Wednesday, December 18, 2019

Preface to my new book - Madhyastha - by HSV


 
Preface to my new book - Madhyastha - by HSV
ಮುನ್ನುಡಿ

                ಸಮಕಾಲೀನ ಸಾಹಿತ್ಯ ಸಂದರ್ಭದ ಗಟ್ಟಿ ಕತೆಗಾರರಾದ ರಾಘವೇಂದ್ರಪಾಟೀಲರದ್ದು ಸ್ವಲೋಲುಪ ವ್ಯಕ್ತಿತ್ವವಲ್ಲ. ಸದ್ಯದಲ್ಲಿ ಕ್ರಿಯಾಶೀಲರಾಗಿರುವ ಸರೀಕರು ಬರೆಯುತ್ತಿರುವ ಸಾಹಿತ್ಯ ನಿರ್ಮಿತಿಗಳ ಬಗ್ಗೆ ಅತ್ಯಾಸಕ್ತಿ ಮತ್ತು ಉತ್ಸಾಹದಿಂದ ಮೊದಲಿಂದಲೂ ಬರೆಯುತ್ತ ಬಂದಿರುವ ಲೇಖಕರಲ್ಲಿ ಅವರು ಮುಖ್ಯರು. ಬೇರೆಯವರ ಕೃತಿಗಳ ಬಗ್ಗೆ ಬರೆಯುವುದು ಅವರಿಗೆ ಮಾಡುತ್ತಿರುವ ಉಪಕಾರವೆಂದು ಅವರು ಯಾವತ್ತೂ ಭಾವಿಸಿದವರಲ್ಲ. ಕನ್ನಡದ ಒಟ್ಟಾರೆ ಸಂದರ್ಭ ಕೊಳುಕೊಡುವಿಕೆಯಿಂದ ಸಮೃದ್ಧವಾಗಿ ಬೆಳೆಯಬೇಕೆಂಬುದು ಅವರ ಅಪೇಕ್ಷೆ. ಸೃಜನ ಸ್ಪಂದನ ಎಂಬ ಈ ಸಂಪುಟದ ಮೊದಲ ವಿಭಾಗದಲ್ಲಿ ಈಚೆಗೆ ಬಂದ ಕನ್ನಡದ ಬಹು ಮುಖ್ಯವಾದ ಹನ್ನೊಂದು ಪುಸ್ತಕಗಳ ಬಗ್ಗೆ ಅವರ ವಿನಯವನ್ನು ಬಿಟ್ಟುಕೊಡದ ನಿಷ್ಠುರ ಲೇಖನಗಳಿವೆ. ಇದೊಂದು ದಿಗ್ದರ್ಶೀ ಕ್ರಮ. ನಾವು ಓದಲೇ ಬೇಕಾದ ಮಹತ್ವದ ಕೃತಿಗಳ ಬಗ್ಗೆ ಗಮನ ಸೆಳೆಯುವಂಥ, ಆ ಕೃತಿಗಳನ್ನು ನಾವು ಯಾಕೆ ಓದಬೇಕು ಎಂಬ ಬಗ್ಗೆ ನಿರ್ಮತ್ಸರದಿಂದ ವಿಮರ್ಶಾ ಪ್ರತಿಪಾದನೆ ನಡೆಸುವ ವಿಭಾಗ. ಇಲ್ಲಿ ರಂಗಭೂಮಿಯ ಅದಮ್ಯ ಪ್ರತಿಭೆ ಬಿ.ಜಯಶ್ರೀ, ಶಶಿಕಲಾ ವೀರಯ್ಯಸ್ವಾಮಿ ಬರೆದ ಅನನ್ಯವಾದ ಆತ್ಮಕಥೆಗಳ ವಿವೇಚನೆಯಿದೆ. ಇವು ಓದುಗರು ಮೂಲ ಕೃತಿಗಳತ್ತ ಧಾವಿಸುವಂತೆ ಮಾಡುವ ಕೈಮರದಂಥ, ಮೂಲ ಕೃತಿಗಳನ್ನು ಆಧಾರವಾಗಿಟ್ಟುಕೊಂಡು ಬದುಕಿನ ಜಟಿಲತೆಯ ಬಗ್ಗೆ ಒಂದು ತಾತ್ವಿಕ ದರ್ಶನ ದಕ್ಕಿಸಿಕೊಳ್ಳಲು ಹಾತೊರೆಯುವಂಥ ಬರಹಗಳು.
                ಸ್ವತಹ ಕತೆಗಾರರಾದ ಪಾಟೀಲರಿಗೆ ತಮ್ಮ ಸರೀಕ ಕತೆಗಾರರ ಬಗ್ಗೆ ಇನ್ನಿಲ್ಲದ ಆಸಕ್ತಿ. ಇದು ನಿಜವಾದ ಸಾಹಿತ್ಯ ಪ್ರೀತಿಯ, ಅದಕ್ಕಿಂತ ಹೆಚ್ಚಾಗಿ ಅಹಂವೃತ್ತಿಯನ್ನು ದಾಟಿಕೊಳ್ಳುವ ಶ್ಲಾಘ್ಯ ಪ್ರಯತ್ನ. ಈಗಾಗಲೇ ಕಥಾಜಗತ್ತಲ್ಲಿ ನೆಲೆಯೂರಿರುವ ಯೋಗಪ್ಪನಂಥವರ ಬಗ್ಗೆ ತೋರುವ ಕಾಳಜಿಯನ್ನೇ ಹೊಸ ಕತೆಗಾರರಾಗಿ ಕಥಾಪ್ರಿಯರ ಆಸಕ್ತಿ ಕೆರಳಿಸಿದ ಪ್ರತಿಭಾಶಾಲಿ ಹೊಸಕತೆಗಾರರಾದ, ಕಾವ್ಯ ಕಡಮೆ, ಮೌನೇಶ ಬಡಿಗೇರ, ಟಿ.ಯೆಸ್.ಗೊರವರ, ಚೀಮನಹಳ್ಳಿ ರಮೇಶಬಾಬು ಅವರ ಬಗ್ಗೆಯೂ ತೋರಿಸುತ್ತಾರೆ. ಹೊಸ ಲೇಖಕರ ಬಗ್ಗೆ ಪಾಟೀಲರು ತೋರುವ ಈ ನಿರ್ಮತ್ಸರ ಆಸಕ್ತಿ ಸಾಹಿತ್ಯ ಸಂಸ್ಕೃತಿಯ ಉಳಿವಿಗೆ ಬಹು ದೊಡ್ಡ ಕಾಣಿಕೆಯಾಗುತ್ತದೆ. ಈ ಲೇಖನಗಳಲ್ಲಿ ಕಾಣುವ ಉತ್ಸಾಹ , ಪ್ರೀತಿ ಮತ್ತು ಕೃತಿಗಳ ಜೀವದ್ರವ್ಯವನ್ನು ಅನನ್ಯವಾಗಿ ಗ್ರಹಿಸುವ ಕ್ರಮ ನಮ್ಮ ಹಿರಿಯ ಲೇಖಕರ ನೆನಪನ್ನು ಉದ್ದೀಪಿಸುವಂತಿದೆ. ಮಾಸ್ತಿ, ಕುವೆಂಪು, ಬೇಂದ್ರೆ, ಅಡಿಗ, ಅನಂತಮೂರ್ತಿ ಹಿಂದೆ ನಡೆಸಿದ್ದು ಇಂಥದ್ದೇ ಸಾಹಿತ್ಯಾಸಕ್ತಿಯ ನಿರ್ವ್ಯಾಜ ಸಾಹಿತ್ಯೋದ್ಯಮವನ್ನಲ್ಲವೆ? ತಮ್ಮ ವಿಮರ್ಶೆ, ಪ್ರಕಾಶನ ಸಂಸ್ಥೆ, ಸಾಹಿತ್ಯ ಪತ್ರಿಕೆಗಳ ಸಂಪಾದನೆಯ ಸಂದರ್ಭಗಳಲ್ಲಿ ಪಾಟೀಲರು ನಿರ್ವಹಿಸುತ್ತಿರುವುದು ಇಂಥದ್ದೇ ಕರ್ತವ್ಯಭಾರವನ್ನು.
