`ಕನ್ನಡ ಸಾಹಿತ್ಯದಲ್ಲಿನ ಇತ್ತೀಚಿನ ಪ್ರವೃತ್ತಿಗಳು’ ವಿಚಾರ ಸಂಕಿರಣದ
ಸಮಾರೋಪ ಭಾಷಣ
ರೋಚಕತೆ ಮತ್ತು ಸಂಘರ್ಷಗಳು ಪ್ರಧಾನ ತುಡಿತಗಳಾಗಿರುವ ಕಾಲದಲ್ಲಿ
ಸೌಹಾರ್ದದ ಮೊಳಕೆಗಳನ್ನು ಆಶಿಸುತ್ತಾ...
- ರಾಘವೇಂದ್ರ ಪಾಟೀಲ
ಬೆಳಗಿನ ಹನ್ನೊಂದು ಗಂಟೆಯಿಂದ ಇಲ್ಲಿಯವರೆಗೆ `ಕನ್ನಡ ಸಾಹಿತ್ಯದ ಇತ್ತೀಚಿನ ಪ್ರವೃತ್ತಿಗಳು’ ಕುರಿತು ಚರ್ಚಿಸುತ್ತಿದ್ದೇವೆ. ಅಕಾಡೆಮಿಯ ಅಧ್ಯಕ್ಷರೂ, ಕನ್ನಡದ ಪ್ರಮುಖ ಲೇಖಕರೂ ಆದ ಡಾ. ಅರವಿಂದ ಮಾಲಗತ್ತಿಯವರು ತಮ್ಮ ಉದ್ಘಾಟನಾ ಭಾಷಣದಲ್ಲಿ, ಮತ್ತು ಕನ್ನಡದ ಬಹುಮುಖ್ಯ ವಿಮರ್ಶಕರಾದ ಡಾ. ರೆಹಮತ್ ತರೀಕೆರೆ ಅವರು ತಮ್ಮ ಆಶಯ ಭಾಷಣದಲ್ಲಿ ನಮ್ಮನ್ನೆಲ್ಲ ಕಾಡುವಂತಹ ಮಾತುಗಳನ್ನು ಆಡುತ್ತ ಅನೇಕ ಸಾಂಸ್ಕøತಿಕ ಮಹತ್ವದ ಪ್ರಶ್ನೆಗಳನ್ನು ಎತ್ತಿದ್ದಾರೆ. ಅವರ ಮಾತುಗಳನ್ನು ಮತ್ತು ಅವರು ಎತ್ತಿದ ಪ್ರಶ್ನೆಗಳನ್ನು ಮನದಲ್ಲಿ ಇಟ್ಟುಕೊಳ್ಳುತ್ತ ನನ್ನ ಕೆಲವು ಯೋಚನೆಗಳನ್ನು ಈ ಸಮಾರೋಪದ ನುಡಿಗಳನ್ನು ಆಡುತ್ತಿದ್ದೇನೆ.
ಸಮಾಜ ಮತ್ತು ಅದರಲ್ಲಿ ಏರ್ಪಡುತ್ತಿರುವ ಸಮುದಾಯಗಳ ಜೀವನ ಎನ್ನುವುದು ಯಾವತ್ತಿಗೂ ಜೀವಂತ ಸಾಹಿತ್ಯದ `ಮಾತೃಕೆ’ (ಸದ್ಯದಲ್ಲಿ ಈ ಪದಕ್ಕೆ ಬಳಸುತ್ತಿರುವ ಇಂಗ್ಲೀಷಿನ meಜium ಶಬ್ದವು ಮಾತೃಕೆ ಪದದ ಸಮಗ್ರತೆಯನ್ನು ಕಾಣಿಸಲಾರದು!) ಆಗಿರುತ್ತದೆ. ಸಾಹಿತ್ಯದ ಬೇರುಗಳು ಈ ಮಾತೃಕೆಯಲ್ಲಿ ಇಳಿದು ಚಾಚಿಕೊಂಡು, ಅದರ ಸಾರ ಸತ್ವಗಳನ್ನು ಹೀರಿಕೊಂಡು, ತಮ್ಮ ವಸ್ತು, ತಾತ್ವಿಕತೆ ಮತ್ತು ಸ್ವರೂಪಗಳನ್ನು ಪಡೆಯುತ್ತಿರುತ್ತವೆ. ಅಂತಲೇ, ಇಂದು ಮುಗುಳೊಡೆಯುತ್ತಿರುವ ಸಾಹಿತ್ಯದ ಸ್ವರೂಪ, ಪ್ರವೃತ್ತಿಗಳನ್ನು ಅರಿಯಲು ನಾವು ಸಮಕಾಲೀನ ಸಮಾಜದ ಹಿನ್ನೆಲೆಯಲ್ಲಿ ಕೆಲಸ ಮಾಡುತ್ತಿರುವ ಪ್ರೇರಣೆ-ತುಡಿತಗಳನ್ನು ಹುಡುಕಿ ನೋಡಬೇಕಾಗುತ್ತದೆ. ನನ್ನ ಈ ಮಾತುಗಳ ಹಿನ್ನೆಲೆಯಲ್ಲಿ ಅಂಥ ಹುಡುಕಾಟವಿದೆ.
***
ಸಮಕಾಲೀನ ಆಧುನಿಕ ಸಮಾಜದ ವಿಕಾಸ, ಮತ್ತು ಅದರ ಬದಲಾವಣೆಗಳ ಅಸಂತುಲಿತ ವೇಗದ ಪ್ರಕ್ರಿಯೆಯನ್ನು ಕುರಿತು ಅಮೆರಿಕನ್ ಚಿಂತಕ ಅಲ್ವಿನ್ ಟಾಫ್ಲರ್ ತನ್ನ ``ಫ್ಯೂಚರ್ ಶಾಕ್’’ ಎಂತೆನ್ನುವ ಪುಸ್ತಕದಲ್ಲಿ ಬಹು ಮನೋಜ್ಞವಾಗಿ ವಿವರಿಸುತ್ತಾನೆ. ಮನುಷ್ಯಕುಲದ ಒಟ್ಟು 50,000 ವರ್ಷಗಳ ಚರಿತ್ರೆಯಲ್ಲಿ - ಪ್ರತಿ 62 ವರ್ಷಗಳಿಗೆ ಒಂದು ಪೀಳಿಗೆಯಂತೆ ವಿಭಜಿಸಿದಾಗ – ಒಟ್ಟು ಸುಮಾರು 800ರಷ್ಟು ಮನುಷ್ಯ ಪೀಳಿಗೆಗಳು ಬದುಕಿಹೋದದ್ದು ತಿಳಿಯುತ್ತದೆ. ಇಷ್ಟು ಪೀಳಿಗೆಗಳಲ್ಲಿ ಸುಮಾರು 650 ಪೀಳಿಗೆಗಳು ಕಾಡಿನಲ್ಲಿಯ ಪ್ರಾಣಿಗಳನ್ನು ಬೇಟೆಯಾಡುತ್ತ, ಹಸಿ ಮಾಂಸವನ್ನು ತಿನ್ನುತ್ತ, ತಮ್ಮ ಜೀವನವನ್ನು ಗವಿಗಳಲ್ಲಿಯೇ ಬದುಕಿ ಕಳೆದಿವೆ. ಆ ಕಾಲದಲ್ಲಿ ಮನುಷ್ಯ ಸಮಾಜದಲ್ಲಿನ ಬದಲಾವಣೆಯ ವೇಗವು ಶೂನ್ಯವಾಗಿದ್ದಿತು. ಆ ನಂತರ, ವ್ಯವಸಾಯವನ್ನು ಕಂಡುಹಿಡಿದು ನಿಧಾನವಾಗಿ ಬದಲಾವಣೆಯು ಆರಂಭಗೊಂಡಿತು. ಕಳೆದ ಎರಡು ಮೂರು-ನಾಲ್ಕು ಪೀಳಿಗೆಗಳ ಕಾಲದಲ್ಲಿ ಘಟಿಸಿದ ಬದಲಾವಣೆಗಳ ವೇಗವು ಹಿಂದಿನ ಎಲ್ಲ ಪೀಳಿಗೆಗಳ ಕಾಲದಲ್ಲಿ ಘಟಿಸಿದ ಬದಲಾವಣೆಗಳ ಒಟ್ಟು ಪ್ರಮಾಣಕ್ಕಿಂತಲೂ ಅತಿ ಹೆಚ್ಚು ಆಗಿದೆ. ಹೀಗಾಗಿ ಮನುಷ್ಯನು ಅತಿ ತೀವ್ರವಾದ ವೇಗದ ಸಾಮಾಜಿಕ ಸಂದರ್ಭದ ಬದಲಾವಣೆಗೆ ಈಡಾಗುವಂತಾಗಿದೆ. ಬದಲಾವಣೆಯ ಈ ಅತಿವೇಗವು ಒಳಿತಾದುದೇನೂ ಅಲ್ಲ. ಇಂಥ ಬದಲಾವಣೆಯು ಮನುಷ್ಯನ ಮನೋಸ್ಥಿತಿಯ ಮೇಲೆ ಅಪಾರ ಒತ್ತಡವನ್ನುಂಟು ಮಾಡುತ್ತದೆ. ಬದಲಾವಣೆಯು ಮನುಷ್ಯನ ಅನುಭವವಾಗುವ ಮೊದಲೇ ಹೊಸ ಬದಲಾವಣೆಯೊಂದು ಬಂದು ಮನುಷ್ಯನ ಪ್ರಜ್ಞೆಯನ್ನು ಅಪ್ಪಳಿಸಿ ಬಿಡುತ್ತದೆ. ಇಂಥ ಬದಲಾವಣೆಗಳ ಆಘಾತವು ಮನುಷ್ಯನ ಸಂವೇದನಾಶೀಲತೆಯ ಮೇಲೆ ನೇತ್ಯಾತ್ಮಕ ಪರಿಣಾಮವನ್ನುಂಟು ಮಾಡಿ, ಮನುಷ್ಯನ ಸಂವೇದನಾಶೀಲತೆಯು ಕಡಿಮೆಗೊಳ್ಳುತ್ತಾ, ಕಡಿಮೆಗೊಳ್ಳುತ್ತಾ ಸಾಗಿ, ಅದು ಅತಿ ಕನಿಷ್ಟದ, ಅಣು ಗಾತ್ರದ್ದು ಆಗಿಬಿಡುತ್ತದೆ. ಇದರ ಜೊತೆ ಜೊತೆಗೇ, ತಂತ್ರಜ್ಞಾನದ ಕಾರಣವಾಗಿ ಮನುಷ್ಯನ ಐಹಿಕ ಸುಖ ಸೌಲಭ್ಯಗಳ ಪ್ರಮಾಣವು ವಿಪರೀತವಾಗಿ ಹೆಚ್ಚುತ್ತಹೋಗುತ್ತಿದೆ; ಸುಖ ಸೌಲಭ್ಯಗಳ ಐಂದ್ರಿಯಕ ಮತ್ತು ಭೌತಿಕತೆಯ ಅಪಾರವಾದ ದ್ರವ್ಯರಾಶಿಯು ಮನುಷ್ಯ ಪ್ರಜ್ಞೆಯಲ್ಲಿ ಸೇರುತ್ತ, ಇಂಥ ಜಡ ಭೌತಿಕತೆಯ ಆಳದಲ್ಲಿ ಉಳಿದ ಅಣುಗಾತ್ರದ ಸಂವೇದನಾಶೀಲತೆಯು ಹುಗಿದುಹೋಗಿ, ಇಂದಿನ ಆಧುನಿಕ ಮನುಷ್ಯನು ಹೆಚ್ಚು ಹೆಚ್ಚು ಸಂವೇದನಾ ರಹಿತನಾಗುತ್ತಿದ್ದಾನೆ. ಅಪಘಾತಕ್ಕೆ ಈಡಾಗಿ ರಸ್ತೆಯ ಮಗ್ಗುಲಿಗೆ ಬಿದ್ದು ಸಹಾಯಕ್ಕಾಗಿ ಹಲುಬುತ್ತಿರುವ ಗಾಯಾಳುಗಳನ್ನು ನೋಡುತ್ತ ನೋಡುತ್ತಲೇ ಸಾಗಿ ಮುಂದೆ ಹೋಗುವ, ಇಲ್ಲವೇ, ಸಹಾಯದ ತುರ್ತನ್ನು ಅರಿಯದವರಂತೆ, ಅಲ್ಲಿನ ಆ ರೋಚಕ ದೃಶ್ಯಕ್ಕಾಗಿ ತಮ್ಮ ಮೊಬೈಲ್‍ಗಳಲ್ಲಿ ವಿಡಿಯೋ ಮಾಡಿಕೊಳ್ಳುವ ಜನರನ್ನು ನೋಡಿದರೆ, ಹೆಚ್ಚುತ್ತಿರುವ ವೃದ್ಧಾಶ್ರಮಗಳ ಸಂಖ್ಯೆಯನ್ನು ಗಮನಿಸಿದರೆ, ಹೆಚ್ಚುತ್ತಿರುವ ಚಿಕ್ಕ ಮಕ್ಕಳ ಮೇಲಿನ ರೇಪ್‍ಗಳ ಪ್ರಮಾಣವನ್ನು ನೋಡುತ್ತಿದ್ದರೆ ಟಾಫ್ಲರ್ ಹೇಳುತ್ತಿರುವ ಸಂಗತಿಯ ನಿಜತ್ವವನ್ನು ಮನಗಾಣುತ್ತೇವೆ.
