`ಭೇದ’ದಿಂದ ಬಿಡುಗಡೆಗೊಳಿಸಯ್ಯಾ ತಂದೆ:
ನನಗೆ ಪ್ರಿಯವಾದ
ಬಸವಣ್ಣನವರ ಒಂದು ವಚನ*
- ರಾಘವೇಂದ್ರ ಪಾಟೀಲ
ಅವರ ಅಮಿತವಾದ ವಚನ
ಸಾಹಿತ್ಯವನ್ನು ಧೇನಿಸುತ್ತಿದ್ದಂತೆಯೇ ನನ್ನ ಮನದಲ್ಲಿ ಅವರ ಒಂದು ವಚನ ವಿಶೇಷ
ಸಂಚಲನವನ್ನುಂಟುಮಾಡುವುದನ್ನು ನೆನಪಿಸಿಕೊಳ್ಳಬೇಕೆನಿಸುತ್ತದೆ. ಆ ವಚನ ಅತ್ಯಂತ ಸರಳವಾದದ್ದಾದರೂ
ಅದರ ಸಾಮಾಜಿಕ ಮಹತ್ವ ಅಪರಂಪಾರವಾದದ್ದು. ಆ ವಚನ :
ಇವನಾರವ ಇವನಾರವ ಇವನಾರವನೆಂದೆನಿಸದಿರಯ್ಯಾ
ಇವ ನಮ್ಮವ ಇವ ನಮ್ಮವ ಇವ ನಮ್ಮವನೆಂದೆನಿಸಯ್ಯಾ
ಕೂಡಲಸಂಗಮದೇವಾ ನಿಮ್ಮ ಮನೆಯ ಮಗನೆಂದೆನಿಸಯ್ಯಾ.
ಬಸವಣ್ಣನವರು ತಮ್ಮ
ಈ ವಚನದ ಮೂಲಕ ಮನುಷ್ಯ ಪ್ರಜ್ಞೆಯಲ್ಲಿ ಅತ್ಯಂತ ಮೂಲಭೂತವಾಗಿ ನೆಲೆಗೊಂಡಿರುವ ದೌಭಾಗ್ಯದ
ಲಕ್ಷಣವೊಂದರ ಕುರಿತು ಮಾತನಾಡುತ್ತಿದ್ದಾರೆ ಎನಿಸುತ್ತದೆ. ಆ ಲಕ್ಷಣವೆಂದರೆ, ತಾನು-ತನ್ನವರು ಉಳಿದವರಿಗಿಂತ ಬೇರೆ, ನಮ್ಮಿಂದ ಹೊರತಾದ ಉಳಿದವರೆಲ್ಲರು ನಮ್ಮವರಲ್ಲ
ಎನ್ನುತ್ತ ಹೊರಡುವ ತರತಮದ ಭಾವ. ಯಾರೆಲ್ಲರನ್ನೂ ಒಳಗೊಂಡು ಸರ್ವಜನ ಬಾಂಧವ್ಯದ ಏಕತ್ವದ
ಸಮಾಜವನ್ನು ನಿರ್ಮಸುವ ಕನಸುಕಂಡು, ಅದಕ್ಕೆ ತಮ್ಮ
ಜನ್ಮವನ್ನು ಧಾರೆ ಎರೆದ ಬಸವಣ್ಣನವರು ಕೊನೆಯಲ್ಲಿ ಕಂಡದ್ದು ಮತ್ತದೇ - ನಾವು ಬೇರೆ ನೀವು ಬೇರೆ
ಎಂತೆನ್ನುವ ಒಡಕಿನ ಗಿಡವು ಮರವಾಗಿ ಬೆಳೆಯುತ್ತಿರುವುದನ್ನು. ಬಸವಣ್ಣನವರಿಗೆ, ಭೇದವೆಣಿಸದ, ಸಮತ್ವದ, ಏಕತ್ವದ ಭಾವವು ಮನುಷ್ಯಕುಲವು ನೆಮ್ಮದಿಯಿಂದ ಬದುಕಲು
ಅವಶ್ಯವೆನ್ನುವುದು ಅಚಲ ನಂಬಿಕೆಯಾಗಿತ್ತು. ಆದರೆ, ಬಹುಶಃ ಈ ಗುಣವು ಮನುಷ್ಯಕುಲಕ್ಕೆ ಹೊರತಾದದ್ದು ಏನೋ
ಎಂದು ಅವರಿಗೆ ಅನ್ನಿಸಿಬಿಟ್ಟಿತ್ತು. ಬಸವಣ್ಣನವರಿಗೆ ಮನುಷ್ಯ ಸ್ವಭಾವದ ಈ ಭೇದ ಕಲ್ಪನೆಯು
ನಿವಾರಿಸಲಾಗದಷ್ಟು, ಅವನ
ಅಂತರಂಗದೊಳಕ್ಕೆ ಆಳವಾಗಿ ಇಳಿದದ್ದು ಎನ್ನಿಸಿರಬೇಕು.
