಥವಾ ಸಿಂಬಯಾಸಿಸ್ ರೀತಿಯ ಸಂಬಂಧಗಳು ಸಮಾಜವನ್ನು ಕಟ್ಟಿಕೊಳ್ಳಲು ಒದಗಿದ ಪ್ರಧಾನ ಪ್ರೇರಣೆಗಳು. ಈ ಸಂಬಂಧಗಳಲ್ಲಿ ಪರಸ್ಪರ ಅವಲಂಬನೆಯ, ಮತ್ತು ಈ ಅವಲಂಬನೆಯಲ್ಲಿ ಎರಡಕ್ಕೂ ಅನುಕೂಲವಾಗುವಂತಹ ಸಂಬಂಧ ಏರ್ಪಡುತ್ತದೆ. ಅಂತಹ ಸುವರ್ಣಮಾಧ್ಯಮವನ್ನು ಹುಡುಕಿಕೊಳ್ಳಬೇಕೆನ್ನುವ ಆಶಯವನ್ನು ಕವಿತೆ ಸಮರ್ಥವಾಗಿ ಮಂಡಿಸುತ್ತದೆ.
ರೋಚಕತೆ ಮತ್ತು ಸಂಘರ್ಷಗಳನ್ನು ಮೀರುವ ಇನ್ನೊಂದು ವಿಧಾನವನ್ನು ಅನೇಕ ಹೊಸ ಲೇಖಕರು ಪ್ರಯೋಗಿಸುತ್ತಿರುವುದನ್ನು ಕಾಣುತ್ತೇವೆ. ಈ ವಿಧಾನ ಯಾವುದೆಂದರೆ, ರೋಚಕತೆಯನ್ನು ರೋಚಕತೆಯಿಂದಲೇ ಮಾಗಿಸುವುದು; ರೋಚಕತೆಯ ಕೊನೆತುದಿಯಾಗಿ ಉದ್ರೇಕವನ್ನು ಹುಟ್ಟಿಸದೆ, ಅದರ ಬದಲಾಗಿ ಆಳ ವಿಷಾದವನ್ನು ಉದ್ದೀಪಿಸುವುದು. ಹೀಗೆ, ಆಧುನಿಕ ಮಾರುಕಟ್ಟೆ ಉತ್ಪಾದಿಸಿಕೊಂಡ ರೋಚಕತೆಯ ಸಾಮಾನ್ಯ ಉದ್ದೇಶವನ್ನು ಉದ್ವಸ್ತಗೊಳಿಸುವ ಮೂಲಕ ಈ ವಿಧಾನವು ವಸ್ತುವಿನ ಆಳದ ಹೃದಯಕ್ಕೆ ಧುಮ್ಮಿಕ್ಕುವ ಮಾರ್ಗವನ್ನು ಶೋಧಿಸಿಕೊಳ್ಳುತ್ತದೆ. ಟಿ.ಎಸ್.ಗೊರವರ ಅವರ `ರೊಟ್ಟಿ ಮುಟಗಿ’ ಕಾದಂಬರಿಯನ್ನು ನೋಡಿರಿ. ಇಲ್ಲಿ ಬರುವ ದ್ಯಾಮನ ಸಂಘರ್ಷರಹಿತ ಅವಸ್ಥಾಂತರಗಳ ಕೊನೆಗೆ, ಅವನು ಇದ್ದಲಿಭಟ್ಟಿಯ ಬೆಂಕಿಯೊಳಕ್ಕೆ ಸೇರಿಹೋಗಿಬಿಡುತ್ತಾನೆ! ಆಗ ಓದುಗ ಒಂದು ಅಗಾಧವಾದ ಧಕ್ಕೆಗೆ ಒಳಗಾಗುತ್ತಾನೆ. ಇದು ನಿಜವೇ? ಇದು