ಮನುಷ್ಯ ಸೌಲಭ್ಯಗಳ ಮಾಸ್-ಪ್ರೊಡಕ್ಶನ್ನಿನ ಈ ಆಧುನಿಕ ಕಾಲದಲ್ಲಿ, ದೊಡ್ಡ ಪ್ರಮಾಣದಲ್ಲಿ ಉತ್ಪಾದನೆಗೊಳ್ಳುವ ಸರಕುಗಳನ್ನು ಮಾರಲು ಅತ್ಯಂತ ಸ್ಪರ್ಧಾತ್ಮಕವಾದ ಮಾರುಕಟ್ಟೆಯೊಂದು, ಅಪಾರವಾಗಿ ಬೆಳೆದು ನಿಂತಿದೆ. ದೊಡ್ಡ ಪ್ರಮಾಣದಲ್ಲಿ ಉತ್ಪಾದನೆಗೊಳ್ಳುವ ಎಲ್ಲ ಸರಕುಗಳನ್ನು ಸಂವೇದನಾ ರಹಿತನಾದ ಗ್ರಾಹಕ ಮನುಷ್ಯನಿಗೆ ಮಾರಾಟಮಾಡುವ ಸವಾಲು ಈ ಮಾರುಕಟ್ಟೆಯ ಮುಂದಿದೆ. ಈ ಸವಾಲನ್ನು ಸ್ವೀಕರಿಸಿದ ಮಾರುಕಟ್ಟೆ ತತ್ವಜ್ಞಾನವು, ಬಗೆ ಬಗೆಯ ಹುನ್ನಾರುಗಳನ್ನು ಹುಡುಕಿ ಗ್ರಾಹಕರನ್ನು ಸೆಳೆಯುವುದಕ್ಕೆ ಹೊಂಚುತ್ತದೆ. ಅಂಥ ಮಾರುಕಟ್ಟೆ ತತ್ವಜ್ಞಾನವು ಕಂಡುಕೊಂಡ ಒಂದು ಹುನ್ನಾರವೆಂದರೆ, ರೋಚಕತೆ! ಸಂವೇದನಾ ರಹಿತನಾದ ಮನುಷ್ಯನನ್ನು ಉದ್ರೇಕಿಸಿ, ಸರಕನ್ನು ಕೊಳ್ಳುವಂತೆ ಮಾಡಲು ರೋಚಕತೆಯು ಮಾರುಕಟ್ಟೆಯ ಒಂದು ತತ್‍ಕ್ಷಣದ ಉಪಕರಣವಾಗಿದೆ! ಯಾವ-ಯಾವುದೋ ಸರಕುಗಳನ್ನು ಮಾರಲು, ಸಂಬಂಧವಿಲ್ಲದಿದ್ದರೂ ಅರೆಬೆತ್ತಲೆಯ ಹೆಣ್ಣಿನ ಚಿತ್ರಗಳ ಜಾಹೀರಾತುಗಳನ್ನು ಬಳಸಿ ಗ್ರಾಹಕನನ್ನು ಉದ್ರೇಕಿಸುವುದು ಇಂಥ ಹುನ್ನಾರದ ಅಂಗವಾಗಿಯೇ! ಮಾರುಕಟ್ಟೆಯ ಈ ಉಪಕರಣವನ್ನು ಎಲೆಕ್ಟ್ರಾನಿಕ್ ಮಾಧ್ಯಮಗಳು ಇನ್ನೂ ಹೆಚ್ಚಿನ ಅತಿರೇಕದಲ್ಲಿ ಬಳಸುತ್ತಿರುವುದನ್ನು ನಾವು ನೋಡುತ್ತಲೇ ಇದ್ದೇವೆ. ಈ ಮಾಧ್ಯಮಗಳಿಗೆ ಸಾಮಾಜಿಕ ಸ್ವಾಸ್ಥ್ಯದ ಕಲ್ಪನೆಗಿಂತ ಟಿಆರ್‍ಪಿ ಪರಿಕಲ್ಪನೆಯೇ ಹೆಚ್ಚು ಮುಖ್ಯವಾದದ್ದು. ಅಂತಲೇ, ಡಾ. ಎಂ.ಎಂ.ಕಲ್ಬುರ್ಗಿಯಂಥವರ ಯಾವುದೋ ಒಂದು ಮಾತನ್ನು ಹಿಡಿದುಕೊಂಡು, ಪ್ರೇಕ್ಷಕರನ್ನು, ಉದ್ರೇಕಿಸುವಂತಹ ರೋಚಕತೆಯಲ್ಲಿ ಅದ್ದುವುದು ಅವುಗಳಿಗೆ ಮುಖ್ಯವೆನಿಸಿಬಿಡುತ್ತದೆ.
ಉದ್ರೇಕದ ರೋಚಕತೆಗೆ ಅವಳಿಯೆನ್ನಿಸುವ ಭಾವುಕತೆಯೆಂದರೆ ಸಂಘರ್ಷದ ಮನೋಭಾವ. ಶಬ್ದಮಾಧ್ಯಮದ ಎಲ್ಲ ಕಲೆಗಳು (ಸಾಹಿತ್ಯ, ಸಿನೆಮಾ, ಟೀವಿ ಸೀರಿಯಲ್ಲುಗಳು, ಇತ್ಯಾದಿ) ರೋಚಕತೆಯ ಜೊತೆಗೆ ಸಂಘರ್ಷವನ್ನು ತಮ್ಮ ಕೇಂದ್ರವಾಗಿಸಿಕೊಳ್ಳಲು ಹೆಣಗುತ್ತವೆ. ತನ್ನ ಗ್ರಹಿಕೆಯ ಪ್ರಧಾನ ಕೇಂದ್ರದ ಬಗೆಗೆ ಹೇಳುತ್ತ ಯೇಟ್ಸ್ – ಕಾನ್‍ಫ್ಲಿಕ್ಟ್, ಕಾನ್‍ಫ್ಲಿಕ್ಟ್, ಕಾನ್‍ಫ್ಲಿಕ್ಟ್ ಎಂದು ಉದ್ಗರಿಸಿದನಂತೆ. ಹೌದು. ಆಧುನಿಕ ಯುಗದ ಮೂಲಧಾತು ಈ ಕಾನಫ್ಲಿಕ್ಟ್-ಸಂಘರ್ಷ ಎನ್ನುವುದೇ ಆಗಿದೆ. ಈ ರೋಚಕತೆ ಮತ್ತು ಸಂಘರ್ಷಗಳು ಅನೇಕ ಸಂದರ್ಭದಲ್ಲಿ ಸಾಮಾಜಿಕ ಸ್ವಾಸ್ಥ್ಯ ಮತ್ತು ಸಾಮಾಜಿಕ ವಾಸ್ತವಗಳನ್ನು ಅನುಸರಿಸದೇ, ಕೇವಲ ತಮ್ಮ ಸ್ವಯಂಭೂ ಅಭಿವ್ಯಕ್ತಿಯ ಉದ್ದೇಶಗಳಿಗಾಗಿಯೇ ಕಲಾ ಮಾಧ್ಯಮಗಳನ್ನು ಪ್ರವೇಶಿಸುವುದನ್ನು ಕಾಣುತ್ತೇವೆ. ಅಂಥ ಒಂದು ಉದಾಹರಣೆಯಾಗಿ ಗಿರೀಶ್ ಕಾಸರವಳ್ಳಿಯವರ ನಿರ್ದೇಶನದ `ಕೂರ್ಮಾವತಾರ’ ಚಲನಚಿತ್ರವನ್ನು ನೋಡಬಹುದು. ಗಾಂಧೀಜಿಯವರನ್ನು ಕುರಿತ ಟಿ.ವಿ. ಸೀರಿಯಲ್ ಒಂದನ್ನು ನಿರ್ಮಿಸುವುದು ಈ ಸಿನೇಮಾದ ಕಥಾ ವಸ್ತುವಾಗಿದೆ. ಗಾಂಧಿ ಬಗ್ಗೆ ಏನೇನೂ ಆಸಕ್ತಿಯಿಲ್ಲದ, ಕಚೇರಿಯೊಂದರಲ್ಲಿ ಕ್ಲರ್ಕ್ ಆಗಿ ಸೇವೆ ಸಲ್ಲಿಸುತ್ತಿರುವವನನ್ನು ಗಾಂಧಿ ಪಾತ್ರ ನಿರ್ವಹಿಸಲು ಆಯ್ಕೆ ಮಾಡುತ್ತಾರೆ. ಆದರೆ ಅವನು ತಾನು ಆ ಪಾತ್ರದಲ್ಲಿ ನಟಿಸಲು ಒಲ್ಲೆ ಎನ್ನುತ್ತಾನೆ. ಹಣದ ಆಸೆಯ ಮಗ-ಸೊಸೆಯರ ಒತ್ತಾಯಕ್ಕಾಗಿ ಕೊನೆಗೆ ಆ ಪಾತ್ರವನ್ನು ಮಾಡಲು ಒಪ್ಪುತ್ತಾನೆ. ಸೀರಿಯಲ್ ಆರಂಭವಾಗುತ್ತದೆ; ಆ ಕ್ಲರ್ಕ್ ಪ್ರಸಿದ್ಧನಾಗುತ್ತಾನೆ. ಗಾಂಧಿ ಪಾತ್ರದ ಸಾತ್ವಿಕತೆಯು ಅವನ ವ್ಯಕ್ತಿತ್ವದಲ್ಲಿ ಸಾತ್ವಿಕತೆಯ ಬದಲಾವಣೆಗಳನ್ನು ತರುತ್ತದೆ. ಕಚೇರಿಯಲ್ಲಿನ ಅವನ ನಡವಳಿಕೆಯು ಉಳಿದವರಿಗೆ ವಿಕ್ಷಿಪ್ತವಾಗಿ ತೋರತೊಡಗುತ್ತದೆ. ಸಿನೇಮಾದ ಇದುವರೆಗಿನ ಈ ವಸ್ತುವು ಅದ್ಭುತವಾಗಿದ್ದು ಅದನ್ನೇ ಇನ್ನಷ್ಟು ಸೂಕ್ಷ್ಮವಾಗಿ ವಿಸ್ತರಿಸಿದ್ದರೆ ಚಂದವಿದ್ದಿತು. ಆದರೆ, ಇದು ನವ್ಯ(ಆಧುನಿಕ) ಕಲಾತ್ಮಕ ಚಲನಚಿತ್ರವಲ್ಲವೆ? ಇದರಲ್ಲಿ ಸಂಘರ್ಷವು ವಿಜೃಂಭಿಸದಿದ್ದರೆ ಉಚಿತವಾದೀತೇ! ಸಾಧ್ಯವಿಲ್ಲ! ಅದಕ್ಕೇ ಸಂಘರ್ಷ ಹುಟ್ಟಿಕೊಳ್ಳುತ್ತದೆ. ಇಂದಿನ ಕಾಲದ ಸಂಘರ್ಷದ ಅತ್ಯಂತ ಯಶಸ್ವೀ ಸ್ವರೂಪವೆಂದರೆ, ಹಿಂದೂ-ಮುಸ್ಲಿಂ ಕೋಮುಗಲಭೆ! ಸರಿ. ಚಲನಚಿತ್ರದಲ್ಲಿ ಅಂಥ ಸಂಘರ್ಷ ಏರ್ಪಟ್ಟು ಬಿಡುತ್ತದೆ... ಆ ಟೀವಿ ಸೀರಿಯಲ್ಲಿನಲ್ಲಿ ಗಾಂಧಿಯನ್ನು ಕೊಲ್ಲುವ ಗೋಡಸೆಯ ಪಾತ್ರ ಬರುತ್ತದಲ್ಲ, ಸೀರಿಯಲ್ಲಿನ ನಿರ್ದೇಶಕನು ಆ ಪಾತ್ರಕ್ಕೆ ಒಬ್ಬ ಮುಸ್ಲಿಂ ನಟನನ್ನು ಆಯ್ಕೆ ಮಾಡುತ್ತಾನೆ. ತಕ್ಕೋ! ಬಂದೇ ಬಿಡುತ್ತದೆ ಸಂಘರ್ಷ! ಆ ಜನಪ್ರಿಯ ಸೀರಿಯಲ್ಲಿನಲ್ಲಿ ಗೋಡಸೆ ಪಾತ್ರ ನಿರ್ವಹಣೆಗೆ ಮುಸ್ಲಿಮನನ್ನು ಆಯ್ಕೆ ಮಾಡಿದ್ದಕ್ಕಾಗಿ ಹಿಂದೂ ಸಂಘಟನೆಗಳು ಪ್ರತಿಭಟನೆಯನ್ನು ಆರಂಭಿಸುತ್ತವೆ, ಕೋಮುಗಲಭೆ ಭುಗಿಲೇಳುತ್ತದೆ... ಸಮಾಜದಲ್ಲಿ ಅಲ್ಲೋಲಕಲ್ಲೋಲಗಳುಂಟಾಗುತ್ತವೆ! ನನ್ನ ಪ್ರಶ್ನೆ ಇದು : `ಕೂರ್ಮಾವತಾರ’ದಲ್ಲಿನ ಇಂತಹ ಉಲ್ಲೇಖದವರೆಗೂ, ಭಾರತೀಯ ಸಮಾಜದಲ್ಲಿನ ಕಲಾಪ್ರಪಂಚಕ್ಕೆ ಇಂತಹ ಕೋಮುಸ್ವಭಾವ ಇರಲಿಲ್ಲ. ಅಷ್ಟೇ ಅಲ್ಲ, ನಮ್ಮ ಹಿಂದಿ ಚಲನಚಿತ್ರಗಳಲ್ಲಿ ಕೃಷ್ಣನನ್ನು ಕುರಿತ ಅತ್ಯುತ್ತಮ ಗೀತೆಗಳನ್ನು ಬರೆದವರು ಅನೇಕ ಮುಸ್ಲಿಮ್ ಗೀತಕಾರರು ಮತ್ತು ಅನೇಕ ಮುಸ್ಲಿಮ್ ಸಂಗೀತಕಾರರು ಅವುಗಳನ್ನು ಅತ್ಯಂತ ಸುಂದರವಾಗಿ ಸಂಗೀತಕ್ಕೆ ಅಳವಡಿಸಿದ್ದಾರೆ. ಅವರ ಅಂತಹ ಹಾಡುಗಳಿಗೆ ಅನೇಕ ಮುಸ್ಲಿಂ ನಟವರರು ನಟಿಸಿದ್ದಾರೆ. ಆನಸಮುದಾಯವೆಲ್ಲ ಆ ಸಿನೇಮಾಗಳನ್ನು ನೋಡಿ ಸಂತೋಷಪಟ್ಟಿದೆ. ಹಾಗೆಯೇ, ಉತ್ತರ ಕರ್ನಾಟಕದ, ಜಮಖಂಡಿಯ ಅಪ್ಪಾಲಾಲ್ ನದಾಫನ `ಶ್ರೀ ಕೃಷ್ಣ ಪಾರಿಜಾತ’ವು ಅತ್ಯಂತ ಪ್ರಸಿದ್ಧವಾದದ್ದು. ಅದರಲ್ಲಿ ಕೃಷ್ಣನ ಪಾತ್ರವನ್ನು ನಿರ್ವಹಿಸುವವನು ಈ ಅಪ್ಪಾಲಾಲನೇ. ಅವನ ಕೃಷ್ಣನ ಪಾತ್ರವು ಅತ್ಯಂತ ಪ್ರಸಿದ್ಧವೂ, ಜನಪ್ರಿಯವಾದದ್ದೂ ಆಗಿದ್ದಿತು. ಇನ್ನು ಹಿಂದೂಸ್ತಾನಿ ಸಂಗೀತ ಕ್ಷೇತ್ರದಲ್ಲಿಯಂತೂ ಅನೇಕ ಮುಸ್ಲಿಂ ಗವಯಿಗಳು ಅನೇಕ ಹಿಂದೂ ಗವಯಿಗಳ ಉಸ್ತಾದರು! ಈ ಹಿಂದೂ ಶಿಷ್ಯರು ತಮ್ಮ ಮುಸ್ಲಿಂ ಉಸ್ತಾದರ ಪಾದಗಳನ್ನು ಮುಟ್ಟಿ ನಮಸ್ಕರಿಸುತ್ತಿದ್ದರು; ನಮಸ್ಕರಿಸುತ್ತಾರೆ. ಈ ಸಂಗೀತಗಾರರಲ್ಲಿ ಜಾತಿ-ಧರ್ಮಗಳ ಯಾವ ತಾರತಮ್ಯವೂ ಇಲ್ಲ. ಅಪರೋಕ್ಷದಲ್ಲಿಯೂ ಈ ಗವಯಿಗಳು ತಮ್ಮ ಮನಸ್ಸಿನಲ್ಲಿ ತಮ್ಮ ಗುರುಗಳನ್ನು ಮನದಲ್ಲಿ ನೆನೆದು ತಮ್ಮ ಕಚೇರಿಗಳನ್ನು ಆರಂಭಿಸುತ್ತಿದ್ದರು. ಇಂದಿನ ಶ್ರೀ ಫಯಾಜ್ ಖಾನರ ದಾಸರ ಕೀರ್ತನೆಗಳ ಹಾಡುಗಾರಿಕೆಯ ಸಂಮೋಹಿನಿಗೆ ಒಳಗಾಗದವರು ಯಾರೂ ಇಲ್ಲ. ಹೀಗೆ ಭಾರತೀಯ ಕಲಾಲೋಕದಲ್ಲಿ ಇಂತಹ ಸಹಿಷ್ಣುತೆಯ ತಂಗಾಳಿ ಬೀಸುತ್ತಿರುತ್ತಿದ್ದರೆ, ಕೂರ್ಮಾವತಾರದಲ್ಲಿ ಬಂದ ಈ ಸಂಘರ್ಷದ ಪ್ರಸ್ತುತತೆ ಏನು? ಇಂಥ ಸಂಘರ್ಷದ ಸೂಚನೆಯು ಭಾರತೀಯ ಸಮಾಜದಲ್ಲಿ ಇದುವರೆಗೆ ಇಲ್ಲದಿರುವ ಹೊಸಸ್ವರೂಪದ ಸಾಮಾಜಿಕ ಸಂಘರ್ಷದ ಬೀಜವನ್ನು ಊರಲಾರದೇ?
ಆಲ್ಫ್ರೆಡ್ ರುಪರ್ಟ್ ಶೆಲ್ಡ್ರೇಕ್‍ನ `ಎ ನ್ಯೂ ಸೈನ್ಸ್ ಆಫ್ ಲೈಫ್ : ಮಾರ್ಫಿಕ್ ರಿಸಾನನ್ಸ್’ ಎಂಬ ವೈಜ್ಞಾನಿಕ ಗ್ರಂಥದಲ್ಲಿ ಪ್ರಸ್ತಾಪವಾದ ಪ್ರಯೋಗವೊಂದು ಮಂಡಿಸುವ ತಾತ್ವಿಕತೆಯೊಂದು ನೆನಪಿಗೆ ಬರುತ್ತದೆ. ಶೆಲ್ಡ್ರೇಕ್ ಹೇಳಿದ ಆ ಪ್ರಯೋಗ ಹೀಗಿದೆ : ಭೂಮಿಯ ಯಾವುದೋ ಒಂದು ಪಟ್ಟಣದದಲ್ಲಿನ ಒಂದು ಪ್ರಯೋಗಶಾಲೆಯಲ್ಲಿ, ಸಂಕೀರ್ಣ ಅಣುರಚನೆ ಹೊಂದಿರುವ ಒಂದು ಹೊಚ್ಚ ಹೊಸದಾದ ರಾಸಾಯನಿಕ ಸಂಯುಕ್ತವೊಂದನ್ನು ಕೃತ್ರಿಮವಾಗಿ ಸಂಶ್ಲೇಷಿಸಿ ಅದನ್ನು ಸ್ಫಟಿಕೀಕರಣಗೊಳ್ಳಲು ಬಿಡಲಾಯಿತು. ಆ ರಾಸಾಯನಿಕ ವಸ್ತುವು ಬಹು ದೀರ್ಘ ಸಮಯ ತೆಗೆದುಕೊಂಡು, ನಿಧಾನವಾಗಿ ಸ್ಫಟಿಕದ ಸ್ವರೂಪ ಪಡೆಯಿತು. ನಂತರದ ವರ್ಷಗಳಲ್ಲಿ ಅದೇ ರಾಸಾಯನಿಕ ವಸ್ತುವನ್ನು, ಅದೇ ರೀತಿಯ ಕೃತ್ರಿಮ ವಿಧಾನದಿಂದ, ಜಗತ್ತಿನ ಬೇರೆ ಬೇರೆ ಪ್ರಯೋಗಶಾಲೆಗಳಲ್ಲಿ ಸಂಶ್ಲೇಷಿಸಿ, ಸ್ಫಟಿಕೀಕರಣಕ್ಕೆ ಬಿಡಲಾಯಿತು. ಆಗ ಆ ಸಂಯುಕ್ತ ವಸ್ತುವು ಕ್ರಮಕ್ರಮೇಣವಾಗಿ ತನ್ನ ಸ್ಫಟಿಕೀಕರಣದ ಅವಧಿಯನ್ನು ಕಡಿಮೆಗೊಳಿಸಿಕೊಳ್ಳುತ್ತ, ಕೊನೆಗೆ ಅದು ಒಂದು ನಿರ್ದಿಷ್ಟ ಕನಿಷ್ಟ ಸಮಯಾವಕಾಶವನ್ನು ತೆಗೆದುಕೊಂಡು ಸ್ಫಟಿಕವಾಗತೊಡಗಿತು. ಶೆಲ್ಡ್ರೇಕ್ ಇದನ್ನು ಹೀಗೆ ವಿವರಿಸುತ್ತಾನೆ – ಪ್ರತಿಯೊಂದು ಭೌತ ಮತ್ತು ಮಾನಸಿಕ ಸ್ವರೂಪಕ್ಕೆ ಸಂಬಂಧಪಟ್ಟಂತೆ ವಾತಾವರಣದಲ್ಲಿ `ಸ್ವರೂಪದ ನೆನಪಿನ ಅಲೆಗಳು’ (ಮಾರ್ಫಿಕ್ ರಿಸಾನನ್ಸ್) ಇರುತ್ತವೆ. ಆ ಅಲೆಗಳು ಆ ವಸ್ತುವು ತನ್ನ ಅಂತಿಮ ಸ್ವರೂಪ ಪಡೆದುಕೊಳ್ಳುವಂತೆ ಮಾಡುತ್ತವೆ. ಶೆಲ್ಡ್ರೇಕ್ ಹೇಳುವ ಹೊಚ್ಚಹೊಸದಾಗಿ ಸಂಶ್ಲೇಷಣೆಗೊಂಡ ಸಂಯುಕ್ತವಸ್ತುವಿನ ಸ್ಫಟಿಕದ ಸ್ವರೂಪಕ್ಕೆ ಸಂಬಂಧಪಟ್ಟಂತೆ ವಾತಾವರಣದಲ್ಲಿ `ಸ್ವರೂಪದ ನೆನಪಿನ ಅಲೆಗಳು’ ಇರಲಿಲ್ಲ. ಹೀಗಾಗಿ ಅದು ಸ್ಫಟಿಕೀಕರಣಗೊಳ್ಳಲು ಬಲುದೀರ್ಘ ಅವಧಿಯನ್ನು ತೆಗೆದುಕೊಂಡಿತು. ಆದರೆ ಅದು ಒಮ್ಮೆ ಸ್ಫಟಿಕೀಕರಣಗೊಳ್ಳುತ್ತಲೇ ಅದಕ್ಕೆ ಸಂಬಂಧಪಟ್ಟ `ಸ್ವರೂಪದ ಅಲೆಗಳು’ ಸೃಷ್ಟಿಗೊಂಡು ವಾತಾವರಣದಲ್ಲಿ ಉಳಿಯುತ್ತವೆ. ಮುಂದೆ ಪ್ರತಿಸಲ ಆ ವಸ್ತುವು ಸ್ಫಟಿಕೀಕರಣಗೊಂಡಾಗಲೂ `ಸ್ವರೂಪದ ನೆನಪಿನ ಅಲೆಗಳು’ ಪ್ರಬಲಗೊಳ್ಳುತ್ತ ಹೋಗುತ್ತವೆ. ಇದರಿಂದ ಆ ವಸ್ತುವಿನ ಸ್ಫಟಿಕೀಕರಣ ಕ್ರಿಯೆಯ ಸಮಯಾವಕಾಶವು ಕಡಿಮೆಗೊಳ್ಳುತ್ತ ಹೋಗಿ ಕೊನೆಗೆ ಅದು ಕನಿಷ್ಟತಮವೊಂದರಂತೆ ನಿರ್ದಿಷ್ಟಗೊಳ್ಳುತ್ತದೆ. ಕಾಸರವಳ್ಳಿಯವರು ತಮ್ಮ `ಕೂರ್ಮಾವತಾರ’ ಚಲನಚಿತ್ರದಮೂಲಕ, ಸಮಾಜದಲ್ಲಿ ಇದುವರೆಗೆ ಇಲ್ಲದಿದ್ದ, ಅಥವಾ ಅತ್ಯಂತ ದುರ್ಬಲವಾಗಿದ್ದ `ಕಲಾ ಪ್ರಪಂಚದಲ್ಲಿನ ಕೋಮುಸಂಘರ್ಷ’ದ `ಸ್ವರೂಪದ ನೆನಪಿನ ಅಲೆ’ಗಳನ್ನು ಉದ್ದೀಪಿಸುವಂತಹ ಕೆಲಸ ಮಾಡಿದಂತಾಗುತ್ತದೆ. ಅವರ ಈ ಕೆಲಸದ ಹಿನ್ನೆಲೆಯಲ್ಲಿ ಇರುವುದು ರೋಚಕತೆ ಮತ್ತು ಸಂಘರ್ಷಗಳ ಬಗೆಗಿನ ಆಕರ್ಷಣೆ; ಆಧುನಿಕ ಕಾಲಕ್ಕೆ ಸಲ್ಲುವ ಸ್ವರೂಪವನ್ನು ಗಳಿಸುವ ತುಡಿತ! ಆ ಚಲನಚಿತ್ರವು ಸೃಷ್ಟಿಸಿದ ಮಾರ್ಫಿಕ್ ರಿಸಾನನ್ಸ್‍ಗಳು, ಇವತ್ತು ದುರ್ಗದ ಮದಕರಿನಾಯಕ ಚಲನಚಿತ್ರದಲ್ಲಿ ನಾಯಕ ಪಾತ್ರವನ್ನು ಸುದೀಪ ಎಂಬ ನಟನು ಮಾತ್ರ ನಟಿಸಬೇಕು, ಬೇರೆ ಜಾತಿಯ ನಟನು ಆ ಪಾತ್ರದಲ್ಲಿ ನಟಿಸಕೂಡದು ಎಂದು ಮಠಾಧೀಶರೊಬ್ಬರು ಹೇಳುತ್ತಿರುವುದಕ್ಕೆ, ಕಾರಣ ಅಲ್ಲ ಎಂದು ಹೇಳಬಹುದೆ? ನನಗೆ ಗೊತ್ತಿಲ್ಲ! ಅದಿರಲಿ. ಅಂತೂ, ಆಧುನಿಕತೆ ಮತ್ತು ಅದರ ಮಾರುಕಟ್ಟೆಯ ತತ್ವಜ್ಞಾನವು ರೋಚಕತೆ ಮತ್ತು ಸಂಘರ್ಷ ಎಂತೆಂಬ ಎರಡು ಮಹಾನ್ ಪ್ರೇರಣೆಗಳನ್ನು ಸೃಷ್ಟಿಸಿ ನಮಗೆ ಕೊಟ್ಟಿವೆ. ಈ ಎರಡು ಪ್ರೇರಣೆಗಳು ನಮ್ಮ ಹೊಸ ಬರಹಗಾರರಿಗೆ ಸವಾಲುಗಳನ್ನು ಒಡ್ಡುತ್ತಿದ್ದು, ಅವರು ಇವುಗಳನ್ನು ನಿವಾರಿಸಿಕೊಂಡು, ವಸ್ತು ವಿಚಾರಗಳ ಆಳಕ್ಕಿಳಿದು ಹೊಸ ತಾತ್ವಿಕತೆಗಳನ್ನು ಶೋಧಿಸಿಕೊಳ್ಳಲು ತೊಡಗಿದ್ದಾರೆ. ಹರ್ಬರ್ಟ್ ರೀಡ್ ಕಲಾವಿದನೊಬ್ಬ ವಸ್ತು-ವಿಚಾರಗಳನ್ನು ಕುರಿತಂತೆ ತಾಳಬೇಕಾದ ನಿಸ್ಪøಹತೆಪೂರಿತವಾದ ಆಳ ಅನುಸಂಧಾನದ ಅವಶ್ಯಕತೆಯನ್ನು ಹೇಳುತ್ತಾನೆ. ಅವನ ಮಾತುಗಳು ಇಂತಿವೆ : `ಅತ್ಯುನ್ನತವಾದ ಕಲ್ಪಕತೆಯ ಸಾಮಥ್ರ್ಯವು ತನ್ನ ವಸ್ತುಗಳನ್ನು ಗ್ರಹಿಸುವ ಕ್ರಮದಲ್ಲಿರುತ್ತದೆ. ಅದು ಹೀಗಿದೆ: ಅದು ಹೊರಪದರಿನಲ್ಲಿ - ಬೂದಿಯಲ್ಲಿ – ಇಲ್ಲವೆ ಬಾಹ್ಯದ ಪ್ರತಿಮೆಗಳಲ್ಲಿ ನಿಲ್ಲುವುದಿಲ್ಲ; ಇವೆಲ್ಲವನ್ನೂ ಸೀಳಿಕೊಂಡು ಅದು ಉರಿಯುತ್ತಿರುವ ಹೃದಯದ ಕೇಂದ್ರಕ್ಕೇ ಧುಮುಕುತ್ತದೆ; ಇನ್ನಾವುದೂ ಅದರ ಆಧ್ಯಾತ್ಮಿಕತೆಯನ್ನು ತಣಿಸದು; ಅದರ `ವಸ್ತು’ ಯಾವದೇ ತೋರಿಕೆ ಅಥವಾ ಬಿನ್ನಾಣದ ನಟನಾವಳಿಗಳ ಮಜಲುಗಳನ್ನು ಹೊಂದಿದ್ದರೂ ಪ್ರಯೋಜನವಾಗದು; ಅದು ತನ್ನ ಸೀಮೆಯೊಳಗೇ ನಿಂತು, ಬೇರುಗಳನ್ನು ತೂರಿ ತೂರಿ ತಾನು ನಿರ್ವಹಿಸುವ ವಸ್ತುವಿನ ಸಾರವನ್ನೇ ಹೀರುತ್ತದೆ; ಅದು ಒಮ್ಮೆ ಭೇದಿಸಿ ಒಳಹೊಕ್ಕರೆ ಸಾಕು, ಹೊಸ ರೆಂಬೆ ಕೊಂಬೆಗಳನ್ನು ಹೊಮ್ಮಿಸುತ್ತದೆ – ತನಗೆ ಬೇಕಾದಂತೆ ಅದು ಅವುಗಳನ್ನು ಸಮರುತ್ತ ಬಾಗಿಸುತ್ತ ಈ ಹಿಂದಿನ ಗಿಡದಲ್ಲಿ ಬೆಳೆದದ್ದಕಿಂತ ಸೊಗಸಾದ ಹಣ್ಣನ್ನು ತರುತ್ತದೆ – ಆದರೆ ಹೀಗೆ ತನಗೆ ಬೇಕಾದಂತೆ ಸಮರುವ, ಬಾಗಿಸುವ ಕೆಲಸವನ್ನು ಅದು ಇಷ್ಟಪಡುವುದಿಲ್ಲ – ಎಷ್ಟೋ ಸಲ ಹೀಗೆ ಮಾಡುವಲ್ಲಿ ಅದು ನಷ್ಟವನ್ನುಂಟುಮಾಡುತ್ತದೆ; ಅದರ ಕಾರ್ಯ ಮತ್ತು ಕೊಡುಗೆ ಮೂಲಕ್ಕೆ ಬೇರನ್ನಿಳಿಸುವುದು; ಅದರ ಸ್ವಭಾವ ಮತ್ತು ಘನತೆ ಹೃದಯದಿಂದ ವಸ್ತುಗಳನ್ನು ವಶಮಾಡಿಕೊಳ್ಳುವುದರ ಮೇಲೆ ಅವಲಂಬಿತ... ಹೃದಯ ಬಡಿತದಿಂದ ಅದರ ಕೈ ದೂರಸರಿದರೆ ಅದು ಪ್ರವಾದಿಯಾಗದು; ಅದು ಕಣ್ಣೊಳಗೆ ನೋಡುವುದಿಲ್ಲ-ಧ್ವನಿಯಿಂದ ನಿರ್ಣಯಿಸುವುದಿಲ್ಲ-ಬಾಹ್ಯ ಲಕ್ಷಣಗಳಿಂದ ವರ್ಣಿಸುವುದಿಲ್ಲ; ಅದು ದೃಢಗೊಳಿಸಲಿ, ನಿರ್ಣಯಿಸಲಿ ಅಥವಾ ವರ್ಣಿಸಲಿ - ಅದೆಲ್ಲ ಒಳಗಿನಿಂದಲೇ ಸ್ಥಿರೀಕರಣಗೊಳ್ಳುತ್ತದೆ...’. ಅನೇಕ ಶಕ್ತ ಹೊಸ ಲೇಖಕರು ಈ ದಿಕ್ಕಿನಲ್ಲಿ ಸಾಗುತ್ತ `ಹೊಸ ಹಣ್ಣು’ಗಳನ್ನು ನೀಡುತ್ತಿದ್ದಾರೆ. ಇದಕ್ಕೆ ಒಂದು ಸರಳ ಕವಿತೆಯ ಉದಾಹರಣೆಯನ್ನು ನೀಡುತ್ತೇನೆ :
ಗಿಡುಗವಾಗಬಹುದು
ಪಿಕಳಾರ ಹಕ್ಕಿಯೊಂದು
ತಲೆಯ ಜುಟ್ಟಿನ ಮೇಲಷ್ಟು ಚಿಂತೆ, ನೋವುಗಳ ಹೊತ್ತುಕೊಂಡು
ಅಳುತ್ತಾ ದೇವರನ್ನು ಕರೆಯುತ್ತಾ..
ಹೌದಲ್ಲವಾ...?
ಇಂಥ ಯಾವ ಪುಟ್ಟ ಹಕ್ಕಿಗಾದರೂ
ಗಾತ್ರಕ್ಕೆ ತಕ್ಕಷ್ಟೇ ಕೊಕ್ಕು, ಕಾಲುಗುರುಗಳು
ಮತ್ತವು ತಮ್ಮ ಸಾಮಥ್ರ್ಯಕ್ಕೆ ತಕ್ಕಷ್ಟೇ ಇರುವ
ಶತ್ರುಗಳನು ಜಯಿಸಬಲ್ಲುದು
ಅಲ್ಲದೆ ಇಂಥ ಪಿಕಳಾರ ಹಕ್ಕಿಯೊಂದು
ಅಪರಾತ್ರಿಯ ಕಾಳ್ಗತ್ತಲಲಿ ಗೂಡ ಹೊಕ್ಕು
ಹಕ್ಕಿ ಕುಕ್ಕಿದರೂ ಕಿರುಚಿ ಪರಚಿದರೂ
ನುಗ್ಗಿ ಮೊಟ್ಟೆ, ಮರಿಗಳ
ನುಂಗುವ ಕಾಳಸರ್ಪವನ್ನಾಗಲೀ
ಹಾಡು ಹಗಲಲ್ಲೇ ರೊಯ್ಯನೆ
ಎರಗಿ ಹೊತ್ತೊಯ್ಯುವ ಗಿಡುಗವನ್ನಾಗಲೀ
ಎದುರುಹಾಕಿಕೊಂಡು ಸೆಣಸಿ ಮಣಿಸಿದ
ಉದಾಹರಣೆಯಾದರೂ ಇಲ್ಲ.
`ಹಾವು ಬಂದರೆ ಹಾರಿಯೇನು
ಗಿಡುಗ ಬಂದರೆ ಪೊದೆಗಳಲಿ ಅಡಗಿಯೇನು
ನನ್ನ ಮೊಟ್ಟೆ ಮರಿಗಳನು ಏನುಮಾಡಲಿ
ದೇವರೇ ಬಾ ಉತ್ತರಿಸು’
ಪಿಕಳಾರದ ಮೊರೆಗೆ
ಅಂತೂ ದೇವರೊಲಿದು ಬಂದ
ದೇವರೆಂದರೆ ಸರ್ವಾಂಗ ಸುಂದರನೆಂದು
ಕೇಳಿ ಬಲ್ಲ ನನಗೆ ಇವನ್ಯಾಕೋ
ಪಕ್ಕಾ ವ್ಯಾಪಾರಕ್ಕೆ ಕುಳಿತ
ಮಾರ್ವಾಡಿಯ ಹಾಗೆಯೇ ಕಂಡ
`ಎಲವೋ ಪಿಕಳಾರ ಹಕ್ಕಿಯೇ
ನಿನಗೆ ಆತಂಕಗಳ ಜೊತೆ
ಬದುಕಲಾಗದು ಅಂದರೆ
ಬೇಕಾದರೆ ನೀನು ಗಿಡುಗವಾಗಬಹುದು’
ನನ್ನ ಹಾಗೆಯೇ ಬುದ್ಧಿಗೇಡಿಯಿರಬೇಕು
`ನೋ ನೋ ನೆವರ್!’
ದೇವರ ಮಾತು ಕೇಳಿದ್ದೇ
ಚಿಟ್ಟನೆ ಚೀರಿತು ಪಿಕಳಾರ ಹಕ್ಕಿ
`ಇನ್ನೆಂದಾದರೂ ನೊಂದು ನನ್ನ ಬಳಿ
ಬರುವಾಗ ನನ್ನ ಈ ಮಾತು ನೆನಪಿಸಿಕೋ’
ಎಂದು ಹಾರಿದ ದೇವರು
ಹೌದು, ಇಲ್ಲಿ
ಆತಂಕಗಳ ಹೊತ್ತು ಬದುಕುವ
ಪುಟ್ಟ ಹಕ್ಕಿಯಾಗಲಾಗದಿರೆ
ದೊಡ್ಡ ಗಿಡುಗವಾಗಬಹುದು
- ಕಾದಂಬಿನಿ ರಾವಿ, ``ಹಲಗೆ ಮತ್ತು ಮೆದುಬೆರಳು’’ ಸಂಕಲನ; ಪುಟ:152-153.
ಲೋಹಿಯಾರವರ `ಇತಿಹಾಸಚಕ್ರ’ದ ವೈಚಾರಿಕತೆ ಮತ್ತು ಕನ್ನಡ ಬಂಡಾಯ ಕಾವ್ಯ ಪರಂಪರೆಗಳ ವೈಚಾರಿಕತೆಗಳನ್ನು ಬೆನ್ನಿಗೆ ಕಟ್ಟಿಕೊಂಡು ಶೋಷಣೆಯೆಂಬ ವಸ್ತುವಿನ ಎಲ್ಲ ಬಾಹ್ಯಗಳನ್ನೂ `ಸೀಳಿಕೊಂಡು, ಉರಿಯುತ್ತಿರುವ ಹೃದಯದ ಕೇಂದ್ರಕ್ಕೇ ಧುಮುಕುತ್ತದೆ’ ಈ ಕವಿತೆ. ಇದು ಬರೀ ಬಡ ಪಿಕಳಾರ ಹಕ್ಕಿಯ ನೋವಿನ ಕಥೆಯನ್ನು ಹೇಳುವ ಕವಿತೆ ಮಾತ್ರವಲ್ಲ; ಇದು ಇಡೀ ವ್ಯವಸ್ಥೆಯ ಹದದ ಬಗೆಗಿನ ತಾತ್ವಿಕ ಪ್ರಶ್ನೆಯನ್ನು ಎತ್ತುತ್ತದೆ. ಪಿಕಳಾರ-ಗಿಡುಗದ ದ್ವಂದ್ವಮಾನವನ್ನು ಮೀರುವ, ಸೌಹಾರ್ದದ ಅಂತಿಮ ಸ್ವರೂಪವನ್ನು ಕುರಿತು ಚಿಂತಿಸುತ್ತದೆ. ಪಿಕಳಾರ-ಗಿಡುಗಗಳ ಸಂಬಂಧದಲ್ಲಿ ಕವಿ ಬಯಸುವ ಸೌಹಾರ್ದದ ಸ್ವರೂಪ ಸಾಧ್ಯವಾಗಲಿಕ್ಕಿಲ್ಲವೇನೋ! ಆದರೆ ಮನುಷ್ಯ ಸಂಬಂಧಗಳಲ್ಲಿ ಇದು ಸಾಧನೀಯವಾದದ್ದು ಅಲ್ಲವೆ? ಮನುಷ್ಯ ಮನುಷ್ಯರ ನಡುವಿನ ಸಂಬಂಧಕ್ಕೆ ಪಿಕಳಾರ-ಗಿಡುಗಗಳ ದ್ವಂದ್ವಮಾನಕ್ಕೆ ಹೊರತಾದ ಬೇರೊಂದು ಸಾಧ್ಯತೆಯು ಲಭ್ಯವಾಗದಂತಹದೇನೂ ಅಲ್ಲ. ಜೀವಜಗತ್ತಿನಲ್ಲಿ ಜೀವಿಗಳ ನಡುವಿನ ಸಂಬಂಧಗಳ ಮ್ಯುಚುವಾಲಿಸ್ಮ್ ಅಥವಾ ಸಿಂಬಯಾಸಿಸ್ ರೀತಿಯ ಸಂಬಂಧಗಳು ಸಮಾಜವನ್ನು ಕಟ್ಟಿಕೊಳ್ಳಲು ಒದಗಿದ ಪ್ರಧಾನ ಪ್ರೇರಣೆಗಳು. ಈ ಸಂಬಂಧಗಳಲ್ಲಿ ಪರಸ್ಪರ ಅವಲಂಬನೆಯ, ಮತ್ತು ಈ ಅವಲಂಬನೆಯಲ್ಲಿ ಎರಡಕ್ಕೂ ಅನುಕೂಲವಾಗುವಂತಹ ಸಂಬಂಧ ಏರ್ಪಡುತ್ತದೆ. ಅಂತಹ ಸುವರ್ಣಮಾಧ್ಯಮವನ್ನು ಹುಡುಕಿಕೊಳ್ಳಬೇಕೆನ್ನುವ ಆಶಯವನ್ನು ಕವಿತೆ ಸಮರ್ಥವಾಗಿ ಮಂಡಿಸುತ್ತದೆ.
ರೋಚಕತೆ ಮತ್ತು ಸಂಘರ್ಷಗಳನ್ನು ಮೀರುವ ಇನ್ನೊಂದು ವಿಧಾನವನ್ನು ಅನೇಕ ಹೊಸ ಲೇಖಕರು ಪ್ರಯೋಗಿಸುತ್ತಿರುವುದನ್ನು ಕಾಣುತ್ತೇವೆ. ಈ ವಿಧಾನ ಯಾವುದೆಂದರೆ, ರೋಚಕತೆಯನ್ನು ರೋಚಕತೆಯಿಂದಲೇ ಮಾಗಿಸುವುದು; ರೋಚಕತೆಯ ಕೊನೆತುದಿಯಾಗಿ ಉದ್ರೇಕವನ್ನು ಹುಟ್ಟಿಸದೆ, ಅದರ ಬದಲಾಗಿ ಆಳ ವಿಷಾದವನ್ನು ಉದ್ದೀಪಿಸುವುದು. ಹೀಗೆ, ಆಧುನಿಕ ಮಾರುಕಟ್ಟೆ ಉತ್ಪಾದಿಸಿಕೊಂಡ ರೋಚಕತೆಯ ಸಾಮಾನ್ಯ ಉದ್ದೇಶವನ್ನು ಉದ್ವಸ್ತಗೊಳಿಸುವ ಮೂಲಕ ಈ ವಿಧಾನವು ವಸ್ತುವಿನ ಆಳದ ಹೃದಯಕ್ಕೆ ಧುಮ್ಮಿಕ್ಕುವ ಮಾರ್ಗವನ್ನು ಶೋಧಿಸಿಕೊಳ್ಳುತ್ತದೆ. ಟಿ.ಎಸ್.ಗೊರವರ ಅವರ `ರೊಟ್ಟಿ ಮುಟಗಿ’ ಕಾದಂಬರಿಯನ್ನು ನೋಡಿರಿ. ಇಲ್ಲಿ ಬರುವ ದ್ಯಾಮನ ಸಂಘರ್ಷರಹಿತ ಅವಸ್ಥಾಂತರಗಳ ಕೊನೆಗೆ, ಅವನು ಇದ್ದಲಿಭಟ್ಟಿಯ ಬೆಂಕಿಯೊಳಕ್ಕೆ ಸೇರಿಹೋಗಿಬಿಡುತ್ತಾನೆ! ಆಗ ಓದುಗ ಒಂದು ಅಗಾಧವಾದ ಧಕ್ಕೆಗೆ ಒಳಗಾಗುತ್ತಾನೆ. ಇದು ನಿಜವೇ? ಇದು ಭ್ರಮೆಯೇ? ಊಹೂಂ...! ಯಾವುದನ್ನೂ ಕಾದಂಬರಿ ಪುಷ್ಟೀಕರಿಸುವುದಿಲ್ಲ. ನೀವು ನಿಜ ಎಂದುಕೊಂಡರೆ ನಿಜ; ಆಗ ಇದು ದ್ಯಾಮನ ಜೀವನದ ಅವಸ್ಥಾಂತರಗಳು ಪಡೆಯುವ ನಿರರ್ಥಕತೆಯ ವಿನ್ಯಾಸವನ್ನು, ಅಥವಾ, ಸಮಷ್ಠಿಯ ಬದುಕಿನ ವಿಧಾನಗಳಿಂದ ದ್ಯಾಮನು ನಿಧಾನವಾಗಿ ಬಿಡಿಸಿಕೊಳ್ಳುತ್ತ ವ್ಯಷ್ಟಿ ಪ್ರಜ್ಞೆಗೆ ತನ್ನನ್ನು ಕೊಟ್ಟುಕೊಳ್ಳುವುದನ್ನು ನಿಮಗೆ ಮನಗಾಣಿಸುತ್ತದೆ. ಇನ್ನು ನೀವು ಇದನ್ನು ಭ್ರಮೆ ಎಂದುಕೊಂಡರೆ; ಸರಿ ಇದು ಭ್ರಮೆಯೆ! ಆಗ ಅದು ದ್ಯಾಮನ ಮಾನಸಿಕ ತುಮುಲಗಳನ್ನು, ಕಳೆದುಹೋದ ತಾಯಿಯಪ್ರೀತಿಯ ಹಂಬಲವನ್ನು, ಬದುಕನ್ನು ಕುರಿತು ದ್ಯಾಮನ ಮಾನಸಿಕ ಅತೃಪ್ತಿಯನ್ನು... ಮುಂತಾದವುಗಳನ್ನು ನಿಮ್ಮ ಮನಸಿನಲ್ಲಿ ಹೊಳೆಯಿಸುತ್ತದೆ. ಇದನ್ನು ನೀವು ನಿಜವೆಂದುಕೊಳ್ಳಿರಿ ಅಥವಾ ನಿಜವಲ್ಲವೆಂದುಕೊಳ್ಳಿರಿ, ಆಗೆಲ್ಲ ಮೇಲೆ ಹೇಳಿದ ಅರ್ಥವಿನ್ಯಾಸಗಳು ಹುಟ್ಟುತ್ತಾವೆಯೇ ಹೊರತು ಉದ್ರೇಕದ, ಸಂಘರ್ಷದ ವಿನ್ಯಾಸಗಳು ಮನದಲ್ಲಿ ಮೂಡುವುದಿಲ್ಲ. ಬದಲಾಗಿ ವಿಷಾದದ ಒಂದು ಸ್ಥಾಯಿ, ಮನದ ಮನೆಯಲ್ಲಿ ಮೂಡಿನಿಲ್ಲುತ್ತದೆ. ಹಾಗೆಯೇ, ಚೀಮನಹಳ್ಳಿ ರಮೇಶ ಅವರ `ಟೈರ್ಸಾಮಿ’ ಕಾದಂಬರಿಯನ್ನು ನೋಡಿರಿ. ಇಲ್ಲಿಯೂ ರೋಚಕತೆಯನ್ನು ಮಾಗಿಸುವ ಪ್ರಯೋಗವಿದೆ. ಈ ಪ್ರಯೋಗದಲ್ಲಿಯೂ ಮನದ ಆಳದಲ್ಲಿ ಎರಡು ನೆಲೆಗಳಿಂದ ವಿಷಾದವು ನೆಲೆಗೊಳ್ಳುತ್ತದೆ. ಒಂದು, ನವೀನನ (ಟೈರ್ಸಾಮಿಯಾಗಿ ಪರಿವರ್ತನೆಗೊಳ್ಳುವ ಮೊದಲಿನ ವ್ಯಕ್ತಿ) ಕೌಟುಂಬಿಕ ಜೀವನದ ವಿಘಟನೆಯ ನೆಲೆಯಲ್ಲಿ ಹುಟ್ಟುವ ವಿಷಾದ (ಇದನ್ನು ಹೇಳುವ ವಿವರಗಳು ಅತ್ಯಂತ ಆಘಾತಕಾರಿಯಾದವುಗಳು ಆಗಿವೆ), ಮತ್ತು ಇನ್ನೊಂದು ಟೈರ್ಸಾಮಿಯ ಸಾವಿನ ನೆಲೆಯಲ್ಲಿ ಹುಟ್ಟುವ ವಿಷಾದ. ಕಾದಂಬರಿಯಲ್ಲಿ ಈ ಎರಡೂ ದುರಂತಗಳ ಬಗೆಗೆ ವಿಷಾದ ಪಡುವ ಬೇರೆ ಬೇರೆ ಪಾತ್ರಗಳಿರುವಂತೆ, ಓದುಗ ವರ್ಗದಲ್ಲಿಯೂ ಈ ಎರಡರ ಬಗೆಗೆ ವಿಷಾದ ಪಡುವ ಪ್ರತ್ಯೇಕ ಓದುಗ ವರ್ಗಗಳ ಸಾಧ್ಯತೆಯಿದೆ. ಹಾಗೆಯೇ, ಟೈರ್ಸಾಮಿಯ ರೋಚಕ ಚಿತ್ರಣವು ನಮ್ಮಲ್ಲಿ ಉದ್ರೇಕದ ಭಾವವನ್ನು ಉದ್ದೀಪಿಸದೇ ವಿಷಾದದ ಸ್ಥಾಯಿಯೊಂದನ್ನು ಹುಟ್ಟಿಸುವುದು ರೋಚಕತೆಯನ್ನು ಮಾಗಿಸುವುದರಿಂದಾಗುವ ಪರಿಣಾಮವು.