                ಸ್ವಾರ್ಥ ಮತ್ತು ಅಹಮಹಮಿಕೆಯಿಂದ ಸರೀಕರ ಸೃಜನಶೀಲತೆಯನ್ನು ದಮನಗೊಳಿಸುವ, ಇಕ್ಕಿಮೆಟ್ಟುವ ಯತ್ನಗಳು ನಿರಂತರವಾಗಿ ನಡೆಯುತ್ತಿರುವ ಈವತ್ತಿನ ಸಂದರ್ಭದಲ್ಲಿ ಪಾಟೀಲರ ಸಾಂಗೋಪನ ಪ್ರತಿಭೆ ಬಹು ಮಹತ್ವದ್ದೆನಿಸಿಸುತ್ತದೆ. ಕನ್ನಡದ ಮಹತ್ವದ ಲೇಖಕ ಪಿ.ಲಂಕೇಶರ ಜೊತೆಗೆ ರಾಘವೇಂದ್ರ ಪಾಟೀಲ ನಡೆಸುವ ವಾಗ್ಯುದ್ಧ ಅರ್ಥಪೂರ್ಣವಾಗುವುದು ಈ ಹಿನ್ನೆಲೆಯಲ್ಲಿ. ವಿಮರ್ಶೆ ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ವಿಮರ್ಶೆಯ ಹಿಂದಿರುವ ಮನೋಧರ್ಮ. ಕಳೆಯನ್ನು ಕೀಳುವ ರಭಸದಲ್ಲಿ ಬೆಳೆಯನ್ನೂ ಅಕಾಲ ಕುಯ್ಲಿಗೆ ಗುರಿಪಡಿಸುವ ಅಕ್ರಮವನ್ನು ಪಾಟೀಲರು ಮೊದಲಿನಿಂದಲೂ ವಿರೋಧಿಸುತ್ತಾ ಬಂದಿದ್ದಾರೆ. ಇದರ ಜೊತೆಜೊತೆಗೇ ನನ್ನದೇ ಕೊನೆಯ ಮಾತು ಎಂಬ ನೆಲೆಯಲ್ಲಿ ಆಸ್ಫೋಟಗೊಳ್ಳುವ ಕ್ರುದ್ಧ ನೆಲೆಯ ತಾತ್ವಿಕತೆಯನ್ನೂ ಅವರು ಉದ್ದಕ್ಕೂ ತೀವ್ರವಾಗಿ ವಿರೋಧಿಸುತ್ತಾ ಬಂದಿದ್ದಾರೆ. ಎಡ-ಬಲ-ಮಧ್ಯ ಮಾರ್ಗಗಳ ಬಗ್ಗೆ ಪಾಟೀಲ ನಡೆಸುವ ಸಾಂಸ್ಕೃತಿಕ ಚರ್ಚೆಯನ್ನು ಈ ದೃಷ್ಟಿಯಿಂದ ನಾವು ಗಮನಿಸಬೇಕಾಗಿದೆ.  ಮಧ್ಯಮಮಾರ್ಗ ಎಂಬುದು ಬುದ್ಧನ ತಾತ್ವಿಕತೆಯಿಂದ ಈವತ್ತು ಬಹುದೂರ ಪಯಣಿಸಿದೆ. ಅನೇಕ ಅಪವ್ಯಾಖ್ಯಾನಗಳನ್ನು ತನ್ನ ಮೇಲೆ ಆವಾಹಿಸಿಕೊಂಡಿದೆ. ಮಧ್ಯಮ ಎಂಬುದು ಅತಂತ್ರಸ್ಥಿತಿಯ ಎಡಬಿಡಂಗತ್ವ ಎನ್ನುವಂತಾಗಿರುವುದೇ ಅದರ ವಿರುದ್ಧ ಮಾತಾಡುತ್ತಿರುವವರ ನಿಲುವಿಗೆ ಮುಖ್ಯ ಕಾರಣವಾಗಿರುವಂತಿದೆ. ಅದಕ್ಕಾಗಿಯೇ ಎಡ ಬಲಗಳ ಅತಿಗಳನ್ನು ಪ್ರಶ್ನಿಸುವ ಸಮತೋಲದ ಮಾರ್ಗಕ್ಕೆ ನಾವು ಈಗ ಬೇರೊಂದು ಪರಿಕಲ್ಪವನ್ನೇ ನಿಯೋಜಿಸಕೊಳ್ಳಬೇಕಾಗಿದೆ. ಎಡದ ಪ್ರಶ್ನಿಸುವ, ಬಲದ ಒಪ್ಪಿಕೊಳ್ಳುವ ನಿಲುವುಗಳು ಯುಕ್ತವಾದ ಆತ್ಮಸಾಕ್ಷಿಯ ನೆಲೆಯಲ್ಲೇ ನಿರಂತರವಾಗಿ ಪರೀಕ್ಷಿಸಿಕೊಳ್ಳಬೇಕಾದಂಥವು. ಅಡಿಗರು ಒಮ್ಮೆ ಹೇಳಿದಂತೆ ಇವು ಅತಿಯ ವಿರುದ್ಧ ಸಮತೋಲನ ಸ್ಥಾಪಿಸಲು ಲೇಖಕ ಆಯಾ ಸಂದರ್ಭದಲ್ಲಿ ಕೈಗೊಳ್ಳುವ ಓಲುವಿಕೆಯ ಅನುಸಂಧಾನಗಳು. ಪಾಟೀಲ ತಮ್ಮ ಮಹತ್ವದ ಕಥೆ ಕಾದಂಬರಿಗಳಲ್ಲಿ ಮಾಡುತ್ತಾ ಬಂದಿರುವುದು ಅದನ್ನೇ. ತೇರು, ಮಾಯಿಯ ಮುಖಗಳು, ಲಯ ಮೊದಲಾದ ಘನವಾದ ಕೃತಿಗಳ ಓಲುವಿಕೆಯ ಕ್ರಮ ಎಡಬಲಗಳ ಅತಿಯನ್ನು ತಿರಸ್ಕರಿಸಿ ಓಲುವಿಕೆಯ ಪ್ರಮಾಣವನ್ನು ನಿರ್ಣಯಿಸುವ ಉಪಕ್ರಮಗಳೇ ಆಗಿವೆ. ಎಡ-ಬಲಗಳ ಸಮತೋಲನದ ಲೋಲಕವೇ ಲೇಖಕನ ಆತ್ಮಾನುಸಂಧಾನವನ್ನು ನಿರ್ಣಯಿಸುವಂಥದ್ದು.

0

                ಈ ಕೃತಿಯ `ಅಂತರಂಗದ ಪಿಸುನುಡಿಗಳುಎನ್ನುವ, ಎರಡನೇ ಭಾಗದಲ್ಲಿ ಬರುವ ಸಂಸ್ಕೃತಿ, ಧರ್ಮ, ಸಾಮಾಜಿಕ ಚಿಂತನೆಗಳ ಪ್ರಬಂಧಗಳು ಸಾಹಿತ್ಯವನ್ನೂ ಬದುಕನ್ನೂ ಒಟ್ಟಿಗೇ ಮೂಲ ಸಾಮಗ್ರಿ ಮಾಡಿಕೊಂಡು ಜೀವನದ ಹೊಸ ತಾತ್ವಿಕೆಗೆ ಹಂಬಲಿಸುವ ತನ್ಮಯ ಚಿಂತನಾಕ್ರಮಗಳು. ಸ್ವತಃ ಸಾಹಿತ್ಯದಿಂದಲೇ ತಮ್ಮ ಬದುಕಿನ ಸಾರ್ಥಕತೆಯನ್ನು ಕಂಡುಕೊಳ್ಳುವೆನೆಂಬ ನಚ್ಚಿನ ಪಾಟೀಲರು ಸಾಹಿತ್ಯವೆಂಬುದೊಂದೇ ಸೃಜನಶೀಲತೆಯೇ ಎಂಬ ಪ್ರಶ್ನೆಯನ್ನೂ ಕೇಳಿಕೊಳ್ಳಲು ಹಿಂಜರಿಯದಂಥವರು. ವರ್ತಮಾನದ ತಲ್ಲಣಗಳ ಬಗ್ಗೆ ಸದಾ ಅಲ್ಲೋಲಕಲ್ಲೋಲವಾಗುವ ಪ್ರಕ್ಷುಬ್ಧತೆ ಅವರಿಗಿದೆ. ಅದನ್ನು ಶಮಸ್ಥಿತಿಗೆ ತರುವ ಹೋರಾಟಗಳೂ ಅಲ್ಲಿವೆ. ಮತ್ತೆ ಮತ್ತೆ ತಣಿಯುವ, ಮತ್ತೆ ಮತ್ತೆ ತಲ್ಲಣಿಸುವ ಅವರ ಮನೋಪ್ರವೃತ್ತಿಯೇ ಅವರ ಸೃಷ್ಟಿಶೀಲತೆಯ ಜೀವಂತಿಕೆಗೆ ಕಾರಣವಾಗಿದೆ. ಪೆÇಲಿಟಿಕಲಿ ಕರೆಕ್ಟಾಗಬೇಕೆಂಬ ನಯಗಾರಿಕೆ ಅವರಲ್ಲಿ ಯಾವತ್ತೂ ಕಾಣದು. ಜೀವವಿರೋಧಿ ಎನಿಸುವ ನಿಲುವುಗಳಿಗೆ ಮೊದಲಿಂದಲೂ ಗುಮ್ಮುತ್ತಾ ಬಂದವರು ಅವರು. ಸ್ಥಾಪಿತ ಸಂಸ್ಥೆಗಳ ವಿರುದ್ಧ, ಘನಂದಾರಿ ವ್ಯಕ್ತಿತ್ವಗಳ ವಿರುದ್ಧ ನಿರ್ಭಯದಿಂದ ಗುಮ್ಮುವ ಸಾಹಸವನ್ನು, ಸಾಹಸ ಎನ್ನುವುದಕ್ಕಾಗಿಯಲ್ಲ, ಕರ್ತವ್ಯ ಎಂಬ ಕಾರಣಕ್ಕಾಗಿ ಅವರು ನಡೆಸುತ್ತಾ ಬಂದಿದ್ದಾರೆ. ಲಂಕೇಶ, ಅನಂತಮೂರ್ತಿ, ಚಂಪಾ ಮೊದಲಾಗಿ ಎಲ್ಲ ಮಹತ್ವದ ಲೇಖಕರ ಜೊತೆಗೂ ಅವರ ಅಸಮ್ಮತಿ ಮತ್ತು ಜಗಳಗಳಿವೆ. ಆದರೆ ಅವು ಯಾವತ್ತೂ ವೈಯಕ್ತಿಕ ನೆಲೆಯ ಅಹಮ್ಮಿನ ಪ್ರದರ್ಶನಗಳಾಗಿಲ್ಲ. ಪಾಟೀಲರಲ್ಲಿ ನಾನು ಮೆಚ್ಚುವುದು ಅದನ್ನೇ. ಹಠ ಇದೆ. ಅದು ಸರಿಯಲ್ಲವೆಂದು ತೋರಿದಾಗ ಅದನ್ನು ತಿದ್ದಿಕೊಳ್ಳುವ ಆತ್ಮವಿಮರ್ಶೆಯೂ, ಬದುಕು ಪಕ್ವವಾದಂತೆ ಅವರಿಗೆ ದಕ್ಕೀತೆಂಬುದು ನನ್ನ ವಿಶ್ವಾಸವಾಗಿದೆ. ಅನಂತಮೂರ್ತಿ ಮೋದಿಯ ಬಗ್ಗೆ ಆಡಿದ ಮಾತುಗಳ ಬಗ್ಗೆ ಪಾಟೀಲ ಎತ್ತುವ ಪ್ರಶ್ನೆಗಳಿಗೆ ಅನಂತಮೂರ್ತಿಯವರ ಆರ್ದ್ರತೆಯೇ ಉತ್ತರವಾಗುವುದು ಅನುಸರಣೀಯ ಮಾರ್ಗವಾಗಿದೆ. ವಿರೋಧವನ್ನು ಒಪ್ಪಿಕೊಳ್ಳುವುದಲ್ಲ; ಸಹಿಸುವುದು ಬಹು ದೊಡ್ಡ ನಿಲುವೆಂಬುದನ್ನು ಕನ್ನಡ ಸಾಕ್ಷೀ ಪ್ರಜ್ಞೆ ಮೊದಲಿಂದಲೂ ನಮಗೆ ಬೋಧಿಸುತ್ತಾ ಬಂದಿದೆ. "ಕಾಲನೇ..ಜೀವಕ್ಕೆ ಮಾಗಲು ಬಿಡು" ಎಂಬ ಪಾಟೀಲರ ಎದೆಯಾಳದ ಮೊರೆ ಸಾರಿಯಾದ ದಿಕ್ಕಿನತ್ತಲೇ ಪ್ರವಹಿಸುತ್ತಲಿದೆ.
                ಪಾಟಿಲರ ಕೃತಿಯ ಮೂರನೇ ಭಾಗದ ಲೇಖನಗಳು ನಮ್ಮ ಪ್ರಜ್ಞೆಗೆ ಮುಸುಕುವ ಕಾಳಿಕೆಯನ್ನು ಚಿವುಟಿ ದೀಪವನ್ನು ಪೆÇ್ರೀಜ್ವಲಿಸುವ ವ್ರತದಲ್ಲಿ ತೊಡಗಿರುವ ಬರವಣಿಗೆಗಳು! ದೀಪವು ಬೆಂಕಿ ಮತ್ತು ಮತ್ತು ಬೆಳಕು ಎರಡನ್ನೂ ಉತ್ಪಾದಿಸುವುದೆಂಬುದನ್ನು ನಾವು ಒಪ್ಪಿಕೊಳ್ಳಲೇ ಬೇಕು. ಕುವೆಂಪು, ಅಡಿಗ, ಲಂಕೇಶ, ಅನಂತಮೂರ್ತಿಯಂಥ ಲೇಖಕರು ನನ್ನ ಧ್ಯಾನದ ಲೇಖಕರಾಗಿರುವುದು ಅದಕ್ಕಾಗಿಯೇ. ಅಲ್ಲಿ ಬೆಂಕಿ ಮತ್ತು ಬೆಳಕು ಎರಡನ್ನೂ ಉತ್ಪಾದಿಸುವ ಶಕ್ತಿ ಕ್ರಿಯಾಶೀಲವಾಗಿರುತ್ತದೆ. ರಾಘವೇಂದ್ರ ಪಾಟೀಲರೂ ಅದೇ ಪೂರ್ವಸೂರಿಗಳ ಮಾರ್ಗದಲ್ಲಿ ಮುನ್ನುಗ್ಗುತ್ತಿರುವ ಉದ್ವಿಗ್ನ ಪ್ರತಿಭೆ. ಅವರ ಮನಸ್ಸಿಗೆ ತಣಿವನ್ನು ನಾನು ಹಾರೈಸಲಾರೆ. ಉರಿಯುವುದೇ ಅದರ ಜೀವಧರ್ಮವಾಗಿದೆ. ಸ್ನೇಹವನ್ನು ಕಳೆದುಕೊಳ್ಳದಂತೆ ಸಮರದಲ್ಲಿ ತೊಡಗುವುದು-ಗೀತೆಯ ಅಂತರಾರ್ಥಗಳಲ್ಲಿ ಇದೂ ಒಂದು. ಉರಿದೀಪ ಮತ್ತು ತೈಲಧಾರೆಗಳಲ್ಲಿ ತೈಲಧಾರೆ ನನಗೆ ಪ್ರಿಯವಾದ ಜೀವರೂಪಕವಾದರೆ, ಪಾಟಿಲರಿಗೆ ಮತ್ತು ನಾನು ಈ ಹಿಂದೆ ಪ್ರಸ್ತಾಪಿಸಿದ ಲೇಖಕರಿಗೆ ಉರಿದೀಪವೇ  ಪ್ರಧಾನವಾದ ಜೀವಪ್ರತೀಕ. ಅಹಂಕಾರದಹನ ಮತ್ತು ಪರಪ್ರಕಾಶನ ಪ್ರವೃತ್ತಿ ಒಂದು ಅಗ್ನಿದಿವ್ಯ. ಅದರಲ್ಲಿ ಮಾಗಿ ಪಕ್ವವಾಗುವ ಆತ್ಮವೃತ್ತಿ ನನ್ನ ಪ್ರಿಯ ಸೋದರ ಪಾಟೀಲರಿಗುಂಟು.

0

ಲೋಕಸಂಸಾರಿ ಎಂದು ಹೇಳಿಕೊಳ್ಳುವವರಿಗೂ ಒಂದು ಖಾಸಗಿ ಸಂಸಾರ ಇದ್ದೇ ಇರುತ್ತದೆ. ಲೋಕ ಸಂಸಾರಕ್ಕಾಗಿ ಖಾಸಗಿ ಸಂಸಾರವನ್ನು ತ್ಯಜಿಸಿ ಹೋಗುವ ಕ್ರಮ ಒಂದು. ಲೋಕ ಸಂಸಾರವನ್ನು, ಖಾಸಗಿ ಸಂಸಾರವನ್ನು ಹಚ್ಚಿಕೊಂಡೇ ನಿಭಾಯಿಸುವುದು ಇನ್ನೊಂದು ಕ್ರಮ. ಬುದ್ಧನದ್ದು ಮೊದಲ ಕ್ರಮ; ಬಸವ-ಪುರಂದರರದ್ದು ಎರಡನೇ ಕ್ರಮ. ಕವಿ-ಕಲಾವಿದರು ಹೆಚ್ಚಾಗಿ ಬಸವ ಪುರಂದರರ ಕ್ರಮವನ್ನೇ ಅನುಸರಿಸುವಂಥವರು.