ಭ್ರಮೆಯೇ? ಊಹೂಂ...! ಯಾವುದನ್ನೂ ಕಾದಂಬರಿ ಪುಷ್ಟೀಕರಿಸುವುದಿಲ್ಲ. ನೀವು ನಿಜ ಎಂದುಕೊಂಡರೆ ನಿಜ; ಆಗ ಇದು ದ್ಯಾಮನ ಜೀವನದ ಅವಸ್ಥಾಂತರಗಳು ಪಡೆಯುವ ನಿರರ್ಥಕತೆಯ ವಿನ್ಯಾಸವನ್ನು, ಅಥವಾ, ಸಮಷ್ಠಿಯ ಬದುಕಿನ ವಿಧಾನಗಳಿಂದ ದ್ಯಾಮನು ನಿಧಾನವಾಗಿ ಬಿಡಿಸಿಕೊಳ್ಳುತ್ತ ವ್ಯಷ್ಟಿ ಪ್ರಜ್ಞೆಗೆ ತನ್ನನ್ನು ಕೊಟ್ಟುಕೊಳ್ಳುವುದನ್ನು ನಿಮಗೆ ಮನಗಾಣಿಸುತ್ತದೆ. ಇನ್ನು ನೀವು ಇದನ್ನು ಭ್ರಮೆ ಎಂದುಕೊಂಡರೆ; ಸರಿ ಇದು ಭ್ರಮೆಯೆ! ಆಗ ಅದು ದ್ಯಾಮನ ಮಾನಸಿಕ ತುಮುಲಗಳನ್ನು, ಕಳೆದುಹೋದ ತಾಯಿಯಪ್ರೀತಿಯ ಹಂಬಲವನ್ನು, ಬದುಕನ್ನು ಕುರಿತು ದ್ಯಾಮನ ಮಾನಸಿಕ ಅತೃಪ್ತಿಯನ್ನು... ಮುಂತಾದವುಗಳನ್ನು ನಿಮ್ಮ ಮನಸಿನಲ್ಲಿ ಹೊಳೆಯಿಸುತ್ತದೆ. ಇದನ್ನು ನೀವು ನಿಜವೆಂದುಕೊಳ್ಳಿರಿ ಅಥವಾ ನಿಜವಲ್ಲವೆಂದುಕೊಳ್ಳಿರಿ, ಆಗೆಲ್ಲ ಮೇಲೆ ಹೇಳಿದ ಅರ್ಥವಿನ್ಯಾಸಗಳು ಹುಟ್ಟುತ್ತಾವೆಯೇ ಹೊರತು ಉದ್ರೇಕದ, ಸಂಘರ್ಷದ ವಿನ್ಯಾಸಗಳು ಮನದಲ್ಲಿ ಮೂಡುವುದಿಲ್ಲ. ಬದಲಾಗಿ ವಿಷಾದದ ಒಂದು ಸ್ಥಾಯಿ, ಮನದ ಮನೆಯಲ್ಲಿ ಮೂಡಿನಿಲ್ಲುತ್ತದೆ. ಹಾಗೆಯೇ, ಚೀಮನಹಳ್ಳಿ ರಮೇಶ ಅವರ `ಟೈರ್ಸಾಮಿ’ ಕಾದಂಬರಿಯನ್ನು ನೋಡಿರಿ. ಇಲ್ಲಿಯೂ ರೋಚಕತೆಯನ್ನು ಮಾಗಿಸುವ ಪ್ರಯೋಗವಿದೆ. ಈ ಪ್ರಯೋಗದಲ್ಲಿಯೂ ಮನದ ಆಳದಲ್ಲಿ ಎರಡು ನೆಲೆಗಳಿಂದ ವಿಷಾದವು ನೆಲೆಗೊಳ್ಳುತ್ತದೆ. ಒಂದು, ನವೀನನ (ಟೈರ್ಸಾಮಿಯಾಗಿ ಪರಿವರ್ತನೆಗೊಳ್ಳುವ ಮೊದಲಿನ ವ್ಯಕ್ತಿ) ಕೌಟುಂಬಿಕ ಜೀವನದ ವಿಘಟನೆಯ ನೆಲೆಯಲ್ಲಿ ಹುಟ್ಟುವ ವಿಷಾದ (ಇದನ್ನು ಹೇಳುವ ವಿವರಗಳು ಅತ್ಯಂತ ಆಘಾತಕಾರಿಯಾದವುಗಳು ಆಗಿವೆ), ಮತ್ತು ಇನ್ನೊಂದು ಟೈರ್ಸಾಮಿಯ ಸಾವಿನ ನೆಲೆಯಲ್ಲಿ ಹುಟ್ಟುವ ವಿಷಾದ. ಕಾದಂಬರಿಯಲ್ಲಿ ಈ ಎರಡೂ ದುರಂತಗಳ ಬಗೆಗೆ ವಿಷಾದ ಪಡುವ ಬೇರೆ ಬೇರೆ ಪಾತ್ರಗಳಿರುವಂತೆ, ಓದುಗ ವರ್ಗದಲ್ಲಿಯೂ ಈ ಎರಡರ ಬಗೆಗೆ ವಿಷಾದ ಪಡುವ ಪ್ರತ್ಯೇಕ ಓದುಗ ವರ್ಗಗಳ ಸಾಧ್ಯತೆಯಿದೆ. ಹಾಗೆಯೇ, ಟೈರ್ಸಾಮಿಯ ರೋಚಕ ಚಿತ್ರಣವು ನಮ್ಮಲ್ಲಿ ಉದ್ರೇಕದ ಭಾವವನ್ನು ಉದ್ದೀಪಿಸದೇ ವಿಷಾದದ ಸ್ಥಾಯಿಯೊಂದನ್ನು ಹುಟ್ಟಿಸುವುದು ರೋಚಕತೆಯನ್ನು ಮಾಗಿಸುವುದರಿಂದಾಗುವ ಪರಿಣಾಮವು.
***
ರೋಚಕತೆ ಮತ್ತು ಸಂಘರ್ಷಗಳ ಅವಳಿ-ಜವಳಿಗಳು ಸಮಕಾಲೀನ ಆಧುನಿಕ-ಉಪಭೋಗವಾದೀ ಸಮಾಜದ ಅಂತರಾಳದ ಪ್ರೇರಣೆಗಳಾಗಿದ್ದರೆ, ಒಟ್ಟು ಸಮಾಜದ ಸಾರ್ವತ್ರಿಕವಾದ ಪ್ರೇರಣೆಗಳಾಗಿ ಮೂರು ಬಲಗಳನ್ನು ಕಾಣುತ್ತೇವೆ. ಅವೆಂದರೆ, ಭೌತಾತೀತ ಚಿಂತನೆ (ಮೆಟಾಫಿಸಿಕ್ಸ್ - ಸ್ಪಿರಿಚುವಲಿಸ್ಮ್), ಸಾಂಸ್ಕøತಿಕ ಅಸ್ಮಿತೆ (ಸಾಮಾಜಿಕ ಸಂರಚನೆ), ಮತ್ತು ಅಧಿಕಾರ ರಾಜಕಾರಣ. ಸಮಕಾಲೀನ ಆಧುನಿಕ ಸಮಾಜದಲ್ಲಿ ಅಧಿಕಾರ ರಾಜಕಾರಣವು ಸಮಾಜ ಪ್ರೇರಣೆಯ ಪ್ರಧಾನ ಬಲವಾಗಿ ರೂಪುಗೊಂಡಿದೆ. ಈ ಬಲವು ಮತ್ತು ಭೌತವಾದೀ ಆಮಿಷಗಳು ಮೊದಲ ಪ್ರೇರಣೆಯನ್ನು ನಷ್ಟಗೊಳಿಸಿಬಿಟ್ಟಿದೆ. ಹೀಗಾಗಿ ಆಧುನಿಕ ಸಮಾಜವು ಸ್ಪಿರಿಚುವಲಿಸ್ಮ್‍ಗೆ ಸಂವೇದನೆಯನ್ನು ತೋರುವುದನ್ನು ಕನಿಷ್ಟಗೊಳಿಸಿಕೊಂಡಿದೆ ಅಥವಾ ನಿಲ್ಲಿಸಿಬಿಟ್ಟಿದೆ. ಸಮುದಾಯಗಳು ತತ್ವಪದಕಾರರು, ಸೂಫಿಗಳು, ಭಕ್ತಿಪಂಥಗಳು ರೂಢಿಸಿಕೊಂಡಿದ್ದ ಅವೈದಿಕ ಸ್ಪಿರಿಚುವಲಿಸ್ಮ್‍ನ್ನು ಕೂಡ ನಿರಾಕರಿಸಿಬಿಟ್ಟಿವೆ. ಅಪಮೌಲ್ಯಗೊಳಿಸಿದ ಸ್ಪಿರಿಚುವಲಿಸ್ಮ್‍ನ್ನು ಸಮುದಾಯಗಳು ತಮ್ಮ ಸಾಂಸ್ಕøತಿಕ ಅಸ್ಮಿತೆಯ ಹುಡುಕಾಟದ ಪ್ರೇರಣೆಯಾಗಿ ಸ್ವೀಕರಿಸುತ್ತಿವೆ. ಅಧಿಕಾರ ರಾಜಕಾರಣದ ಪ್ರೇರಣೆಯಲ್ಲಿ ಸಾಂಸ್ಕøತಿಕ ಅಸ್ಮಿತೆಯ ಚಳುವಳಿಗಳು, ಸಿದ್ಧ ಸಂತರುಗಳಿಗೆಲ್ಲ ಜಾತಿಗಳ ದೀಕ್ಷೆಯನ್ನು ನೀಡಹೊರಟಿವೆ. ಹೊಸ ಲೇಖಕರಿಗೆ ಇಂತಹ ಸಾಮಾಜಿಕ ಸ್ಥಿತಿಗತಿಗಳು ಒಂದು ದೊಡ್ಡ ಸವಾಲಾಗಿ ಪರಿಣಮಿಸಿದೆ. ಕೆಲವು ಶಕ್ತ ಲೇಖಕರು ಈ ಸವಾಲನ್ನು ಎದುರುಗೊಂಡು ಕೃತಿರಚನೆಯಲ್ಲಿ ತೊಡಗಿದ್ದಾರೆ. ಅರೀಫ ರಾಜಾ ಅವರ `ನಕ್ಷತ್ರ ಮೋಹ’ ಕವಿತಾ ಮಾಲಿಕೆಯ ಕವಿತೆಗಳನ್ನು ಈ ದೃಷ್ಟಿಯಿಂದ ನೋಡಬಹುದು. ಮೊದಲಾಗಿ, ರಾಜಾ ಅವರ `ನಕ್ಷತ್ರ ಮೋಹ’ ಸಂಕಲನದ ಕವಿತೆಗಳು ಓದುಗನಿಗೆ ತನ್ನಲ್ಲಿ ವಿಸ್ತಾರವಾದ ಅರಿವಿನ - ಸ್ವಾತಂತ್ರ್ಯದ ಅವಕಾಸವಿದೆ ಎನ್ನುವುದನ್ನು ಮನಗಾಣಿಸುತ್ತವೆ. ಇದೊಂದು ಸ್ಪಿರಿಚುವಲಿಸ್ಮ್‍ನ ದೀಕ್ಷಾ ವಿಧಾನವೇ ಹೌದು! ಈ ಕವಿತೆಗಳು ಭೌತಿಕ, ಬೌದ್ಧಿಕ (ಮೆಕ್ಯಾನಿಕಲ್) ರೋಚಕತೆಗಳನ್ನು ಪರಿವರ್ತಿಸಿ ಜೈವಿಕ ಲೋಕದೊಳಕ್ಕೆ ತಂದುನಿಲ್ಲಿಸುತ್ತವೆ. ಯಾಕೆಂದರೆ, ಇಲ್ಲಿನ ಕವನಗಳನ್ನು ಬೌದ್ಧಿಕ ತರ್ಕವನ್ನು ಮೀರಿ ಹೃದಯದಿಂದ ಅಂತಃಕರಣಪೂರಕವಾಗಿಯೇ ಓದಬೇಕಾಗುತ್ತದೆ. ನಕ್ಷತ್ರಲೋಕದ ಅನೂಹ್ಯ ಘಟನೆಗಳನ್ನು ಹೇಳುತ್ತವಾದ್ದರಿಂದ ಇಲ್ಲಿನ ಒಂದೊಂದು ಕವಿತೆಯೂ ಮಹಾನ್ ರೋಚಕಗಳೇ! ಈ ನಕ್ಷತ್ರ ಮೋಹದ ಒಂದು ಕವಿತೆಯನ್ನು ನೋಡಿರಿ:
ನಕ್ಷತ್ರ ಮೋಹ – 1
ನನ್ನ ಕಣ್ಣಮುಂದೆ
ನಕ್ಷತ್ರ ನರ್ತಿಸುತ್ತದೆ
ಒಂದು ಕೊಕ್ಕರೆಯ ಹಾಗೆ

ಅದೆಷ್ಟೋ ಊರುಕೇರಿಗಳ ದಾಟಿ
ಕಾಡುಮೇಡುಗಳ ಅಲೆದು
ನನ್ನ ಮೇಲೇ ಕಣ್ಣಿಟ್ಟು
ಹಿಂಬಾಲಿಸುತ್ತದೆ ಅದು
ಸಾಕು ಬೆಕ್ಕಿನ ಹಾಗೆ ಮುದ್ದಾಗಿ

ಇಳಿಸಂಜೆಯಲ್ಲಿ
ಹೀಗೆ ಬೆನ್ನುಹತ್ತಿರುವ ನಕ್ಷತ್ರಕ್ಕೆ
ಅವಳ ಹೆಸರಿಡೋಣವೆಂದುಕೊಳ್ಳುತ್ತೇನೆ
ಏನೋ ದಿಗಿಲಾಗಿ
ಕಾರಿರುಳು ಕಸದ ತೊಟ್ಟಿಯಲ್ಲಿ
ಯಾರೋ ಬಿಸಾಡಿ ಹೋದ
ನಿಷ್ಪಾಪಿ ಕೂಸೊಂದರ ಕಣ್ಣುಗಳು ನೆನಪಾಗುತ್ತವೆ

ಕತ್ತೆತ್ತಿ ನೋಡುತ್ತೇನೆ
ಬಾನ ತೊಟ್ಟಿಲ ತುಂಬ ಲಕ್ಷ ನಕ್ಷತ್ರಗಳು
ತಂದೆತಾಯಿಗಳಿಲ್ಲದ ತಬ್ಬಲಿ ಕೂಸುಗಳು

ಇದು ಯಾವ ಜನ್ಮದ ಕನಸೊ
ನಾ ಹೋದಲ್ಲೆಲ್ಲಾ ಹಿಂದೆ ಬಂದಿದೆ
ಒಂದು ಒಂಟಿನಕ್ಷತ್ರ
ಅನಾಥ ಮಗುವಾಗಿ
-    ಅರೀಫ್ ರಾಜಾ; ``ನಕ್ಷತ್ರ ಮೋಹ’’, ಪುಟ: 11-12.