***
ರೋಚಕತೆ ಮತ್ತು ಸಂಘರ್ಷಗಳ ಅವಳಿ-ಜವಳಿಗಳು ಸಮಕಾಲೀನ ಆಧುನಿಕ-ಉಪಭೋಗವಾದೀ ಸಮಾಜದ ಅಂತರಾಳದ ಪ್ರೇರಣೆಗಳಾಗಿದ್ದರೆ, ಒಟ್ಟು ಸಮಾಜದ ಸಾರ್ವತ್ರಿಕವಾದ ಪ್ರೇರಣೆಗಳಾಗಿ ಮೂರು ಬಲಗಳನ್ನು ಕಾಣುತ್ತೇವೆ. ಅವೆಂದರೆ, ಭೌತಾತೀತ ಚಿಂತನೆ (ಮೆಟಾಫಿಸಿಕ್ಸ್ - ಸ್ಪಿರಿಚುವಲಿಸ್ಮ್), ಸಾಂಸ್ಕøತಿಕ ಅಸ್ಮಿತೆ (ಸಾಮಾಜಿಕ ಸಂರಚನೆ), ಮತ್ತು ಅಧಿಕಾರ ರಾಜಕಾರಣ. ಸಮಕಾಲೀನ ಆಧುನಿಕ ಸಮಾಜದಲ್ಲಿ ಅಧಿಕಾರ ರಾಜಕಾರಣವು ಸಮಾಜ ಪ್ರೇರಣೆಯ ಪ್ರಧಾನ ಬಲವಾಗಿ ರೂಪುಗೊಂಡಿದೆ. ಈ ಬಲವು ಮತ್ತು ಭೌತವಾದೀ ಆಮಿಷಗಳು ಮೊದಲ ಪ್ರೇರಣೆಯನ್ನು ನಷ್ಟಗೊಳಿಸಿಬಿಟ್ಟಿದೆ. ಹೀಗಾಗಿ ಆಧುನಿಕ ಸಮಾಜವು ಸ್ಪಿರಿಚುವಲಿಸ್ಮ್‍ಗೆ ಸಂವೇದನೆಯನ್ನು ತೋರುವುದನ್ನು ಕನಿಷ್ಟಗೊಳಿಸಿಕೊಂಡಿದೆ ಅಥವಾ ನಿಲ್ಲಿಸಿಬಿಟ್ಟಿದೆ. ಸಮುದಾಯಗಳು ತತ್ವಪದಕಾರರು, ಸೂಫಿಗಳು, ಭಕ್ತಿಪಂಥಗಳು ರೂಢಿಸಿಕೊಂಡಿದ್ದ ಅವೈದಿಕ ಸ್ಪಿರಿಚುವಲಿಸ್ಮ್‍ನ್ನು ಕೂಡ ನಿರಾಕರಿಸಿಬಿಟ್ಟಿವೆ. ಅಪಮೌಲ್ಯಗೊಳಿಸಿದ ಸ್ಪಿರಿಚುವಲಿಸ್ಮ್‍ನ್ನು ಸಮುದಾಯಗಳು ತಮ್ಮ ಸಾಂಸ್ಕøತಿಕ ಅಸ್ಮಿತೆಯ ಹುಡುಕಾಟದ ಪ್ರೇರಣೆಯಾಗಿ ಸ್ವೀಕರಿಸುತ್ತಿವೆ. ಅಧಿಕಾರ ರಾಜಕಾರಣದ ಪ್ರೇರಣೆಯಲ್ಲಿ ಸಾಂಸ್ಕøತಿಕ ಅಸ್ಮಿತೆಯ ಚಳುವಳಿಗಳು, ಸಿದ್ಧ ಸಂತರುಗಳಿಗೆಲ್ಲ ಜಾತಿಗಳ ದೀಕ್ಷೆಯನ್ನು ನೀಡಹೊರಟಿವೆ. ಹೊಸ ಲೇಖಕರಿಗೆ ಇಂತಹ ಸಾಮಾಜಿಕ ಸ್ಥಿತಿಗತಿಗಳು ಒಂದು ದೊಡ್ಡ ಸವಾಲಾಗಿ ಪರಿಣಮಿಸಿದೆ. ಕೆಲವು ಶಕ್ತ ಲೇಖಕರು ಈ ಸವಾಲನ್ನು ಎದುರುಗೊಂಡು ಕೃತಿರಚನೆಯಲ್ಲಿ ತೊಡಗಿದ್ದಾರೆ. ಅರೀಫ ರಾಜಾ ಅವರ `ನಕ್ಷತ್ರ ಮೋಹ’ ಕವಿತಾ ಮಾಲಿಕೆಯ ಕವಿತೆಗಳನ್ನು ಈ ದೃಷ್ಟಿಯಿಂದ ನೋಡಬಹುದು. ಮೊದಲಾಗಿ, ರಾಜಾ ಅವರ `ನಕ್ಷತ್ರ ಮೋಹ’ ಸಂಕಲನದ ಕವಿತೆಗಳು ಓದುಗನಿಗೆ ತನ್ನಲ್ಲಿ ವಿಸ್ತಾರವಾದ ಅರಿವಿನ - ಸ್ವಾತಂತ್ರ್ಯದ ಅವಕಾಸವಿದೆ ಎನ್ನುವುದನ್ನು ಮನಗಾಣಿಸುತ್ತವೆ. ಇದೊಂದು ಸ್ಪಿರಿಚುವಲಿಸ್ಮ್‍ನ ದೀಕ್ಷಾ ವಿಧಾನವೇ ಹೌದು! ಈ ಕವಿತೆಗಳು ಭೌತಿಕ, ಬೌದ್ಧಿಕ (ಮೆಕ್ಯಾನಿಕಲ್) ರೋಚಕತೆಗಳನ್ನು ಪರಿವರ್ತಿಸಿ ಜೈವಿಕ ಲೋಕದೊಳಕ್ಕೆ ತಂದುನಿಲ್ಲಿಸುತ್ತವೆ. ಯಾಕೆಂದರೆ, ಇಲ್ಲಿನ ಕವನಗಳನ್ನು ಬೌದ್ಧಿಕ ತರ್ಕವನ್ನು ಮೀರಿ ಹೃದಯದಿಂದ ಅಂತಃಕರಣಪೂರಕವಾಗಿಯೇ ಓದಬೇಕಾಗುತ್ತದೆ. ನಕ್ಷತ್ರಲೋಕದ ಅನೂಹ್ಯ ಘಟನೆಗಳನ್ನು ಹೇಳುತ್ತವಾದ್ದರಿಂದ ಇಲ್ಲಿನ ಒಂದೊಂದು ಕವಿತೆಯೂ ಮಹಾನ್ ರೋಚಕಗಳೇ! ಈ ನಕ್ಷತ್ರ ಮೋಹದ ಒಂದು ಕವಿತೆಯನ್ನು ನೋಡಿರಿ:
ನಕ್ಷತ್ರ ಮೋಹ – 1
ನನ್ನ ಕಣ್ಣಮುಂದೆ
ನಕ್ಷತ್ರ ನರ್ತಿಸುತ್ತದೆ
ಒಂದು ಕೊಕ್ಕರೆಯ ಹಾಗೆ
ಅದೆಷ್ಟೋ ಊರುಕೇರಿಗಳ ದಾಟಿ
ಕಾಡುಮೇಡುಗಳ ಅಲೆದು
ನನ್ನ ಮೇಲೇ ಕಣ್ಣಿಟ್ಟು
ಹಿಂಬಾಲಿಸುತ್ತದೆ ಅದು
ಸಾಕು ಬೆಕ್ಕಿನ ಹಾಗೆ ಮುದ್ದಾಗಿ
ಇಳಿಸಂಜೆಯಲ್ಲಿ
ಹೀಗೆ ಬೆನ್ನುಹತ್ತಿರುವ ನಕ್ಷತ್ರಕ್ಕೆ
ಅವಳ ಹೆಸರಿಡೋಣವೆಂದುಕೊಳ್ಳುತ್ತೇನೆ
ಏನೋ ದಿಗಿಲಾಗಿ
ಕಾರಿರುಳು ಕಸದ ತೊಟ್ಟಿಯಲ್ಲಿ
ಯಾರೋ ಬಿಸಾಡಿ ಹೋದ
ನಿಷ್ಪಾಪಿ ಕೂಸೊಂದರ ಕಣ್ಣುಗಳು ನೆನಪಾಗುತ್ತವೆ
ಕತ್ತೆತ್ತಿ ನೋಡುತ್ತೇನೆ
ಬಾನ ತೊಟ್ಟಿಲ ತುಂಬ ಲಕ್ಷ ನಕ್ಷತ್ರಗಳು
ತಂದೆತಾಯಿಗಳಿಲ್ಲದ ತಬ್ಬಲಿ ಕೂಸುಗಳು
ಇದು ಯಾವ ಜನ್ಮದ ಕನಸೊ
ನಾ ಹೋದಲ್ಲೆಲ್ಲಾ ಹಿಂದೆ ಬಂದಿದೆ
ಒಂದು ಒಂಟಿನಕ್ಷತ್ರ
ಅನಾಥ ಮಗುವಾಗಿ
- ಅರೀಫ್ ರಾಜಾ; ``ನಕ್ಷತ್ರ ಮೋಹ’’, ಪುಟ: 11-12.
-ಈ ಕವಿತೆಯು, ನಕ್ಷತ್ರವು ನಮ್ಮೆದೆಗೆ ನಿಕಟಗೊಳ್ಳುವ – ಅಂದರೆ, ಲೌಕಿಕ ರೋಚಕತೆಯು ನಿರಾಕರಣೆಗೊಂಡು ಅಂತಃಕರಣದ-ಅಧ್ಯಾತ್ಮದ ರೋಚಕತೆಯೊಂದನ್ನು ನಮಗೆ ನಿಕಟಗೊಳಿಸುವ- ವಿನ್ಯಾಸವೊಂದನ್ನು ಪ್ರಸ್ತುತಪಡಿಸುತ್ತದೆ. ಮೊದಲು, ದೂರ – ಆಕಾಶದಲ್ಲಿ ಹಾರುವ ಕೊಕ್ಕರೆ, ಆಮೇಲೆ ದೇಹಸ್ಪರ್ಶಿಯಾದ ಬೆಕ್ಕು, ಅದಾದಮೇಲೆ ಅಂತರಂಗದೊಳಗಿನ `ಅವಳು’! ಅವಳಾದರೋ `ಸ್ವ’ದ ಹೊರಗಿನವಳು. ಅವಳಿಗಿಂತಲೂ ಅತಿ ಹತ್ತಿರವಾದುದೆಂದರೆ, ತನ್ನೊಳಗಿನದೇ ಆದ ಅಂತಃಕರಣದ ಭಾವ! ಇಂಥ ಭಾವವೊಂದು `ಯಾರೋ ಬಿಸಾಡಿ ಹೋದ ನಿಷ್ಪಾಪಿ ಕೂಸು’ ಮೂಲಕ ಬರುತ್ತದೆ. ಇಂಥ ತಿಳುವಳಿಕೆಯ ನೆಲೆಯಲ್ಲಿ ಇಡೀ ಆಕಾಶವು ಒಂದು ತೊಟ್ಟಿಲಾಗಿಬಿಡುತ್ತದೆ! ಮತ್ತು ಇದು ಜನ್ಮಾಂತರದ ಕಾಡುವಿಕೆಯಾಗುತ್ತ ಮತ್ತೊಮ್ಮೆ ಭೌತಿಕ ತರ್ಕದ ಜಾಲವನ್ನು ನಿವಾರಿಸಿಕೊಂಡುಬಿಡುತ್ತದೆ! ತನ್ನ ಕವಿತೆಗಳ ಹೊರಗಡೆಯೂ ಅರೀಫ ರಾಜಾ ಸಮಕಾಲೀನ ಸಮಾಜ ವಿಧಿಸುವ `ಸಾಂಸ್ಕøತಿಕ ಅಸ್ಮಿತೆ’ಯನ್ನು ನಿರಾಕರಿಸುವಲ್ಲಿ ಅವರು ಹೊಸ ಮೌಲ್ಯದ ಹುಡುಕಾಟದಲ್ಲಿರುವುದನ್ನು ಸ್ಪಷ್ಟಪಡಿಸುತ್ತದೆ.