ಕಲಾವಿದರು ಲೋಕ ಸಂಸಾರವನ್ನು ಗ್ರಹಿಸುವುದು ಖಾಸಗಿ ಸಂಸಾರದೊಂದಿಗೆ ತಮಗಿರುವ ಸಂಬಂಧದ ಮೂಲಕವೇ. ಮನೆಯೆಂಬ ಕಾಂಡದಿಂದ ಒಡೆದ ಟಿಸಿಲುಗಳ ಹಾಗೆ ಲೋಕ ಸಂಸಾರ. ತಮ್ಮ ಕೃತಿಯ ನಾಲಕ್ಕನೇ ಭಾಗದಲ್ಲಿ ಪಾಟೀಲರ ಖಾಸಗಿ ಸಂಸಾರ ಅನಾವರಣಗೊಳ್ಳುವ ಮೂಲಕವೇ ಅವರ ಲೋಕ ಸಂಸಾರದ ಅಭಿವ್ಯಕ್ತಿಯೂ ಸಾಧಿತವಾಗುತ್ತದೆ. ಅವರ ನಿಡಿದಾದ ಹಾಗೂ ತೀವ್ರವಾದ ಅನುಭವ ಜಗತ್ತು ಅನಾವರಣಗೊಳ್ಳುವುದು ಎಂದರೆ ಲೇಖಕನ ಅಂತರಂಗದ ಅನಾವರಣವೇ! ಬಹು ವಿಸ್ತಾರವಾದದ್ದು ಪಾಟೀಲರ ಅನುಭವ ಜಗತ್ತು. ವೈವಿಧ್ಯಮಯ ವ್ಯಕ್ತಿಗಳು, ಘಟನೆಗಳು, ವಿಸ್ತಾರವಾದ ಓದು, ಆಳವಾದ ಪರಿಭಾವನೆಗಳಿಂದ ಪಾಟೀಲರ ಲೋಕಸಂಸಾರ ಅವರ ಖಾಸಗಿ ಸಂಸಾರದ ಕರ್ಷಣೆಯಿಂದಲೇ ಆಕಾರ ಪಡೆಯುತ್ತದೆ. ಯಾವುದು ಬಹಿರಂಗ, ಯಾವುದು ಅಂತರಂಗ ಎಂದು ಬೇರ್ಪಡಿಸಲಾಗದಂತೆ ಈ ಒಳ-ಹೊರ-ನಿಕಟ-ದೂರ ಸಂಪರ್ಕಗಳು ಹೆಣೆದುಕೊಳ್ಳುತ್ತವೆ. `ಎಷ್ಟು ಕಾಡತಾವ ಕಬ್ಬಕ್ಕಿ...ಎಂಬ ಕಥೆಯ ಅವಸ್ಥಾಂತರಗಳನ್ನು ಪಾಟೀಲ ವಿವರಿಸಿರುವ ರೀತಿ ಸೃಷ್ಟಿಶೀಲತೆಯ ನಿಗೂಢ ಜಗತ್ತಿಗೆ ನಮ್ಮನ್ನು ಕರೆದೊಯ್ಯುತ್ತದೆ. ಸ್ಫಟಿಕದ ಮೂಲಕ ಹಾಯುವ ಬೆಳ್ಳನೆ ಬೆಳಕಿನ ಕಿರಣಗಳು ಸ್ಫಟಿಕದ ಆಚೆ ಬರುವಾಗ ಬಣ್ಣಬಣ್ಣದ ಎಳೆಗಳಾಗಿ ವಿಂಗಡಗೊಳ್ಳುವ ಚೋದ್ಯವನ್ನು ಪುತಿನ ಸೃಷ್ಟಿಶೀಲತೆಗೆ ಯಾವಾಗಲೂ ಹೋಲಿಸುತ್ತಾ ಇದ್ದರು. ಒಂದು ಕಥೆ ಚಿತ್ತಾಲ, ಗಿರಡ್ದಿ, ಮಲ್ಲಿಕಾರ್ಜುನ ಹಿರೇಮಠ ಹೀಗೆ ಬೇರೆ ಬೇರೆ ಸ್ಫಟಿಕಗಳ ಮೂಲಕ ಹಾಯುತ್ತಾ ಹಾಯುತ್ತಾ ಪಡೆಯುವ ವರ್ಣಾಂತರಗಳ ರೋಚಕ ವರ್ಣನೆ ಈ ಲೇಖನದಲ್ಲಿ ಇದೆ.
ರೋಚಕತೆ ಮತ್ತು ಸಂಘರ್ಷ ಪ್ರಧಾನ ತುಡಿತಗಳಿಗೆ ಮನಸ್ಸು ತೆತ್ತ ಸಮಾಜ ಸ್ನೇಹ ಸೌಹಾರ್ದಗಳಿಗೆ ವಿಮುಖವಾಗುವ ದುರಂತವನ್ನು ಇನ್ನೊಂದು ಪ್ರಬಂಧ ನೋವಿನಿಂದ ಆಲಾಪಿಸುತ್ತದೆ. ಭೇದದಿಂದ ಬಿಡುಗಡೆಗೊಳಿಸಯ್ಯಾ ಎಂಬ ಬಸವಣ್ಣನವರ ಒಂದು ಮಾತು ವರ್ತಮಾನದ ಮನೋಭೂಮಿಕೆಯನ್ನು ಬಗೆಯುತ್ತಾ ಬಗೆಯುತ್ತಾ ಪ್ರಸ್ತುತ ಸಮಾಜದ ಆಸಕ್ತಿಗಳ ದುರಂತ ದರ್ಶನ ಮಾಡಿಸುತ್ತದೆ. ಪಾಟೀಲರು ಅವರ ತಂದೆ ಬಳವಂತರಾವ್ ಪಾಟೀಲರ ಬಗ್ಗೆ ಬರೆದ ಲೇಖನವಂತೂ ನನಗೆ ಪುತಿನ ಅವರ ಗೋಕುಲಾಷ್ಟಮಿ ಪ್ರಬಂಧವನ್ನು ನೆನಪಿಸುವಷ್ಟು ಆರ್ದ್ರವಾಗಿದೆ. ಈ ವಿಭಾಗದಲ್ಲಿ ನನ್ನ ಮನಸ್ಸನ್ನು ಸಂಪೂರ್ಣವಾಗಿ ಆವರಿಸಿದ ಪ್ರಬಂಧ-`ಇವರೂ ನಮ್ಮಂತಹ ಮನುಷ್ಯರೇ!ಈ ಕಥಾಪ್ರಬಂಧದ ಮುಖ್ಯ ಪಾತ್ರ ಪಾಟೀಲರ ಅಜ್ಜ ಶ್ರೀನಿವಾಸ ಪಾಟೀಲರು. ಮೊಮ್ಮಗಳ ಮದುವೆ ಮುಗಿಸಿ, ಎಷ್ಟೋ ವರ್ಷಗಳಾದ ಮೇಲೆ ಅವಳು ದೊಡ್ಡವಳಾಗಿ ಆಕೆಯನ್ನು ಗಂಡನ ಮನೆಗೆ ಕರೆದೊಯ್ಯುವ ಸಂದರ್ಭ. ಆ ಪುಟ್ಟ ಹುಡುಗಿಯನ್ನು ಕೊಟ್ಟಿರುವುದು ಮಧ್ಯವಯಸ್ಸಿನ ಗೋಪಾಳಾಚಾರ್ಯ ಲೋಕಾಪುರ ಅವರಿಗೆ. ಆತ ಅರೆಹುಚ್ಚ ಬೇರೆ. ಹಾಗಿದ್ದೂ ಪರಮ ಮುಗ್ಧೆ ಅಹಲ್ಯೆ(ಅಯಿಲಿ)ಯನ್ನು ಆತನಿಗೆ ಕೊಟ್ಟು ಮದುವೆ ಮಾಡಿದ್ದು ಯಾತಕ್ಕೆ? ಅವರು ದೊಡ್ಡ ಜಮೀನ್ದಾರರು ಎಂಬ ಒಂದೇ ಕಾರಣಕ್ಕೆ ಅಲ್ಲವೆ? ಅಯಿಲಿಯನ್ನು ಗಂಡನ ಮನೆಗೆ ಕರೆದೊಯ್ಯುವಾಗ ಗಂಡನ ಮನೆಯವರು ವಧುವಿಗೆ ಕೊಟ್ಟಿದ್ದ ಅದೆಷ್ಟೋ ವಡವೆಗಳ ದೊಡ್ಡ ಗಂಟೇ ಇದೆ! ಹೆಣ್ಣಿನೊಂದಿಗೆ ಅವರ ಹೊನ್ನನ್ನೂ ಒಪ್ಪಿಸಬೇಕಲ್ಲ! ಗಾಡಿ ಪ್ರಯಾಣ. ಮಧ್ಯೆ ಒಂದು ಬಂಗಲೆಯಲ್ಲಿ ಉಳಿದು ಮಾರನೆ ಬೆಳಿಗ್ಗೆ ಈ ಸಂಸಾರ ಬಂಡಿಪ್ರಯಾಣ ಮುಂದುವರೆಸುತ್ತದೆ. ಹೋಗುವಾಗ ಒಡವೆಯ ಗಂಟನ್ನು ಹೆಣ್ಣುಮಕ್ಕಳು ಬಂಗಲೆಯಲ್ಲೇ ಮರೆತು ಬಂದಿದ್ದಾರೆ.  ಅದು ಅಜ್ಜನಿಗೆ ತಿಳಿಯದು. ಬಿಟ್ಟು ಬಂದಿರುವ ಕೈಗೋಲಿಗಾಗಿ ಅವರು ಬಂಗಲೆಗೆ ಹಿಂದಿರುಗಿದಾಗ ಬಂಗಲೆಯಲ್ಲಿದ್ದ ಕಸಗುಡಿಸುವ ವೃದ್ಧೆ ಕೋಲಿನ ಜೊತೆಗೆ ಒಡವೆಯ ಗಂಟನ್ನೂ ತಾತನಿಗೆ ಹಿಂದಿರುಗಿಸುತ್ತಾಳೆ! ಇವರೂ ಮನುಷ್ಯರೇ! ಆದರೆ ನಾವು ಅವರಂತಿದ್ದೇವೆಯೇ? ಇದು ಕತೆಗಾರ ಪಾಟಿಲ ಎತ್ತುವ ಎದೆ ನಡುಗಿಸುವ ಪ್ರಶ್ನೆ! ಈ ಕಥಾಪ್ರಬಂಧ ಓದಿ ಮುಗಿಸಿದಾಗ ಆ ಕಸಗುಡಿಸುವ ಬಡ ಮುದುಕಿಯ ಬಗ್ಗೆ ನಮಗೆ ಉಂಟಾಗುವ ಗೌರವ ಎಂಥದ್ದು. ನಮ್ಮನ್ನು ಅವಳ ಜಾಗದಲ್ಲಿ ಇರಿಸಿಕೊಂಡು ನೋಡಿದಾಗ ಹುಟ್ಟುವ ಎದೆಕಲಕುವ ಪ್ರಶ್ನೆ ಎಂಥದ್ದು! ನಿರೂಪಣೆಯ ರೋಚಕ ಕಥನ ಕಳೆದು ಹೋದ ಜಗತ್ತನ್ನು ನಮ್ಮ ಕಣ್ಣಮುಂದೆ ನಿಲ್ಲಿಸುವಷ್ಟು ಸಶಕ್ತವಾಗಿದೆ. ಪಾಟೀಲ ಎಂಥ ಕತೆಗಾರರು ಎಂಬುದು ಅವರ ಪ್ರಬಂಧ ವಿಮರ್ಶೆಗಳಲ್ಲೂ ಅಭಿವ್ಯಕ್ತವಾಗುತ್ತದೆ.
-              ಎಚ್.ಎಸ್.ವೆಂಕಟೇಶಮೂರ್ತಿ

Monday, April 8, 2019

A vachana by Basavanna I like most


`ಭೇದದಿಂದ ಬಿಡುಗಡೆಗೊಳಿಸಯ್ಯಾ ತಂದೆ:
ನನಗೆ ಪ್ರಿಯವಾದ ಬಸವಣ್ಣನವರ ಒಂದು ವಚನ*
-              ರಾಘವೇಂದ್ರ ಪಾಟೀಲ

ಅವರ ಅಮಿತವಾದ ವಚನ ಸಾಹಿತ್ಯವನ್ನು ಧೇನಿಸುತ್ತಿದ್ದಂತೆಯೇ ನನ್ನ ಮನದಲ್ಲಿ ಅವರ ಒಂದು ವಚನ ವಿಶೇಷ ಸಂಚಲನವನ್ನುಂಟುಮಾಡುವುದನ್ನು ನೆನಪಿಸಿಕೊಳ್ಳಬೇಕೆನಿಸುತ್ತದೆ. ಆ ವಚನ ಅತ್ಯಂತ ಸರಳವಾದದ್ದಾದರೂ ಅದರ ಸಾಮಾಜಿಕ ಮಹತ್ವ ಅಪರಂಪಾರವಾದದ್ದು. ಆ ವಚನ :
ಇವನಾರವ ಇವನಾರವ ಇವನಾರವನೆಂದೆನಿಸದಿರಯ್ಯಾ
ಇವ ನಮ್ಮವ ಇವ ನಮ್ಮವ ಇವ ನಮ್ಮವನೆಂದೆನಿಸಯ್ಯಾ
ಕೂಡಲಸಂಗಮದೇವಾ ನಿಮ್ಮ ಮನೆಯ ಮಗನೆಂದೆನಿಸಯ್ಯಾ.