-ಈ ಕವಿತೆಯು, ನಕ್ಷತ್ರವು ನಮ್ಮೆದೆಗೆ ನಿಕಟಗೊಳ್ಳುವ – ಅಂದರೆ, ಲೌಕಿಕ ರೋಚಕತೆಯು ನಿರಾಕರಣೆಗೊಂಡು ಅಂತಃಕರಣದ-ಅಧ್ಯಾತ್ಮದ ರೋಚಕತೆಯೊಂದನ್ನು ನಮಗೆ ನಿಕಟಗೊಳಿಸುವ- ವಿನ್ಯಾಸವೊಂದನ್ನು ಪ್ರಸ್ತುತಪಡಿಸುತ್ತದೆ. ಮೊದಲು, ದೂರ – ಆಕಾಶದಲ್ಲಿ ಹಾರುವ ಕೊಕ್ಕರೆ, ಆಮೇಲೆ ದೇಹಸ್ಪರ್ಶಿಯಾದ ಬೆಕ್ಕು, ಅದಾದಮೇಲೆ ಅಂತರಂಗದೊಳಗಿನ `ಅವಳು’! ಅವಳಾದರೋ `ಸ್ವ’ದ ಹೊರಗಿನವಳು. ಅವಳಿಗಿಂತಲೂ ಅತಿ ಹತ್ತಿರವಾದುದೆಂದರೆ, ತನ್ನೊಳಗಿನದೇ ಆದ ಅಂತಃಕರಣದ ಭಾವ! ಇಂಥ ಭಾವವೊಂದು `ಯಾರೋ ಬಿಸಾಡಿ ಹೋದ ನಿಷ್ಪಾಪಿ ಕೂಸು’ ಮೂಲಕ ಬರುತ್ತದೆ. ಇಂಥ ತಿಳುವಳಿಕೆಯ ನೆಲೆಯಲ್ಲಿ ಇಡೀ ಆಕಾಶವು ಒಂದು ತೊಟ್ಟಿಲಾಗಿಬಿಡುತ್ತದೆ! ಮತ್ತು ಇದು ಜನ್ಮಾಂತರದ ಕಾಡುವಿಕೆಯಾಗುತ್ತ ಮತ್ತೊಮ್ಮೆ ಭೌತಿಕ ತರ್ಕದ ಜಾಲವನ್ನು ನಿವಾರಿಸಿಕೊಂಡುಬಿಡುತ್ತದೆ! ತನ್ನ ಕವಿತೆಗಳ ಹೊರಗಡೆಯೂ ಅರೀಫ ರಾಜಾ ಸಮಕಾಲೀನ ಸಮಾಜ ವಿಧಿಸುವ `ಸಾಂಸ್ಕøತಿಕ ಅಸ್ಮಿತೆ’ಯನ್ನು ನಿರಾಕರಿಸುವಲ್ಲಿ ಅವರು ಹೊಸ ಮೌಲ್ಯದ ಹುಡುಕಾಟದಲ್ಲಿರುವುದನ್ನು ಸ್ಪಷ್ಟಪಡಿಸುತ್ತದೆ.
***
ಹೊಸಕಾಲವನ್ನು ಎದುರಿಸುವ ಇನ್ನೊಂದು ವಿಧಾನವೂ ಕನ್ನಡ ಸಾಹಿತ್ಯದಲ್ಲಿ ಕಾಣುತ್ತಿದೆ. ಅದೆಂದರೆ ಆಧುನಿಕತೆಯನ್ನು ಅಪ್ಪಿಕೊಂಡ ನಾಗರಿಕ ಸಮಾಜದಲ್ಲಿ ಹಳೆಯ ಶೋಷಣಾ ವಿನ್ಯಾಸಗಳು ಕಣ್ಮರೆಯಾಗಿವೆಯೇ ಅಥವಾ ಬೇರೆ ಸ್ವರೂಪಗಳನ್ನು ಪಡೆದಿವೆಯೋ ಎಂದು ಶೋಧಿಸಿಕೊಳ್ಳುವ ರೀತಿ. ಕಾವ್ಯಾ ಕಡಮೆ ಅವರ `ಪುನರಪಿ’ ಕಾದಂಬರಿಯಲ್ಲಿ ಈ ಶೋಧನೆಯ ಕೆಲಸ ಅದ್ಭುತವಾಗಿ ನಡೆಯುತ್ತದೆ. ಭಾರತೀಯ ಸಮಾಜದಲ್ಲಿ (ನಿಜವಾಗಿ ಇದು ಜಾಗತಿಕ ಪ್ರಶ್ನೆಯೇ ಹೌದು) ಗಂಡು-ಹೆಣ್ಣಿನ ಸಂಬಂಧದ ಶೋಷಣಾ ಸ್ವರೂಪವು ಸ್ಪಷ್ಟವಾದದ್ದು. ಹೆಣ್ಣಿನ ಶೋಷಣೆಯ ಈ ಸಂರಚನೆ ಹೊಸಕಾಲದಲ್ಲಿ ನಿವಾರಣೆಗೊಂಡಿದೆಯೆ ಎನ್ನುವ ಪ್ರಶ್ನೆಯನ್ನು ಈ ಕಾದಂಬರಿ ಚರ್ಚಿಸುತ್ತದೆ. ಅಸ್ಮಾ ಮತ್ತು ಅನುಷಾ ಇಬ್ಬರು ಹುಡುಗಿಯರ ನಡುವಿನ ಸಲಿಂಗ ಕಾಮದ ಆಧುನಿಕ ವಸ್ತುವನ್ನಿಟ್ಟುಕೊಂಡು ಕಾದಂಬರಿ ನಡೆಯುತ್ತದೆ. ಅವರಿಬ್ಬರೂ ಒಟ್ಟಿಗೆ ಬದುಕಲು ಆರಂಭಿಸುತ್ತಾರೆ. ಈ ಸಂಬಂಧದಲ್ಲಿ ಅನುಷಾ ಗಂಡಸಿನ-ಗಂಡನ ಪಾತ್ರವನ್ನು ನಿರ್ವಹಿಸುತ್ತಾಳೆ ಮತ್ತು ಅಸ್ಮಾ ಹೆಣ್ಣಿನ-ಹೆಂಡತಿಯ ಪಾತ್ರವನ್ನು ನಿರ್ವಹಿಸುತ್ತಾಳೆ. ಎರಡು ಹೆಣ್ಣುಗಳ ನಡುವಿನ ಈ ಸಂಬಂಧದಲ್ಲಿ, ಅನುಷಾ ಅಸ್ಮಾಳನ್ನು ಶೋಷಿಸುವ ವಿನ್ಯಾಸ ಏರ್ಪಡುತ್ತದೆ. ಅಸ್ಮಾ ಕಸ ಗುಡಿಸಬೇಕು, ನೆಲ ಒರೆಸಬೇಕು, ಅಡುಗೆ ಮಾಡಬೇಕು, ಪಾತ್ರೆ ತೊಳೆಯಬೇಕು... ಒಟ್ಟು ಸಾಂಪ್ರದಾಯಿಕ ಕುಟುಂಬದಲ್ಲಿ ಹೆಣ್ಣು ಮಾಡಬೇಕಾದ ಎಲ್ಲವುಗಳೂ ಅಸ್ಮಾಳ ಪಾಲಿಗೆ ಬರುತ್ತವೆ. ಇದಕ್ಕೆ ಪ್ರತಿಯಾಗಿ ಅನುಷಾ ಗಂಡಿನ ಪಾತ್ರವಹಿಸುತ್ತ, ಅಸ್ಮಾ ಅಡಿಗೆ ಮಾಡುತ್ತಿದ್ದರೆ ಹೊರಗೆ ಸೋಫಾದ ಮೇಲೆ ವಿರಮಿಸುತ್ತ ಟೀವಿ ನೋಡುತ್ತಾಳೆ; ತನ್ನ ರುಚಿಗೆ ತಕ್ಕುದಾಗಿ ಅಸ್ಮಾ ಅಡಿಗೆ ಮಾಡಿ ಬಡಿಸುತ್ತಿಲ್ಲವೆಂದು ರೇಗುತ್ತಾಳೆ. ಕಾವ್ಯಾ ಕಡಮೆ ಗಂಡು-ಹೆಣ್ಣಿನ ಸಂಬಂಧದ ಆದಿಮ ಸ್ವರೂಪದ ಬಗೆಗೆ ನಮಗೆ ಹೊಸ ತಿಳುವಳಿಕೆಯನ್ನು ನೀಡುತ್ತಾರೆ. ಈ ಶೋಷಣಾ ಸಂರಚನೆಯು ಬರೀ ಲಿಂಗ ಆಧಾರಿತವಾದದ್ದಲ್ಲ; ಬದಲಾಗಿ ಇದು ಗಂಡ-ಹೆಂಡತಿ ಎಂಬ ಸಾಮಾಜಿಕ ಸಂಸ್ಥೆಯ ಅಸ್ತಿತ್ವದಲ್ಲಿಯೇ ಅಡಕವಾದದ್ದು ಎಂಬುದನ್ನು ತೋರಿಸುತ್ತಾರೆ. ಈ ವಿಷಯದ ಹೊರತಾಗಿ `ಮನೆಯೂಟ’ ಎನ್ನುವ ಆಧುನಿಕ ಸೇವೆಯೊಂದರ ಬಗೆಗೂ ಹೇಳುತ್ತ, ಹೊಸ ಕಾಲಕ್ಕೆ ಅವಶ್ಯವಾದ ಹೊಸ ಸೇವೆಗಳನ್ನು ಶೋಧಿಸಿಕೊಳ್ಳುವ ಬಗೆಯೂ ಕಾದಂಬರಿ ಸೂಚನೆ ನೀಡುತ್ತದೆ.
