ಎಚ್.ಎಸ್.ವೆಂಕಟೇಶಮೂರ್ತಿಯವರ
ಪ್ರಾಚೀನ ಕಾವ್ಯಾನುಸಂಧಾನ
ಮತ್ತು ಅದರ ಮಹತ್ವ:
ಕೆಲವು ಯೋಚನೆಗಳು
- ರಾಘವೇಂದ್ರ ಪಾಟೀಲ
ಭಾರತೀಯ
ಸಂದರ್ಭದಲ್ಲಿ ಆಧುನಿಕತೆಯು ತನ್ನ ವೈಚಾರಿಕತೆಯನ್ನು ಸಿದ್ಧಪಡಿಸಿಕೊಳ್ಳುವ ಸಂದರ್ಭದಲ್ಲಿ ಒಂದು
ಸುಲಭದ ಮಾರ್ಗವನ್ನು ಹಿಡಿಯಿತೆನ್ನಿಸುತ್ತದೆ. ಅದು ಸಂಪೂರ್ಣವಾಗಿ ಪಾಶ್ಚಾತ್ಯ ಶಿಕ್ಷಣವನ್ನು
ನಂಬಿ ಹೊರಟಿತು. ಪಾಶ್ಚಾತ್ಯ ಶಿಕ್ಷಣವು ಅಳವಡಿಸಿಕೊಂಡಿದ್ದ ವಿಜ್ಞಾನ ಬೋಧನೆಯ ವಸ್ತು ಮತ್ತು
ವಿಧಾನಗಳೆರಡೂ ನಮ್ಮ ಚಿಂತಕರ ಕಣ್ಣು ಕುಕ್ಕಿಸಿಬಿಟ್ಟವು. ಅದಕ್ಕೆ ತಮ್ಮನ್ನು ಸಂಪೂರ್ಣವಾಗಿ
ಒಪ್ಪಿಸಿಕೊಂಡ ಯುವ ವೈಚಾರಿಕರು, ಪಾಶ್ಚಾತ್ಯದ
ಎಲ್ಲವೂ ತೀರ್ಥ ಎಂದು ಒಪ್ಪಿಕೊಂಡುಬಿಟ್ಟರು. ಜೊತೆಗೆ ಸಮಕಾಲೀನ ಜಾತಿ ವೈಷಮ್ಯಗಳು, ಉನ್ನತವೆನ್ನಿಸಿಕೊಂಡ ಬ್ರಾಹ್ಮಣ ಮತ್ತು ಉಳಿದ
ಮೇಲ್ಜಾತಿಯವರ ಒಣಕೊಬ್ಬುಗಳು, ಅಂಥ
ನಡಾವಳಿಕೆಗಳಿಂದ ನಮ್ಮಲ್ಲಿನ ಯುವ ಪ್ರಗತಿಪರರು ಪಶ್ಚಿಮದ ವೈಚಾರಿಕತೆ ಬಿಟ್ಟು ಬೇರಿಲ್ಲ,
ಅದೇ ನಮ್ಮ ಉದ್ಧಾರದ ಏಕೈಕ
ಮಾರ್ಗ ಎಂದುಕೊಂಡು ಅದನ್ನು ಬೆನ್ನತ್ತಿ ಹೊರಟರು. ಅಡಿಗರು ಹೇಳುವಂತೆ `ಪುರೋಹಿತರ ನಂಬಿ(!) ಪಶ್ಚಿಮ ಬುದ್ಧಿಯಾದೆವೋ’,
ಈ ಹೊಸ ದೀಕ್ಷಿತರು ಭಾರತೀಯ
ಜ್ಞಾನ ಸಮುಚ್ಚಯಕ್ಕೆ ಸಂಪೂರ್ಣವಾಗಿ ಮೊಗದಿರುಹಿ, ನಮ್ಮ ಸಮಾಜವನ್ನು ತಮ್ಮ ಹೊಸ ಅಳತೆಯ ಕಡ್ಡಿಯಿಂದ ಅಳೆಯತೊಡಗಿದರು. ಆದರೆ, ಇವರ ಅಳತೆಯ ಪ್ರಕ್ರಿಯೆಯು ಏ.ಕೆ.ರಾಮಾನುಜನ್ನರ `ಅಂಗುಲಹುಳುವಿನ ಕತೆ’ಯಂತಾಯಿತು. ಆ ಹುಳುವು ಅಂಗೈಯಲ್ಲಿ ಜೀವ ಇಟ್ಟುಕೊಂಡು
ಹಕ್ಕಿಯ ನಾಲಗೆಯನ್ನೇನೋ ಅಳೆಯಿತು. ನಾಚಿಕೆಯಿಲ್ಲದೆ ನಾಚಿಕೆಯ ಅಂಗಗಳನ್ನೂ ಅಳೆಯಿತು. ಆದರೆ
ಕೋಗಿಲೆಯ ಹಾಡನ್ನು ಅಳೆಯುವುದು ಹೇಗೆ? ಅದೇ
ನೆವವನ್ನಿಟ್ಟುಕೊಂಡು ದೂರ ದೂರಕ್ಕೆ ಹೋಗಿ ಮರೆಯಾಯಿತು. ಹೊಸ ದೀಕ್ಷಿತರ ಸಮಸ್ಯೆಯೂ ಅದೇ
ಆಗಿದ್ದಿತು... ಭಾರತೀಯ ಪರಂಪರೆಯ `ಹಾಡ’ನ್ನು – ಅದರ ಅಧ್ಯಾತ್ಮ ಪರಂಪರೆಯನ್ನು, ಭಾರತೀಯ
ಸಮುದಾಯದಲ್ಲಿನ ದೃಷ್ಟಾರರ ದೊಡ್ಡ ಸಮಷ್ಟಿಯ ಪಾಲ್ಗೊಳ್ಳುವಿಕೆಯಲ್ಲಿ, ನಿಶಿತ ತರ್ಕ ಮತ್ತು ಜಿಜ್ಞಾಸೆಗಳ ನೆಲೆಗಳಲ್ಲಿ
ನಿರ್ಮಿಸಿಕೊಂಡಿದ್ದ ದರ್ಶನಗಳನ್ನು ಅಳೆಯುವುದು ಹೇಗೆ ಎನ್ನುವುದನ್ನು ಕುರಿತಂತೆ ಇವರು
ದಿಙ್ಮೂಢರಾದರು. ಆಗಲೂ ಅವರು ಕೆಲವು ಪಠ್ಯಗಳನ್ನು ಆಯ್ದುಕೊಂಡು ಅವುಗಳಲ್ಲಿನ ಸಾಮಾಜಿಕ
ಕೊರತೆಗಳನ್ನು ಮುಂದೊಡ್ಡುತ್ತ ಆ ಕೊರತೆಗಳನ್ನು ಇಡೀ ದರ್ಶನ - ಜ್ಞಾನ ಸಮುಚ್ಚಯಕ್ಕೆ ಅನ್ವಯಿಸಿ,
ಭಾರತೀಯ ಜ್ಞಾನ-ದರ್ಶನ
ಸಮಸ್ತವೂ ಸಾಮಾಜಿಕ ಅಸಹ್ಯವೆನ್ನುವ ಪ್ರಮೇಯವನ್ನು ಮಂಡಿಸಿದರು. ಇಷ್ಟೊತ್ತಿಗೆ ಬ್ರಾಹ್ಮಣ
ಕರ್ಮಠರು ಸಂಸ್ಕøತ ಜ್ಞಾನವನ್ನು
ತಮ್ಮ ಏಕಸ್ವಾಮ್ಯ ಎನ್ನುವಂತಹ ಭಾವನೆ ಬರುವಂತೆ ಮಾಡಿಬಿಟ್ಟಿದ್ದರು! ಜೊತೆಗೆ, ಉಳಿದ ಜಾತಿಗಳವರಿಗೆ ಸಂಸ್ಕøತ ಕಲಿಯುವುದು ಯಾವ ಐಹಿಕ ಲಾಭವನ್ನೂ ನೀಡದಿರುವುದರಿಂದ
ಅದರ ಕಲಿಕೆಯು ಅವರಿಗೆ ಆಕರ್ಷಕವಾಗಿಯೇನೂ ಇರಲಿಲ್ಲ. (ಬಹುಶಃ ಕುವೆಂಪುರಂಥ ಕೆಲವರು ಮಾತ್ರ
ಜ್ಞಾನದ ಹಪಾಪೆಯಿಂದ, ವಿರೋಧೀ ಮನೋಭಾವದ
ನಡುವೆಯೂ ಸಂಸ್ಕøತವನ್ನು
ಅಭ್ಯಸಿಸಿದರು.). ಹೀಗೆ ಹಲವು ಒತ್ತಡಗಳ ನಡುವೆ ಆಧುನಿಕ ಭಾರತೀಯ ಸಮುದಾಯವು ತನ್ನ
ಜ್ಞಾನ-ದರ್ಶನಗಳ ಆಸ್ತಿಯನ್ನು ಮರೆಯಾಗಿಸಿಕೊಳ್ಳುತ್ತ, ಮರವೆಗೆ ದೂಡುತ್ತ... ಇಂದು ಸಂಪೂರ್ಣವಾಗಿ ಆ ಬಗೆಗಿನ
ಅಜ್ಞಾನವನ್ನು ತಾಳಿದೆ.