ಬಸವಣ್ಣನವರು ತಮ್ಮ ಈ ವಚನದ ಮೂಲಕ ಮನುಷ್ಯ ಪ್ರಜ್ಞೆಯಲ್ಲಿ ಅತ್ಯಂತ ಮೂಲಭೂತವಾಗಿ ನೆಲೆಗೊಂಡಿರುವ ದೌಭಾಗ್ಯದ ಲಕ್ಷಣವೊಂದರ ಕುರಿತು ಮಾತನಾಡುತ್ತಿದ್ದಾರೆ ಎನಿಸುತ್ತದೆ. ಆ ಲಕ್ಷಣವೆಂದರೆ, ತಾನು-ತನ್ನವರು ಉಳಿದವರಿಗಿಂತ ಬೇರೆ, ನಮ್ಮಿಂದ ಹೊರತಾದ ಉಳಿದವರೆಲ್ಲರು ನಮ್ಮವರಲ್ಲ ಎನ್ನುತ್ತ ಹೊರಡುವ ತರತಮದ ಭಾವ. ಯಾರೆಲ್ಲರನ್ನೂ ಒಳಗೊಂಡು ಸರ್ವಜನ ಬಾಂಧವ್ಯದ ಏಕತ್ವದ ಸಮಾಜವನ್ನು ನಿರ್ಮಸುವ ಕನಸುಕಂಡು, ಅದಕ್ಕೆ ತಮ್ಮ ಜನ್ಮವನ್ನು ಧಾರೆ ಎರೆದ ಬಸವಣ್ಣನವರು ಕೊನೆಯಲ್ಲಿ ಕಂಡದ್ದು ಮತ್ತದೇ - ನಾವು ಬೇರೆ ನೀವು ಬೇರೆ ಎಂತೆನ್ನುವ ಒಡಕಿನ ಗಿಡವು ಮರವಾಗಿ ಬೆಳೆಯುತ್ತಿರುವುದನ್ನು. ಬಸವಣ್ಣನವರಿಗೆ, ಭೇದವೆಣಿಸದ, ಸಮತ್ವದ, ಏಕತ್ವದ ಭಾವವು ಮನುಷ್ಯಕುಲವು ನೆಮ್ಮದಿಯಿಂದ ಬದುಕಲು ಅವಶ್ಯವೆನ್ನುವುದು ಅಚಲ ನಂಬಿಕೆಯಾಗಿತ್ತು. ಆದರೆ, ಬಹುಶಃ ಈ ಗುಣವು ಮನುಷ್ಯಕುಲಕ್ಕೆ ಹೊರತಾದದ್ದು ಏನೋ ಎಂದು ಅವರಿಗೆ ಅನ್ನಿಸಿಬಿಟ್ಟಿತ್ತು. ಬಸವಣ್ಣನವರಿಗೆ ಮನುಷ್ಯ ಸ್ವಭಾವದ ಈ ಭೇದ ಕಲ್ಪನೆಯು ನಿವಾರಿಸಲಾಗದಷ್ಟು, ಅವನ ಅಂತರಂಗದೊಳಕ್ಕೆ ಆಳವಾಗಿ ಇಳಿದದ್ದು ಎನ್ನಿಸಿರಬೇಕು.
ಮನುಷ್ಯರು ರೂಢಿಸಿಕೊಳ್ಳಬೇಕಾದ ನೈತಿಕತೆಯ ಬಗೆಗೆ ಅವರು ನೇರವಾಗಿ ಮನುಷ್ಯನನ್ನು ಉದ್ದೇಶಿಸಿಯೇ ಬೇಕಷ್ಟು ಹೇಳಿದ್ದಾರೆ. ನೋಡಿ, `ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ...ಎಂತೆನ್ನುವ ಬೋಧನೆಯನ್ನು ಅವರು ನೇರವಾಗಿ ತಮ್ಮೊಡನೆ ಬದುಕುತ್ತಿರುವ ಮನುಷ್ಯರಿಗೆ ನೀಡುತ್ತಿದ್ದಾರೆ. ಅದನ್ನು ಮಾಡಬೇಡ... ಇದನ್ನು ಮಾಡಬೇಡ ಎಂದು ನೇರವಾಗಿ ಮನುಷ್ಯನಿಗೆ ಹೇಳುತ್ತಾರೆ. ಹಾಗೆಯೇ, `ಕಲ್ಲನಾಗರ ಕಂಡರೆ ಕೈಮುಗಿವರು, ದಿಟದ ನಾಗರ ಕಂಡರೆ ಕೊಲ್ಲೆಂಬರುಎಂದು ಮನುಷ್ಯನ ಹಿಪಾಕ್ರಸಿಯನ್ನು ನೇರವಾಗಿ ಟೀಕಿಸಿ ಬೋಧನೆ ನಡೆಸುತ್ತಾರೆ.
ಆದರೆ ಭೇದವೆಣಿಸದ, ಸಮತ್ವದ-ಏಕತ್ವದ ಭಾವವು ಮನುಷ್ಯನ ಭಾವಕೋಶಕ್ಕೆ ಹೊರತಾದುದು ಎಂದು ಅನ್ನಿಸಿದ ಕಾರಣವಾಗಿ, ಹೀಗೆ ಮನುಷ್ಯಸ್ವಭಾವಕ್ಕೆ ಹೊರತಾದುದನ್ನು ಬೋಧನೆಯ ಮೂಲಕ ಅವನಲ್ಲಿ ಅಳವಡಿಸಲಾಗದು ಎನ್ನುವ ಭಾವದಲ್ಲಿ, ಅವರು, ಅಂಥ ಭಾವವನ್ನು ತಮ್ಮ ಆರಾಧ್ಯದೈವವಾದ ಕೂಡಲಸಂಗಯ್ಯನೇ ಮನುಷ್ಯರಿಗೆ ಕೊಡಮಾಡಬೇಕೆಂದು ಪ್ರಾರ್ಥಿಸುತ್ತಾರೆ. ಭೇದವೆಂಬುವ ಈ ದುರ್ಲಕ್ಷಣವು ನಿವಾರಿಸಲಾಗದ ರೋಗ ಎಂತೆನ್ನುವ ನೋವಿನಲ್ಲಿಯೇ, ಅವರು ಈ ರೋಗವನ್ನು ನಿವಾರಿಸಯ್ಯಾ ತಂದೆಯೇ ಎಂದು; ಮನುಷ್ಯರೆಲ್ಲರೂ ಸಂಗಯ್ಯನ ಮಕ್ಕಳು, ನಾವೆಲ್ಲ ಬಂಧುಬಾಂಧವರೆನ್ನುವ  ಭಾವವನ್ನು ನಮ್ಮಲ್ಲಿ ಮೊಳೆಯಿಸಯ್ಯಾ ಎಂದು ಕೂಡಲಸಂಗಯ್ಯನಲ್ಲಿ ಬೇಡಿಕೊಳ್ಳುತ್ತಾರೆ. ಬಸವಣ್ಣನವರ ಈ ತಿಳುವಳಿಕೆ ಅತ್ಯಂತ ಸತ್ಯವಾದದ್ದು ಎನ್ನಿಸುತ್ತದೆ. ಭೇದದ ಭಾವವು ಇಂದು ಬಸವಾನುಯಾಯಿಗಳು ಎಂದು ಹೇಳಿಕೊಳ್ಳುವವರಲ್ಲಿಯೂ ಅಖಂಡವಾಗಿ ಬೆಳೆದುನಿಂತಿದೆ. ಬಸವಣ್ಣನವರು, ತಾವು ಇಷ್ಟಪಡದ ಮನುಷ್ಯನ ಮೂಲಭೂತವಾದ ಈ ಗುಣದ ಕಾರಣವಾಗಿಯೇ, ಮನುಷ್ಯನಾಗಿರಲು ಬಯಸದೇ, ಶಿವನಲ್ಲಿ ಒಂದು ಪ್ರಾರ್ಥನೆ ಸಲ್ಲಿಸುತ್ತಾರೆ :

ಅಕಟಕಟಾ ಶಿವ ನಿನಗಿನಿತು ಕರುಣವಿಲ್ಲ
ಅಕಟಕಟಾ ಶಿವ ನಿನಗಿನಿತು ಕೃಪೆಯಿಲ್ಲ
ಏಕೆ ಹುಟ್ಟಿಸಿದೆ ಇಹಲೋಕ ದುಃಖಿಯ?
...
ಕೂಡಲಸಂಗಮದೇವಾ ಕೇಳಯ್ಯ
ಎನಗಾಗಿ ಮತ್ತೊಂದು ತರುಮರವಿರಲಿಲ್ಲವೆ?

ಭೇದವನ್ನು ಎಣಿಸದ ಯಾವುದಾದರೊಂದು ತರುಮರವಾಗಿ ನನ್ನನ್ನು ಸೃಷ್ಟಿಸುವಬದಲು ಭೇದದ ಭಾವದಲ್ಲಿ ತನ್ನನ್ನು ತಾನೇ ಬಗೆದುಕೊಳ್ಳುವ ಈ ಮನುಷ್ಯಕುಲದಲ್ಲಿ ಯಾಕೆ ಹುಟ್ಟಿಸಿದೆಯಯ್ಯಾ ಎಂದು ಅವರು ಶಿವನ ನಿಂದಾಸ್ತುತಿಗೈಯುತ್ತಾರೆ.

              ಬಸವಜಯಂತಿಯ ಸಂದರ್ಭದಲ್ಲಿ ಪತ್ರಿಕೆಯೊಂದಕ್ಕೆ ಬರೆದ ಟಿಪ್ಪಣಿ 

Thursday, March 7, 2019

The significance of translation works in general and in particular with reference to HSV


ಎಚ್.ಎಸ್.ವೆಂಕಟೇಶಮೂರ್ತಿಯವರ ಪ್ರಾಚೀನ ಕಾವ್ಯಾನುಸಂಧಾನ
ಮತ್ತು ಅದರ ಮಹತ್ವ: ಕೆಲವು ಯೋಚನೆಗಳು
-              ರಾಘವೇಂದ್ರ ಪಾಟೀಲ
ಭಾರತೀಯ ಸಂದರ್ಭದಲ್ಲಿ ಆಧುನಿಕತೆಯು ತನ್ನ ವೈಚಾರಿಕತೆಯನ್ನು ಸಿದ್ಧಪಡಿಸಿಕೊಳ್ಳುವ ಸಂದರ್ಭದಲ್ಲಿ ಒಂದು ಸುಲಭದ ಮಾರ್ಗವನ್ನು ಹಿಡಿಯಿತೆನ್ನಿಸುತ್ತದೆ. ಅದು ಸಂಪೂರ್ಣವಾಗಿ ಪಾಶ್ಚಾತ್ಯ ಶಿಕ್ಷಣವನ್ನು ನಂಬಿ ಹೊರಟಿತು. ಪಾಶ್ಚಾತ್ಯ ಶಿಕ್ಷಣವು ಅಳವಡಿಸಿಕೊಂಡಿದ್ದ ವಿಜ್ಞಾನ ಬೋಧನೆಯ ವಸ್ತು ಮತ್ತು ವಿಧಾನಗಳೆರಡೂ ನಮ್ಮ ಚಿಂತಕರ ಕಣ್ಣು ಕುಕ್ಕಿಸಿಬಿಟ್ಟವು. ಅದಕ್ಕೆ ತಮ್ಮನ್ನು ಸಂಪೂರ್ಣವಾಗಿ ಒಪ್ಪಿಸಿಕೊಂಡ ಯುವ ವೈಚಾರಿಕರು, ಪಾಶ್ಚಾತ್ಯದ ಎಲ್ಲವೂ ತೀರ್ಥ ಎಂದು ಒಪ್ಪಿಕೊಂಡುಬಿಟ್ಟರು. ಜೊತೆಗೆ ಸಮಕಾಲೀನ ಜಾತಿ ವೈಷಮ್ಯಗಳು, ಉನ್ನತವೆನ್ನಿಸಿಕೊಂಡ ಬ್ರಾಹ್ಮಣ ಮತ್ತು ಉಳಿದ ಮೇಲ್ಜಾತಿಯವರ ಒಣಕೊಬ್ಬುಗಳು, ಅಂಥ ನಡಾವಳಿಕೆಗಳಿಂದ ನಮ್ಮಲ್ಲಿನ ಯುವ ಪ್ರಗತಿಪರರು ಪಶ್ಚಿಮದ ವೈಚಾರಿಕತೆ ಬಿಟ್ಟು ಬೇರಿಲ್ಲ, ಅದೇ ನಮ್ಮ ಉದ್ಧಾರದ ಏಕೈಕ ಮಾರ್ಗ ಎಂದುಕೊಂಡು ಅದನ್ನು ಬೆನ್ನತ್ತಿ ಹೊರಟರು. ಅಡಿಗರು ಹೇಳುವಂತೆ `ಪುರೋಹಿತರ ನಂಬಿ(!) ಪಶ್ಚಿಮ ಬುದ್ಧಿಯಾದೆವೋ’, ಈ ಹೊಸ ದೀಕ್ಷಿತರು ಭಾರತೀಯ ಜ್ಞಾನ ಸಮುಚ್ಚಯಕ್ಕೆ ಸಂಪೂರ್ಣವಾಗಿ ಮೊಗದಿರುಹಿ, ನಮ್ಮ ಸಮಾಜವನ್ನು ತಮ್ಮ ಹೊಸ ಅಳತೆಯ ಕಡ್ಡಿಯಿಂದ ಅಳೆಯತೊಡಗಿದರು. ಆದರೆ, ಇವರ ಅಳತೆಯ ಪ್ರಕ್ರಿಯೆಯು ಏ.ಕೆ.ರಾಮಾನುಜನ್ನರ `ಅಂಗುಲಹುಳುವಿನ ಕತೆಯಂತಾಯಿತು. ಆ ಹುಳುವು ಅಂಗೈಯಲ್ಲಿ ಜೀವ ಇಟ್ಟುಕೊಂಡು ಹಕ್ಕಿಯ ನಾಲಗೆಯನ್ನೇನೋ ಅಳೆಯಿತು. ನಾಚಿಕೆಯಿಲ್ಲದೆ ನಾಚಿಕೆಯ ಅಂಗಗಳನ್ನೂ ಅಳೆಯಿತು. ಆದರೆ ಕೋಗಿಲೆಯ ಹಾಡನ್ನು ಅಳೆಯುವುದು ಹೇಗೆ? ಅದೇ ನೆವವನ್ನಿಟ್ಟುಕೊಂಡು ದೂರ ದೂರಕ್ಕೆ ಹೋಗಿ ಮರೆಯಾಯಿತು. ಹೊಸ ದೀಕ್ಷಿತರ ಸಮಸ್ಯೆಯೂ ಅದೇ ಆಗಿದ್ದಿತು... ಭಾರತೀಯ ಪರಂಪರೆಯ `ಹಾಡನ್ನು ಅದರ ಅಧ್ಯಾತ್ಮ ಪರಂಪರೆಯನ್ನು, ಭಾರತೀಯ ಸಮುದಾಯದಲ್ಲಿನ ದೃಷ್ಟಾರರ ದೊಡ್ಡ ಸಮಷ್ಟಿಯ ಪಾಲ್ಗೊಳ್ಳುವಿಕೆಯಲ್ಲಿ, ನಿಶಿತ ತರ್ಕ ಮತ್ತು ಜಿಜ್ಞಾಸೆಗಳ ನೆಲೆಗಳಲ್ಲಿ ನಿರ್ಮಿಸಿಕೊಂಡಿದ್ದ ದರ್ಶನಗಳನ್ನು ಅಳೆಯುವುದು ಹೇಗೆ ಎನ್ನುವುದನ್ನು ಕುರಿತಂತೆ ಇವರು ದಿಙ್ಮೂಢರಾದರು. ಆಗಲೂ ಅವರು ಕೆಲವು ಪಠ್ಯಗಳನ್ನು ಆಯ್ದುಕೊಂಡು ಅವುಗಳಲ್ಲಿನ ಸಾಮಾಜಿಕ ಕೊರತೆಗಳನ್ನು ಮುಂದೊಡ್ಡುತ್ತ ಆ ಕೊರತೆಗಳನ್ನು ಇಡೀ ದರ್ಶನ - ಜ್ಞಾನ ಸಮುಚ್ಚಯಕ್ಕೆ ಅನ್ವಯಿಸಿ, ಭಾರತೀಯ ಜ್ಞಾನ-ದರ್ಶನ ಸಮಸ್ತವೂ ಸಾಮಾಜಿಕ ಅಸಹ್ಯವೆನ್ನುವ ಪ್ರಮೇಯವನ್ನು ಮಂಡಿಸಿದರು. ಇಷ್ಟೊತ್ತಿಗೆ ಬ್ರಾಹ್ಮಣ ಕರ್ಮಠರು ಸಂಸ್ಕøತ ಜ್ಞಾನವನ್ನು ತಮ್ಮ ಏಕಸ್ವಾಮ್ಯ ಎನ್ನುವಂತಹ ಭಾವನೆ ಬರುವಂತೆ ಮಾಡಿಬಿಟ್ಟಿದ್ದರು! ಜೊತೆಗೆ, ಉಳಿದ ಜಾತಿಗಳವರಿಗೆ ಸಂಸ್ಕøತ ಕಲಿಯುವುದು ಯಾವ ಐಹಿಕ ಲಾಭವನ್ನೂ ನೀಡದಿರುವುದರಿಂದ ಅದರ ಕಲಿಕೆಯು ಅವರಿಗೆ ಆಕರ್ಷಕವಾಗಿಯೇನೂ ಇರಲಿಲ್ಲ. (ಬಹುಶಃ ಕುವೆಂಪುರಂಥ ಕೆಲವರು ಮಾತ್ರ ಜ್ಞಾನದ ಹಪಾಪೆಯಿಂದ, ವಿರೋಧೀ ಮನೋಭಾವದ ನಡುವೆಯೂ ಸಂಸ್ಕøತವನ್ನು ಅಭ್ಯಸಿಸಿದರು.). ಹೀಗೆ ಹಲವು ಒತ್ತಡಗಳ ನಡುವೆ ಆಧುನಿಕ ಭಾರತೀಯ ಸಮುದಾಯವು ತನ್ನ ಜ್ಞಾನ-ದರ್ಶನಗಳ ಆಸ್ತಿಯನ್ನು ಮರೆಯಾಗಿಸಿಕೊಳ್ಳುತ್ತ, ಮರವೆಗೆ ದೂಡುತ್ತ... ಇಂದು ಸಂಪೂರ್ಣವಾಗಿ ಆ ಬಗೆಗಿನ ಅಜ್ಞಾನವನ್ನು ತಾಳಿದೆ.