***
ಕನ್ನಡ ಸಾಹಿತ್ಯದಲ್ಲಿ ಇತ್ತೀಚಿನ ಪ್ರವೃತ್ತಿಗಳು ಇವಷ್ಟೇ ಎನ್ನುವಂತಿಲ್ಲ. ಚಳುವಳಿ ರಹಿತವಾದ ಇಂದಿನ ಕಾಲದಲ್ಲಿ ಹಳೆಯ ಚಳುವಳಿಗಳ ನೆನಪುಗಳು-ಹ್ಯಾಂಗ್ ಓವರ್‍ಗಳೂ ಕೆಲವರಲ್ಲಿ ಮುನ್ನೆಲೆಯಲ್ಲಿ ಇವೆ. ಆದರೆ ಅವು ಬಹುತೇಕವಾಗಿ ಹರ್ಬರ್ಟ್ ರೀಡ್ ಹೇಳುವ ರೀತಿಯ – ವಸ್ತುವಿನ ಹೃದಯಕ್ಕೇ ಧುಮ್ಮಿಕ್ಕಿ ಶೋಧಿಸಿಕೊಳ್ಳುವ ಸ್ಪಂದನಶೀಲತೆಯಾಗಿಲ್ಲ. ಸಮಕಾಲೀನ ಸಮಾಜವನ್ನು ಹಳೆಯ ವೈಚಾರಿಕತೆಯ ನೆಲೆಯಲ್ಲಿ ಶೋಧಿಸಿಕೊಳ್ಳುವುದು ಸಾಧ್ಯವಿಲ್ಲದ ಸಂಗತಿ. ಹೊಸ ಕಾಲದ ಸಾಮಾಜಿಕ ಸಂದರ್ಭಗಳು, ಶೋಷಣೆಯ ಹೊಸ ಸಂರಚನೆಗಳು ಹೊಸ ತಾತ್ವಿಕತೆಯನ್ನು ಬೇಡುತ್ತವೆ. ಅವುಗಳಲ್ಲಿ ಬಹು ಮುಖ್ಯವಾದದ್ದು ಎಂದರೆ – ಹೊಸ ಮನುಷ್ಯನಿಗೆ ಮನುಷ್ಯತ್ವದ ದೀಕ್ಷೆ ನೀಡುವುದು! ಏಕಂದರೆ, ಸಂವೇದನಾಶೀಲತೆಯನ್ನು ಕಳೆದುಕೊಂಡು ಜಡವಾದ ಮನುಷ್ಯನು ಅಂತಃಕರಣಶೂನ್ಯನಾಗಿದ್ದಾನೆ. ಅವನ ಅಂತಃಕರಣ ಉದ್ದೀಪನಗೊಳಿಸುವ ಹೊಸ ಹಾರ್ದಿಕ ಸ್ವರೂಪದ ವೈಚಾರಿಕತೆಯೊಂದನ್ನು ನಾವು ಶೋಧಿಸಿಕೊಳ್ಳಬೇಕಾಗಿದೆ. ನಮ್ಮ ಹೊಸ ಲಾಖಕರಿಗೆ ಅದು ಸಾಧ್ಯವಾಗಲಿ, ಅದು ಅವರ ಕೈಗೆ ಎಟುಕಲಿ ಎನ್ನುವ ಆಸೆ-ಹಾರೈಕೆಗಳೊಂದಿಗೆ ನನ್ನ ಈ ಸಮಾರೋಪದ ನುಡಿಗಳನ್ನು ಮುಗಿಸುತ್ತೇನೆ.