ಇಂಥ ಸ್ಥಿತಿ
ಯಾವುದೇ ಸಮುದಾಯಕ್ಕೂ ಆರೋಗ್ಯಪೂರ್ಣವಾಗಿರಲಾರದು. ಅಲ್ಲಮನು ಹೇಳುವಂತೆ `ಹಿಂದಿನ ಹೆಜ್ಜೆಯನ್ನರಿಯದೇ ಮುಂದಿನ
ಹೆಜ್ಜೆಯನ್ನಿಡಲಾಗದು’ ಎನ್ನುವಂತೆ
ಸಮುದಾಯಗಳು ಭೂತದೊಂದಿಗಿನ ಅನುಸಂಧಾನ, ಸ್ವೀಕರಣ-ವಿಸರ್ಜನಗಳ
ಮುಖಾಂತರ ತಮ್ಮ ವಿಕಾಸವನ್ನು ಸಾಧಿಸಬೇಕಾಗುತ್ತದೆ. ಯಾವ ಸಮುದಾಯವೂ ತನ್ನ ಭೂತ ಸರ್ವಸ್ವವನ್ನೂ
ವಿಸರ್ಜಿಸಿಕೊಳ್ಳಲಾಗದು. ಹಾಗಾದರೆ ಅದು ಬೆಂತರ ಸಮುದಾಯವಾಗುತ್ತದೆ. ಅಂತಹ ಬೆಂತರ ಸಮುದಾಯದಲ್ಲಿ
ಯಾವುದೇ ಸೇಂದ್ರೀಯ ಸಂಬಂಧಗಳು ನೆಲೆಗೊಳ್ಳಲಾರವು. ಆದ್ದರಿಂದ ನಾವು ನಮ್ಮ ಭೂತಕಾಲದೊಂದಿಗೆ,
ಅದರ ಜ್ಞಾನ-ದರ್ಶನ
ಸಮುಚ್ಚಯದೊಂದಿಗೆ ಅನುಸಂಧಾನ ನಡೆಸುವುದು ನಮ್ಮ ಸಮುದಾಯಕ್ಕೆ ಒಳ್ಳೆಯದು ಮತ್ತು ಅತ್ಯಗತ್ಯ.
ಈ ಹಿನ್ನೆಲೆಯಲ್ಲಿ
ಕನ್ನಡದ ಹಿರಿಯ ಕವಿ, ಚಿಂತಕ ಡಾ.