ಮನುಷ್ಯರು
ರೂಢಿಸಿಕೊಳ್ಳಬೇಕಾದ ನೈತಿಕತೆಯ ಬಗೆಗೆ ಅವರು ನೇರವಾಗಿ ಮನುಷ್ಯನನ್ನು ಉದ್ದೇಶಿಸಿಯೇ ಬೇಕಷ್ಟು
ಹೇಳಿದ್ದಾರೆ. ನೋಡಿ, `ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ...’ ಎಂತೆನ್ನುವ ಬೋಧನೆಯನ್ನು ಅವರು ನೇರವಾಗಿ ತಮ್ಮೊಡನೆ
ಬದುಕುತ್ತಿರುವ ಮನುಷ್ಯರಿಗೆ ನೀಡುತ್ತಿದ್ದಾರೆ. ಅದನ್ನು ಮಾಡಬೇಡ... ಇದನ್ನು ಮಾಡಬೇಡ ಎಂದು
ನೇರವಾಗಿ ಮನುಷ್ಯನಿಗೆ ಹೇಳುತ್ತಾರೆ. ಹಾಗೆಯೇ, `ಕಲ್ಲನಾಗರ ಕಂಡರೆ ಕೈಮುಗಿವರು, ದಿಟದ ನಾಗರ ಕಂಡರೆ
ಕೊಲ್ಲೆಂಬರು’ ಎಂದು ಮನುಷ್ಯನ
ಹಿಪಾಕ್ರಸಿಯನ್ನು ನೇರವಾಗಿ ಟೀಕಿಸಿ ಬೋಧನೆ ನಡೆಸುತ್ತಾರೆ.
ಆದರೆ ಭೇದವೆಣಿಸದ,
ಸಮತ್ವದ-ಏಕತ್ವದ ಭಾವವು
ಮನುಷ್ಯನ ಭಾವಕೋಶಕ್ಕೆ ಹೊರತಾದುದು ಎಂದು ಅನ್ನಿಸಿದ ಕಾರಣವಾಗಿ, ಹೀಗೆ ಮನುಷ್ಯಸ್ವಭಾವಕ್ಕೆ ಹೊರತಾದುದನ್ನು ಬೋಧನೆಯ
ಮೂಲಕ ಅವನಲ್ಲಿ ಅಳವಡಿಸಲಾಗದು ಎನ್ನುವ ಭಾವದಲ್ಲಿ, ಅವರು, ಅಂಥ ಭಾವವನ್ನು ತಮ್ಮ ಆರಾಧ್ಯದೈವವಾದ ಕೂಡಲಸಂಗಯ್ಯನೇ ಮನುಷ್ಯರಿಗೆ ಕೊಡಮಾಡಬೇಕೆಂದು
ಪ್ರಾರ್ಥಿಸುತ್ತಾರೆ. ಭೇದವೆಂಬುವ ಈ ದುರ್ಲಕ್ಷಣವು ನಿವಾರಿಸಲಾಗದ ರೋಗ ಎಂತೆನ್ನುವ ನೋವಿನಲ್ಲಿಯೇ,
ಅವರು ಈ ರೋಗವನ್ನು
ನಿವಾರಿಸಯ್ಯಾ ತಂದೆಯೇ ಎಂದು; ಮನುಷ್ಯರೆಲ್ಲರೂ
ಸಂಗಯ್ಯನ ಮಕ್ಕಳು, ನಾವೆಲ್ಲ
ಬಂಧುಬಾಂಧವರೆನ್ನುವ ಭಾವವನ್ನು ನಮ್ಮಲ್ಲಿ
ಮೊಳೆಯಿಸಯ್ಯಾ ಎಂದು ಕೂಡಲಸಂಗಯ್ಯನಲ್ಲಿ ಬೇಡಿಕೊಳ್ಳುತ್ತಾರೆ. ಬಸವಣ್ಣನವರ ಈ ತಿಳುವಳಿಕೆ ಅತ್ಯಂತ
ಸತ್ಯವಾದದ್ದು ಎನ್ನಿಸುತ್ತದೆ. ಭೇದದ ಭಾವವು ಇಂದು ಬಸವಾನುಯಾಯಿಗಳು ಎಂದು
ಹೇಳಿಕೊಳ್ಳುವವರಲ್ಲಿಯೂ ಅಖಂಡವಾಗಿ ಬೆಳೆದುನಿಂತಿದೆ. ಬಸವಣ್ಣನವರು, ತಾವು ಇಷ್ಟಪಡದ ಮನುಷ್ಯನ ಮೂಲಭೂತವಾದ ಈ ಗುಣದ
ಕಾರಣವಾಗಿಯೇ, ಮನುಷ್ಯನಾಗಿರಲು
ಬಯಸದೇ, ಶಿವನಲ್ಲಿ ಒಂದು ಪ್ರಾರ್ಥನೆ
ಸಲ್ಲಿಸುತ್ತಾರೆ :
ಅಕಟಕಟಾ ಶಿವ ನಿನಗಿನಿತು ಕರುಣವಿಲ್ಲ
ಅಕಟಕಟಾ ಶಿವ ನಿನಗಿನಿತು ಕೃಪೆಯಿಲ್ಲ
ಏಕೆ ಹುಟ್ಟಿಸಿದೆ ಇಹಲೋಕ ದುಃಖಿಯ?
...
ಕೂಡಲಸಂಗಮದೇವಾ ಕೇಳಯ್ಯ
ಎನಗಾಗಿ ಮತ್ತೊಂದು ತರುಮರವಿರಲಿಲ್ಲವೆ?
ಭೇದವನ್ನು ಎಣಿಸದ
ಯಾವುದಾದರೊಂದು ತರುಮರವಾಗಿ ನನ್ನನ್ನು ಸೃಷ್ಟಿಸುವಬದಲು ಭೇದದ ಭಾವದಲ್ಲಿ ತನ್ನನ್ನು ತಾನೇ
ಬಗೆದುಕೊಳ್ಳುವ ಈ ಮನುಷ್ಯಕುಲದಲ್ಲಿ ಯಾಕೆ ಹುಟ್ಟಿಸಿದೆಯಯ್ಯಾ ಎಂದು ಅವರು ಶಿವನ
ನಿಂದಾಸ್ತುತಿಗೈಯುತ್ತಾರೆ.
• ಬಸವಜಯಂತಿಯ ಸಂದರ್ಭದಲ್ಲಿ ಪತ್ರಿಕೆಯೊಂದಕ್ಕೆ ಬರೆದ
ಟಿಪ್ಪಣಿ