***
ಹೊಸಕಾಲವನ್ನು ಎದುರಿಸುವ ಇನ್ನೊಂದು ವಿಧಾನವೂ ಕನ್ನಡ ಸಾಹಿತ್ಯದಲ್ಲಿ ಕಾಣುತ್ತಿದೆ. ಅದೆಂದರೆ ಆಧುನಿಕತೆಯನ್ನು ಅಪ್ಪಿಕೊಂಡ ನಾಗರಿಕ ಸಮಾಜದಲ್ಲಿ ಹಳೆಯ ಶೋಷಣಾ ವಿನ್ಯಾಸಗಳು ಕಣ್ಮರೆಯಾಗಿವೆಯೇ ಅಥವಾ ಬೇರೆ ಸ್ವರೂಪಗಳನ್ನು ಪಡೆದಿವೆಯೋ ಎಂದು ಶೋಧಿಸಿಕೊಳ್ಳುವ ರೀತಿ. ಕಾವ್ಯಾ ಕಡಮೆ ಅವರ `ಪುನರಪಿ’ ಕಾದಂಬರಿಯಲ್ಲಿ ಈ ಶೋಧನೆಯ ಕೆಲಸ ಅದ್ಭುತವಾಗಿ ನಡೆಯುತ್ತದೆ. ಭಾರತೀಯ ಸಮಾಜದಲ್ಲಿ (ನಿಜವಾಗಿ ಇದು ಜಾಗತಿಕ ಪ್ರಶ್ನೆಯೇ ಹೌದು) ಗಂಡು-ಹೆಣ್ಣಿನ ಸಂಬಂಧದ ಶೋಷಣಾ ಸ್ವರೂಪವು ಸ್ಪಷ್ಟವಾದದ್ದು. ಹೆಣ್ಣಿನ ಶೋಷಣೆಯ ಈ ಸಂರಚನೆ ಹೊಸಕಾಲದಲ್ಲಿ ನಿವಾರಣೆಗೊಂಡಿದೆಯೆ ಎನ್ನುವ ಪ್ರಶ್ನೆಯನ್ನು ಈ ಕಾದಂಬರಿ ಚರ್ಚಿಸುತ್ತದೆ. ಅಸ್ಮಾ ಮತ್ತು ಅನುಷಾ ಇಬ್ಬರು ಹುಡುಗಿಯರ ನಡುವಿನ ಸಲಿಂಗ ಕಾಮದ ಆಧುನಿಕ ವಸ್ತುವನ್ನಿಟ್ಟುಕೊಂಡು ಕಾದಂಬರಿ ನಡೆಯುತ್ತದೆ. ಅವರಿಬ್ಬರೂ ಒಟ್ಟಿಗೆ ಬದುಕಲು ಆರಂಭಿಸುತ್ತಾರೆ. ಈ ಸಂಬಂಧದಲ್ಲಿ ಅನುಷಾ ಗಂಡಸಿನ-ಗಂಡನ ಪಾತ್ರವನ್ನು ನಿರ್ವಹಿಸುತ್ತಾಳೆ ಮತ್ತು ಅಸ್ಮಾ ಹೆಣ್ಣಿನ-ಹೆಂಡತಿಯ ಪಾತ್ರವನ್ನು ನಿರ್ವಹಿಸುತ್ತಾಳೆ. ಎರಡು ಹೆಣ್ಣುಗಳ ನಡುವಿನ ಈ ಸಂಬಂಧದಲ್ಲಿ, ಅನುಷಾ ಅಸ್ಮಾಳನ್ನು ಶೋಷಿಸುವ ವಿನ್ಯಾಸ ಏರ್ಪಡುತ್ತದೆ. ಅಸ್ಮಾ ಕಸ ಗುಡಿಸಬೇಕು, ನೆಲ ಒರೆಸಬೇಕು, ಅಡುಗೆ ಮಾಡಬೇಕು, ಪಾತ್ರೆ ತೊಳೆಯಬೇಕು... ಒಟ್ಟು ಸಾಂಪ್ರದಾಯಿಕ ಕುಟುಂಬದಲ್ಲಿ ಹೆಣ್ಣು ಮಾಡಬೇಕಾದ ಎಲ್ಲವುಗಳೂ ಅಸ್ಮಾಳ ಪಾಲಿಗೆ ಬರುತ್ತವೆ. ಇದಕ್ಕೆ ಪ್ರತಿಯಾಗಿ ಅನುಷಾ ಗಂಡಿನ ಪಾತ್ರವಹಿಸುತ್ತ, ಅಸ್ಮಾ ಅಡಿಗೆ ಮಾಡುತ್ತಿದ್ದರೆ ಹೊರಗೆ ಸೋಫಾದ ಮೇಲೆ ವಿರಮಿಸುತ್ತ ಟೀವಿ ನೋಡುತ್ತಾಳೆ; ತನ್ನ ರುಚಿಗೆ ತಕ್ಕುದಾಗಿ ಅಸ್ಮಾ ಅಡಿಗೆ ಮಾಡಿ ಬಡಿಸುತ್ತಿಲ್ಲವೆಂದು ರೇಗುತ್ತಾಳೆ. ಕಾವ್ಯಾ ಕಡಮೆ ಗಂಡು-ಹೆಣ್ಣಿನ ಸಂಬಂಧದ ಆದಿಮ ಸ್ವರೂಪದ ಬಗೆಗೆ ನಮಗೆ ಹೊಸ ತಿಳುವಳಿಕೆಯನ್ನು ನೀಡುತ್ತಾರೆ. ಈ ಶೋಷಣಾ ಸಂರಚನೆಯು ಬರೀ ಲಿಂಗ ಆಧಾರಿತವಾದದ್ದಲ್ಲ; ಬದಲಾಗಿ ಇದು ಗಂಡ-ಹೆಂಡತಿ ಎಂಬ ಸಾಮಾಜಿಕ ಸಂಸ್ಥೆಯ ಅಸ್ತಿತ್ವದಲ್ಲಿಯೇ ಅಡಕವಾದದ್ದು ಎಂಬುದನ್ನು ತೋರಿಸುತ್ತಾರೆ. ಈ ವಿಷಯದ ಹೊರತಾಗಿ `ಮನೆಯೂಟ’ ಎನ್ನುವ ಆಧುನಿಕ ಸೇವೆಯೊಂದರ ಬಗೆಗೂ ಹೇಳುತ್ತ, ಹೊಸ ಕಾಲಕ್ಕೆ ಅವಶ್ಯವಾದ ಹೊಸ ಸೇವೆಗಳನ್ನು ಶೋಧಿಸಿಕೊಳ್ಳುವ ಬಗೆಯೂ ಕಾದಂಬರಿ ಸೂಚನೆ ನೀಡುತ್ತದೆ.
***
ಕನ್ನಡ ಸಾಹಿತ್ಯದಲ್ಲಿ ಇತ್ತೀಚಿನ ಪ್ರವೃತ್ತಿಗಳು ಇವಷ್ಟೇ ಎನ್ನುವಂತಿಲ್ಲ. ಚಳುವಳಿ ರಹಿತವಾದ ಇಂದಿನ ಕಾಲದಲ್ಲಿ ಹಳೆಯ ಚಳುವಳಿಗಳ ನೆನಪುಗಳು-ಹ್ಯಾಂಗ್ ಓವರ್‍ಗಳೂ ಕೆಲವರಲ್ಲಿ ಮುನ್ನೆಲೆಯಲ್ಲಿ ಇವೆ. ಆದರೆ ಅವು ಬಹುತೇಕವಾಗಿ ಹರ್ಬರ್ಟ್ ರೀಡ್ ಹೇಳುವ ರೀತಿಯ – ವಸ್ತುವಿನ ಹೃದಯಕ್ಕೇ ಧುಮ್ಮಿಕ್ಕಿ ಶೋಧಿಸಿಕೊಳ್ಳುವ ಸ್ಪಂದನಶೀಲತೆಯಾಗಿಲ್ಲ. ಸಮಕಾಲೀನ ಸಮಾಜವನ್ನು ಹಳೆಯ ವೈಚಾರಿಕತೆಯ ನೆಲೆಯಲ್ಲಿ ಶೋಧಿಸಿಕೊಳ್ಳುವುದು ಸಾಧ್ಯವಿಲ್ಲದ ಸಂಗತಿ. ಹೊಸ ಕಾಲದ ಸಾಮಾಜಿಕ ಸಂದರ್ಭಗಳು, ಶೋಷಣೆಯ ಹೊಸ ಸಂರಚನೆಗಳು ಹೊಸ ತಾತ್ವಿಕತೆಯನ್ನು ಬೇಡುತ್ತವೆ. ಅವುಗಳಲ್ಲಿ ಬಹು ಮುಖ್ಯವಾದದ್ದು ಎಂದರೆ – ಹೊಸ ಮನುಷ್ಯನಿಗೆ ಮನುಷ್ಯತ್ವದ ದೀಕ್ಷೆ ನೀಡುವುದು! ಏಕಂದರೆ, ಸಂವೇದನಾಶೀಲತೆಯನ್ನು ಕಳೆದುಕೊಂಡು ಜಡವಾದ ಮನುಷ್ಯನು ಅಂತಃಕರಣಶೂನ್ಯನಾಗಿದ್ದಾನೆ. ಅವನ ಅಂತಃಕರಣ ಉದ್ದೀಪನಗೊಳಿಸುವ ಹೊಸ ಹಾರ್ದಿಕ ಸ್ವರೂಪದ ವೈಚಾರಿಕತೆಯೊಂದನ್ನು ನಾವು ಶೋಧಿಸಿಕೊಳ್ಳಬೇಕಾಗಿದೆ. ನಮ್ಮ ಹೊಸ ಲಾಖಕರಿಗೆ ಅದು ಸಾಧ್ಯವಾಗಲಿ, ಅದು ಅವರ ಕೈಗೆ ಎಟುಕಲಿ ಎನ್ನುವ ಆಸೆ-ಹಾರೈಕೆಗಳೊಂದಿಗೆ ನನ್ನ ಈ ಸಮಾರೋಪದ ನುಡಿಗಳನ್ನು ಮುಗಿಸುತ್ತೇನೆ.

No comments:
Post a Comment