ಎಚ್.ಎಸ್. ವೆಂಕಟೇಶಮೂರ್ತಿಯವರು ನಡೆಸುತ್ತಿರುವ ಬರೆಹದ ಬದುಕು ಅತ್ಯಂತ ಅರ್ಥಪೂರ್ಣ
ಎನ್ನಿಸುತ್ತದೆ. ವೆಂಕಟೇಶಮೂರ್ತಿಯವರು ಸಮಕಾಲೀನ ಸಮುದಾಯವು ಕಡಿದುಕೊಂಡಿದ್ದ ತನ್ನ
ಪರಂಪರೆಯೊಂದಿಗಿನ ಸಂಬಂಧವನ್ನು ಪುನರ್‍ಸ್ಥಾಪಿಸುವ ದಿಕ್ಕಿನ ಅರ್ಥಪೂರ್ಣ ಪ್ರಯೋಗಗಳನ್ನು ಕಳೆದ
ಹತ್ತಾರು ವರ್ಷಗಳಲ್ಲಿ ಸತತವಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಅವರು ಕುಮಾರವ್ಯಾಸನ `ಭಾರತ ಕಥಾಮಂಜರಿ’ಯನ್ನು `ಕುಮಾರವ್ಯಾಸ ಕಥಾಂತರ’ದ ಮೂರು ಸಂಪುಟಗಳ ಮೂಲಕ ಸಮಕಾಲೀನ ಚಿಂತನೆಯ
ಆಯಾಮವನ್ನಾಗಿಸಿದ್ದಾರೆ. ಆದಿಪರ್ವ-ಸಭಾಪರ್ವ ಗಳನ್ನು ಕುರಿತ `ಕುಮಾರವ್ಯಾಸ ಕಥಾಂತರ’ದ ಎರಡನೇ ಸಂಪುಟದಲ್ಲಿ `ಭಾರತವಾದರೋ ಗೋತ್ರ ದಾಯಾದಿಗಳೂ ಮತ್ತು ಅವರ ನಂಟರಿಷ್ಟರ
ಕತೆ. ನಿಕಟ ನಂಟಿಲ್ಲದ ಯಾವ ಪಾತ್ರವೂ ಕುರುಕ್ಷೇತ್ರ ಕಾಳಗದಲ್ಲಿ ಸೇರಿಲ್ಲ. ಸ್ವತಹ ದೈವವೂ ಈ
ಸಂಬಂಧ ಸೂತ್ರದಲ್ಲಿ ಬಂಧಿತ. ಹಾಗಾಗಿ ಮಹಾಭಾರತ ಎಂಬುದು ಸಂಬಂಧಗಳ ವಿಷಮ ವ್ಯೂಹ. ಪಾತ್ರಗಳ ಸಂಬಂಧ
ಮತ್ತು ವಿಚ್ಛೇದವೇ ಮಹಾಭಾರತದ ಕಥನದ ಸ್ವರೂಪವನ್ನು ನಿರ್ಧರಿಸುತ್ತದೆ’ ಎಂದು ತೋರಿಸುತ್ತಾರೆ. ಈ ತತ್ವ ಸಮಕಾಲೀನ ಸಮುದಾಯಕ್ಕೂ
ಅನ್ವಯವಾಗುವಂತಹದೇ. ವಿಚ್ಛೇದವೇ ಸಮಕಾಲೀನ ವಿಷಮ ಸಾಮಾಜಿಕ ಸ್ಥಿತಿಗೆ ಕಾರಣವಾಗಿದೆ. ಕಳೆದುಹೋದ,
ಮರೆತುಹೋದ ಸಂಬಂಧಗಳನ್ನು
ಸ್ಮರಣೆಗೆ ತಂದುಕೊಳ್ಳುವುದೇ (ಪ್ರತ್ಯಭಿಜ್ಞಾನ) ಸಮಕಾಲೀನ ಸಂಘರ್ಷಗಳಿಗೆ ಹರ್ಷದಾಯಕ
ಪರಿಹಾರವಾಗುತ್ತದೆನ್ನುವುದನ್ನು ಎಚ್.ಎಸ್.ವಿ. ಸೂಚಿಸುತ್ತಾರೆ. ಹೀಗೆ ಸಮಕಾಲೀನ ವಾಸ್ತವಗಳನೇಕವು
ಕುಮಾರವ್ಯಾಸನ ಭಾರತದ ಪ್ರಸಂಗಗಳೊಡನೆ ತುಲನೆಗೊಳ್ಳುತ್ತವೆ, ಬೆಲೆಗಟ್ಟಲ್ಪಡುತ್ತವೆ. ಇಂದಿನ ಪಾತ್ರಗಳು ಅಂದಿನ
ಪಾತ್ರಗಳ ಜೊತೆ ಕೈಹಿಡಿದು ನಡೆಯುತ್ತವೆ. ಅಂದಂದು ಬಂದ ಮಹತ್ವದ ಕಾವ್ಯಗಳು ಅಂದಂದಿನ ಯುಗಗಳ
ವಾಸ್ತವಗಳನ್ನು, ಅವುಗಳ
ಹಿನ್ನೆಲೆಯಲ್ಲಿ ಕ್ರಿಯಾಶಾಲಿಯಾಗಿದ್ದ ತತ್ತ್ವ-ದರ್ಶನಗಳನ್ನು ಸಂಗ್ರಹಿಸಿ ಇಟ್ಟುಕೊಂಡಿರುತ್ತವೆ.