ಇಂಥ ಸ್ಥಿತಿ ಯಾವುದೇ ಸಮುದಾಯಕ್ಕೂ ಆರೋಗ್ಯಪೂರ್ಣವಾಗಿರಲಾರದು. ಅಲ್ಲಮನು ಹೇಳುವಂತೆ `ಹಿಂದಿನ ಹೆಜ್ಜೆಯನ್ನರಿಯದೇ ಮುಂದಿನ ಹೆಜ್ಜೆಯನ್ನಿಡಲಾಗದುಎನ್ನುವಂತೆ ಸಮುದಾಯಗಳು ಭೂತದೊಂದಿಗಿನ ಅನುಸಂಧಾನ, ಸ್ವೀಕರಣ-ವಿಸರ್ಜನಗಳ ಮುಖಾಂತರ ತಮ್ಮ ವಿಕಾಸವನ್ನು ಸಾಧಿಸಬೇಕಾಗುತ್ತದೆ. ಯಾವ ಸಮುದಾಯವೂ ತನ್ನ ಭೂತ ಸರ್ವಸ್ವವನ್ನೂ ವಿಸರ್ಜಿಸಿಕೊಳ್ಳಲಾಗದು. ಹಾಗಾದರೆ ಅದು ಬೆಂತರ ಸಮುದಾಯವಾಗುತ್ತದೆ. ಅಂತಹ ಬೆಂತರ ಸಮುದಾಯದಲ್ಲಿ ಯಾವುದೇ ಸೇಂದ್ರೀಯ ಸಂಬಂಧಗಳು ನೆಲೆಗೊಳ್ಳಲಾರವು. ಆದ್ದರಿಂದ ನಾವು ನಮ್ಮ ಭೂತಕಾಲದೊಂದಿಗೆ, ಅದರ ಜ್ಞಾನ-ದರ್ಶನ ಸಮುಚ್ಚಯದೊಂದಿಗೆ ಅನುಸಂಧಾನ ನಡೆಸುವುದು ನಮ್ಮ ಸಮುದಾಯಕ್ಕೆ ಒಳ್ಳೆಯದು ಮತ್ತು ಅತ್ಯಗತ್ಯ.
ಈ ಹಿನ್ನೆಲೆಯಲ್ಲಿ ಕನ್ನಡದ ಹಿರಿಯ ಕವಿ, ಚಿಂತಕ ಡಾ. ಎಚ್.ಎಸ್. ವೆಂಕಟೇಶಮೂರ್ತಿಯವರು ನಡೆಸುತ್ತಿರುವ ಬರೆಹದ ಬದುಕು ಅತ್ಯಂತ ಅರ್ಥಪೂರ್ಣ ಎನ್ನಿಸುತ್ತದೆ. ವೆಂಕಟೇಶಮೂರ್ತಿಯವರು ಸಮಕಾಲೀನ ಸಮುದಾಯವು ಕಡಿದುಕೊಂಡಿದ್ದ ತನ್ನ ಪರಂಪರೆಯೊಂದಿಗಿನ ಸಂಬಂಧವನ್ನು ಪುನರ್‍ಸ್ಥಾಪಿಸುವ ದಿಕ್ಕಿನ ಅರ್ಥಪೂರ್ಣ ಪ್ರಯೋಗಗಳನ್ನು ಕಳೆದ ಹತ್ತಾರು ವರ್ಷಗಳಲ್ಲಿ ಸತತವಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಅವರು ಕುಮಾರವ್ಯಾಸನ `ಭಾರತ ಕಥಾಮಂಜರಿಯನ್ನು  `ಕುಮಾರವ್ಯಾಸ ಕಥಾಂತರದ ಮೂರು ಸಂಪುಟಗಳ ಮೂಲಕ ಸಮಕಾಲೀನ ಚಿಂತನೆಯ ಆಯಾಮವನ್ನಾಗಿಸಿದ್ದಾರೆ. ಆದಿಪರ್ವ-ಸಭಾಪರ್ವ ಗಳನ್ನು ಕುರಿತ `ಕುಮಾರವ್ಯಾಸ ಕಥಾಂತರದ ಎರಡನೇ ಸಂಪುಟದಲ್ಲಿ `ಭಾರತವಾದರೋ ಗೋತ್ರ ದಾಯಾದಿಗಳೂ ಮತ್ತು ಅವರ ನಂಟರಿಷ್ಟರ ಕತೆ. ನಿಕಟ ನಂಟಿಲ್ಲದ ಯಾವ ಪಾತ್ರವೂ ಕುರುಕ್ಷೇತ್ರ ಕಾಳಗದಲ್ಲಿ ಸೇರಿಲ್ಲ. ಸ್ವತಹ ದೈವವೂ ಈ ಸಂಬಂಧ ಸೂತ್ರದಲ್ಲಿ ಬಂಧಿತ. ಹಾಗಾಗಿ ಮಹಾಭಾರತ ಎಂಬುದು ಸಂಬಂಧಗಳ ವಿಷಮ ವ್ಯೂಹ. ಪಾತ್ರಗಳ ಸಂಬಂಧ ಮತ್ತು ವಿಚ್ಛೇದವೇ ಮಹಾಭಾರತದ ಕಥನದ ಸ್ವರೂಪವನ್ನು ನಿರ್ಧರಿಸುತ್ತದೆಎಂದು ತೋರಿಸುತ್ತಾರೆ. ಈ ತತ್ವ ಸಮಕಾಲೀನ ಸಮುದಾಯಕ್ಕೂ ಅನ್ವಯವಾಗುವಂತಹದೇ. ವಿಚ್ಛೇದವೇ ಸಮಕಾಲೀನ ವಿಷಮ ಸಾಮಾಜಿಕ ಸ್ಥಿತಿಗೆ ಕಾರಣವಾಗಿದೆ. ಕಳೆದುಹೋದ, ಮರೆತುಹೋದ ಸಂಬಂಧಗಳನ್ನು ಸ್ಮರಣೆಗೆ ತಂದುಕೊಳ್ಳುವುದೇ (ಪ್ರತ್ಯಭಿಜ್ಞಾನ) ಸಮಕಾಲೀನ ಸಂಘರ್ಷಗಳಿಗೆ ಹರ್ಷದಾಯಕ ಪರಿಹಾರವಾಗುತ್ತದೆನ್ನುವುದನ್ನು ಎಚ್.ಎಸ್.ವಿ. ಸೂಚಿಸುತ್ತಾರೆ. ಹೀಗೆ ಸಮಕಾಲೀನ ವಾಸ್ತವಗಳನೇಕವು ಕುಮಾರವ್ಯಾಸನ ಭಾರತದ ಪ್ರಸಂಗಗಳೊಡನೆ ತುಲನೆಗೊಳ್ಳುತ್ತವೆ, ಬೆಲೆಗಟ್ಟಲ್ಪಡುತ್ತವೆ. ಇಂದಿನ ಪಾತ್ರಗಳು ಅಂದಿನ ಪಾತ್ರಗಳ ಜೊತೆ ಕೈಹಿಡಿದು ನಡೆಯುತ್ತವೆ. ಅಂದಂದು ಬಂದ ಮಹತ್ವದ ಕಾವ್ಯಗಳು ಅಂದಂದಿನ ಯುಗಗಳ ವಾಸ್ತವಗಳನ್ನು, ಅವುಗಳ ಹಿನ್ನೆಲೆಯಲ್ಲಿ ಕ್ರಿಯಾಶಾಲಿಯಾಗಿದ್ದ ತತ್ತ್ವ-ದರ್ಶನಗಳನ್ನು ಸಂಗ್ರಹಿಸಿ ಇಟ್ಟುಕೊಂಡಿರುತ್ತವೆ. ಭಾಷಿಕ ಅಥವಾ ಇನ್ನಾವುದೋ ಕಾರಣಗಳಿಂದ ಅವುಗಳ ಓದನ್ನು ಕಳೆದುಕೊಂಡ ಸಮಕಾಲೀನ ಸಮುದಾಯಕ್ಕೆ ಅವು ದಕ್ಕುವಂತೆ ಮಾಡುವುದು ಬಹು ಮುಖ್ಯವಾದ ಕ್ರಿಯೆ. ವೆಂಕಟೇಶಮೂರ್ತಿಯವರು ಪಂಪನನ್ನು ನಮ್ಮ ಓದಿಗೆ ತಂದುಕೊಡುವ ಮೂಲಕ ಈ ಕ್ರಿಯೆಯನ್ನು ಸಾಧಿಸಿದ್ದಾರೆ. ಅವರ `ಕಿರಿಯರಿಗಾಗಿ ಪಂಪ’, `ವಿಕ್ರಮಾರ್ಜುನ ವಿಜಯ ತಿಳಿಗನ್ನಡ ಅವತರಣಮತ್ತು `ಆದಿಪುರಾಣ ತಿಳಿಗನ್ನಡ ಅವತರಣಗ್ರಂಥಗಳು ಪಂಪನೊಂದಿಗೆ ಮತ್ತು ಅವನ ಕಾಲದ ತತ್ತ್ವ ಮೌಲ್ಯಗಳೊಂದಿಗೆ ಸಮಕಾಲೀನ ಸಮುದಾಯವನ್ನು ಜೋಡಣೆಗೊಳಿಸುತ್ತವೆ. ಅವರು `ವಿಕ್ರಮಾರ್ಜುನ ವಿಜಯ ತಿಳಿಗನ್ನಡ ಅವತರಣಿಕೆಯ ಅರಿಕೆಯಲ್ಲಿ ಹೇಳಿರುವ ಈ ಮಾತುಗಳನ್ನು ನೋಡಿರಿ : `ಪಂಪನನ್ನು ಅವನ ಕಾವ್ಯದ ಸಂವೇದನೆ ಸಮೇತ ನಮ್ಮ ಹೊಸ ಪೀಳಿಗೆಗೆ ದೊರಕಿಸಬೇಕೆಂಬುದೇ ಈ ಸಾಹಸದ ಬೆನ್ನಿಗಿರುವ ತುರ್ತೊತ್ತಿನ ಕಾರಣ. ಗದ್ಯದಲ್ಲಿ ನುಣುಚಿ ಹೋಗುವ ಮಹಾಕಾವ್ಯ ಪಂಙÂ್ತಗಳು, ಹರಳು ಕಡೆದಂಥ ಮಹೋಕ್ತಿಗಳು, ಹಿತಮಿತಮಧುರ ವಚನದ ಮಾತಿನ ಗೈರತ್ತು, ಅದರ ಸಹಜ ಛಂದ, ಕಥಾ ವಿನ್ಯಾಸ, ಕಥಾಂತರದ ಸೋದ್ದಿಶ್ಯ ತಿರುವುಗಳು, ಕಥೆಯ ಮೈಗೆಡಲೀಯದ ಭಂಗಿ ಭಣಿತ, ಒಟ್ಟಾರೆ ಆ ನುಡಿ - ನಾಡೋಜನ ಜೀವ ಸಂಚಲನದ ದರ್ಶನ ಇವುಗಳನ್ನು ನಮ್ಮ ಪೀಳಿಗೆಗೆ ಒದಗಿಸಲೇ ಬೇಕು, ತನ್ಮೂಲಕ ಅವರನ್ನು ಮೂಲದ ಕಡೆ ಸೆಳೆಯಬೇಕು, ಪಂಪ ಕೇವಲ ಒಂದು ಹೆಸರಲ್ಲ, ಅವನೊಂದು ಮಹಾವ್ಯಕ್ತಿತ್ವದ ತೇಜಃಪುಂಜ ಎಂಬುದನ್ನು ಹೊಸಪೀಳಿಗೆಯ ಬೋಧೆಗೆ ತರಬೇಕು ಎಂಬುದೇ ಈ ಶ್ರಮದ ಹಿಂದಿನ ಸಂಕಲ್ಪ’. `ಹೊಸ ಪೀಳಿಗೆಯ ಬೋಧೆಗೆತರುವುದೆಂದರೆಯೇ ಮರೆತುಹೋದ ಸಂಬಂಧಗಳನ್ನು ಪುನರ್ ಸ್ಮರಣೆಗೆ ತಂದುಕೊಳ್ಳುವುದು ಎಂದರ್ಥ!
ಎಚ್.ಎಸ್.ವಿ. ಸಮಕಾಲೀನ ಸಮುದಾಯಗಳನ್ನು ನಮ್ಮ ಹಳೆಗನ್ನಡ - ನಡುಗನ್ನಡ ಪರಂಪರೆಗಳೊಂದಿಗೆ ಜೋಡಿಸುವುದಲ್ಲದೆ, ಇದಕ್ಕೂ ಹಿಂದಲಿನ ಯುಗಗಳೊಂದಿಗಿನ ನಮ್ಮ ಸಂಬಂಧಗಳನ್ನು ಹೊಳೆಯಿಸುವ ಸಾರ್ಥಕ ಸಾಹಸಗಳನ್ನೂ ಕೈಕೊಂಡಿದ್ದಾರೆ. ಅವರು ಕವಿ ವಾಲ್ಮೀಕಿಯಿಂದ ರಚಿತವಾದ ರಾಮಾಯಣದ ಎಲ್ಲ ಕಾಂಡಗಳ ಆಯ್ದ ಶ್ಲೋಕಗಳ ಕನ್ನಡ ಕಾವ್ಯಾನುವಾದದ `ರಾಮಚರಣವನ್ನು ತಂದಿದ್ದಾರೆ. ವೇದಗಳನ್ನು ಓದದೇ ಅವುಗಳನ್ನು ನಿತ್ಯ ಖಂಡನೆಗೆ ಒಳಪಡಿಸುತ್ತಿರುವವರ ಎದುರು `ಋಗ್ವೇದ ಸ್ಫುರಣವನ್ನಿಟ್ಟು ಅದನ್ನು ಓದಿ ತಿಳಿದು ಖಂಡಿಸಲು (ಅವಶ್ಯವೆನಿಸಿದರೆ!) ಅನುವು ಮಾಡಿಕೊಟ್ಟಿದ್ದಾರೆ. ಸ್ತ್ರೀಯರೂ ಸೇರಿದಂತೆ ವಿವಿಧ ಜಾತಿಗಳ ದೃಷ್ಟಾರರು ರಚಿಸಿದ ಇಲ್ಲಿನ ರುಕ್ಕುಗಳು ಐಹಿಕ ಜೀವನವೂ ಸೇರಿದಂತೆ ಹಲವು ವಿಷಯಗಳನ್ನು ಕುರಿತ ಜಿಜ್ಞಾಸೆಯನ್ನು ಮಂಡಿಸುತ್ತವೆ. ಋಗ್ವೇದದ ನಂತರ ಇದೀಗ ವೆಂಕಟೇಶಮೂರ್ತಿಯವರು `ಭಗವದ್ಗೀತೆಯ ಸಮಗ್ರ ಕನ್ನಡ ಕಾವ್ಯಾನುವಾದ ರಚಿಸಿದ್ದಾರೆ. ಆ ಮೂಲಕ ನಮ್ಮ ಜಿಜ್ಞಾಸೆಗೆ ಹೊಸ ಆಕರವನ್ನು ಒದಗಿಸಿದ್ದಾರೆ. ಇದರ ನೆಲೆಯಲ್ಲಿ ನಮ್ಮ ಚರ್ಚೆ ಜಿಜ್ಞಾಸೆಗಳು ಹೆಚ್ಚು ನಿರಪೇಕ್ಷಗೊಳ್ಳುವುದು ಸಾಧ್ಯವಾಗಲಿ ಎಂದು ಹಾರೈಸುತ್ತೇನೆ.
***
ಇದು ವೇದ, ಇದು ಭಗವದ್ಗೀತೆ ಎಂದು ಮೂಗು ಮುರಿಯುವ ಅವಶ್ಯಕತೆಯಿಲ್ಲ. ಯಾವ ದರ್ಶನಗಳೂ ಕೆಡುಕನ್ನು ಬೋಧಿಸುವುದಿಲ್ಲ. ಒಂದೊಮ್ಮೆ ಅವುಗಳಲ್ಲಿ ಕೆಡುಕು ಇದ್ದರೆ ಅದನ್ನು ನಿರಾಕರಿಸಿ, ಅದರಲ್ಲಿರುವ ಒಳಿತನ್ನು ಸ್ವೀಕರಿಸುವ ಸ್ವಾತಂತ್ರ್ಯ ನಮಗಿದ್ದೇ ಇದೆ. ಬೋರೆಯ ಹಣ್ಣನ್ನು ತಿನ್ನುವಾಗ ಬೀಜವನ್ನು ಉಗುಳುವುದಿಲ್ಲವೇ... ಹಾಗೆ! ಇನ್ನು ಇಷ್ಟಕ್ಕೂ ನಾವು ಯಾವುದೇ ದರ್ಶನಗಳನ್ನು ಕೇಳಿ ಅವುಗಳನ್ನು ಅನುಸರಿಸುವುದಕ್ಕಾಗಿ ಸಾಮಾಜಿಕ ಅನ್ಯಾಯಗಳನ್ನು ಗೈಯುತ್ತಿಲ್ಲ. ನಮಗೆ `ಸರ್ವೇ ಜನಃ ಸುಖಿನೋಭವಂತು’ `ವಸುಧೈವ ಕುಟುಂಬಕಂ’ `ಇವನಾರವ ಇವನಾರವ ಎನ್ನದಿರು, ಇವ ನಮ್ಮವ ಎಂದೆಣಿಸಯ್ಯಾಎಂತೆನ್ನುವ ವಿವಿಧ ಕಾಲಗಳ, ವಿವಿಧ ನಂಬಿಕೆಗಳ ಒಳಿತನ್ನು ಬೋಧಿಸುವ ಎಷ್ಟೆಲ್ಲ ಸುಭಾಷಿತಗಳು ಗೊತ್ತಿಲ್ಲ ಹೇಳಿರಿ! ಹೌದು... ನಮಗೆ ಎಲ್ಲ ಗೊತ್ತಿವೆ... ಆದರೆ ನಾವು-ಜನರೆಂಬುವ ನಾವು... ಕೆಡುಕರಾಗಿರುವುದು ನಮ್ಮ ನಮ್ಮ ಸ್ವಾರ್ಥಗಳಿಂದಲ್ಲದೇ ಬೇರಿಲ್ಲ! ಹೀಗಿರುವಾಗ ನಮ್ಮೆಲ್ಲ ಪ್ರಾಚೀನ ದರ್ಶನಗಳನ್ನು ಟೀಕಿಸುತ್ತ-ಬೈಯ್ಯುವುದರಲ್ಲಿ ತೊಡಗುವುದು ಕೇವಲ ಪುಂಡರ ಗೋಷ್ಠಿ ಅನ್ನಿಸಿದರೆ ಆಶ್ಚರ್ಯಪಡಬೇಕಿಲ್ಲ!