ಭಾಷಿಕ ಅಥವಾ ಇನ್ನಾವುದೋ ಕಾರಣಗಳಿಂದ ಅವುಗಳ ಓದನ್ನು ಕಳೆದುಕೊಂಡ ಸಮಕಾಲೀನ ಸಮುದಾಯಕ್ಕೆ ಅವು
ದಕ್ಕುವಂತೆ ಮಾಡುವುದು ಬಹು ಮುಖ್ಯವಾದ ಕ್ರಿಯೆ. ವೆಂಕಟೇಶಮೂರ್ತಿಯವರು ಪಂಪನನ್ನು ನಮ್ಮ ಓದಿಗೆ
ತಂದುಕೊಡುವ ಮೂಲಕ ಈ ಕ್ರಿಯೆಯನ್ನು ಸಾಧಿಸಿದ್ದಾರೆ. ಅವರ `ಕಿರಿಯರಿಗಾಗಿ ಪಂಪ’, `ವಿಕ್ರಮಾರ್ಜುನ ವಿಜಯ ತಿಳಿಗನ್ನಡ ಅವತರಣ’ ಮತ್ತು `ಆದಿಪುರಾಣ ತಿಳಿಗನ್ನಡ ಅವತರಣ’ ಗ್ರಂಥಗಳು
ಪಂಪನೊಂದಿಗೆ ಮತ್ತು ಅವನ ಕಾಲದ ತತ್ತ್ವ ಮೌಲ್ಯಗಳೊಂದಿಗೆ ಸಮಕಾಲೀನ ಸಮುದಾಯವನ್ನು
ಜೋಡಣೆಗೊಳಿಸುತ್ತವೆ. ಅವರು `ವಿಕ್ರಮಾರ್ಜುನ
ವಿಜಯ ತಿಳಿಗನ್ನಡ ಅವತರಣಿಕೆ’ಯ ಅರಿಕೆಯಲ್ಲಿ
ಹೇಳಿರುವ ಈ ಮಾತುಗಳನ್ನು ನೋಡಿರಿ : `ಪಂಪನನ್ನು ಅವನ
ಕಾವ್ಯದ ಸಂವೇದನೆ ಸಮೇತ ನಮ್ಮ ಹೊಸ ಪೀಳಿಗೆಗೆ ದೊರಕಿಸಬೇಕೆಂಬುದೇ ಈ ಸಾಹಸದ ಬೆನ್ನಿಗಿರುವ
ತುರ್ತೊತ್ತಿನ ಕಾರಣ. ಗದ್ಯದಲ್ಲಿ ನುಣುಚಿ ಹೋಗುವ ಮಹಾಕಾವ್ಯ ಪಂಙÂ್ತಗಳು, ಹರಳು ಕಡೆದಂಥ ಮಹೋಕ್ತಿಗಳು, ಹಿತಮಿತಮಧುರ ವಚನದ
ಮಾತಿನ ಗೈರತ್ತು, ಅದರ ಸಹಜ ಛಂದ,
ಕಥಾ ವಿನ್ಯಾಸ, ಕಥಾಂತರದ ಸೋದ್ದಿಶ್ಯ ತಿರುವುಗಳು, ಕಥೆಯ ಮೈಗೆಡಲೀಯದ ಭಂಗಿ ಭಣಿತ, ಒಟ್ಟಾರೆ ಆ ನುಡಿ - ನಾಡೋಜನ ಜೀವ ಸಂಚಲನದ ದರ್ಶನ –
ಇವುಗಳನ್ನು ನಮ್ಮ ಪೀಳಿಗೆಗೆ
ಒದಗಿಸಲೇ ಬೇಕು, ತನ್ಮೂಲಕ ಅವರನ್ನು
ಮೂಲದ ಕಡೆ ಸೆಳೆಯಬೇಕು, ಪಂಪ ಕೇವಲ ಒಂದು
ಹೆಸರಲ್ಲ, ಅವನೊಂದು
ಮಹಾವ್ಯಕ್ತಿತ್ವದ ತೇಜಃಪುಂಜ ಎಂಬುದನ್ನು ಹೊಸಪೀಳಿಗೆಯ ಬೋಧೆಗೆ ತರಬೇಕು ಎಂಬುದೇ ಈ ಶ್ರಮದ
ಹಿಂದಿನ ಸಂಕಲ್ಪ’. ಈ `ಹೊಸ ಪೀಳಿಗೆಯ ಬೋಧೆಗೆ’ ತರುವುದೆಂದರೆಯೇ ಮರೆತುಹೋದ ಸಂಬಂಧಗಳನ್ನು ಪುನರ್
ಸ್ಮರಣೆಗೆ ತಂದುಕೊಳ್ಳುವುದು ಎಂದರ್ಥ!
ಎಚ್.ಎಸ್.ವಿ.
ಸಮಕಾಲೀನ ಸಮುದಾಯಗಳನ್ನು ನಮ್ಮ ಹಳೆಗನ್ನಡ - ನಡುಗನ್ನಡ ಪರಂಪರೆಗಳೊಂದಿಗೆ ಜೋಡಿಸುವುದಲ್ಲದೆ,
ಇದಕ್ಕೂ ಹಿಂದಲಿನ
ಯುಗಗಳೊಂದಿಗಿನ ನಮ್ಮ ಸಂಬಂಧಗಳನ್ನು ಹೊಳೆಯಿಸುವ ಸಾರ್ಥಕ ಸಾಹಸಗಳನ್ನೂ ಕೈಕೊಂಡಿದ್ದಾರೆ. ಅವರು
ಕವಿ ವಾಲ್ಮೀಕಿಯಿಂದ ರಚಿತವಾದ ರಾಮಾಯಣದ ಎಲ್ಲ ಕಾಂಡಗಳ ಆಯ್ದ ಶ್ಲೋಕಗಳ ಕನ್ನಡ ಕಾವ್ಯಾನುವಾದದ `ರಾಮಚರಣ’ವನ್ನು ತಂದಿದ್ದಾರೆ. ವೇದಗಳನ್ನು ಓದದೇ ಅವುಗಳನ್ನು ನಿತ್ಯ ಖಂಡನೆಗೆ ಒಳಪಡಿಸುತ್ತಿರುವವರ
ಎದುರು `ಋಗ್ವೇದ ಸ್ಫುರಣ’ವನ್ನಿಟ್ಟು ಅದನ್ನು ಓದಿ ತಿಳಿದು ಖಂಡಿಸಲು
(ಅವಶ್ಯವೆನಿಸಿದರೆ!) ಅನುವು ಮಾಡಿಕೊಟ್ಟಿದ್ದಾರೆ. ಸ್ತ್ರೀಯರೂ ಸೇರಿದಂತೆ ವಿವಿಧ ಜಾತಿಗಳ
ದೃಷ್ಟಾರರು ರಚಿಸಿದ ಇಲ್ಲಿನ ರುಕ್ಕುಗಳು ಐಹಿಕ ಜೀವನವೂ ಸೇರಿದಂತೆ ಹಲವು ವಿಷಯಗಳನ್ನು ಕುರಿತ
ಜಿಜ್ಞಾಸೆಯನ್ನು ಮಂಡಿಸುತ್ತವೆ. ಋಗ್ವೇದದ ನಂತರ ಇದೀಗ ವೆಂಕಟೇಶಮೂರ್ತಿಯವರು `ಭಗವದ್ಗೀತೆ’ಯ ಸಮಗ್ರ ಕನ್ನಡ ಕಾವ್ಯಾನುವಾದ ರಚಿಸಿದ್ದಾರೆ. ಆ ಮೂಲಕ
ನಮ್ಮ ಜಿಜ್ಞಾಸೆಗೆ ಹೊಸ ಆಕರವನ್ನು ಒದಗಿಸಿದ್ದಾರೆ. ಇದರ ನೆಲೆಯಲ್ಲಿ ನಮ್ಮ ಚರ್ಚೆ ಜಿಜ್ಞಾಸೆಗಳು
ಹೆಚ್ಚು ನಿರಪೇಕ್ಷಗೊಳ್ಳುವುದು ಸಾಧ್ಯವಾಗಲಿ ಎಂದು ಹಾರೈಸುತ್ತೇನೆ.
***
ಇದು ವೇದ, ಇದು ಭಗವದ್ಗೀತೆ ಎಂದು ಮೂಗು ಮುರಿಯುವ
ಅವಶ್ಯಕತೆಯಿಲ್ಲ. ಯಾವ ದರ್ಶನಗಳೂ ಕೆಡುಕನ್ನು ಬೋಧಿಸುವುದಿಲ್ಲ. ಒಂದೊಮ್ಮೆ ಅವುಗಳಲ್ಲಿ ಕೆಡುಕು
ಇದ್ದರೆ ಅದನ್ನು ನಿರಾಕರಿಸಿ, ಅದರಲ್ಲಿರುವ
ಒಳಿತನ್ನು ಸ್ವೀಕರಿಸುವ ಸ್ವಾತಂತ್ರ್ಯ ನಮಗಿದ್ದೇ ಇದೆ. ಬೋರೆಯ ಹಣ್ಣನ್ನು ತಿನ್ನುವಾಗ ಬೀಜವನ್ನು
ಉಗುಳುವುದಿಲ್ಲವೇ... ಹಾಗೆ! ಇನ್ನು ಇಷ್ಟಕ್ಕೂ ನಾವು ಯಾವುದೇ ದರ್ಶನಗಳನ್ನು ಕೇಳಿ ಅವುಗಳನ್ನು
ಅನುಸರಿಸುವುದಕ್ಕಾಗಿ ಸಾಮಾಜಿಕ ಅನ್ಯಾಯಗಳನ್ನು ಗೈಯುತ್ತಿಲ್ಲ. ನಮಗೆ `ಸರ್ವೇ ಜನಃ ಸುಖಿನೋಭವಂತು’ `ವಸುಧೈವ ಕುಟುಂಬಕಂ’ `ಇವನಾರವ ಇವನಾರವ ಎನ್ನದಿರು, ಇವ ನಮ್ಮವ ಎಂದೆಣಿಸಯ್ಯಾ’ ಎಂತೆನ್ನುವ ವಿವಿಧ ಕಾಲಗಳ, ವಿವಿಧ ನಂಬಿಕೆಗಳ ಒಳಿತನ್ನು ಬೋಧಿಸುವ ಎಷ್ಟೆಲ್ಲ
ಸುಭಾಷಿತಗಳು ಗೊತ್ತಿಲ್ಲ ಹೇಳಿರಿ! ಹೌದು... ನಮಗೆ ಎಲ್ಲ ಗೊತ್ತಿವೆ... ಆದರೆ ನಾವು-ಜನರೆಂಬುವ
ನಾವು... ಕೆಡುಕರಾಗಿರುವುದು ನಮ್ಮ ನಮ್ಮ ಸ್ವಾರ್ಥಗಳಿಂದಲ್ಲದೇ ಬೇರಿಲ್ಲ! ಹೀಗಿರುವಾಗ ನಮ್ಮೆಲ್ಲ
ಪ್ರಾಚೀನ ದರ್ಶನಗಳನ್ನು ಟೀಕಿಸುತ್ತ-ಬೈಯ್ಯುವುದರಲ್ಲಿ ತೊಡಗುವುದು ಕೇವಲ ಪುಂಡರ ಗೋಷ್ಠಿ
ಅನ್ನಿಸಿದರೆ ಆಶ್ಚರ್ಯಪಡಬೇಕಿಲ್ಲ!